ADVERTISEMENT

ನಾರಾಯಣನಿಗೆ ಪ್ರೇಕ್ಷಕನ ಹ್ಯಾಂಡ್ಸ್ ಅಪ್!

ನಾವು ನೋಡಿದ ಸಿನಿಮಾ

ಕೆ.ಎಂ.ಸಂತೋಷ್‌ ಕುಮಾರ್‌
Published 27 ಡಿಸೆಂಬರ್ 2019, 8:39 IST
Last Updated 27 ಡಿಸೆಂಬರ್ 2019, 8:39 IST
ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ   

ಚಿತ್ರ: ಅವನೇ ಶ್ರೀಮನ್ನಾರಾಯಣ
ನಿರ್ದೇಶನ: ಸಚಿನ್‌ ರವಿ
ತಾರಾಗಣ: ರಕ್ಷಿತ್‌ ಶೆಟ್ಟಿ, ಶಾನ್ವಿ ಶ್ರೀವಾತ್ಸವ, ಅಚ್ಯುತಕುಮಾರ್‌, ರಿಷಬ್ ಶೆಟ್ಟಿ.

ಪ್ರಪಂಚದಲ್ಲಿ ಈವರೆಗೆ ನಡೆದ ಬಹುತೇಕ ಯುದ್ಧಗಳೆಲ್ಲವೂ ಹೆಣ್ಣು, ಮಣ್ಣು ಅಥವಾ ಹೊನ್ನಿಗಾಗಿಯೇ ಎನ್ನುವ ಮಾತಿದೆ. ಇದೇ ಸೂತ್ರವಿಟ್ಟುಕೊಂಡೇ ಹೊನ್ನು ಮತ್ತು ಹೆಣ್ಣಿಗಾಗಿಯೇ ‘ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿನಾಯಕ ಮತ್ತು ಖಳ ನಾಯಕರ ನಡುವೆ ಯುದ್ಧ ಮಾಡಿಸಿದ್ದಾರೆ ನಿರ್ದೇಶಕ ಸಚಿನ್‌ ರವಿ.ಆ್ಯಕ್ಷನ್‌, ಥ್ರಿಲ್ಲರ್‌, ಸಸ್ಪೆನ್ಸ್‌, ಕಾಮಿಡಿ ಅಂಶಗಳ ಸಮಪಾಕದಲ್ಲಿ ಅದ್ದಿಟ್ಟಿರುವ ಚಿತ್ರವು ಪ್ರೇಕ್ಷಕನಿಗೆ ಕಾಲ್ಪನಿಕ ರಮ್ಯಜಗತ್ತಿನ ದರ್ಶನ ಮಾಡಿಸುತ್ತದೆ.

ಅದು ಕೋಟೆ ಕೊತ್ತಲವಿರುವ ಅಮರಾವತಿ ಎನ್ನುವ ಕಾಲ್ಪನಿಕ ಊರು. ಅಲ್ಲಿ ದರೋಡೆಯನ್ನೇ ಕಾಯಕ ಮಾಡಿಕೊಂಡು ಮೆರೆಯುತ್ತಿರುತ್ತಾರೆ ಅಭೀರರು (ಲೂಟಿಕೋರರು). ಸರ್ಕಾರಕ್ಕೆ ಸೇರಬೇಕಿದ್ದ ನಿಧಿಯನ್ನು ನಾಟಕ ತಂಡವೊಂದು ದೋಚಿ ರಹಸ್ಯ ಸ್ಥಳದಲ್ಲಿ ಬಚ್ಚಿಡುತ್ತದೆ. ಆ ನಿಧಿಯನ್ನು ತನ್ನ ಕೈವಶ ಮಾಡಿಕೊಳ್ಳಲು ಅಭೀರರ ನಾಯಕ ಪ್ರಯತ್ನಿಸುತ್ತಿರುತ್ತಾನೆ. ನಿಧಿಯ ರಹಸ್ಯ ಬಾಯಿಬಿಡದ ನಾಟಕ ತಂಡದವರನ್ನು ಗುಂಡಿಟ್ಟು ಕೊಲ್ಲುತ್ತಾನೆ.

ADVERTISEMENT

ಅವರ ಕುಟುಂಬಗಳನ್ನು ಸರ್ವನಾಶ ಮಾಡುವ ಸಂಕಲ್ಪ ತೊಡುತ್ತಾನೆ. ಅಭೀರ ನಾಯಕನ ಸಾವಿನ ನಂತರ ಅವನ ಉತ್ತರಾಧಿಕಾರಿಯಾಗಲು ಮತ್ತು ನಿಧಿ ಶೋಧಿಸಲು ಆತನ ಇಬ್ಬರು ಮಕ್ಕಳಾದ ಜಯರಾಮ ಮತ್ತು ತುಕಾರಾಮನ ನಡುವೆಯೂ ಯುದ್ಧ ಶುರುವಾಗಿರುತ್ತದೆ. ಅದೇ ವೇಳೆಗೆ ಅಮರಾವತಿಗೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಶ್ರೀಮನ್ನಾರಾಯಣ (ರಕ್ಷಿತ್‌ ಶೆಟ್ಟಿ) ಎಂಟ್ರಿ ಕೊಡುತ್ತಾನೆ. ಈ ನಾರಾಯಣನಿಗೆಸಾಥ್ ಕೊಡುವುದು ಕಾನ್ಸ್‌ಟೆಬಲ್‌ಪಾತ್ರದಲ್ಲಿ ಅಚ್ಯುತಕುಮಾರ್.ನಾಟಕದ ಪರಿವಾರವನ್ನು ರಕ್ಷಿಸಿಕೊಳ್ಳಲು ಪತ್ರಕರ್ತೆಯಾಗಿ ಲಕ್ಷ್ಮಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಶಾನ್ವಿ ಶ್ರೀವಾತ್ಸವ.

ಕಥೆಯ ನಿರೂಪಣೆಯ ಸೂತ್ರಪಟದ ಮೇಲೆ ನಿರ್ದೇಶಕ ನಿಯಂತ್ರಣ ಸಾಧಿಸಿರುವುದರಿಂದ ಪಾತ್ರಗಳು ನಿಧಿ ಸುತ್ತವೇ ಗಿರಕಿ ಹೊಡೆದು, ಕೊನೆಗೆ ಹಳೆಕಾಲದ ಚಿನ್ನದ ನಾಣ್ಯಗಳು ತುಂಬಿದ ಪೆಟ್ಟಿಗೆಯ ಬಳಿಗೆ ಬಂದು ನಿಲ್ಲುತ್ತವೆ. ಸಚಿನ್ ರವಿ ನಿರ್ದೇಶನದ ಮೊದಲ ಪ್ರಯತ್ನದಲ್ಲೇ ಗಮನ ಸೆಳೆದಿದ್ದಾರೆ.

ಅಭೀರರ ಕೋಟೆ ಭೇದಿಸಿ ನಿಧಿಯನ್ನು ಹೇಗೆ ಹೊರತರುತ್ತಾನೆ, ನಾಟಕ ತಂಡದ ಕುಟುಂಬಗಳ ಪಾಲಿಗೆ ಈ ನಾರಾಯಣ ಹೇಗೆ ಆರಕ್ಷಕನಾಗುತ್ತಾನೆ ಎನ್ನುವುದು ಚಿತ್ರದ ಕಥಾಹಂದರ.ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ರಕ್ಷಿತ್‌ ಶೆಟ್ಟಿ, ಶಂಕರ್‌ನಾಗ್‌ ನೆನಪುಗಳು ಮರುಕಳಿಸುವಂತೆ ಮಾಡಿದ್ದಾರೆ. ಸಿಗರೇಟ್ ಹಚ್ಚುವ, ಪೊಲೀಸ್‌ ಕ್ಯಾಪ್‌, ಗಾಗಲ್‌ ಧರಿಸುವ ಸ್ಟೈಲಿನಲ್ಲೂ ರಕ್ಷಿತ್‌ ಗಮ್ಮತ್ತು ಪ್ರೇಕ್ಷಕನ ಮನಸಿನಲ್ಲಿ ಅಚ್ಚೊತ್ತುತ್ತದೆ.ನಟನೆ, ನೃತ್ಯದಲ್ಲಿ ರಕ್ಷಿತ್‌ ಚಿತ್ರವನ್ನು ಇಡಿಯಾಗಿ ಆವರಿಸಿಕೊಂಡು, ಪ್ರೇಕ್ಷಕರನ್ನು ಭರ್ಜರಿಯಾಗಿಯೇ ಮನರಂಜಿಸಿದ್ದಾರೆ.

ಶಾನ್ವಿ ಕೂಡ ಪ್ರೇಕ್ಷಕರನ್ನು ರಂಜಿಸಲು ಹಿಂದೆ ಬಿದ್ದಿಲ್ಲ. ಇನ್ನೇನು ನಾರಾಯಣನ ಜತೆಗೆ ಲಕ್ಷ್ಮಿ ಡುಯೆಟ್‌ ಶುರು ಮಾಡುತ್ತಾಳೆ ಎಂದು ಪ್ರೇಕ್ಷಕ ಎಣಿಸುವಾಗಲೇ ನಾರಾಯಣನನ್ನು ಆಕೆ ಅಪಹರಿಸಿ ಪಿಸ್ತೂಲ್‌ ತೋರಿಸಿ ಹ್ಯಾಂಡ್ಸ್‌ ಅಪ್‌ ಮಾಡಿಸುತ್ತಾಳೆ. ಇದು ಮಧ್ಯಂತರ ವಿರಾಮದ ಕುತೂಹಲ. ಇಲ್ಲಿ ನಿರ್ದೇಶಕನ ಜಾಣ್ಮೆಯೂ ಎದ್ದು ಕಾಣಿಸುತ್ತದೆ. ಮಧ್ಯಂತರವು ಚಿತ್ರದ ಕುತೂಹಲವಷ್ಟೇ ಅಲ್ಲ, ಕಥೆಗೊಂದು ತಿರುವು, ಆಯಾಮವನ್ನು ತಂದುಕೊಡುತ್ತದೆ.

ಅಚ್ಯುತಕುಮಾರ್ ಪಾತ್ರದಲ್ಲಿ ನವಿರು ಹಾಸ್ಯ ಉಕ್ಕಿಸಿದರೆ,ಖಳನಾಯಕರಾಗಿ ಬಾಲಾಜಿ ಮನೋಹರ್‌, ಪ್ರಮೋದ್ ಶೆಟ್ಟಿ ಮಿಂಚು ಹರಿಸಿದ್ದಾರೆ.ಇನ್ನೂ ಕೌ ಬಾಯ್‌ ‘ಸುಪಾರಿ ಕಿಲ್ಲರ್‌’ ಆಗಿ ಕಾಣಿಸಿರುವ ರಿಷಬ್‌ ಶೆಟ್ಟಿ ಪಾತ್ರ ನಿಗೂಢ ಮತ್ತು ಕುತೂಹಲದ ಗಂಟಿನಂತೆ ಉಳಿಯುತ್ತದೆ.ಗೋಪಾಲಕೃಷ್ಣ ದೇಶ‍ಪಾಂಡೆ, ಮಧುಸೂದನ್‌ ರಾವ್, ಗೌತಮ್‌ ರಾಜ್‌, ಸಲ್ಮಾನ್‌ ಅಹಮ್ಮದ್‌, ಅನಿರುದ್ಧ್‌ ಮಹೇಶ್‌ ಪಾತ್ರಗಳಿಗೆ ನ್ಯಾಯ ದಕ್ಕಿಸಿಕೊಟ್ಟಿದ್ದಾರೆ.

ಚರಣ್‌ ರಾಜ್‌ ಮತ್ತು ಬಿ. ಅಜನೀಶ್‌ ಲೋಕನಾಥ್‌ ಸಂಗೀತವಿರುವ ಹಾಡುಗಳು ಕೇಳುವಂತಿವೆ. ಅದರಲ್ಲೂ ‘ಹ್ಯಾಂಡ್ಸ್‌ ಅಪ್‌’ ಹಾಡುಮನಸಿನಲ್ಲಿ ಗುನುಗುನಿಸುತ್ತದೆ. ನೃತ್ಯ ಸಂಯೋಜನೆಯಲ್ಲಿ ಇಮ್ರಾನ್ ಸರ್ದಾರಿಯಾ ಮನ ಗೆಲ್ಲುತ್ತಾರೆ. ಇನ್ನೂ ಹಿನ್ನೆಲೆ ಸಂಗೀತದ ಅಬ್ಬರದಲ್ಲಿ ಕೆಲವೊಮ್ಮೆ ಸಂಭಾಷಣೆಗಳು ಸ್ಪಷ್ಟವಾಗಿ ಕೇಳಿಸದಾಗುತ್ತವೆ. ನಿರ್ದೇಶಕರು ಸಂಕಲನದ ಭಾರ ಹೊತ್ತುಕೊಂಡು ಅದರ ಹೊರೆಯನ್ನು ಪ್ರೇಕ್ಷಕನಿಗೂ ದಾಟಿಸಿದ್ದಾರೆ. ಪರಿಣಾಮ ಅಲ್ಲಲ್ಲಿ ಕಥೆಯ ಜಗ್ಗಾಟ, ಹೊಯ್ದಾಟ ಹಿಗ್ಗುತ್ತಾ ಹೋಗಿದೆ. ಕೆಲವು ಸನ್ನಿವೇಶಗಳು ತರ್ಕಕ್ಕೆ ಸಿಗದೆ ಗೊಂದಲದ ರಾಶಿ ಒಟ್ಟುಮಾಡುತ್ತವೆ.

ಆ್ಯಕ್ಷನ್‌ ಪ್ರಿಯರಿಗೆ ಸಾಹಸ ದೃಶ್ಯಗಳು ಇಷ್ಟವಾಗುವಂತಿವೆ.ಬಂದೂಕಿನ ಗುಂಡಿನ ಮೊರೆತಕ್ಕೆ ಲೆಕ್ಕವಿಲ್ಲ. ಪಟಾಕಿಯಂತೆ ಗುಂಡುಗಳು ಸಿಡಿಯುತ್ತವೆ. ನೊಣಗಳು ಬೀಳುವಂತೆ ಹೆಣಗಳು ಉರುಳುತ್ತವೆ. ರಕ್ತಪಾತ, ಹೊಡಿಬಡಿ ದೃಶ್ಯಗಳ ಅಬ್ಬರಕ್ಕೆ ಲೆಕ್ಕವಿಲ್ಲ. ಅದರ ನಡುವೆ ಶಾಂತವಾಗಿ ಹರಿಯುವ ನದಿಯಂತೆ ಇರುವ ಸಂಭಾಷಣೆ, ನವಿರು ಹಾಸ್ಯವು ಕಚಗುಳಿ ಇಡುತ್ತವೆ.

ಹಾಲಿವುಡ್, ಬಾಲಿವುಡ್ ಸಿನಿಮಾಗಳಿಗೆ ಸರಿಸಮಾನಾಗಿರೆಟ್ರೊ ಶೈಲಿ, ಫ್ಯಾಂಟಸಿಯನ್ನು ಸಮ ಪ್ರಮಾಣದಲ್ಲಿ ಎರಕ ಹೊಯ್ದಂತಿರುವ ಈ ಚಿತ್ರ ತಾಂತ್ರಿಕವಾಗಿಯೂ ಗಮನ ಸೆಳೆಯುತ್ತದೆ. ರೆಟ್ರೊ ಶೈಲಿಯ ವಸ್ತ್ರ ವಿನ್ಯಾಸ, ಅದ್ದೂರಿ ಸೆಟ್ಟಿಂಗ್ ಚಿತ್ರಕ್ಕೆ ಕಳೆ ತಂದುಕೊಟ್ಟಿದೆ.ಕರಂ ಚಾವ್ಲಾ ಛಾಯಾಗ್ರಹಣ ಚಿತ್ರದ ಸೊಬಗು ಹೆಚ್ಚಿಸಿದೆ.ಕುಟುಂಬ ಸಮೇತ ಚಿತ್ರ ನೋಡಲು ಯಾವುದೇ ಅಡ್ಡಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.