ADVERTISEMENT

ಹಾಲಿವುಡ್‌ಗೆ ತಟ್ಟಿದ ಕೊರೊನಾ ಭೀತಿ

ರಾಯಿಟರ್ಸ್
Published 3 ಮಾರ್ಚ್ 2020, 16:35 IST
Last Updated 3 ಮಾರ್ಚ್ 2020, 16:35 IST
ಲಿಯು ಯಿಫೈ
ಲಿಯು ಯಿಫೈ   

ಲಾಸ್‌ ಏಂಜಲೀಸ್‌: ಚೀನಾದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದು ಹಲವು ರಾಷ್ಟ್ರಗಳಿಗೆ ಹರಡುತ್ತಿರುವ ಮಾರಕ ಕೊರೊನಾ ಸೋಂಕು (ಕೋವಿಡ್‌–19) ಭೀತಿ ಈಗ ಹಾಲಿವುಡ್‌ ಚಿತ್ರರಂಗಕ್ಕೂ ಆತಂಕ ತಂದೊಡ್ಡಿದೆ.

ಈ ಮಾರಣಾಂತಿಕ ಸೋಂಕು ಜಗತ್ತಿನ 60ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಹರಡಿದೆ. ಇದರಿಂದ ಹಾಲಿವುಡ್‌ ಚಿತ್ರ ನಿರ್ಮಾಪಕರು ಚಿಂತೆಗೀಡಾಗಿದ್ದಾರೆ.

ಜನರು ಸೋಂಕಿನ ಭಯಕ್ಕೆ ಮನೆಯಿಂದ ಹೊರಬರಲು ಹಿಂಜರಿಯುತ್ತಿರುವಾಗ ಯಾರಿಗಾಗಿ ಚಿತ್ರ ಮಾಡಬೇಕು, ಯಾರು ಚಿತ್ರಗಳನ್ನು ನೋಡುತ್ತಾರೆ ಎಂಬ ಅಳುಕಿನಿಂದ ಈಗಾಗಲೇ ಪೂರ್ವ ನಿಗದಿಯಾಗಿದ್ದ ಚಿತ್ರಗಳ ಬಿಡುಗಡೆಯನ್ನೇ ಮುಂದೂಡುತ್ತಿದ್ದಾರೆ.

ADVERTISEMENT

ವಿತರಕರ ಮೇಲೆ ಒತ್ತಡ: ಚೀನಾ ಮತ್ತು ಇಟಲಿಯ ಹಲವು ಕಡೆಗಳಲ್ಲಿ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವುದನ್ನು ಚಿತ್ರ ನಿರ್ಮಾಪಕರು ಮುಂದೂಡಲು ವಿತರಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಅಲ್ಲದೆ, ಪೂರ್ವ ನಿಗದಿಯಂತೆ ನಡೆಯುತ್ತಿದ್ದ ಚಿತ್ರಗಳ ಚಿತ್ರೀಕರಣವನ್ನು ಕೊರೊನಾ ಸೋಂಕು ಇರುವ ಕಡೆಯಿಂದ ಬೇರೆಡೆಗೆ ಸ್ಥಳಾಂತರಿಸುತ್ತಿದ್ದಾರೆ.

ಡೇನಿಯಲ್‌ ಕ್ರೇಗ್‌ ನಟಿಸಿರುವ ಜೇಮ್ಸ್‌ ಬಾಂಡ್‌ ಸರಣಿಯ ‘ನೋ ಟೈಮ್‌ ಟು ಡೈ’ ಚಿತ್ರ ಬಿಡುಗಡೆಯನ್ನು ಕೊರೊನಾ ವೈರಸ್‌ ಕಾರಣಕ್ಕೆಮುಂದೂಡುವಂತೆ ಒತ್ತಾಯಿಸಿ ಜೇಮ್ಸ್‌ ಬಾಂಡ್‌ ಅಭಿಮಾನಿಗಳ ಗುಂಪು ನಿರ್ಮಾಪಕರಿಗೆ ಮುಕ್ತಪತ್ರ ಬರೆದಿದೆ. ಈ ಪತ್ರವನ್ನು MI6-HQ.com ಪ್ರಕಟಿಸಿದೆ.

ಕ್ಯಾರಿ ಜೋಜಿ ಫುಕುನಾಗಾ ನಿರ್ದೇಶನದ ಈ ಚಿತ್ರ ಏಪ್ರಿಲ್‌ 8ರಂದು ಬ್ರಿಟನ್‌, ಏ.10ರಂದು ಉತ್ತರ ಅಮೆರಿಕಾದಲ್ಲಿ ಬಿಡುಗಡೆ ಮಾಡಲು ವಿತರಕರು ನಿರ್ಧರಿಸಿದ್ದಾರೆ. ಅಲ್ಲದೆ, ಇದೇ 31ರಂದು ಲಂಡನ್‌ನಲ್ಲಿ ಚಿತ್ರದ ಪ್ರೀಮಿಯರ್‌ ಶೋ ಆಯೋಜಿಸಲಾಗಿದೆ.

ಪತ್ರ ಬರೆದ ಅಭಿಮಾನಿಗಳು: ಚಿತ್ರದ ಬಿಡುಗಡೆಯನ್ನು ಈ ವರ್ಷದ ಬೇಸಿಗೆಯವರೆಗೆ ಮುಂದೂಡಬೇಕು. ಪ್ರೀಮಿಯರ್‌ ಶೋ ಕೂಡ ಮುಂದೂಡಬೇಕು. ಇದರಿಂದ ಚಿತ್ರದ ಗುಣಮಟ್ಟ ಮತ್ತು ಗಳಿಕೆಗೆ ಯಾವುದೇ ಹಾನಿಯಾಗುವುದಿಲ್ಲ. ಅಷ್ಟಕ್ಕೂ ಸಾರ್ವಜನಿಕ ಆರೋಗ್ಯಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ ಎಂದು ಅಭಿಮಾನಿಗಳ ಗುಂಪು, ಚಿತ್ರದ ವಿತರಕರಾದ ಎಂಜಿಎಂ ಮತ್ತು ಯೂನಿವರ್ಸಲ್ ಹಾಗೂ ನಿರ್ಮಾಪಕರಾದ ಇಯಾನ್ ಪ್ರೊಡಕ್ಷನ್ಸ್‌ ಅವರನ್ನು ಉದ್ದೇಶಿಸಿ ಪತ್ರ ಬರೆದಿದೆ.

ಇಟಲಿಯಲ್ಲಿ ನಡೆಯಬೇಕಿದ್ದ ನಟ ಟಾಮ್‌ ಕ್ರೂಸ್‌ ಅವರ ಮುಂಬರುವ ‘ಮಿಷನ್‌ ಇಂಪಾಸಿಬಲ್‌’ ಚಿತ್ರದ ಚಿತ್ರೀಕರಣವನ್ನು ವಯಾಕಾಮ್‌ ಸಿಬಿಎಸ್‌ ಇಂಕ್‌ನ ಪ್ಯಾರಾಮೌಂಟ್‌ ಪಿಕ್ಚರ್ಸ್‌ ಸಂಸ್ಥೆಯು ಮುಂದೂಡಿದೆ. ಇಟಲಿಯ ವಿವಿಧ ಕಡೆಗಳಲ್ಲಿ ಮೂರು ವಾರಗಳಿಗೂ ಹೆಚ್ಚು ಕಾಲ ಚಿತ್ರೀಕರಣನಡೆಸಲು ಸಂಸ್ಥೆ ಯೋಜನೆಹಾಕಿಕೊಂಡಿತ್ತು.

ಸಾಹಸ ಪ್ರಧಾನವಾದ ಹಾಲಿವುಡ್‌ನ ‘ಮುಲಾನ್‌’ ಚಿತ್ರವನ್ನು ಬಿಡುಗಡೆ ಮಾಡಲು ವಾಲ್ಟ್‌ ಡಿಸ್ನಿಯು ಚೀನಾದಲ್ಲಿ ಚಿತ್ರಮಂದಿರಗಳು ಬಾಗಿಲು ತೆರೆಯುವುದನ್ನು ಎದುರು ನೋಡುತ್ತಿದೆ.

ಚೀನಾದ ನಾಯಕಿ ನಟಿ ಲಿಯು ಯಿಫೈ ಅಭಿನಯಿಸಿರುವ ಈ ಚಿತ್ರವು ಇದೇ 27ರಂದು ವಿವಿಧ ದೇಶಗಳಲ್ಲಿ ತೆರೆಕಾಣಲಿದೆ. ಇದು ಅಮೆರಿಕದ ಐತಿಹಾಸಿಕ ನಾಟಕ ಆಧರಿಸಿದ ಚಿತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.