ADVERTISEMENT

‘ಥ್ರಿಲ್‌’ ಇಲ್ಲ, ಕಥೆಯೇ ಮುಖ್ಯ

ಉದಯ ಯು.
Published 15 ಮಾರ್ಚ್ 2019, 20:07 IST
Last Updated 15 ಮಾರ್ಚ್ 2019, 20:07 IST
ಆರಬ್ಬೀ ಕಡಲ ತೀರದಲ್ಲಿ ಚಿತ್ರದಲ್ಲಿ ವೈಷ್ಣವಿ ಮೆನನ್‌ ಮತ್ತು ಕೃಷ್ಣೇಗೌಡ
ಆರಬ್ಬೀ ಕಡಲ ತೀರದಲ್ಲಿ ಚಿತ್ರದಲ್ಲಿ ವೈಷ್ಣವಿ ಮೆನನ್‌ ಮತ್ತು ಕೃಷ್ಣೇಗೌಡ   

ಚಿತ್ರ: ಅರಬ್ಬೀ ಕಡಲ ತೀರದಲ್ಲಿ
ನಿರ್ದೇಶಕ: ವಿ. ಉಮಾಕಾಂತ್‌
ತಾರಾಗಣ: ಕೃಷ್ಣೇಗೌಡ, ವೈಷ್ಣವಿ ಮೆನನ್‌, ಸುಂದರವೀಣಾ, ರಮೇಶ್‌ ಭಟ್‌, ಬಿರಾದಾರ

‘ಅರಬ್ಬೀ ಕಡಲ ತೀರದಲ್ಲಿ ಸಿನಿಮಾ ಸೈಕೊ ಥ್ರಿಲ್ಲರ್‌’ ಎಂದು ಚಿತ್ರದ ನಿರ್ದೇಶಕ ವಿ. ಉಮಾಕಾಂತ್‌ ಹೇಳಿದ್ದರೂ, ಚಿತ್ರದ ನಿರೂಪಣೆಯು ‘ಥ್ರಿಲ್‌’ ಮೂಡಿಸುವುದಕ್ಕಿಂತ ಹೆಚ್ಚಾಗಿ ಜನರ ಮುಂದೆ ಒಂದು ಕಥೆಯನ್ನು ಇಟ್ಟುಬಿಡುತ್ತದೆ. ಕ್ಲೈಮಾಕ್ಸ್‌ ವರೆಗೆ ಕುತೂಹಲವನ್ನು ಉಳಿಸುವುದಕ್ಕಿಂತ ‘ಮಲ್ಟಿಪಲ್‌ ಪರ್ಸನಾಲಿಟಿ ಡಿಸಾರ್ಡರ್‌’ನಿಂದ ಬಳಲುತ್ತಿರುವ ವ್ಯಕ್ತಿಯ ಕಥೆಯನ್ನು ಹೇಳುವುದೇ ನಿರ್ದೇಶಕರಿಗೆ ಮುಖ್ಯವಾದಂತೆ ಭಾಸವಾಗುತ್ತದೆ. ಈವರೆಗೆ ಪ್ರೀತಿ– ಪ್ರೇಮ, ಹಾಸ್ಯ, ಕೌಟುಂಬಿಕ ಕಥನಗಳನ್ನೇ ನಿರ್ದೇಶಿಸಿರುವ ಉಮಾಕಾಂತ್‌ ಅವರ ಮೊದಲ ‘ಥ್ರಿಲ್ಲರ್‌’ ಸಿನಿಮಾ ಇದು.

ಪುರಾತನ ಬಂಗಲೆ ಇರುವ ತೋಟದಲ್ಲಿ ಒಂದು ಕೊಲೆ ನಡೆಯುವ ದೃಶ್ಯದೊಂದಿಗೆ ಸಿನಿಮಾ ತೆರೆದುಕೊಳ್ಳುತ್ತದೆ. ಆದರೆ ಅಲ್ಲಿ ಹುಟ್ಟುವ ಕುತೂಹಲವನ್ನು ನಿರ್ದೇಶಕರು ಪೋಷಿಸುತ್ತ ಹೋಗುವುದಿಲ್ಲ. ಬದಲಿಗೆ, ಮಲ್ಟಿಪಲ್‌ ಪರ್ಸನಾಲಿಟಿ ಡಿಸಾರ್ಡರ್‌ಗೆ ಒಳಗಾದ ಕಥಾ ನಾಯಕ ಅಂಶಿ ಕೃಷ್ಣನ (ಕೃಷ್ಣೇಗೌಡ) ಕಥೆಯನ್ನು ಹೇಳಲು ಆರಂಭಿಸುತ್ತಾರೆ. ಮಧ್ಯಂತರದವರೆಗೂ ಮುಂದುವರಿಯುವ ಈ ಕಥೆ, ಎಲ್ಲೂ ಅಂಥ ಕುತೂಹಲವನ್ನು ಹುಟ್ಟಿಸದೆ ಸರಳರೇಖೆಯಲ್ಲಿ ಸಾಗುತ್ತದೆ. ಕೆಲವು ಸಂದರ್ಭಗಳಲ್ಲಿ ‘ನಿಜವಾಗಿಯೂ ಇದು ಥ್ರಿಲ್ಲರ್‌ ಸಿನಿಮಾ ಹೌದೇ’ ಎಂಬ ಸಂದೇಹ ಮೂಡಿಸುವಷ್ಟು ನಿಧಾನವಾಗಿ ಸಾಗುತ್ತದೆ. ಸಿನಿಮಾದ ನಾಯಕ ಏಷ್ಯಾದಲ್ಲೇ ಖ್ಯಾತಿ ಪಡೆದ ಮಾಡೆಲಿಂಗ್‌ ಛಾಯಾಗ್ರಾಹಕ. ಆದರೆ ಈ ಪಾತ್ರಪೋಷಣೆ ಪರಿಣಾಮಕಾರಿಯಾಗಿ ಮೂಡಿಬಂದಿಲ್ಲ.

ADVERTISEMENT

ಮಧ್ಯಂತರದ ನಂತರ ಕತೆ ತಿರುವುಗಳನ್ನು ಪಡೆಯುತ್ತ ಸಾಗುತ್ತದೆ. ಆದರೆ ಕೊಲೆಯ ರಹಸ್ಯವನ್ನು ನಿರ್ದೇಶಕರು ಹೆಚ್ಚು ಕಾಲದವರೆಗೆ ಉಳಿಸಿಕೊಳ್ಳುವುದಿಲ್ಲ. ಕೊಲೆಗಾರ ಯಾರು, ನಿಜವಾದ ‘ಸೈಕೋ’ ವ್ಯಕ್ತಿ ಯಾರು ಎಂಬುದನ್ನು ಅಲ್ಲಲ್ಲೇ ಹೇಳುತ್ತಾ ಸಾಗುವುದರಿಂದ ಪ್ರೇಕ್ಷಕರು ಕುರ್ಚಿಯ ಅಂಚಿನಲ್ಲಿ ಕುಳಿತು ನೋಡಬೇಕಾದ ಸಂದರ್ಭ ಬರುವುದೇ ಇಲ್ಲ. ಪತ್ರಕರ್ತೆಯ ಹೆಸರಿನಲ್ಲಿ ಬಂದು, ನಾಯಕನನ್ನು ತನ್ನ ಪ್ರೀತಿಯ ಬಲೆಯಲ್ಲಿ ಬೀಳಿಸುವ ಯುವತಿಯ ಪಾತ್ರದಲ್ಲಿ ವೈಷ್ಣವಿ ಮೆನನ್‌ ಗಮನಸೆಳೆಯುತ್ತಾರೆ. ಇಂಥದ್ದೇ ಕಥಾ ಹಂದರವಿರುವ ಅದೆಷ್ಟೋ ಸಿನಿಮಾಗಳು ಈಗಾಗಲೇ ಬಂದು ಹೋಗಿದ್ದರೂ, ಈ ಪಾತ್ರವು ಅಂಥ ಇನ್ಯಾವುದೋ ಪಾತ್ರ ಛಾಯೆಯಾಗದಂತೆ ನಿರ್ದೇಶಕರು ಎಚ್ಚರ ವಹಿಸಿದ್ದಾರೆ. ದ್ವಿತೀಯಾರ್ಧದಲ್ಲಿ ನಾಯಕಿಯೇ ಕಥೆಯ ಕೇಂದ್ರವಾಗುತ್ತಾಳೆ. ವೈಷ್ಣವಿ ಈ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಸುಂದರ ವೀಣಾ ಅವರು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ರಮೇಶ್‌ ಭಟ್‌, ಬಿರಾದಾರ ಅವರದ್ದು ಅತಿಥಿ ಪಾತ್ರಗಳಷ್ಟೇ.

ಚಿತ್ರದಲ್ಲಿ ಒಂದೇ ಒಂದು ಹಾಡು ಇದೆ. ಅದು ನೆನಪಿನಲ್ಲಿ ಉಳಿಯುವಂಥದ್ದಲ್ಲ. ಛಾಯಾಗ್ರಾಹಕ ಎಂ.ಆರ್‌. ಸೀನು ಅವರ ಶ್ರಮ ಪರದೆಯ ಮೇಲೆ ಕಾಣಿಸುತ್ತದೆ. ಒಟ್ಟಿನಲ್ಲಿ ವೀಕ್ಷಕರು ಪೂರ್ವಾರ್ಧದಲ್ಲಿ ತಾಳ್ಮೆ ವಹಿಸಿದರೆ, ದ್ವಿತೀಯಾರ್ಧದಲ್ಲಿ ಚಿತ್ರವನ್ನು ಸ್ವಲ್ಪ ಆಸ್ವಾದಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.