ADVERTISEMENT

ಸಂದರ್ಶನ: ಕನಸು ಈಡೇರುವ ಖುಷಿಯಲ್ಲಿ ಅವತಾರ್‌

ಶರತ್‌ ಹೆಗ್ಡೆ
Published 14 ಜನವರಿ 2021, 19:30 IST
Last Updated 14 ಜನವರಿ 2021, 19:30 IST
ಅವತಾರ್‌
ಅವತಾರ್‌   

ಕುಡ್ಲ ಕೆಫೆ, ಪವಿತ್ರ– ಬೀಡಿದ ಪೊಣ್ಣು ತುಳು ಚಿತ್ರಗಳ ಮೂಲಕ ಬೆಳ್ಳಿ ತೆರೆ ಕಂಡ ನಟ ಅವತಾರ್‌. ಈಗಾಗಲೇ ಕನ್ನಡ, ತೆಲುಗು ಚಿತ್ರಗಳಲ್ಲಿ ನಾಯಕನಾಗಿ ಮಿಂಚಿದ್ದಾರೆ. ‘ಹ್ಯಾಪಿ ಜರ್ನಿ’, ‘ಕುಮಾರಿ 21 (ಎಫ್‌)’, ‘ಪರಸಂಗ’ಗಳ ಮೂಲಕ ಚಿತ್ರರಸಿಕರನ್ನು ತಲುಪಿದ್ದ ಅವತಾರ್‌ ಅವರು ‘ಗಾಜನೂರು’ ಚಿತ್ರದಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ. ನಾಳೆ (ಜ. 16)‘ಗಾಜನೂರು’ ಸಿನಿಮಾಕ್ಕೆ ಮುಹೂರ್ತ ನಿಗದಿಯಾಗಿದೆ. ಈ ನಡುವೆ ಅವರು ‘ಪ್ರಜಾಪ್ಲಸ್‌’ನೊಂದಿಗೆ ಮಾತಿಗೆ ಸಿಕ್ಕರು.

‘ಗಾಜನೂರು’ ಬಗ್ಗೆ ಹೇಳಿ..
‘ಗಾಜನೂರು’ ಸುಮಾರು ಒಂದೂವರೆ ವರ್ಷದಿಂದ ನಡೆಯುತ್ತಿರುವ ಕನಸಿನ ಯೋಜನೆ. ಮೊದಲಿನ ರೀತಿ ಸಾಮಾನ್ಯ ಸಿನಿಮಾ ಬೇಡ. ಎಲ್ಲ ಭಾಷೆ, ಎಲ್ಲ ಕಡೆಯ ಚಿತ್ರರಂಗಕ್ಕೆ ತಲುಪಬೇಕಾದ ಸಿನಿಮಾ ಎಂಬ ಪರಿಕಲ್ಪನೆಯಲ್ಲಿ ಈ ಚಿತ್ರ ಮಾಡುತ್ತಿದ್ದೇವೆ.

ಪ್ಯಾನ್‌ ಇಂಡಿಯಾ ಸಿನಿಮಾ ಇದಾಗುತ್ತದೆಯೇ?
ಮೊದಲು ಆ ಯೋಚನೆ ಇತ್ತು. ಆದರೆ, ಸದ್ಯ ಕನ್ನಡಕ್ಕೆ ಆದ್ಯತೆ ಕೊಟ್ಟು ಅದರ ಪ್ರಕಾರ ಸಿನಿಮಾ ಮಾಡುತ್ತಿದ್ದೇವೆ. ಶಿವಮೊಗ್ಗ, ಗಾಜನೂರಿನಲ್ಲಿ ನಡೆದ ಒಂದು ಘಟನೆ ಆಧರಿಸಿ ಕಥೆ ಹೆಣೆದಿದ್ದೇವೆ. ಸಿನಿಮಾದ ಔಟ್‌ಪುಟ್‌ ನೋಡಿಕೊಂಡು ಪ್ಯಾನ್‌ ಇಂಡಿಯಾ ಬಗ್ಗೆ ಯೋಚಿಸುತ್ತೇವೆ. ಇದು ಕನ್ನಡ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು ಆಗಲಿದೆ.

ADVERTISEMENT

‘ಗಾಜನೂರು’ ಶೀರ್ಷಿಕೆ ಇಡಲು ಕಾರಣ?
‘ಗಾಜನೂರು’ ಕೇವಲ ಸಿನಿಮಾ ಮಾತ್ರ ಅಲ್ಲ. ಎಲ್ಲ ಕ್ಷೇತ್ರದಲ್ಲೂ ಇಡೀ ಕರ್ನಾಟಕದಲ್ಲಿ ಸದ್ದು ಮಾಡುವ ಹೆಸರು. ಈ ಶೀರ್ಷಿಕೆ ಇಟ್ಟಾಗ ಹಲವರು ಮುಖಮುಖ ನೋಡಿಕೊಂಡರು. ಆದರೆ, ಇದು ಅಣ್ಣಾವ್ರ (ಡಾ.ರಾಜ್‌ಕುಮಾರ್‌) ಊರು ಅಲ್ಲ. ಅಲ್ಲಿನ ಕಥೆಯೂ ಅಲ್ಲ. ಶೀರ್ಷಿಕೆ ನೋಂದಾಯಿಸುವಾಗಲೇ ಎಲ್ಲ ವಿವರಗಳನ್ನು ಚಲನಚಿತ್ರ ವಾಣಿಜ್ಯ ಮಂಡಳಿಗೆ ಕೊಟ್ಟಿದ್ದೇವೆ. ಈ ಕ್ಷೇತ್ರದ ಪ್ರಮುಖರೆಲ್ಲರೂ ಈ ಶೀರ್ಷಿಕೆಗೆ ಖುಷಿಪಟ್ಟಿದ್ದಾರೆ. ಕಥೆಯಲ್ಲಿ ಬರುವ ಘಟನೆ ನಡೆದಿರುವುದು ಆ ಊರಿನಲ್ಲಿ. ಹಾಗಾಗಿ ಬೇರೆ ಹೆಸರು ಇಟ್ಟರೆ ತಪ್ಪಾಗುತ್ತದೆ.

ತುಳು– ಕನ್ನಡ– ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಿದ್ದೀರಿ. ಈ ಹಂತಗಳು ಹೇಗಿದ್ದವು?
ಬಿಬಿಎಂ ಮುಗಿಸಿ ನಾನು ಮೈಸೂರಿನ ರಂಗಾಯಣ ಸೇರಿದೆ. ಅಲ್ಲಿ ತರಬೇತಿ ಮುಗಿದ ಬಳಿಕ ನಾನು ಹೀರೋ ಆಗಬೇಕು ಎಂದೇ ತೀರ್ಮಾನ ಮಾಡಿದೆ. ಎರಡು ವರ್ಷ ಆಡಿಷನ್ಸ್‌, ಬೀದಿ ನಾಟಕ ಅಂತೆಲ್ಲಾ ತಿರುಗಾಡಿದೆ. ತುಳು ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದೆ. ಸಣ್ಣ ಸಣ್ಣ ಅನುಭವಗಳ ಮೂಲಕ ಕಲಿಯುತ್ತಾ ಹೋದೆ. ನನ್ನ ನಡವಳಿಕೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡೆ.

ಸಿನಿಬದುಕಿನ ಕನಸು ಏನು?
ಮೊದಲ ಕನಸು ಈಡೇರುತ್ತಿದೆ. ಇದುವರೆಗಿನ ಶ್ರಮಕ್ಕೆ ಫಲ ಸಿಕ್ಕಿದೆ. ಮುಂದೆಯೂ ಅದೇ ಶ್ರಮ ಹಾಕುತ್ತೇನೆ. ಮುಂದೆ ಗೆಲ್ಲಬೇಕು. ನಾನು, ನಿರ್ಮಾಪಕರು, ನಿರ್ದೇಶಕರು ಒಟ್ಟಾರೆ ಸಿನಿಮಾರಂಗ ಗೆಲ್ಲಬೇಕು. ಒಬ್ಬ ಸ್ಟಾರ್‌ ಆಗಬೇಕು ಎಂಬ ಕನಸು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.