ADVERTISEMENT

ನಟ ದರ್ಶನ್ ಸಂದರ್ಶನ | ಛಲದೊಳ್‌ ದುರ್ಯೋಧನಂ

ಕೆ.ಎಚ್.ಓಬಳೇಶ್
Published 13 ಆಗಸ್ಟ್ 2019, 10:56 IST
Last Updated 13 ಆಗಸ್ಟ್ 2019, 10:56 IST
‘ಮುನಿರತ್ನ ಕುರುಕ್ಷೇತ್ರ’ ಚಿತ್ರದಲ್ಲಿ ದರ್ಶನ್‌ ಮತ್ತು ಹರಿಪ್ರಿಯಾ
‘ಮುನಿರತ್ನ ಕುರುಕ್ಷೇತ್ರ’ ಚಿತ್ರದಲ್ಲಿ ದರ್ಶನ್‌ ಮತ್ತು ಹರಿಪ್ರಿಯಾ   

‘ಪೌರಾಣಿಕ ಚಿತ್ರದಲ್ಲಿ ನಟಿಸುವುದಿಲ್ಲ ಎಂದರೆ ನನ್ನಂತಹ ಮುಟ್ಟಾಳ ಮತ್ತೊಬ್ಬನಿಲ್ಲ’ –ನಟ ದರ್ಶನ್‌ ಪೌರಾಣಿಕ ಸಿನಿಮಾಗಳ ಬಗ್ಗೆ ತಮ್ಮೊಳಗೆ ಹುದುಗಿರುವ ಪ್ರೀತಿಯನ್ನು ಅಭಿವ್ಯಕ್ತಿಪಡಿಸಿದ್ದು ಹೀಗೆ. ಅವರ ಹುರಿಗೊಳಿಸಿದ ದೇಹ ಮತ್ತು ಎತ್ತರದ ನಿಲುವು ಐತಿಹಾಸಿಕ, ಪೌರಾಣಿಕ ಪಾತ್ರಗಳಿಗೆ ಹೇಳಿ ಮಾಡಿಸುವಂತಹದ್ದು. ಅಂತಹ ಪಾತ್ರಗಳಿಗಾಗಿಯೇ ಹಂಬಲಿಸುವ ಅವರೊಟ್ಟಿಗೆ ಮಾತುಕತೆಗೆ ಕೂತಾಗ ಸೂರ್ಯ ತನ್ನ ದಿನಚರಿ ಮುಗಿಸಿದ್ದ. ಹೊರಗಡೆ ಹೈಮಾಸ್ಟ್‌ ದೀಪಗಳು ಬೆಳದಿಂಗಳಿನಂತಹ ಬೆಳಕು ಹರಡಿದ್ದವು.

‘ಪೌರಾಣಿಕ ಚಿತ್ರದಲ್ಲಿ ನಟಿಸುವುದಿಲ್ಲ ಎಂದರೆ ನನ್ನಂತಹ ಮುಟ್ಟಾಳ ಮತ್ತೊಬ್ಬನಿಲ್ಲ’

–ನಟ ದರ್ಶನ್‌ ಪೌರಾಣಿಕ ಸಿನಿಮಾಗಳ ಬಗ್ಗೆ ತಮ್ಮೊಳಗೆ ಹುದುಗಿರುವ ಪ್ರೀತಿಯನ್ನು ಅಭಿವ್ಯಕ್ತಿಪಡಿಸಿದ್ದು ಹೀಗೆ. ಅವರ ಹುರಿಗೊಳಿಸಿದ ದೇಹ ಮತ್ತು ಎತ್ತರದ ನಿಲುವು ಐತಿಹಾಸಿಕ, ಪೌರಾಣಿಕ ಪಾತ್ರಗಳಿಗೆ ಹೇಳಿ ಮಾಡಿಸುವಂತಹದ್ದು. ಅಂತಹ ಪಾತ್ರಗಳಿಗಾಗಿಯೇ ಹಂಬಲಿಸುವ ಅವರೊಟ್ಟಿಗೆ ಮಾತುಕತೆಗೆ ಕೂತಾಗ ಸೂರ್ಯ ತನ್ನ ದಿನಚರಿ ಮುಗಿಸಿದ್ದ. ಹೊರಗಡೆ ಹೈಮಾಸ್ಟ್‌ ದೀಪಗಳು ಬೆಳದಿಂಗಳಿನಂತಹ ಬೆಳಕು ಹರಡಿದ್ದವು.

ADVERTISEMENT

ಪಂಚಿಂಗ್‌ ಡೈಲಾಗ್‌, ಪ್ರಶ್ನೆಗಳಿಗೆ ಖಡಕ್‌ ಉತ್ತರ, ತಮಾಷೆ, ಚಿತ್ರರಂಗದ ಸ್ಥಿತಿಗತಿ –ಎಲ್ಲವೂ ಅವರ ಮಾತಿನಲ್ಲಿತ್ತು. ನಡುನಡುವೆ ದುರ್ಯೋಧನನ ಕುಡಿನೋಟ ಬೀರುತ್ತಲೇ ಅವನಂತೆಯೇ ನಗುತ್ತಿದ್ದರು. ಅವರ ನಗುವಿನ ಕಾರಣಕ್ಕಾಗಿಯೇ ‘ಮುನಿರತ್ನ ಕುರುಕ್ಷೇತ್ರ’ ಚಿತ್ರದಿಂದಲೇ ಮಾತುಕತೆ ಆರಂಭವಾಯಿತು.

‘ದುರ್ಯೋಧನನ ಪಾತ್ರದಲ್ಲಿ ನಟಿಸುವ ಕನಸಿತ್ತೇ’ ಎನ್ನುವ ಪ್ರಶ್ನೆಗೆ, ‘ಕುರುಕ್ಷೇತ್ರದಂತಹ ಸಿನಿಮಾ ಮಾಡಲು ನಿರ್ಮಾಪಕರು ಕನಸು ಕಾಣಬೇಕು. ಕಲಾವಿದರು ಕನಸು ಕಂಡರೆ ಯಾವುದೇ ಪ್ರಯೋಜನವಿಲ್ಲ’ ಎಂದು ನಕ್ಕರು.

‘ನಾನು ಕನಸು ಕಾಣುವುದಿಲ್ಲ. ಒಪ್ಪಿಕೊಂಡ ಪಾತ್ರಕ್ಕೆ ಹೇಗೆ ನ್ಯಾಯ ಒದಗಿಸಬಹುದು ಎಂದಷ್ಟೇ ನಾನು ಕನಸು ಕಾಣುವುದು’ ಎಂದು ಸ್ಪಷ್ಟನೆ ನೀಡಿದರು.

ದೂರದರ್ಶನದಲ್ಲಿ ‘ರಾಮಾಯಣ’ ಮತ್ತು ‘ಮಹಾಭಾರತ’ ಧಾರಾವಾಹಿಗಳನ್ನು ನೋಡಿದ ನೆನಪುಗಳು ಇನ್ನೂ ಅವರ ಮನದಲ್ಲಿ ಹಸಿರಾಗಿಯೇ ಇವೆಯಂತೆ. ‘ಡಿಡಿ 1ರಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಗಳನ್ನು ತಪ್ಪದೇ ನೋಡುತ್ತಿದ್ದೆ. ಆಹೋರಾತ್ರಿ ಪೌರಾಣಿಕ ನಾಟಕಗಳನ್ನು ನೋಡಿಲ್ಲ. ಮೈಸೂರಿನಲ್ಲಿ ನಾವಿದ್ದ ಸ್ಥಳದಲ್ಲಿ ಅಂತಹ ಪ್ರದರ್ಶನಗಳು ನಡೆಯುತ್ತಿರಲಿಲ್ಲ’ ಎಂದು ನೆನಪಿಸಿಕೊಳ್ಳತೊಡಗಿದರು.

ಮಾತಿನ ನಡುವೆ ದುರ್ಯೋಧನನ ಪಾತ್ರದ ಆಳಕ್ಕೂ ಇಳಿದರು. ‘ದುರ್ಯೋಧನ ಎಲ್ಲಿಯೂ ಮೋಸ ಮಾಡಲಿಲ್ಲ. ಅನ್ಯಾಯ ಎಸಗಲಿಲ್ಲ. ದ್ರೋಹ ಬಗೆಯಲಿಲ್ಲ. ಆತ ಹುಟ್ಟಿದ್ದು ಅಹಂನಲ್ಲಿ. ಸತ್ತಿದ್ದೂ ಅಹಂನಲ್ಲಿಯೇ. ಆತನೇ ಮಹಾಭಾರತದ ನಿಜವಾದ ಹೀರೊ’ ಎಂದು ಬಣ್ಣಿಸಿದರು.

‘ನಾನು ಕ್ಯೂ ಜಂಪ್‌ ಮಾಡುವುದು ಎರಡೇ ಸಲ. ಒಂದು ಐತಿಹಾಸಿಕ ಸಿನಿಮಾಗೆ, ಇನ್ನೊಂದು ಪೌರಾಣಿಕ ಸಿನಿಮಾಕ್ಕೆ. ನಾಳೆ ಯಾರಾದರೂ ಇಂತಹ ಸಿನಿಮಾ ಮಾಡಲು ಮುಂದೆಬಂದರೆ ಈಗ ನಡೆಯುತ್ತಿರುವ ಕಮರ್ಷಿಯಲ್‌ ಚಿತ್ರವನ್ನೂ ಬದಿಗಿಟ್ಟು ಅವರೊಟ್ಟಿಗೆ ಹೊರಟು ಹೋಗುತ್ತೇನೆ’ ಎಂದು ಖಡಕ್‌ ಆಗಿ ಹೇಳಿದರು.

* ದುರ್ಯೋಧನನ ಪಾತ್ರಕ್ಕೆ ತಯಾರಿ ಹೇಗಿತ್ತು?

‘ಭಕ್ತಪ್ರಹ್ಲಾದ’ ಚಿತ್ರದ ಹಿರಣ್ಯ ಕಶ್ಯಪು ಮತ್ತು ದುರ್ಯೋಧನನ ಪಾತ್ರಕ್ಕೆ ಸಾಕಷ್ಟು ಹೋಲಿಕೆಯಿದೆ. ನಾನು ಹಲವು ಬಾರಿ ಈ ಚಿತ್ರ ನೋಡಿದ್ದೇನೆ. ಎಲ್ಲಾ ಪೌರಾಣಿಕ ಸಿನಿಮಾದಲ್ಲಿನ ಪಾತ್ರಗಳ ಒಂದಿಷ್ಟನ್ನು ತೆಗೆದುಕೊಂಡಿದ್ದೇವೆ. ಎನ್‌ಟಿಆರ್‌ ಅವರ ಪೌರಾಣಿಕ ಚಿತ್ರಗಳನ್ನೂ ನೋಡಿದ್ದೇನೆ. ಅವರ ಶೈಲಿಯಲ್ಲಿ ನಾವು ಸಿನಿಮಾ ಮಾಡಲು ಆಗುವುದಿಲ್ಲ. ಆದರೆ, ಅವರನ್ನು ನೋಡಿಕೊಂಡು ನಾವೇನು ಮಾಡಬಹುದೋ ಅದನ್ನು ಮಾಡಿದ್ದೇವೆ. ಎಲ್ಲಾ ಹಿರಿಯ ಕಲಾವಿದರು ನನಗೆ ಪ್ರೇರಣೆ. ನಟನೆಯಲ್ಲಿ ನಾನು ಸ್ವಾರ್ಥಿ. ನನಗೆ ಬೇಕಾದ್ದನ್ನು ಎತ್ತಿಕೊಳ್ಳುತ್ತೇನೆ.

ದುರ್ಯೋಧನ ಪಾತ್ರದ ಮ್ಯಾಡುಲೇಷನ್‌, ನೋಟ್‌ ಬೇರೆ ಇದೆ. ಪೌರಾಣಿಕ, ಐತಿಹಾಸಿಕ ಸಿನಿಮಾ ಮಾಡುವಾಗ ನಾನು ಮೊದಲು ಕೇಳುವುದು ಸ್ಕ್ರಿಪ್ಟ್‌. ಸಂಪೂರ್ಣವಾಗಿ ಸ್ಕ್ರಿಪ್ಟ್‌ ಓದುತ್ತೇನೆ. ಇದು ನನ್ನ ಕೈಯಲ್ಲಿ ಆಗುತ್ತದೆಯೇ ಎಂದು ನೋಡುತ್ತೇನೆ. ಆ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳುತ್ತೇನೆ. ಆ ಬಳಿಕವಷ್ಟೇ ನಿರ್ಧಾರ ತೆಗೆದುಕೊಳ್ಳುತ್ತೇನೆ.

ಇಂತಹ ಚಿತ್ರಗಳಿಗೆ ಡಬ್ಬಿಂಗ್‌ ಮಾಡುವುದು ಕಷ್ಟ. ನಾವು ಯಾವಾಗಲೋ ಡೈಲಾಗ್‌ ಹೇಳಿರುತ್ತೇವೆ. ಅದೆಲ್ಲಾ ತಲೆಯಿಂದ ಅಳಿಸಿಹೋಗಿರುತ್ತದೆ. ಕನ್ನಡದಲ್ಲಿ ಮಾತ್ರ ಡಬ್ಬಿಂಗ್‌ ಮಾಡಿದ್ದೇನೆ.

* ಈ ಸಿನಿಮಾ ಒಪ್ಪಿಕೊಳ್ಳುವಾಗ ಇದ್ದ ನಿಮ್ಮ ಮಾನಸಿಕ ಸಿದ್ಧತೆ ಬಗ್ಗೆ ಹೇಳಿ...

ದುರ್ಯೋಧನ, ಭೀಮ ಹೇಗಿದ್ದರು ಎಂಬುದು ಇಂದಿನ ಯುಜಜನರಿಗೆ ಗೊತ್ತಿಲ್ಲ. ರಾಮಾಯಣ, ಮಹಾಭಾರತದ ಕಥೆಯನ್ನೇ ಕೇಳಿಲ್ಲ. ನನ್ನ ಮಗನಿಗೂ ಗೊತ್ತಿಲ್ಲ. ಅವರೆಲ್ಲರಿಗೂ ಆವೆಂಜರ್ಸ್, ಛೋಟಾ ಭೀಮ್‌ ಗೊತ್ತು. ಅವತಾರ್‌ ಬಗ್ಗೆ ಮಕ್ಕಳು ಮಾತನಾಡುತ್ತಾರೆ. ಕುರುಕ್ಷೇತ್ರವನ್ನು ಈಗಿನ ಜನರೇಷನ್‌ಗೆ ಕಟ್ಟಿಕೊಟ್ಟರೆ ಹೇಗಿರುತ್ತದೆ ಎಂಬುದು ಮುಖ್ಯ. 2D ಮತ್ತು 3Dಯಲ್ಲಿ ಚಿತ್ರ ಅದ್ಭುತವಾಗಿ ಬಂದಿದೆ.

ಪೌರಾಣಿಕ ಸಿನಿಮಾ ಮಾಡುತ್ತೇನೆ ಎಂದು ಮುಂದೆ ಬರುವ ನಿರ್ಮಾಪಕರನ್ನು ಒಳಗೆ ಕೂರಿಸಿಕೊಂಡು ಮಾತನಾಡಬೇಕು. ಈ ಚಿತ್ರದಲ್ಲಿ ನಿರ್ಮಾಪಕ ಮುನಿರತ್ನ, ನಿರ್ದೇಶಕ ನಾಗಣ್ಣ ಅವರ ಶ್ರಮ ದೊಡ್ಡದು. ಇಂತಹ ಸಿನಿಮಾ ಯಶಸ್ವಿಯಾದರೆ ಮತ್ತೊಂದಷ್ಟು ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬರುತ್ತಾರೆ. ಇದರಿಂದ ಇಂಡಸ್ಟ್ರಿಗೂ ಒಳ್ಳೆಯದಾಗುತ್ತದೆ. ಎಲ್ಲರೂ ನಮ್ಮತ್ತ ತಿರುಗಿ ನೋಡುವಂತಾಗುತ್ತದೆ.

* ಹಿರಿಯ ಕಲಾವಿದರೊಟ್ಟಿಗೆ ಕೆಲಸ ಮಾಡಿದ ಅನುಭವ ಹೇಗಿತ್ತು?

ದೊಡ್ಡವರ ಜೊತೆಗೆ ನಟಿಸುವಾಗ ಕಲಿಯುವುದಕ್ಕೆ ತುಂಬಾ ಅವಕಾಶ ಸಿಗುತ್ತದೆ. ಶ್ರೀನಿವಾಸಮೂರ್ತಿ ಅವರು ಧ್ವನಿಯ ಏರಿಳಿತದಿಂದ ಹಿಡಿದ ಎಲ್ಲವನ್ನೂ ಹೇಳಿಕೊಡುತ್ತಿದ್ದರು. ದ್ರೋಣಾಚಾರ್ಯರಾಗಿ ಅವರು ಎದುರಿಗೆ ಕುಳಿತುಕೊಂಡಿರುತ್ತಿದ್ದರು. ಅಲ್ಲಿಂದಲೇ ನನಗೆ ಪಾಠ ಮಾಡುತ್ತಿದ್ದರು. ನಿರ್ದೇಶಕರು ಟೇಕ್ ಓಕೆ ಎಂದಾಗಲೂ ನಾನು ಅವರತ್ತಲೇ ನೋಡುತ್ತಿದ್ದೆ. ಅವರ ಅನುಭವ ದೊಡ್ಡದು. ಅಷ್ಟು ಅನುಭವ ನಿರ್ದೇಶಕರಿಗೂ ಇರುವುದಿಲ್ಲ.‌

* ಕುರುಕ್ಷೇತ್ರದ ಶೂಟಿಂಗ್‌ ಸೆಟ್‌ನಲ್ಲಿ ನಿಮ್ಮ ದಿನಚರಿ ಹೇಗಿತ್ತು?

ಮುಂಜಾನೆ ಐದು ಗಂಟೆಗೆ ಏಳುತ್ತಿದ್ದೆ. ಜಿಮ್‌ನಲ್ಲಿ ಬೆವರು ಸುರಿಸಿ ಬೆಳಿಗ್ಗೆ 7.30ಗೆ ನನ್ನ ರೂಮ್‌ಗೆ ಬರುತ್ತಿದ್ದೆ. ಶೂಟಿಂಗ್‌ ಸ್ಥಳಕ್ಕೆ ಹೋಗುವಾಗ ಒಂಬತ್ತು ಗಂಟೆಯಾಗುತ್ತಿತ್ತು. ಸಂಜೆ 6ಗಂಟೆವರೆಗೂ ಶೂಟಿಂಗ್ ನಡೆಯುತ್ತಿತ್ತು. ಬಳಿಕ ಒಂದು ಗಂಟೆ ಜಿಮ್‌ನಲ್ಲಿ ಕಸರತ್ತು. ಅಲ್ಲಿ ಎಲ್ಲರೂ ಸಿಗುತ್ತಿದ್ದರು. ಒಂದೇ ರೂಮ್‌ನಲ್ಲಿ ಸೇರುತ್ತಿದ್ದೆವು. ಕೆಲವೊಂದು ದಿನ ರಾತ್ರಿ 1 ಗಂಟೆವರೆಗೂ ಹರಟೆ ಮೀರುತ್ತಿತ್ತು. ಅವರು ಹೋದ ಬಳಿಕ ನಾನು ಕೈಯಲ್ಲಿ ಸ್ಕ್ರಿಪ್ಟ್‌ ಹಿಡಿದುಕೊಳ್ಳುತ್ತಿದ್ದೆ. ಎರಡೂವರೆ ಗಂಟೆ ಕಾಲ ಓದುತ್ತಿದ್ದೆ. ಬೆಳಿಗ್ಗೆ ಬಾತ್‌ರೂಮ್‌ನಲ್ಲಿದ್ದಾಗ, ಥ್ರೆಡ್‌ವೀಲ್‌ನ ಮೇಲೂ ಅದರದ್ದೇ ಮನನ. ಇಂತಹ ಸಿನಿಮಾ ಮಾಡುವುದು ತಮಾಷೆಯಲ್ಲ. ಇದಕ್ಕೆ ಇಷ್ಟು ತಯಾರಿ ನಡೆಸಿದರೂ ಸಾಲದು.

* ನಟ ಅಂಬರೀಷ್‌ ನಿಮಗೆ ಸಲಹೆ ನೀಡುತ್ತಿದ್ದರೇ?

ನನ್ನಪ್ಪ (ತೂಗುದೀಪ ಶ್ರೀನಿವಾಸ್) ಕೊನೆಯುಸಿರೆಳೆಯುವ 15 ದಿನಗಳಿಗೂ ಮುಂಚೆ ಹೇಳುತ್ತಿದ್ದ ಮಾತುಗಳು ಈಗಲೂ ನೆನಪಿವೆ. ‘ಮುಖಕ್ಕೆ ಬಣ್ಣ ಹಾಕಿಲ್ಲ. ಮುಖವೆಲ್ಲಾ ಕಡಿಯುತ್ತಿದೆ’ ಎನ್ನುತ್ತಿದ್ದರು. ಆಗ ಅವರು ಏಕೆ ಹೇಳುತ್ತಿದ್ದಾರೆಂದು ಅರ್ಥವಾಗುತ್ತಿರಲಿಲ್ಲ. ಅಪ್ಪಾಜಿಯ(ಅಂಬರೀಷ್‌) ಆರೋಗ್ಯ ಸರಿ ಇರಲಿಲ್ಲ. ಅವರು ಸೆಟ್‌ಗೆ ಬಂದಾಗ ಶೂಟಿಂಗ್‌ ಮಾಡುತ್ತಿದ್ದೆವು. ಮೇಕಪ್‌, ಆಭರಣ ತೊಡಿಸಿದಾಗ ಅವರೊಳಗಿನ ಕಲಾವಿದನಿಗೆ ಹುಮ್ಮಸ್ಸು ಹೆಚ್ಚುತ್ತಿತ್ತು. ಎದೆಯುಬ್ಬಿಸಿ ಡೈಲಾಗ್‌ ಹೇಳುತ್ತಿದ್ದ ಪರಿಗೆ ನಾನು ಬೆರಗಾಗಿದ್ದೆ. ಆಗ ನನ್ನಪ್ಪ ಹೇಳುತ್ತಿದ್ದ ಮಾತುಗಳು ಅರ್ಥವಾಗುತ್ತಿದ್ದವು.

ಭೀಷ್ಮನ ಪಾತ್ರಕ್ಕೆ ಅಪ್ಪಾಜಿ ಜೀವ ತುಂಬಿದ್ದಾರೆ. ನನಗೆ ಸಾಕಷ್ಟು ಸಲಹೆ ನೀಡಿದ್ದಾರೆ. ಕೆಲವೊಮ್ಮೆ ಅವರು ರೂಮ್‌ಗೆ ಹೋಗುತ್ತಿರಲಿಲ್ಲ. ನಮ್ಮ ಬಳಿಯೇ ಉಳಿಯುತ್ತಿದ್ದರು. ಇಂತಹ ಸಿನಿಮಾ ಮಾಡಲು ಸಿಗುವುದಿಲ್ಲ. ನಟನೆಯನ್ನು ಎಂಜಾಯ್‌ ಮಾಡುವಂತೆ ಅವರದೇ ಶೈಲಿಯಲ್ಲಿ ಬೈದು ಹೇಳುತ್ತಿದ್ದರು.

* ಈ ಚಿತ್ರದ ಬಗ್ಗೆ ನಿಮ್ಮ ನಿರೀಕ್ಷೆ ಏನು?

‘ಮುನಿರತ್ನ ಕುರುಕ್ಷೇತ್ರ’ನಿರೀಕ್ಷೆ ಇಟ್ಟುಕೊಳ್ಳುವ ಸಿನಿಮಾ. ಪೌರಾಣಿಕ ಮತ್ತು ಐತಿಹಾಸಿಕ ಸಿನಿಮಾಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಮುನಿರತ್ನ ಅವರು ನನಗೆ ಆಫರ್‌ ಮಾಡಬಹುದು. ಆದರೆ, ನಾನು ಅಂತಹ ಸಿನಿಮಾದಲ್ಲಿ ನಟಿಸುವುದಿಲ್ಲ ಎನ್ನಲಾಗುವುದಿಲ್ಲ. ಪೌರಾಣಿಕ ಚಿತ್ರ ಮಾಡುತ್ತೇನೆ ಎಂದು ಮುಂದೆ ಬರುವವರಿಗೆ ಮೊದಲ ಆದ್ಯತೆ ಕೊಡಬೇಕು. ಈ ತರಹದ ಸಿನಿಮಾ ಮಾಡಲು ನಾಲ್ಕು ಗುಂಡಿಗೆ ಬೇಕು. ರಾವಣನ ಪಾತ್ರದ ಬಗ್ಗೆ ಯೋಚಿಸಿಲ್ಲ.

ಇಂತಹ ಸಿನಿಮಾಗಳಿಂದ ನಮ್ಮಮಾರ್ಕೆಟ್‌ ದೊಡ್ಡದು ಮಾಡೋಣ. ಮಾಧ್ಯಮಗಳಲ್ಲಿ ಪರಭಾಷೆಯ ಸಿನಿಮಾಗಳಿಗೆ ಸಾಕಷ್ಟು ಬಿಲ್ಡಪ್‌ ಕೊಡಲಾಗುತ್ತಿದೆ. ನಮ್ಮಲ್ಲೂ ಕಲಾವಿದರು ಇದ್ದಾರೆ. ತಮಿಳು ನಟ ಸತ್ಯರಾಜು ಕನ್ನಡಿಗರ ಬಗ್ಗೆ ಆಡಿದ ಮಾತಿನ ಬಗ್ಗೆ ‘ಬಾಹುಬಲಿ’ ಚಿತ್ರದ ಬಿಡುಗಡೆ ವೇಳೆ ಪತ್ರ ಬರೆದು ಕ್ಷಮೆ ಕೋರಿದರು. ಇಲ್ಲಿ ಆದಾಯ ಇದ್ದುದ್ದರಿಂದಲೇ ಅವರು ಪತ್ರ ಬರೆದಿದ್ದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಸಿನಿಮಾ ಬಿಡುಗಡೆ ದಿನ ನಾನು ಥಿಯೇಟರ್‌ಗೆ ಬರಲ್ಲ. ಮನೆಯಲ್ಲಿಯೇ ಕುಳಿತು ಕೇಳಿಸಿಕೊಳ್ಳುತ್ತೇನೆ. ಸಿನಿಮಾವೆಂದರೆ ಬ್ಯುಸಿನೆಸ್‌. ಇದು ಚಾರಿಟಿ ಅಲ್ಲ. ನಿರ್ಮಾಪಕರು ದುಡ್ಡು ಹಾಕಿದ್ದಾರೆ. ಅದರ ಮೇಲೆ ಒಂದು ರೂಪಾಯಿ ಬಂದರೂ ಮತ್ತೊಂದು ಸಿನಿಮಾ ಮಾಡುತ್ತಾರೆ. ಗಾಂಧಿನಗರದ ಲೆಕ್ಕಾಚಾರದ ಬಗ್ಗೆ ನನಗೇನೂ ಗೊತ್ತಿಲ್ಲ.

* ಹಿಂದಿನ ಕಾಲ ಮತ್ತು ಈಗಿನ ಕಾಲದ ಪೌರಾಣಿಕ ಸಿನಿಮಾದ ನಿರ್ಮಾಣದಲ್ಲಿ ಆಗಿರುವ ಬದಲಾವಣೆ ಏನು?

ಹಿಂದಿನ ಕಾಲದಲ್ಲಿ ಇಷ್ಟೊಂದು ಗ್ರಾಫಿಕ್ಸ್‌ ಇರಲಿಲ್ಲ. ಅಂದಿನ ಶ್ರಮಕ್ಕೆ ಮೆಚ್ಚುಗೆ ಸೂಚಿಸಲೇ ಬೇಕು. ಇಂದಿಗೂ ಎನ್‌ಟಿಆರ್‌ ಕಾಲದ ಹಳೆಯ ಸೆಟ್ಟನ್ನು ಯಥಾವತ್ತಾಗಿ ಉಳಸಿಕೊಳ್ಳಲಾಗಿದೆ. ಅಲ್ಲಿಯೂ ಶೂಟಿಂಗ್‌ ಮಾಡಿದ್ದೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.