ADVERTISEMENT

ಪಿಯು ವಿದ್ಯಾರ್ಥಿಗಳಿಗೆ ಯೂಟ್ಯೂಬ್ ಪಾಠ

ಕೊರೊನಾ ಸಂಕಷ್ಟದ ಸಮಯದಲ್ಲಿ ಶೈಕ್ಷಣಿಕ ಚಟುವಟಿಕೆಗೆ ಸಹಕಾರಿ

ಸತೀಶ್‌ ಬಿ
Published 11 ಆಗಸ್ಟ್ 2020, 20:15 IST
Last Updated 11 ಆಗಸ್ಟ್ 2020, 20:15 IST
ಹಿಂದಿ ವಿಷಯದ ಬೋಧನೆ ಮಾಡುತ್ತಿರುವ ಉಪನ್ಯಾಸಕರು
ಹಿಂದಿ ವಿಷಯದ ಬೋಧನೆ ಮಾಡುತ್ತಿರುವ ಉಪನ್ಯಾಸಕರು   

ಕಲಬುರ್ಗಿ: ಕೊರೊನಾ ಸೋಂಕಿನ ಕಾರಣಕ್ಕೆ ಶಾಲಾ–ಕಾಲೇಜುಗಳನ್ನು ಇನ್ನೂ ಆರಂಭಿಸಿಲ್ಲ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಯೂಟ್ಯೂಬ್ ತರಗತಿಗಳನ್ನು ಆರಂಭಿಸಿದೆ.

ವಿಷಯವಾರು ಪಾಠವನ್ನು ಚಿತ್ರೀಕರಿಸಿ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಮನೆಯಲ್ಲೇ ಇದ್ದುಕೊಂಡು ಪಾಠ ಕೇಳಲು ಸಾಧ್ಯವಾಗುತ್ತಿದೆ.

ವೇಳಾಪಟ್ಟಿ ಅನ್ವಯ ಕಳೆದ ಒಂದೂವರೆ ತಿಂಗಳಿಂದ ತರಗತಿಗಳು ನಡೆಯುತ್ತಿವೆ. ವಿಷಯವಾರು ಉಪನ್ಯಾಸಕರು ಪಾಠದ ಬೋಧನೆಯ ವಿಡಿಯೊ ಮಾಡಿ ಅದನ್ನು ಇಲಾಖೆಯ ನಿರ್ದೇಶಕರ ಕಚೇರಿಗೆ ಕಳಿಸುತ್ತಾರೆ. ಅಲ್ಲಿ ವಿಡಿಯೊಗಳನ್ನು ಪರಿಶೀಲಿಸಿ ಯೂಟ್ಯೂಬ್‌ ಚಾನೆಲ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ.

ADVERTISEMENT

‘ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆದ ವಿಡಿಯೊದ ಲಿಂಕ್‌ ಅನ್ನು ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರಿಗೆ ಕಳಿಸಲಾಗುತ್ತದೆ. ನಂತರ ಅದನ್ನು ಕಾಲೇಜುಗಳ ಪ್ರಾಂಶುಪಾಲರಿಗೆ ಕಳಿಸುತ್ತೇವೆ. ಆಯಾ ತರಗತಿಗಳ ಶಿಕ್ಷಕರು ವಾಟ್ಸ್‌ಆ್ಯಪ್‌ನಲ್ಲಿ ಗುಂಪು ರಚಿಸಿ ಅದನ್ನು ವಿದ್ಯಾರ್ಥಿಗಳಿಗೆ ಕಳಿಸುತ್ತಾರೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಿವಶರಣಪ್ಪ ಮುಳೆಗಾಂವ ಅವರು ಹೇಳಿದರು.

ಆನ್‌ಲೈನ್‌ ತರಗತಿಗಳನ್ನು ಮಾಡಿದರೆ ಎಲ್ಲ ವಿದ್ಯಾರ್ಥಿಗಳು ಅದರಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ, ನೆಟ್‌ವರ್ಕ್ ಸಮಸ್ಯೆ ಇರುತ್ತದೆ. ಹೀಗಾಗಿ ಯೂಟ್ಯೂಬ್‌ ತರಗತಿಗಳನ್ನು ಆರಂಭಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಯಾವಾಗ ಬೇಕಾದರೂ ಪಾಠ ಕೇಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ನಿರಂತರವಾಗಿ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಇದು ಸಹಕಾರಿಯಾಗಲಿದೆ ಎಂದರು.

ವಿದ್ಯಾರ್ಥಿಗಳು ಯೂಟ್ಯೂಬ್‌ನಲ್ಲಿ ಪಾಠವನ್ನು ಕೇಳುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸುವ ಹೊಣೆಯನ್ನು ಆಯಾ ವಿಷಯವಾರು ಉಪನ್ಯಾಸಕರಿಗೆ ವಹಿಸಲಾಗಿದೆ. ಪಾಠ ಕೇಳಿದ ವಿದ್ಯಾರ್ಥಿಗಳು ಆ ಬಗ್ಗೆ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಪ್ರತಿಕ್ರಿಯಿಸಬೇಕು ಎಂದು ತಿಳಿಸಿದರು.

ಬಹುತೇಕ ವಿದ್ಯಾರ್ಥಿಗಳ ಬಳಿ ಮೊಬೈಲ್ ಇಲ್ಲ. ಹೀಗಾಗಿ ತರಗತಿಗಳು ಆರಂಭವಾದ ನಂತರ ಕಾಲೇಜಿನಲ್ಲಿ ಮತ್ತೆ ಆ ಪಾಠಗಳನ್ನು ಪ್ರಸಾರ ಮಾಡಲಾಗುವುದು ಎಂದರು.

ಪದವಿಪೂರ್ವ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಹಾಗೂ ಉಪನ್ಯಾಸಕರ ಸಂಘದಿಂದ ಮೊದಲು ಇದನ್ನು ಆರಂಭಿಸಲಾಗಿದೆ. ಇನ್ನು ಮುಂದೆ ಕಲಬುರ್ಗಿ ಜಿಲ್ಲೆಯ ಉಪನ್ಯಾಸಕರಿಂದಲೂ ಬೋಧನೆಯ ವಿಡಿಯೊ ಮಾಡಿಸಿ ಇಲಾಖೆಗೆ ಕಳಿಸಲಾಗುವುದು ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳು ಯೂಟ್ಯೂಬ್‌ನಲ್ಲಿ DPUE DKPUCPA ಎಂಬ ಚಾನೆಲ್‌ಗೆ ಭೇಟಿ ನೀಡಿ ಪಾಠವನ್ನು ಕೇಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.