ADVERTISEMENT

ಕುಂಜಾಕೊ ವೃತ್ತಿಜೀವನಕ್ಕೆ ಮರುಜೀವ ತುಂಬಿದ ‘ಅಳ್ಳ್...’

ವಿಕ್ರಂ ಕಾಂತಿಕೆರೆ
Published 7 ಮಾರ್ಚ್ 2019, 19:30 IST
Last Updated 7 ಮಾರ್ಚ್ 2019, 19:30 IST
ಅಳ್ಳ್‌ ರಾಮೇಂದ್ರನ್ ಚಿತ್ರದಲ್ಲಿ ಕುಂಜಾಕೊ ಬೋಬನ್‌
ಅಳ್ಳ್‌ ರಾಮೇಂದ್ರನ್ ಚಿತ್ರದಲ್ಲಿ ಕುಂಜಾಕೊ ಬೋಬನ್‌   

ಅನಿಯತ್ತಿಪ್ರಾವ್‌ ಸಿನಿಮಾದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು ನಟ ಕುಂಜಾಕೊ ಬೋಬನ್‌. ಮೊದಲ ಸಿನಿಮವೇ ಯುವ ಸಮುದಾಯದ ಮನಸ್ಸು ಕದ್ದ ಕಾರಣ ಕುಂಜಾಕೊ ಅವರ ಮುಂದಿನ ಹಾದಿ ಸುಗಮವಾಗಿತ್ತು.

ನಕ್ಷತ್ರ ತಾರಾಟ್‌, ಮಯಿಲ್‌ಪೀಲಿ ಕಾವ್‌, ನಿರಂ, ಪ್ರಿಯಂ ಮುಂತಾದ ಸಾಲು ಸಾಲು ಸಿನಿಮಾಗಳ ಮೂಲಕ ಅವರು ಸ್ವಲ್ಪದರಲ್ಲೇ ಜನಪ್ರಿಯತೆಯ ಉತ್ತುಂಗ ತಲುಪಿದರು. ‌‌2005ರಲ್ಲಿ ಮದುವೆಯಾದ ಕುಂಜಾಕೊ ನಟನಾ ರಂಗಕ್ಕೆ ಮರು ಪ್ರವೇಶ ಮಾಡಿದ್ದು ಮೂರು ವರ್ಷಗಳ ನಂತರ. ಅಲ್ಲಿಂದ ಅವರ ವೃತ್ತಿ ಜೀವನ ಏರಿಳಿತ ಕಂಡಿತು. ಆದರೆ ಈಗ ‘ಅಳ್ಳ್ ರಾಮೇಂದ್ರನ್’ ಸಿನಿಮಾದ ಮೂಲಕ ಕುಂಜಾಕೊ ಬೋಬನ್‌ ಬೆಳ್ಳಿ ಪರದೆಯಲ್ಲಿ ಮರುಜೀವ ಪಡೆದಿದ್ದಾರೆ.

ವಾಹನಗಳ ಟಯರ್ ಪಂಕ್ಚರ್‌ ಮಾಡಲು ಕಿಡಿಗೇಡಿಗಳು ಬಳಸುವ ಮೊಳೆಯ ಮಾದರಿಯ ಸಾಧನಕ್ಕೆ ಕೇರಳದಲ್ಲಿ ಅಳ್ಳ್‌ ಎನ್ನುತ್ತಾರೆ. ಉದ್ದೇಶಪೂರ್ವಕವಾಗಿ ವ್ಯಕ್ತಿಯ ಬದುಕಿನಲ್ಲಿ ವಿಘ್ನ ಉಂಟು ಮಾಡುವುದಕ್ಕೆ ಮಲಯಾಳಂನಲ್ಲಿ ‘ಅಳ್ಳ್‌ ಇರಿಸುವುದು’ ಎಂದು ಹೇಳಲಾಗುತ್ತದೆ.

ADVERTISEMENT

ಹೊಸ ನಿರ್ದೇಶಕ ಬಿಲಹರಿ ಅವರ ಎರಡನೇ ಚಿತ್ರ ಅಳ್ಳ್‌ ರಾಮೇಂದ್ರನ್‌. ಇದು, ನಿರ್ದೇಶಕ ಹಾಗೂ ಕುಂಜಾಕೊ ಅವರ ವೃತ್ತಿ ಬದುಕಿಗೆ ನವಚೇತನ ತುಂಬಿದೆ. ಬಿಲಹರಿ ಅವರ ಮೊದಲ ಚಿತ್ರ ಪೋರಾಟ್ಟಂನಂತೆಯೇ ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಿದ ಚಿತ್ರ ಇದು. ನಾಯಕನನ್ನು ವೈಭವೀಕರಿಸದ, ಸರಳ ಚಿತ್ರ. ಆದರೂ ಬಿಡುಗಡೆಯಾಗಿ ತಿಂಗಳ ನಂತರವೂ ಚಿತ್ರದ ಬೇಡಿಕೆ ಕುಸಿಯಲಿಲ್ಲ.

ಅಸಮಾಧಾನ ಮತ್ತು ಮತ್ಸರದಿಂದ ಅಥವಾ ತಮಾಷೆಗಾಗಿ ಬೇರೆಯವರಿಗೆ ತೊಂದರೆ ಕೊಡುವವರು ಅವರ ಇಡೀ ಬದುಕಿಗೇ ಕಂಟಕ ತರುತ್ತಾರೆ ಎಂಬುದರ ಸುತ್ತ ಈ ಚಿತ್ರದ ಕಥಾವಸ್ತುವನ್ನು ಹೆಣೆಯಲಾಗಿದೆ. ಸಿಡುಕ ಪೊಲೀಸ್ ಕಾನ್‌ಸ್ಟೆಬಲ್‌ನ (ಕುಂಜಾಕೊ) ಮದುವೆಯೊಂದಿಗೆ ಸಿನಿಮಾ ಆರಂಭವಾಗುತ್ತದೆ. ಮದುವೆ ದಿಬ್ಬಣದ ಕಾರು ಪಂಕ್ಚರ್ ಆಗುತ್ತದೆ. ನಂತರ ಪ್ರತಿದಿನವೂ ಅವರ ಜೀಪ್‌ ಪಂಕ್ಚರ್ ಆಗುತ್ತದೆ.

ಜೀಪ್ ಪಂಕ್ಚರ್ ಆದಾಗ ಮೊದಮೊದಲು ರಸ್ತೆಯನ್ನು ದೂರುತ್ತಿದ್ದ ರಾಮೇಂದ್ರನ್‌ ಕೊನೆಗೆ, ಇದರ ಹಿಂದೆ ಇರುವ ನಿಗೂಢವನ್ನು ಪತ್ತೆಹಚ್ಚಲು ಮುಂದಾಗುತ್ತಾನೆ. ಹೀಗೆ ಸಿನಿಮಾ ರೋಚಕವಾಗುತ್ತ ಸಾಗುತ್ತದೆ.

ಟಿಪಿಕಲ್‌ ರೊಮ್ಯಾಂಟಿಕ್ ಹೀರೊ ಪಾತ್ರಗಳನ್ನೇ ಮಾಡುತ್ತಿದ್ದ ಕುಂಜಾಕೊ ಬೋಬನ್‌ ಈ ಚಿತ್ರದಲ್ಲಿ ವಿಭಿನ್ನ. ಪೊಲೀಸ್ ಕಾನ್‌ಸ್ಟೆಬಲ್‌ನ ಪಾತ್ರದಲ್ಲಿ ಭಿನ್ನ ಭಾವಗಳನ್ನು ಸಮರ್ಥವಾಗಿ ನಿರ್ವಹಿಸಿರುವ ಕುಂಜಾಕೊ ಬೋಬನ್‌ನ ಯಶಸ್ಸಿಗೆ ನಾಯಕಿ ಪಾತ್ರದ ಚಾಂದಿನಿ ಅವರ ಅಭಿನಯವೂ ಸಹಕಾರಿಯಾಗಿದೆ. ಸಹೋದರಿ ಪಾತ್ರ ಮಾಡಿದ ಅಪರ್ಣಾ ಬಾಲಮುರಳಿ, ಆಕೆಯ ಪ್ರಿಯಕರನ ಪಾತ್ರ ಮಾಡಿದ ಕೃಷ್ಣಶಂಕರ್‌, ಸಹನಟರಾದ ಧರ್ಮರಾಜ, ಶ್ರೀನಾಥ್ ಭಾಸಿ, ಸಲೀಂ ಕುಮಾರ್‌, ಕೊಚ್ಚು ಪ್ರೇಮನ್‌, ಹರೀಶ್‌ ಕಣಾರನ್‌, ಕೃಷ್ಣಪ್ರಭ ಮುಂತಾದವರು ‘ಸಿಚುವೇಷನಲ್‌ ಹಾಸ್ಯ’ ಪ್ರಸಂಗಗಳನ್ನು ಸಮರ್ಥವಾಗಿ ನಿರ್ವಹಿಸಿ ‘ರಾಮೇಂದ್ರನ್‌’ ಬೆಳಗುವಂತೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.