ADVERTISEMENT

ಸಸ್ಪೆನ್ಸ್‌ ಕಥನ: 'ಆ...ದೃಶ್ಯ'ದಲ್ಲಿ ಕಾಣಿಸಿದ್ದೇನು?

ಕೆ.ಎಚ್.ಓಬಳೇಶ್
Published 8 ನವೆಂಬರ್ 2019, 13:34 IST
Last Updated 8 ನವೆಂಬರ್ 2019, 13:34 IST
‘ಆ...ದೃಶ್ಯ’ ಚಿತ್ರದಲ್ಲಿ ರವಿಚಂದ್ರನ್
‘ಆ...ದೃಶ್ಯ’ ಚಿತ್ರದಲ್ಲಿ ರವಿಚಂದ್ರನ್   

ಚಿತ್ರ: ಆ...ದೃಶ್ಯ
ನಿರ್ಮಾಣ:
ಕೆ. ಮಂಜು
ನಿರ್ದೇಶನ: ಶಿವಗಣೇಶ್‌
ತಾರಾಗಣ: ರವಿಚಂದ್ರನ್, ಅಚ್ಯುತ್‌ಕುಮಾರ್‌, ನಿಸರ್ಗ, ಚೈತ್ರಾ ಆಚಾರ್‌, ಯಶ್‌ ಶೆಟ್ಟಿ, ಗಿರೀಶ್‌

ಪ್ರೇಕ್ಷಕರ ನಿರೀಕ್ಷೆಗೂ ಮೀರಿದ ಸಂಗತಿಗಳಿದ್ದರಷ್ಟೇ ಸಸ್ಪೆನ್ಸ್‌ ಸಿನಿಮಾ ಕುತೂಹಲ ಕೆರಳಿಸುತ್ತದೆ. ಜೊತೆಗೆ, ಅದರ ಕಥನದ ಬಂಧವೂ ಬಿಗಿಯಾಗಿರಬೇಕು. ಒಂದಿಷ್ಟು ತಿರುವುಗಳೊಟ್ಟಿಗೆ ನಿರೂಪಣೆಯೂ ಮನಮುಟ್ಟಬೇಕು. ಆಗಷ್ಟೇ ಆ ಚಿತ್ರ ನೋಡುಗರ ಭಾವವನ್ನು ಮೀಟುತ್ತದೆ.

ನಿರ್ದೇಶಕ ಶಿವಗಣೇಶ್‌ ಕೊಲೆ ಮತ್ತು ಅದರ ಸುತ್ತ ಸುತ್ತಿಗೊಂಡಿರುವ ನಿಗೂಢ ಸಂಗತಿ ಇಟ್ಟುಕೊಂಡು ‘ಆ...ದೃಶ್ಯ’ ಚಿತ್ರದಲ್ಲಿ ಸಸ್ಪೆನ್ಸ್‌ ಕಥೆ ಹೇಳಲು ಪ್ರಯತ್ನಪಟ್ಟಿದ್ದಾರೆ. ಸಸ್ಪೆನ್ಸ್‌ ಮತ್ತು ಆಸೆಯೆಂಬ ಪಾಶಕ್ಕೆ ಸಿಲುಕಿದ ತಂದೆಯ ಬೇಗುದಿ ಎರಡನ್ನೂ ಸಂಕಲಿಸುವಲ್ಲಿ ಅವರು ಹಿಡಿತ ತಪ್ಪಿದ್ದಾರೆ.

ADVERTISEMENT

ಇದು ತಮಿಳಿನ ‘ಧ್ರುವಂಗಳ್‌ 16’ ಚಿತ್ರದ ರಿಮೇಕ್‌. ಇಲ್ಲಿನ ನೇಟಿವಿಟಿಗೆ ತಕ್ಕಂತೆ ಕೊಂಚ ಬದಲಾವಣೆ ಮಾಡಿಕೊಂಡಿರುವ ನಿರ್ದೇಶಕರು, ಮೂಲ ಕಥೆಯನ್ನೇ ಯಥಾವತ್ತಾಗಿ ತೆರೆಯ ಮೇಲೆ ತಂದಿದ್ದಾರೆ.

‘ರಾಮಾಯಣ’ವನ್ನು ರಾವಣನ ದೃಷ್ಟಿಯಲ್ಲಿ ನೋಡುವ ಅವರ ಈ ಕಥನ ಮೊದಲಾರ್ಧದಲ್ಲಿಯೇ ಸೊರಗಿದೆ. ಸಿನಿಮಾದ ಶುರುವಿನಲ್ಲಿಯೇ ನಿಗೂಢ ಕೊಲೆಯೊಂದರ ಪ್ರಶ್ನೆ ಮುಂದಿಡುತ್ತಾರೆ. ದ್ವಿತೀಯಾರ್ಧದಲ್ಲಿ ಅದಕ್ಕೆ ಉತ್ತರ ಹುಡುಕುವ ಪ್ರಯ‌ತ್ನ ಮಾಡುತ್ತಾರೆ ಎಂದು ಬಿಡಿಸಿ ಹೇಳಬೇಕಿಲ್ಲ.

ಪುತ್ರ ವಾತ್ಸಲ್ಯದಿಂದ ಕೊಲೆಯ ಸತ್ಯವನ್ನೇ ಮುಚ್ಚಿಟ್ಟ ಪೊಲೀಸ್ ಇನ್‌ಸ್ಪೆಕ್ಟರ್‌ ಸೂರ್ಯತೇಜ್ ಈ ಸಿನಿಮಾದ ಕೇಂದ್ರಬಿಂದು. ಉದ್ಯಾನವೊಂದರ ಬಳಿ ಗುಂಡೇಟಿನಿಂದ ಕೊಲೆಯಾದ ಪ್ರೀತಮ್‌ ಪ್ರಕರಣದ ತನಿಖೆ ಪೊಲೀಸ್‌ ಇಲಾಖೆಗೆ ಸವಾಲಾಗಿ ಕಾಡುತ್ತದೆ. ಈ ಕೊಲೆಯ ರಹಸ್ಯ ಬಯಲಿಗೆಳೆಯುವಲ್ಲಿ ಸೂರ್ಯತೇಜ್‌ಗೆ ಕಾನ್‌ಸ್ಟೇಬಲ್‌ ಸಮರ್ಥ್‌ ನೆರವಾಗುತ್ತಾನೆ. ಕೊಲೆಗಾರನ ಬೆನ್ನಟ್ಟಿದಾಗ ಇಬ್ಬರೂ ಅಪಘಾತಕ್ಕೀಡಾಗುತ್ತಾರೆ. ಸಮರ್ಥ್‌ ತನ್ನ ಮುಖದ ಸ್ವರೂಪ ಕಳೆದುಕೊಳ್ಳುತ್ತಾನೆ. ಆದರೆ, ಕೊಲೆಗಾರ ಮಾತ್ರ ಸಮಾಜದಲ್ಲಿ ನಿರ್ಭಿಡತೆಯಿಂದ ಬದುಕುತ್ತಿರುತ್ತಾನೆ. ಆತ ಯಾರು ಎಂಬುದೇ ಈ ಸಿನಿಮಾದ ಸಸ್ಪೆನ್ಸ್‌.

ಮೊದಲ ಅಧ್ಯಾಯದ ‍ಕೊಲೆಯ ತನಿಖೆ, ಪಾತ್ರಗಳ ಪರಿಚಯದಲ್ಲಿಯೇ ಮುಗಿಯುತ್ತದೆ. ಕಥೆಗೆ ಲಯ ಸಿಗುವುದೇ ಎರಡನೇ ಅಧ್ಯಾಯದಲ್ಲಿ. ಕೊಲೆಗಾರ ಯಾರು ಎನ್ನುವ ಗುಟ್ಟನ್ನು ನಿರ್ದೇಶಕರು ಕೊನೆಯವರೆಗೂ ಬಿಟ್ಟುಕೊಡುವುದಿಲ್ಲ. ನೋಡುಗರ ಕುತೂಹಲವನ್ನು ಹಿಡಿದಿಡುವಲ್ಲಿ ಅವರು ಬಳಸಿರುವ ತಂತ್ರಗಾರಿಕೆ ಇಷ್ಟವಾಗುತ್ತದೆ.

ರವಿಚಂದ್ರನ್ ಅವರದು ಲವಲವಿಕೆಯ ನಟನೆ. ಯಶ್‌ ಶೆಟ್ಟಿ, ಗಿರೀಶ್‌ ತಮ್ಮ‍ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ವಿನೋದ್‌ ಭಾರತಿ ಅವರ ಛಾಯಾಗ್ರಹಣದ ಕೆಲವು ದೃಶ್ಯಗಳು ಮನಸೆಳೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.