ADVERTISEMENT

ನಟನೆ ಗಂಭೀರ ಉದ್ಯೋಗ: ಕಾರ್ತಿಕ್‌ ಜಯರಾಮ್‌

ಶರತ್‌ ಹೆಗ್ಡೆ
Published 23 ಸೆಪ್ಟೆಂಬರ್ 2021, 19:30 IST
Last Updated 23 ಸೆಪ್ಟೆಂಬರ್ 2021, 19:30 IST
ಕಾರ್ತಿಕ್‌ ಜಯರಾಮ್‌ (ಜೆ.ಕೆ.)
ಕಾರ್ತಿಕ್‌ ಜಯರಾಮ್‌ (ಜೆ.ಕೆ.)   

ಅಶ್ವಿನಿ ನಕ್ಷತ್ರದ ಜೆ.ಕೆ. ಪಾತ್ರದ ಮೂಲಕ ಕನ್ನಡ ಕಿರುತೆರೆಯ ಮನೆ ಮಾತಾಗಿದ್ದ ಕಾರ್ತಿಕ್‌ ಜಯರಾಮ್‌ ಈಗ ಸಾಕಷ್ಟು ಚಿತ್ರಗಳ ಪ್ರಧಾನ ಪಾತ್ರಗಳಲ್ಲೇ ಮಿಂಚುತ್ತಿದ್ದಾರೆ. ಅವರ ಅಭಿನಯದ ‘ಐರಾವನ್‌’, ‘ಕಾಡ’ ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿವೆ. ತೆಲುಗು, ತಮಿಳಿನ ಪ್ರಮುಖ ಚಿತ್ರಗಳಲ್ಲೂ ಸಾಕಷ್ಟು ಬ್ಯುಸಿ ಆಗಿದ್ದಾರೆ. ಬೆಳ್ಳಿತೆರೆಗೆ ತಮ್ಮ ಬದ್ಧತೆ ಎನ್ನುವ ಜೆ.ಕೆ. ಸಿನಿಕನಸುಗಳನ್ನು ತೆರೆದಿಟ್ಟರು.

ಖಳ ಪಾತ್ರಗಳಲ್ಲಿದ್ದ ಜೆ.ಕೆ. ಪ್ರಧಾನ ಪಾತ್ರದೆಡೆಗೆ ಹೊರಳಿದ್ದು ಹೇಗೆ?

‘ಅಶ್ವಿನಿ ನಕ್ಷತ್ರ’ ಧಾರಾವಾಹಿಯವರೆಗೆ ನನಗೆ ಹೆಚ್ಚು ಖಳ ಪಾತ್ರಗಳೇ ಬರುತ್ತಿದ್ದವು. ಆ ಧಾರಾವಾಹಿ ನನಗೊಂದು ಹೆಸರು ತಂದುಕೊಟ್ಟಿತು. ಜೆ.ಕೆ. ಹೆಸರು ಮನೆಮಾತಾಯಿತು. ಆ ಬಳಿಕ ನನಗೆ ಪ್ರಧಾನ ಪಾತ್ರಗಳೇ ಬಂದಿವೆ. ‘ಚಂದ್ರಿಕಾ’, ‘ಬೆಂಗಳೂರು –23’, ‘ಆ ಕರಾಳ ರಾತ್ರಿ’, ‘ಪುಟ –109’, ‘ಓ ಪುಷ್ಪಾ ಐ ಹೇಟ್‌ ಟಿಯರ್ಸ್‌ (ಕನ್ನಡ– ಹಿಂದಿ)’, ಮಾಳಿಗೆ (ತಮಿಳು) ಹೀಗೆ ಹಲವಾರು ಅವಕಾಶಗಳು ಬಂದಿವೆ. ನಿಧಾನಗತಿಯಲ್ಲಿ ಒಳ್ಳೆಯ ಬೆಳವಣಿಗೆ ಇದೆ. ಈಗ ‘ಐರಾವನ್‌’ ಮುಕ್ತಾಯವಾಗಿದೆ. ‘ಕಾಡ’ ಕೂಡಾ ಇತ್ತಿಚೆಗೆ ಮುಗಿದಿದೆ.

ADVERTISEMENT

ಯಾರು ‘ಐರಾವನ್‌’, ಮತ್ತು ‘ಕಾಡ’?

‘ಐರಾವನ್‌’ ಎಂದರೆ ಪುರಾಣದಲ್ಲಿ ಅರ್ಜುನನ ಮಗ. ಅವನು ಸಮುದ್ರದ ರಾಜ. ಆ ಹಿನ್ನೆಲೆ ಇಟ್ಟುಕೊಂಡು ಪ್ರಸ್ತುತ ಕಾಲಮಾನಕ್ಕೆ ಅಳವಡಿಸಿದ್ದೇವೆ. ಇಲ್ಲಿ ನಾನೊಬ್ಬ ಫಾರ್ಮಾಸ್ಯುಟಿಕಲ್‌ ಉದ್ಯಮಿ. ಆ ಕ್ಷೇತ್ರದಲ್ಲಿ ಏನೇನಾಗುತ್ತದೆ ಎಂಬುದನ್ನು ಹೇಳಲು ಹೊರಟಿದ್ದೇವೆ. ಅವನು ಒಳ್ಳೆಯವನೋ ಕೆಟ್ಟವನೋ ಎನ್ನುವುದು ಸನ್ನಿವೇಶದ ಪ್ರಕಾರ ನಿರ್ಧಾರವಾಗುತ್ತದೆ.

‘ಕಾಡ’ದಲ್ಲಿ ಮನುಷ್ಯನಲ್ಲಿ ಹುಟ್ಟುತ್ತಲೇ ಬಂದಿರುವ ಸಮಸ್ಯೆಯೊಂದನ್ನು ಚಿತ್ರಿಸಿದ್ದೇವೆ. ಅವನಿಗೆ ಕೋಪವನ್ನು ತಡೆದುಕೊಳ್ಳಲಾಗುವುದಿಲ್ಲ. ಅವನು ಯಾವುದು ಸರಿ– ತಪ್ಪು ಎಂಬುದನ್ನು ನಿರ್ಧರಿಸುವುದಿಲ್ಲ. ನಮ್ಮ ನಿರ್ದೇಶಕರ ಸಂಶೋಧನೆ ಪ್ರಕಾರ, ವಿಶ್ವದಲ್ಲಿ ಶೇ 2ರಷ್ಟು ಜನರಿಗೆ ಈ ಸಮಸ್ಯೆ ಇದೆ. ಅದಕ್ಕೆ ಚಿಕಿತ್ಸೆ ಇಲ್ಲ. ಅವರ ಕೋಪವನ್ನು ನಿಯಂತ್ರಿಸಬಹುದು ಅಷ್ಟೇ. ಹೀಗೆ ಇದು ಮನೋವೈಜ್ಞಾನಿಕ ಚಿತ್ರ.

ಸಿನಿಮಾ ಕ್ಷೇತ್ರಕ್ಕೆ ಬಂದದ್ದು?

ಎಂಜಿನಿಯರಿಂಗ್‌ ಓದುತ್ತಲೇ ನಟನೆ ಮಾಡುತ್ತಿದ್ದೆ. ನನಗೆ ಸುದೀಪ್‌ ಅವರು ಸ್ಫೂರ್ತಿ. ಇದೊಂದು ಗಂಭೀರ ಉದ್ಯೋಗ ಎಂದು ಪರಿಗಣಿಸಿ ಇದರಲ್ಲಿ ತೊಡಗಿಕೊಂಡೆ. ಸುಮಾರು 12 ವರ್ಷಗಳ ಕಾಲ ಮಾಡೆಲಿಂಗ್‌ನಲ್ಲೂ ತೊಡಗಿದ್ದೆ. ಅಶ್ವಿನಿ ನಕ್ಷತ್ರದಿಂದ ಖ್ಯಾತಿ ಮತ್ತು ವಿಶ್ವಾಸ ಬಂದಿತು. ಈ ಕ್ಷೇತ್ರದಲ್ಲಿ ಏನಾದರೂ ಮಾಡಬಹುದು ಅಂದುಕೊಂಡೆ.

ಎಂಥ ಪಾತ್ರ ಇಷ್ಟ?

ಅದು ಪ್ರಾಜೆಕ್ಟ್‌ ಮೇಲೆ ಅವಲಂಬಿತ. ಸಬ್ಜೆಕ್ಟ್‌ ಒಳ್ಳೆಯದಿರಬೇಕು. ಉದಾಹರಣೆಗೆ ‘ಚಂದ್ರಿಕಾ’ದಲ್ಲಿ ತುಂಬಾ ರೊಮ್ಯಾಂಟಿಕ್‌ ಗಂಡ. ‘ಬೆಂಗಳೂರು –23’ಯಲ್ಲಿ ಹಾಸ್ಯದ ಪಾತ್ರ. ಅದೊಂದು ಸೆಟಲ್ಡ್‌ ಕಾಮಿಡಿ. ‘ಅಶ್ವಿನಿ ನಕ್ಷತ್ರ’ ಎಲ್ಲ ಪಾತ್ರಗಳ ಮಿಶ್ರಣ. ‘ಐರಾವನ್‌’ನಲ್ಲಿ ಅತ್ಯಂತ ಶಿಸ್ತಿನ, ವ್ಯವಸ್ಥಿತ ಪಾತ್ರ. ಯಾವುದೇ ಪಾತ್ರ ಇರಲಿ ಅದಕ್ಕೆ ಸರಿಯಾದ ನ್ಯಾಯ ಕೊಡಬೇಕು.

ಕಿರುತೆರೆ ಮೋಹ ಇದೆಯಾ?

ಇಲ್ಲ. ಹಿರಿತೆರೆಯೇ ಬೇಕು. ಏಕೆಂದರೆ ಕಿರುತೆರೆಗೆ ಸಾಕಷ್ಟು ಸಮಯ ಕೊಡಬೇಕು. ಅದು ಟೈಂ ಪಾಸ್‌ ಅಲ್ಲ. ಎರಡು ದೋಣಿಯಲ್ಲಿ ಕಾಲಿಟ್ಟು ಪ್ರಯಾಣಿಸುವುದು ಸರಿಯಲ್ಲ. ಈಗಿನ ಪ್ರಾಜೆಕ್ಟ್‌ಗಳಲ್ಲಿ ಬದ್ಧತೆಯಿಂದ ತೊಡಗಿಕೊಳ್ಳಬೇಕು. ಈಗ ‘ಶಹಬ್ಬಾಷ್‌ ಮಿಟ್ಟು’ ಅನ್ನುವ ಚಿತ್ರದಲ್ಲೂ ತೊಡಗಿಕೊಂಡಿದ್ದೇನೆ.

* ಪ್ಯಾನ್‌ ಇಂಡಿಯಾ ಕನಸುಗಳಿವೆಯಾ?

ನೋಡಿ ಪ್ಯಾನ್‌ ಇಂಡಿಯಾ ಚಿತ್ರಗಳಿಗೆ ದೊಡ್ಡ ಬಜೆಟ್‌ ಬೇಕು. ಮತ್ತು ಎಲ್ಲ ಪ್ರಾದೇಶಿಕತೆಗೂ ಹೊಂದಿಕೊಳ್ಳುವಂತೆ ಇರಬೇಕು. ಅ ಅಂಥವು ಒಂದೋ ಪೌರಾಣಿಕ ಅಥವಾ ಸದ್ಯದ ನೈಜ ಘಟನೆ ಆಧರಿತ ವಿಷಯ ಇರಬೇಕು. ಈಗ ನಾನು ಮಾಡುತ್ತಿರುವ ಶಹಬ್ಬಾಷ್‌ ಮಿಟ್ಟು (ಕ್ರಿಕೆಟ್‌ ಆಟಗಾರ್ತಿ ಮಿಥಾಲಿ ರಾಜ್‌ ಅವರ ಜೀವನಗಾಥೆ) ಇದು ಕ್ರಿಕೆಟ್‌ ಆಧರಿಸಿದ ಸಿನಿಮಾ ಆಗಿರುವುದರಿಂದ ಪ್ಯಾನ್‌ ಇಂಡಿಯಾಕ್ಕೆ ಸರಿಹೊಂದುವ ಸಿನಿಮಾ.

ಮುಂದಿನ ಕನಸುಗಳೇನು?

ಒಳ್ಳೆಯ ಪ್ರಾಜೆಕ್ಟ್‌ ಬರುತ್ತಿವೆ. ಕೆಲಸ ಮಾಡುತ್ತಲೇ ಹೋಗಬೇಕು. ಅದರಲ್ಲಿ ಅತ್ಯುತ್ತಮವಾದ ಪ್ರದರ್ಶನ ನೀಡಬೇಕು. ಉದಾಹರಣೆಗೆ ‘ಕಾಡ’ ಸಿನಿಮಾದಲ್ಲಿ ನನ್ನ ಅಭಿನಯ ನಿರ್ದೇಶಕರಿಗೆ ತುಂಬಾ ಹಿಡಿಸಿದೆ. ಹೀಗಾಗಿ ನಾನು ಸ್ಟಾರ್‌ ಆಗುವುದು ಬೇಡ. ಒಳ್ಳೆಯ ಪರ್ಫಾರ್ಮರ್‌ ಆಗಬೇಕು ಅಷ್ಟೆ.

ಸಿನಿಮಾದಿಂದಾಚೆಗಿನ ಜೆ.ಕೆ.?

ಫಿಟ್‌ನೆಸ್‌ ನನ್ನ ಬ್ರೆಡ್‌ ಆ್ಯಂಡ್‌ ಬಟರ್‌ ಇದ್ದ ಹಾಗೆ. ಫಿಟ್‌ನೆಸ್‌ ಇದ್ದರೆ ತೆರೆಯಮೇಲೆ ನಾನು ಚೆನ್ನಾಗಿ ಕಾಣಿಸಿಕೊಳ್ಳಲು ಸಾಧ್ಯ. ಇವು ಪೂರಕವಾದ ಅಂಶಗಳಾಗಿ ಬಿಡುತ್ತವೆ. ಇನ್ನು ಕ್ರಿಕೆಟ್‌. ಅದರಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದೇನೆ. ಬಿಡುವಿನ ವೇಳೆ ಕತೆ ಬರೆಯುತ್ತೇನೆ.

ಅಭಿಮಾನಿಗಳ ಪ್ರತಿಕ್ರಿಯೆ ಹೇಗಿದೆ?

ಅಶ್ವಿನಿ ನಕ್ಷತ್ರದಲ್ಲಿ ಜೆ.ಕೆ. ಹೆಸರೇ ಬ್ರಾಂಡ್‌ ಆಯಿತು. ಅದೇ ಅಭಿಮಾನಿಗಳು ಜೆ.ಕೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ನನ್ನ ಹೆಸರು ಕಾರ್ತಿಕ್‌ ಜಯರಾಮ್‌. ಆದರೆ ಅನೇಕರು ಪಾತ್ರದ ಹೆಸರೇ ಜಯಕೃಷ್ಣ ಅದೇ ನನ್ನ ಹೆಸರಿರಬೇಕು ಅಂದುಕೊಂಡವರಿದ್ದಾರೆ. ಇಷ್ಟೊಂದು ಗುರುತಿಸುವಿಕೆ ಸಿಕ್ಕಿದೆ. ಇದೆಲ್ಲಾ ಆಗಿರುವುದು ಅಭಿಮಾನಿಗಳಿಂದಲೇ. ಅವರಿಗೆ ಆಭಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.