ADVERTISEMENT

ಅವಕಾಶದ ಹಾದಿಯಲ್ಲಿ ಅದ್ವಿತಿ ಶೆಟ್ಟಿ ಹೆಜ್ಜೆ

ಶರತ್‌ ಹೆಗ್ಟೆ
Published 16 ಸೆಪ್ಟೆಂಬರ್ 2021, 20:15 IST
Last Updated 16 ಸೆಪ್ಟೆಂಬರ್ 2021, 20:15 IST
ಅದ್ವಿತಿ ಶೆಟ್ಟಿ
ಅದ್ವಿತಿ ಶೆಟ್ಟಿ   

ಸಮಯ ಮತ್ತು ಅವಕಾಶ ನಮಗಾಗಿ ಕಾಯುವುದಿಲ್ಲ. ಬಂದ ಅವಕಾಶಗಳನ್ನು ಬಳಸುತ್ತಾ ಬೆಳೆಯಬೇಕು. ಪ್ರಯತ್ನದಲ್ಲಿ ಮುಂದುವರಿಯಬೇಕು ಎನ್ನುತ್ತಾ ಕನ್ನಡ – ತುಳು ಚಿತ್ರರಂಗದ ಬಗ್ಗೆ ವಿಶೇಷ ಪ್ರೀತಿ ತೋರಿಸುತ್ತಾ ಮಾತಿಗಿಳಿದವರು ‘ಕ್ಯಾಡ್‌ಬರೀಸ್‌‘ ನಾಯಕಿ ಅದ್ವಿತಿ ಶೆಟ್ಟಿ. ಲಾಕ್‌ಡೌನ್‌ ಅವಧಿಯಲ್ಲಿ ಮೂರು ಚಿತ್ರಗಳ ಅವಕಾಶ ಪಡೆದ ಅವರ ಕೈಯಲ್ಲಿ ಈಗ ಮತ್ತೆರಡು ಚಿತ್ರಗಳು ಇವೆ. ಸುಮಾರು 150ಕ್ಕೂ ಹೆಚ್ಚು ಬ್ರಾಂಡ್‌ಗಳ ಜೊತೆ ಕೆಲಸ ಮಾಡುತ್ತಾ ಪೂರ್ಣ ಬ್ಯುಸಿಯಾಗಿದ್ದಾರೆ ಅದ್ವಿತಿ.

ಉದ್ಯೋಗಕ್ಕೆಂದು ಬಂದ ಅದ್ವಿತಿ ತಾರೆಯಾಗಿ ಗುರುತಿಸಿಕೊಂಡದ್ದು ಹೇಗೆ?

– ಹೌದು, ನಾನು ಎಂಬಿಎ ಶಿಕ್ಷಣ ಮುಗಿಸಿ ಬೆಂಗಳೂರಿನ ಕಂಪನಿಯೊಂದರಲ್ಲಿ ಮಾನವ ಸಂಪನ್ಮೂಲ ನಿರ್ವಹಣಾ ಹುದ್ದೆಗೆ ಬಂದಿದ್ದೆ. ಸಿನಿಮಾ ಬಗ್ಗೆ ನನಗೆ ಯಾವ ಆಸಕ್ತಿಯೂ ಇರಲಿಲ್ಲ. ಅದಕ್ಕೂ ಮೊದಲು ಡ್ಯಾನ್ಸ್‌, ನೂರಕ್ಕೂ ಹೆಚ್ಚು ರಿಯಾಲಿಟಿ ಶೋ, ಕಿರುತೆರೆ ಧಾರಾವಾಹಿ, ಕಿರು ಚಿತ್ರಗಳಲ್ಲಿ ಭಾಗವಹಿಸಿದ ಅನುಭವ ಇತ್ತು ಅಷ್ಟೆ. ಅದ್ಯಾಕೋ ‘ಮಿಸ್ಟರ್‌ ಆ್ಯಂಡ್‌ ಮಿಸೆಸ್‌ ರಾಮಾಚಾರಿ...’ ಚಿತ್ರ ಈ ಸಿನಿಮಾ ಕ್ಷೇತ್ರದ ಬಾಗಿಲು ತೆರೆಯಿತು. ನಂತರ ‘ಸುಳಿ’, ‘ಫ್ಯಾನ್‌’, ‘ಗಿರಿಗಿಟ್ಲೆ’, ‘ಶುಗರ್‌ ಫ್ಯಾಕ್ಟರಿ’, ‘ಐರಾವನ್‌’ನಿಂದ ಹಿಡಿದು ‘ಕ್ಯಾಡ್‌ಬರೀಸ್‌’ವರೆಗೆ ಅವಕಾಶಗಳನ್ನು ತಂದುಕೊಟ್ಟಿದೆ. ಸಿನಿಪಯಣಕ್ಕೆ ಈಗ 9 ವರ್ಷ ಆಯಿತು ನೋಡಿ.

ADVERTISEMENT

‘ಐರಾವನ್‌’, ‘ಶುಗರ್‌ ಫ್ಯಾಕ್ಟರಿ’, ‘ಕ್ಯಾಡ್‌ಬರೀಸ್‌’ ಪಾತ್ರ ಸ್ವರೂಪ ಹೇಗಿದೆ?

– ಮೂರೂ ತೀರಾ ಭಿನ್ನವಾದ ಪಾತ್ರಗಳು. ‘ಶುಗರ್‌ ಫ್ಯಾಕ್ಟರಿ’ಯಲ್ಲಿ ನನ್ನದು ಈವೆಂಟ್‌ ಮ್ಯಾನೇಜರ್ ಪಾತ್ರ. ಹಾಸ್ಯದ ಲೇಪನ ಇದೆ. ‘ಐರಾವನ್‌’ನಲ್ಲಿ ಸಸ್ಪೆನ್ಸ್ ಕಥಾ ಹಂದರ ಸ್ವಲ್ಪ ಗಂಭೀರ ಪಾತ್ರವಿದೆ. ‘ಕ್ಯಾಡ್‌ಬರೀಸ್‌’ನಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಇದೀಗ ‘ಧೀರ ಸಾಮ್ರಾಟ್‌‘ ನಿರ್ಮಾಣವಾಗುತ್ತಿದೆ. ‘ಡಾ.ಅಭಿ 007’ ಸೆಟ್ಟೇರಿದೆ.

ಚಿತ್ರರಂಗಕ್ಕೆ ಬಂದಾಗ ಎದುರಿಸಿದ ಸವಾಲುಗಳು ಏನು?

– ಹೌದು, ಮೊದಲೇ ಹೇಳಿದೆನಲ್ಲಾ, ಈ ಕ್ಷೇತ್ರದ ಬಗ್ಗೆ ಅಂಥ ಆಸಕ್ತಿ ಅಥವಾ ಯೋಜನೆಯಾಗಲಿ ನನಗಿರಲಿಲ್ಲ. ಇಲ್ಲಿಗೆ ಬಂದಾಗ ನನಗೆದುರಾದದ್ದು ಭಾಷೆ. ನಮ್ಮದು ಕರಾವಳಿ ಭಾಗದ ಕನ್ನಡ ಆಗಿದ್ದರಿಂದ ಅದನ್ನು ಇಲ್ಲಿನ ಶೈಲಿಗೆ ಒಗ್ಗಿಸಿಕೊಳ್ಳುವುದೇ ಸವಾಲಾಗಿತ್ತು. ಅದನ್ನು ಕಲಿತೆ. ಈಗ ನನ್ನ ಚಿತ್ರಗಳಿಗೆ ನಾನೇ ಧ್ವನಿ ಕೊಡುತ್ತೇನೆ. ಬ್ರಾಂಡ್‌ ಕುರಿತ ಪ್ರಮೋಷನ್‌ ಯೋಜನೆಗಳಿಗೆ ನಾನೇ ಪರಿಕಲ್ಪನೆ ಹಾಗೂ ಸ್ಕ್ರಿಪ್ಟ್‌ ಸಿದ್ಧಪಡಿಸುತ್ತೇನೆ. ಈ ಕಲಿಕೆಯ ಕಾರಣದಿಂದಾಗಿ ಕನ್ನಡ ಚಿತ್ರರಂಗ ನನ್ನನ್ನು ಸ್ವೀಕರಿಸಿದೆ.

ಕನ್ನಡದಿಂದಾಚೆಗಿನ ಅವಕಾಶಗಳು ಬಂದಿವೆಯೇ?

– ನನಗೆ ಗೊತ್ತಿರುವುದು ಸಿನಿಮಾ ಅಂದರೆ ಒಂದೇ ಭಾಷೆ. ಅದಕ್ಕೆ ನಾವು ನಿರ್ದಿಷ್ಟ ಭಾಷೆಯ ಗೋಡೆ ಕಟ್ಟಿ ಸೀಮಿತಗೊಳಿಸುವುದಿಲ್ಲ. ಅವಕಾಶಗಳು ಬರಬೇಕು. ಅದರಂತೆ ಕೆಲಸ ಮಾಡುತ್ತಾ ಹೋಗಬೇಕು. ಯಾವುದೇ ಅವಕಾಶ, ಸಮಯ ಮತ್ತು ನಮ್ಮ ವಯಸ್ಸು ಕಾಯುತ್ತಾ ಕೂರುವುದಿಲ್ಲ. ಆದರೆ, ಕನ್ನಡ ಸಿನಿಮಾವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹೇಳಬಲ್ಲೆ.

ಕಲಾಬದುಕನ್ನೊಮ್ಮೆ ಹಿಂದಿರುಗಿ ನೋಡಿದಾಗ ಏನನ್ನಿಸುತ್ತದೆ?

– ಇಷ್ಟೊಂದು ರೆಕಗ್ನಿಷನ್‌ ಸಿಗುತ್ತದೆ ಎಂದು ಊಹಿಸಿರಲೂ ಇಲ್ಲ. ಮುಖ್ಯವಾಗಿ ನೃತ್ಯ ನನ್ನ ಗುರು. ಅದು ಇಲ್ಲಿವರೆಗೆ ಕರೆದುಕೊಂಡು ಬಂದಿದೆ. ಉದ್ಯೋಗದಲ್ಲಿ ಆರಾಮದಾಯಕ ಕೆಲಸ, ಒಳ್ಳೆಯ ಸಂಬಳ ತೆಗೆದುಕೊಂಡು ಹಾಯಾಗಿರಬಹುದಿತ್ತು ಎಂದು ಈ ಹಿಂದೆ ಆಲೋಚಿಸಿದ್ದಿತ್ತು. ಉದ್ಯೋಗದಿಂದ ಹೊರಗೆ ಬಂದಾಗ ತುಂಬಾ ಕಷ್ಟಪಟ್ಟಿದ್ದೇನೆ. ಆದರೆ, ಈ ಜನಪ್ರೀತಿ, ದುಡಿಮೆಯ ಅವಕಾಶ ಸಿಗುತ್ತಿರಲಿಲ್ಲ. ಸಣ್ಣ ಪಾತ್ರವಾದರೂ ಸರಿ ಮಾಡಿತೋರಿಸುತ್ತೇನೆ ಎಂಬ ಮನೋಭಾವವೇ ಇಲ್ಲಿವರೆಗೆ ಕರೆತಂದಿದೆ.

ಕರಾವಳಿ ಚಿತ್ರರಂಗದಿಂದ ಅವಕಾಶಗಳು ಬಂದಿವೆಯೇ?

– ನನಗೆ ನನ್ನ ಮಾತೃಭಾಷೆ ತುಳುವಿನ ಮೇಲೆ ಅತೀವ ಪ್ರೀತಿ ಇದೆ. ಅವಕಾಶಗಳು ಬರಬೇಕು ಅಷ್ಟೆ. ಅವಕಾಶ ಬಂದಾಗ ಶ್ರದ್ಧೆ ಮತ್ತು ಪರಿಶ್ರಮದಿಂದ ಬಳಸಿಕೊಳ್ಳುತ್ತೇನೆ.

ಸಿಗುವ ಅವಕಾಶ, ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಇದೆಯೇ?

– ಯಾರೇ ಆಗಲಿ ಕಲಾವಿದನ ಪರಿಶ್ರಮಕ್ಕೆ ತಕ್ಕ ಮೌಲ್ಯವನ್ನು ಕೊಡಲೇಬೇಕು. ಹಾಗೆಂದು ಎಲ್ಲ ಯೋಜನೆಗಳಲ್ಲೂ ಒಂದೇ ಮಾನದಂಡ ಇರಿಸಿಕೊಂಡು ನಮ್ಮ ಸಂಭಾವನೆಯನ್ನು ನಿಗದಿಪಡಿಸಿಕೊಳ್ಳಲು ಆಗದು. ಹಾಗಾಗಿ ಎಲ್ಲರಿಗೂ ಸರಿ ಹೊಂದುವಂತೆ ಸಂಭಾವನೆ ನಿಗದಿಪಡಿಸಿಕೊಳ್ಳುತ್ತೇವೆ.

ಸಂಭಾವನೆಯ ಪ್ರಮಾಣದ ಬಗ್ಗೆ ಮಾತನಾಡುವವರಿಗೆ ಒಂದು ಮಾತು, ನಮ್ಮಲ್ಲೇ ಅದ್ಭುತವಾದ ಪ್ರತಿಭೆಗಳು ಇದ್ದಾರೆ. ಅವರಿಗೆ ಅವಕಾಶ ಕೊಡಿ. ಇಲ್ಲವಾದರೆ ನಮ್ಮವರೂ ಬೇರೆಡೆಗೆ ಹೋಗುವ ಅನಿವಾರ್ಯತೆ ತಂದುಕೊಳ್ಳುತ್ತಿದ್ದಾರೆ. ಇದು ಕೆಲಸ ಮಾಡುವವರಿಗೂ, ಕೆಲಸ ಕೊಡುವವರಿಗೂ ಒಳ್ಳೆಯದೇ ಅಲ್ಲವೇ.

ಮುಂದಿನ ಕನಸುಗಳು?

– ಕನಸುಗಳನ್ನು ಕಾಣುವುದಿಲ್ಲ. ಅದು ಅಂದುಕೊಂಡಂತೆ ನಡೆಯದಿದ್ದರೆ ಹತಾಶರಾಗಿಬಿಡುತ್ತೇವೆ. ಈಗ ನೋಡಿ ಕೊರೊನಾ ಎಲ್ಲವನ್ನೂ ಕಟ್ಟಿಹಾಕಿಬಿಟ್ಟಿತು. ಇಲ್ಲವಾದರೆ ಅದೆಷ್ಟೋ ಚಿತ್ರಗಳು ಬಿಡುಗಡೆ ಆಗಬೇಕಿತ್ತು ಅಲ್ವಾ. ಹಾಗಾಗಿ ಸಮಯ ಮತ್ತು ಅವಕಾಶ ಬಂದಹಾಗೆ ಮುಂದುವರಿಯಬೇಕು ಅನ್ನುವುದೇ ನನ್ನ ನಿಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.