ADVERTISEMENT

ಯುವಜನರ ಆಕರ್ಷಣೆ ಸೈಬರ್‌ ಸೆಕ್ಯುರಿಟಿ

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ

ಹರೀಶ್ ಶೆಟ್ಟಿ ಬಂಡ್ಸಾಲೆ
Published 3 ಜುಲೈ 2019, 6:55 IST
Last Updated 3 ಜುಲೈ 2019, 6:55 IST
   

* ನಾನು ಈಗ ದ್ವಿತಿಯ ಪಿ.ಯು.ಸಿ.ಯಲ್ಲಿ ಪಿಸಿಎಂಸಿ ತೆಗೆದುಕೊಂಡಿದ್ದೇನೆ. ನನಗೆ ಸೈಬರ್ ಆರ್ಮಿಗೆ ಸೇರುವ ಆಸೆಯಿದೆ. ಆದರೆ ಈ ಕೋರ್ಸ್‌ಗೆ ಸೇರಲು ಮುಂದೇನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಇದಕ್ಕೆ ಸಂಬಂಧಿಸಿದ ಯಾವ ಕೋರ್ಸ್ ಮಾಡಿದರೆ ಒಳ್ಳೆಯದು ಎಂದು ತಿಳಿಯಬೇಕಿತ್ತು. ‌‌

- ಅರುಣ್ ಕುಮಾರ್ ಗಣಾಚಾರಿ, ಊರು ಬೇಡ

ಇತ್ತೀಚಿನ ದಿನಗಳಲ್ಲಿ ಸೈಬರ್ ಸೆಕ್ಯುರಿಟಿ ಹೆಚ್ಚು ಯುವಜನರನ್ನು ಆಕರ್ಷಿಸುತ್ತಿರುವ ಮತ್ತು ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದೆ. ತಂತ್ರಜ್ಞಾನದ ಕುರಿತಾದ ಒಲವು, ಆಸಕ್ತಿ, ಜ್ಞಾನ ಮತ್ತು ಅದನ್ನು ಸರಿಯಾದ ಮಾರ್ಗದಲ್ಲಿ ಕಾನೂನು ಪ್ರಕಾರವಾಗಿ ಬಳಸುವ ನೈತಿಕ ಬದ್ಧತೆ ಹೊಂದಿದವರು ಈ ಕ್ಷೇತ್ರವನ್ನು ಆಯ್ದುಕೊಳ್ಳಬಹುದು.

ADVERTISEMENT

ಭಾರತದಲ್ಲಿ ನೇರವಾಗಿ ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲಿ ಪದವಿ ಶಿಕ್ಷಣದ ಅವಕಾಶಗಳು ಕಡಿಮೆ ಇರುವುದರಿಂದ ಮಾಹಿತಿ ತಂತ್ರಜ್ಞಾನ ಅಥವಾ ಕಂಪ್ಯೂಟರ್ ಎಂಜಿನಿಯರಿಂಗ್ ಪದವಿಯನ್ನು ಅಥವಾ ಬಿ.ಸಿ.ಎ. ಪದವಿಯನ್ನು ಓದಿಕೊಂಡು ನಂತರ ಸೈಬರ್ ಸೆಕ್ಯುರಿಟಿಯಲ್ಲಿ ಪಿ.ಜಿ. ಡಿಪ್ಲೊಮಾ ಅಥವಾ ಸರ್ಟಿಫೈಡ್ ಕೋರ್ಸ್‌ಗಳನ್ನು ಓದಿಕೊಳ್ಳಬಹುದು. ಆಗ ಸರಿಯಾದ ಮೂಲಭೂತ ಶಿಕ್ಷಣದ ಜೊತೆಗೆ ಬೇಕಾದ ಔದ್ಯೋಗಿಕ ಅರ್ಹತೆಯನ್ನು ಪಡೆದಂತಾಗುತ್ತದೆ. ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯ, ರೇವಾ ಯೂನಿವರ್ಸಿಟಿ, ಏಜೀಸ್ ಸ್ಕೂಲ್ ಆಫ್ ಬ್ಯುಸಿನೆಸ್, ಐ.ಐ.ಐ.ಟಿ. ಬೆಂಗಳೂರು ಇತ್ಯಾದಿ ಸಂಸ್ಥೆಗಳಲ್ಲಿ ಪಿ.ಜಿ. ಡಿಪ್ಲೊಮಾ ಇನ್ ಸೈಬರ್ ಸೆಕ್ಯುರಿಟಿ ಕೋರ್ಸುಗಳು ಲಭ್ಯವಿವೆ.

ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲಿ ಕೆಲಸ ಮಾಡಲು ಸರ್ಟಿಫೈಡ್ ಎಥಿಕಲ್ ಹ್ಯಾಕರ್ ಆಗಿ ಒಂದು ನಿರ್ದಿಷ್ಟ ಕಾರಣಕ್ಕಾಗಿ ಕಾನೂನು ಪ್ರಕಾರವಾಗಿ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಅದನ್ನು ಅಪರಾಧವಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ ಇಂಡಿಯನ್ ಸೈಬರ್ ಆರ್ಮಿ ಎನ್ನುವ ಸಂಸ್ಥೆಯಿಂದ ಅಥವಾ ಅಂತಹ ಸರ್ಟಿಫಿಕೇಶನ್ ಮಾಡುವ ಸಂಸ್ಥೆಗಳಿಂದ (https://www.ica.in) ಸರ್ಟಿಫೈಡ್ ಎಥಿಕಲ್ ಹ್ಯಾಕರ್ ‌ ಆಗಿ ಪ್ರಮಾಣ ಪತ್ರ ಪಡೆದಿರಬೇಕು. ಈ ಬಗ್ಗೆ ಹೆಚ್ಚು ಸೂಕ್ತವಾದ ಮಾಹಿತಿಗೆ, ಅಂತರ್ಜಾಲದಲ್ಲಿ ಲಿಂಕಡ್ ಇನ್ ಅಥವಾ ಇತರೆ ಸಾಮಾಜಿಕ ಜಾಲಾತಾಣಗಳಲ್ಲಿ ಈಗಾಗಲೇ ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ.

ಎಥಿಕಲ್ ಹ್ಯಾಕಿಂಗ್, ಟೆಸ್ಟಿಂಗ್, ಸೈಬರ್ ಸೆಕ್ಯುರಿಟಿಯ ಬಗ್ಗೆ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿ ಪಡಿಸುವುದು, ತಂತ್ರಜ್ಞಾನದಲ್ಲಿರುವ ಕುಂದು ಕೊರತೆಗಳನ್ನು ಪತ್ತೆಹಚ್ಚಿ ಪರಿಹರಿಸುವುದು ಇತ್ಯಾದಿ ಸೈಬರ್ ಆರ್ಮಿಯವರ ಕೆಲಸಗಳು. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿ.ಇ.ಆರ್. ಟಿ.), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಂತಹ ಸರ್ಕಾರಿ ಸಂಸ್ಥೆಗಳು ಮತ್ತು ಅನೇಕ ಖಾಸಗಿ ಸೈಬರ್ ಸೆಕ್ಯುರಿಟಿ ಸಂಸ್ಥೆಗಳಲ್ಲಿ, ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಲ್ಲಿ, ಅಪರಾಧ ತನಿಖಾ ಸಂಸ್ಥೆಗಳಲ್ಲಿ ಉದ್ಯೋಗ ಅವಕಾಶಗಳು ಲಭ್ಯವಿವೆ.

* ನಾನು 2015– 16ನೇ ಸಾಲಿನ ಬಿ.ಬಿ.ಎ.ನಲ್ಲಿ 5ನೆಯ ಸೆಮಿಸ್ಟರ್‌ನಲ್ಲಿ ಎರಡು ಹಾಗೂ 6ನೆಯ ಸೆಮಿಸ್ಟರ್‌ನಲ್ಲಿ ಒಂದು ವಿಷಯ ಉಳಿಸಿಕೊಂಡಿದ್ದೇನೆ. ಕಾರಣಾಂತರಗಳಿಂದ ಬಾಕಿ ಉಳಿದ ವಿಷಯಗಳನ್ನು ಕಟ್ಟಿ ಪಾಸ್‌ ಮಾಡಿಕೊಳ್ಳಲು ಆಗಿಲ್ಲ. ಹೀಗಾಗಿ ಆ ವಿಷಯಗಳನ್ನು ಈಗ ಕಟ್ಟಿ ಪಾಸ್‌ ಮಾಡಿಕೊಳ್ಳಬೇಕೆಂಬ ಮನಸ್ಸಿದೆ. ಈಗ ಪರೀಕ್ಷೆ ಕಟ್ಟುವುದು ಸಾಧ್ಯವೇ? ಪರೀಕ್ಷೆ ಕಟ್ಟುವುದಾದರೆ ನಮ್ಮ ಕಾಲೇಜಿನಲ್ಲಿಯೇ ಕಟ್ಟಬೇಕೆ ಅಥವಾ ಬೇರೆ ಕಡೆಯೇ? ದಯವಿಟ್ಟು ತಿಳಿಸಿ.

-ಹೆಸರು, ಊರು ಬೇಡ

ಸಾಮಾನ್ಯವಾಗಿ ಒಬ್ಬ ವಿದ್ಯಾರ್ಥಿ ಕಾಲೇಜಿಗೆ ದಾಖಲಾದ ನಂತರದ ಆರು ವರ್ಷಗಳ ತನಕ ಆತನ/ ಆಕೆಯ ಪದವಿ ಶಿಕ್ಷಣವನ್ನು ಪೂರೈಸಿಕೊಳ್ಳಲು ಅವಕಾಶ ಇರುತ್ತದೆ. ಆದರೆ ಇದು ನಿಖರವಾಗಿ ಎಷ್ಟು ವರ್ಷ ಮತ್ತು ಅದಕ್ಕೆ ಪಾಲಿಸಬೇಕಾದ ಪೂರ್ವಭಾವಿ ಅರ್ಹತೆ ಹಾಗೂ ನಿಯಮಗಳೇನು ಎಂಬುದನ್ನು ಆಯಾ ವಿಶ್ವವಿದ್ಯಾಲಯವು ನಿರ್ಧರಿಸುವುದರಿಂದ ನೀವು ಹಿಂದೆ ಓದಿದ ಕಾಲೇಜು ಕಚೇರಿಯಲ್ಲಿ ಆಥವಾ ವಿಶ್ವವಿದ್ಯಾಲಯದಲ್ಲಿ ವಿಚಾರಿಸಿ ಸೂಕ್ತ ಮಾಹಿತಿ ಪಡೆಯಿರಿ. ಹಾಗೇನಾದರೂ ಅವಕಾಶಗಳು ಇಲ್ಲದಿದ್ದರೂ ಶಿಕ್ಷಣವನ್ನು ಮುಂದುವರಿಸುವ ಅಥವಾ ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಕಲಿತು ಉದ್ಯೋಗ ಪಡೆಯುವ ಕುರಿತು ಆಲೋಚನೆ ಮಾಡಿ ಮುಂದುವರಿಯಿರಿ. ಶುಭವಾಗಲಿ.

* ಸರ್‌, ಯುಜಿಸಿ ಎನ್‌.ಇ.ಟಿ. ಪರೀಕ್ಷೆಯ ಇ.ಡಬ್ಲ್ಯೂ.ಎಸ್‌. ಸರ್ಟಿಫಿಕೇಟ್‌ ಬಗ್ಗೆ ನನಗೆ ಗೊಂದಲವಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸುವ ಮುನ್ನವೇ ಈ ಸರ್ಟಿಫಿಕೇಟ್‌ ಪಡೆಯಬೇಕೇ ಅಥವಾ ನಂತರವೇ?

-ಹೆಸರು, ಊರು ಬೇಡ

ಇ.ಡಬ್ಲ್ಯೂ.ಎಸ್. ವ್ಯವಸ್ಥೆಯನ್ನು ಇತ್ತೀಚೆಗಷ್ಟೇ ಪರಿಚಯಿಸಿರುವುದರಿಂದ ಅನೇಕ ಗೊಂದಲಗಳು ಸಾಮಾನ್ಯವಾಗಿ ಇರುತ್ತವೆ. ಸಾಮಾನ್ಯವಾಗಿ ಎಲ್ಲಾ ರೀತಿಯ ಪ್ರಮಾಣಪತ್ರಗಳನ್ನು ಆಯಾ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಮೊದಲು ಪಡೆದಿರಬೇಕಾಗುತ್ತದೆ. ಆದರೆ ಯು.ಜಿ.ಸಿ.ಯ ಎನ್‌.ಇ.ಟಿ. ಪರೀಕ್ಷೆಯಲ್ಲಿ ಯು.ಜಿ.ಸಿ. ಖುದ್ದಾಗಿ ಪ್ರಮಾಣಪತ್ರಗಳನ್ನು ಪರಿಶೀಲನೆ ಮಾಡುವುದಿಲ್ಲ. ಬದಲಾಗಿ ಯು.ಜಿ.ಸಿ.ಯ ಎನ್‌.ಇ.ಟಿ. ಅಥವಾ ಜೆ.ಆರ್.ಎಫ್. ಪರೀಕ್ಷೆಯಲ್ಲಿ ತೇರ್ಗಡೆ ಆಗಿರುವ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸುವ ವಿದ್ಯಾಲಯಗಳು ಅಥವಾ ಸಂಸ್ಥೆಗಳು ಪ್ರಮಾಣಪತ್ರಗಳನ್ನು ಪರಿಶೀಲಿಸಿಕೊಳ್ಳುತ್ತವೆ. ಹೀಗಾಗಿ ಆ ಬಗ್ಗೆ ಈಗ ಚಿಂತಿಸಬೇಡಿ.

ಒಂದು ವೇಳೆ ಅರ್ಜಿ ಸಲ್ಲಿಸುವ ದಿನಾಂಕಕ್ಕಿಂತ ಮೊದಲು ಪ್ರಮಾಣಪತ್ರ ಮಾಡಿಸಿಕೊಂಡಿಲ್ಲದಿದ್ದಲ್ಲಿ ಈಗ ನಿಮ್ಮ ಪ್ರಮಾಣ ಪತ್ರ ಮಾಡಿಸಿಕೊಳ್ಳಿ. ಅಂತರ್ಜಾಲದಲ್ಲಿ ಎನ್‌ಕ್ವೈರ್ ಫಾರ್ ಇ.ಡಬ್ಲ್ಯೂ.ಎಸ್. ಎಂದು ಹುಡುಕಿದರೆ ಅದರ ಪ್ರಮಾಣ ಪತ್ರದ ನಮೂನೆ ದೊರಕುತ್ತದೆ. ಅದರೊಂದಿಗೆ ನಿಮ್ಮ ಆದಾಯ ಪ್ರಮಾಣಪತ್ರವನ್ನು ಲಗತ್ತಿಸಿ ತಹಶೀಲ್ದಾರರ ಕಚೇರಿಯಿಂದ ಪ್ರಮಾಣಪತ್ರಕ್ಕೆ ಸಹಿ ಹಾಕಿಸಿಕೊಳ್ಳಬೇಕು. ಇದು ಸದ್ಯ ಇರುವ ಪದ್ಧತಿ. ಏನಾದರೂ ಬದಲಾವಣೆ ಇದ್ದಲ್ಲಿ ನಿಮ್ಮ ತಹಶೀಲ್ದಾರರ ಕಚೇರಿಯಲ್ಲಿ ವಿಚಾರಿಸಿ.

* ನಾನು ಬಿ.ಕಾಂ. ಮುಗಿಸಿದ್ದು ಈಗ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಮುಂದೆ ಬಿ.ಪಿ.ಎಡ್. (ಎಕ್ಸ್ ಟರ್ನಲ್‌) ಮಾಡಬೇಕೆಂದಿರುವೆ. ಅದು ಸರ್ಕಾರಿ ಹುದ್ದೆಗೆ ಅನುಕೂಲವಾಗುತ್ತದೆಯೆ?

-ಬಸವರಾಜ ವಿ.ಎಸ್., ಊರು ಬೇಡ

ಬಿ.ಪಿ.ಎಡ್. ಶಿಕ್ಷಣ ಮುಗಿಸಿದವರಿಗೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಾತಿಗೊಳ್ಳುವ ಅವಕಾಶಗಳಿರುತ್ತವೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶಿಕ್ಷಕರ ನೇಮಕಾತಿ ಮಾಡುವಾಗ ದೈಹಿಕ ಶಿಕ್ಷಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮುಖಾಂತರ ನೇಮಿಸಿಕೊಳ್ಳುತ್ತವೆ. ನಿಮಗೆ ದೈಹಿಕ ಶಿಕ್ಷಕರಾಗುವ ಅಥವಾ ನೀವೇ ಖುದ್ದು ಕ್ರೀಡಾಪಟುವಾಗಿದ್ದು ಕ್ರೀಡಾ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಬೇಕೆಂಬ ಆಸಕ್ತಿ ಇದ್ದಲ್ಲಿ ನೀವು ಪ್ರಯತ್ನಿಸಬಹುದು. ಒಂದು ವೇಳೆ ಸರ್ಕಾರಿ ಉದ್ಯೋಗ ಪಡೆಯುವ ಉದ್ದೇಶವಿದ್ದರೆ ಬೇರೆ ಕ್ಷೇತ್ರಗಳಿಗೆ ಹೋಲಿಸಿದಾಗ ಈ ಕ್ಷೇತ್ರದಲ್ಲಿ ಉದ್ಯೋಗ ಅವಕಾಶ ಮತ್ತು ನೇಮಕಾತಿಗಳು ವಿರಳವಾಗಿರುತ್ತವೆ. ನಿಮ್ಮ ಬಿ.ಕಾಂ. ಅಥವಾ ಪದವಿಯ ಶಿಕ್ಷಣದ ಆಧಾರದ ಮೇಲೆ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿವೆ. ರಾಜ್ಯ ಸರ್ಕಾರದ ಎಫ್.ಡಿ.ಎ., ಎಸ್.ಡಿ.ಎ., ಕೇಂದ್ರ ಸರ್ಕಾರದ ಎಸ್.ಎಸ್.ಸಿ., ಬ್ಯಾಂಕಿಂಗ್ ಕ್ಷೇತ್ರದ ಐ.ಬಿ.ಪಿ.ಎಸ್. ಇತ್ಯಾದಿ ಪರೀಕ್ಷೆಗಳಿಗೆ ಪ್ರಯತ್ನಿಸಬಹುದು. ಎಲ್ಲಾ ಕ್ಷೇತ್ರಗಳಲ್ಲೂ (ಬಿ.ಪಿ.ಎಡ್. ಕ್ಷೇತ್ರವನ್ನು ಸೇರಿಸಿಕೊಂಡು) ಸ್ಪರ್ಧಾತ್ಮಕ ಪರೀಕ್ಷೆಗಳ ಮುಖಾಂತರವೇ ನೇಮಕಾತಿ ಆಗುವುದರಿಂದ ಅದಕ್ಕಾಗಿ ತಯಾರಿ ಮಾಡಿಕೊಳ್ಳಲೇಬೇಕಾಗುತ್ತದೆ. ಹೀಗಾಗಿ ನಿಮ್ಮ ಆಸಕ್ತಿ, ಸಾಮರ್ಥ್ಯ ಮತ್ತು ಅವಕಾಶಗಳ ಆಧಾರದ ಮೇಲೆ ಯೋಚಿಸಿ ನಿರ್ಧರಿಸಿ.

* ನಾನು ಪಿ.ಯು.ಸಿ. ಪರೀಕ್ಷೆಯಲ್ಲಿ ಜೀವಶಾಸ್ತ್ರ ವಿಷಯದಲ್ಲಿ ಅನುತ್ತೀರ್ಣನಾಗಿರುವೆ. ಮುಂದೆ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿ. ನನಗೆ ಬಿ.ಎ.ಎಂ.ಎಸ್ ಮಾಡುವ ಆಸೆಯಿದೆ. ಅದಕ್ಕೆ ಏನು ಮಾಡಬೇಕು ಎಂದು ಸಲಹೆ ನೀಡಿ.

-ಉಮೇಶ್.ಕೆ., ಬಳ್ಳಾರಿ

ಬಿ.ಎ.ಎಂ.ಎಸ್. ಪದವಿಯು ವೈದ್ಯಕೀಯ ವಿಜ್ಞಾನವಾಗಿರುವುದರಿಂದ ಪಿ.ಯು.ಸಿ.ಯಲ್ಲಿ ಕಡ್ಡಾಯವಾಗಿ ಜೀವಶಾಸ್ತ್ರ ವಿಷಯವನ್ನು ಓದಿರಬೇಕು. ಹೀಗಾಗಿ ಜೀವಶಾಸ್ತ್ರ ಪರೀಕ್ಷೆಯನ್ನು ಪುನಃ ಬರೆದು ಪಾಸು ಮಾಡಿಕೊಂಡು ಬಿ.ಎ.ಎಂ.ಎಸ್. ಶಿಕ್ಷಣಕ್ಕೆ ಪ್ರವೇಶಾತಿ ಪಡೆಯಬಹುದು. ಮುಂದಿನ ವರ್ಷ ಜೀವಶಾಸ್ತ್ರ ಪರೀಕ್ಷೆಯನ್ನು ಪಾಸು ಮಾಡಿಕೊಂಡು ನೀಟ್ ಪರೀಕ್ಷೆಯನ್ನು ಎದುರಿಸಿ ಅದರ ರ‍್ಯಾಂಕಿಂಗ್‌ನಂತೆ ಬಿ.ಎ.ಎಂ.ಎಸ್. ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯಬಹುದು.

ಒಂದು ವೇಳೆ ನಿಮಗೆ ಪಿ.ಯು.ಸಿ. ಪರೀಕ್ಷೆ ಬರೆಯುವಲ್ಲಿ ಅನಾನುಕೂಲತೆ ಉಂಟಾದರೆ ಅಥವಾ ಬಿ.ಎ.ಎಂ.ಎಸ್. ಮಾಡಲು ಆಗದಿದ್ದರೆ ಎಸ್.ಎಸ್.ಎಲ್.ಸಿ. ಯ ಆಧಾರದ ಮೇಲೆ ಡಿಪ್ಲೊಮಾ ಕೋರ್ಸ್‌ಗಳಿಗೆ ಅಥವಾ ಅಲ್ಪಾವಧಿಯ ಅನಿಮೇಶನ್, ಪ್ಯಾರಾಮೆಡಿಕಲ್ ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆದು ನಿಮ್ಮ ಶಿಕ್ಷಣವನ್ನು ಮುಂದುವರಿಸಬಹುದು. ನಿಮ್ಮ ಆಸಕ್ತಿ ಮತ್ತು ಅನುಕೂಲತೆಯ ಆಧಾರದ ಮೇಲೆ ನಿರ್ಧರಿಸಿ ಯೋಜನೆ ರೂಪಿಸಿಕೊಳ್ಳಿ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು,ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.