ADVERTISEMENT

‘ರಂಗಭೂಮಿ ಪಯಣ ನಿರಂತರ’; ಮಂಡ್ಯ ರಮೇಶ್‌ ಪುತ್ರಿ ದಿಶಾ ರಮೇಶ್‌ ಮನದಾಳದ ಮಾತು

ಅಭಿಲಾಷ್ ಪಿ.ಎಸ್‌.
Published 16 ಸೆಪ್ಟೆಂಬರ್ 2021, 20:15 IST
Last Updated 16 ಸೆಪ್ಟೆಂಬರ್ 2021, 20:15 IST
ದಿಶಾ ರಮೇಶ್‌
ದಿಶಾ ರಮೇಶ್‌   

2016ರಲ್ಲಿ ತೆರೆಕಂಡ ಬಿ.ಸುರೇಶ್‌ ನಿರ್ದೇಶನದ ‘ದೇವರ ನಾಡಲ್ಲಿ’ ಚಿತ್ರದ ಮುಖಾಂತರ ಬೆಳ್ಳಿತೆರೆಗೆ ಹೆಜ್ಜೆ ಇಟ್ಟಿದ್ದ, ನಟ ಮಂಡ್ಯ ರಮೇಶ್‌ ಅವರ ಪುತ್ರಿ ದಿಶಾ ರಮೇಶ್‌ ನಂತರದ ದಿನಗಳಲ್ಲಿ ‘ನಟನ’ದ ವೇದಿಕೆ ಮುಖಾಂತರ ರಂಗಭೂಮಿಯಲ್ಲೇ ಹೆಚ್ಚು ಸಕ್ರಿಯರಾಗಿದ್ದರು. ಇದೀಗ ಮತ್ತೆ ಚಂದನವನಕ್ಕೆ ಹೆಜ್ಜೆ ಇಟ್ಟಿರುವ ದಿಶಾ ನಾಯಕಿಯ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ.

‘ಪಾಪ ಪಾಂಡು’ ಧಾರಾವಾಹಿ ಮುಖಾಂತರ ಕನ್ನಡಿಗರ ಮನೆಮಾತಾಗಿದ್ದ ಸೌರಭ್‌ ಕುಲಕರ್ಣಿ ನಿರ್ದೇಶನದಕಮರ್ಷಿಯಲ್‌ ಎಂಟರ್‌ಟೈನರ್‌ ಚಿತ್ರ ‘ಎಸ್‌ಎಲ್‌ವಿ ಸಿರಿ ಲಂಬೋದರ ವಿವಾಹ’ ಚಿತ್ರದಲ್ಲಿ ದಿಶಾ ನಾಯಕಿಯಾಗಿದ್ದು, ಬೆಂಗಳೂರಿನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಚಿತ್ರದಲ್ಲಿನ ತಮ್ಮ ಪಾತ್ರ ಹಾಗೂ ಮುಂದಿನ ಸಿನಿ ಪಯಣದ ಬಗ್ಗೆ ಪ್ರಜಾವಾಣಿ ‘ಸಿನಿಮಾ ಪುರವಣಿ’ ಜೊತೆಗೆ ಮಾತಿಗಿಳಿದ ದಿಶಾ ಹೀಗೆಂದರು...

ಉತ್ತಮ ಪಾತ್ರಕ್ಕೆ ಕಾಯುತ್ತಿದ್ದೆ

ADVERTISEMENT

2014ರಲ್ಲಿ ‘ದೇವರ ನಾಡಲ್ಲಿ’ ಚಿತ್ರದ ಚಿತ್ರೀಕರಣ ನಡೆದಿತ್ತಾದರೂ, 2016ರಲ್ಲಿ ಈ ಚಿತ್ರ ಬಿಡುಗಡೆಯಾಯಿತು. ರಂಗಭೂಮಿ ನಿರಂತರವಾಗಿ ಇದ್ದೇ ಇರುತ್ತದೆ. ಮೊದಲ ಸಿನಿಮಾ ಮಾಡುವ ಸಂದರ್ಭದಲ್ಲಿ ನಾನು ಡಿಗ್ರಿ ಮಾಡುತ್ತಿದ್ದೆ. ಇದಾದ ನಂತರದಲ್ಲಿ ನನಗಿಷ್ಟವಾದ ಕಥೆಗಳು ಬರಲಿಲ್ಲ, ಪಾತ್ರಗಳು ಸಿಗಲಿಲ್ಲ. ಒಂದಲ್ಲ ಒಂದು ಅಡೆತಡೆಗಳು ಬಂದವು. ಸಿನಿಮಾದಲ್ಲಿ ನಟನೆ ಮಾಡಬೇಕು ಎನ್ನುವ ಧಾವಂತವೂ ನನಗೆ ಇರಲಿಲ್ಲ. ಶಿಕ್ಷಣ ಪೂರ್ಣಗೊಳಿಸಿ ಮತ್ತೆ ಸಿನಿಮಾಗೆ ಧುಮುಕುವ ಯೋಚನೆ ನನ್ನದಾಗಿತ್ತು. ರಂಗಭೂಮಿಯಲ್ಲೇ ಸ್ನಾತಕೋತ್ತರ ಪದವಿಯನ್ನು ನಾನು ಪಡೆದುಕೊಂಡೆ. ಈ ಸಂದರ್ಭದಲ್ಲಿ ಬಂದ ಅವಕಾಶ‘ಎಸ್‌ಎಲ್‌ವಿ ಸಿರಿ ಲಂಬೋದರ ವಿವಾಹ’.ಸೌರಭ್‌ ಕುಲಕರ್ಣಿ ಅವರ ನಿರ್ದೇಶನದ ಈ ಚಿತ್ರದ ಕಥೆ ಹಾಗೂ ಪಾತ್ರ ನನಗೆ ಇಷ್ಟವಾಯಿತು. ಹೊಸ ತಂಡವಾದರೂ ಎಲ್ಲರಲ್ಲೂ ಉತ್ಸಾಹವಿತ್ತು.

ತುಂಬಾ ಬೋಲ್ಡ್‌ ಹುಡುಗಿ

‘ದೇವರ ನಾಡಲ್ಲಿ’ ಸಿನಿಮಾದಲ್ಲಿ ಬಹಳ ವಿಭಿನ್ನವಾದ ಪಾತ್ರ ನನ್ನದಾಗಿತ್ತು. ಮುಗ್ಧ, ಹೆಚ್ಚು ಮಾತನಾಡದ ಹುಡುಗಿಯ ಪಾತ್ರ ಆ ಚಿತ್ರದಲ್ಲಿತ್ತು.‘ಎಸ್‌ಎಲ್‌ವಿ ಸಿರಿ ಲಂಬೋದರ ವಿವಾಹ’ ಚಿತ್ರವು ಸಂಪೂರ್ಣ ಕಮರ್ಷಿಯಲ್‌ ಎಂಟರ್‌ಟೈನರ್‌. ಶೀರ್ಷಿಕೆ ಕೇಳಿದಾಕ್ಷಣ ಇದೊಂದು ಹಾಸ್ಯ ಕಥಾಹಂದರ ಹೊಂದಿರುವ ಸಿನಿಮಾ ಎಂದೆನಿಸಿದರೂ ಎಲ್ಲ ಜಾನರ್‌ನಿಂದ ಕೂಡಿದ ಸಿನಿಮಾ ಇದು. ಇದರಲ್ಲಿ ಬೋಲ್ಡ್‌ ಹುಡುಗಿಯ ಪಾತ್ರ ನನ್ನದು. ಚೆನ್ನಾಗಿ ಮಾತನಾಡುವ, ಬದುಕಿನ ಬಗ್ಗೆ ಸಾಕಷ್ಟು ಕನಸು ಹೊಂದಿರುವ ಪಾತ್ರವದು.

ನಾನು ಈ ಕ್ಷೇತ್ರಕ್ಕೆ ಬರುವ ವಿಚಾರದಲ್ಲಿ ಅಪ್ಪ ಹಾಗೂ ಅಮ್ಮನ ಬೆಂಬಲ ಸದಾ ಇತ್ತು. ‘ನಟನ’ ನನಗೆ ದೊಡ್ಡ ಶಕ್ತಿ. ‘ನಟನ’ ಇಲ್ಲದೇ ಇದ್ದಿದ್ದರೆ ಇಷ್ಟು ಸಕ್ರಿಯವಾಗಿ ನಾನು ಕಾಣಿಸಿಕೊಳ್ಳುತ್ತಿದ್ದೆನೋ ಇಲ್ಲವೋ. ಸಿನಿಮಾ ಅಥವಾ ಕಿರುತೆರೆಗೆ ಪ್ರವೇಶಿಸುವ ವಿಚಾರದಲ್ಲಿ ಅಪ್ಪ ಯಾವತ್ತೂ ಒತ್ತಡ ಹಾಕಿಲ್ಲ. ಬಂದ ಆಫರ್‌ಗಳ ಕುರಿತು ನನ್ನ ಜೊತೆಗೆ ಚರ್ಚಿಸುತ್ತಿದ್ದರು. ಕಿರುತೆರೆಗೆ ಪ್ರವೇಶಿಸಿದರೆ ರಂಗಭೂಮಿಯನ್ನು ಸಂಪೂರ್ಣ ಮರೆಯಬೇಕಾಗುತ್ತದೆ. ಏಕೆಂದರೆ ಸಾಕಷ್ಟು ಸಮಯ ಚಿತ್ರೀಕರಣಕ್ಕಾಗಿಯೇ ಮೀಸಲಿಡಬೇಕಾಗುತ್ತದೆ. ಇದು ನನಗೆ ಕಷ್ಟ ಎಂದೆನಿಸಿತು. ಹೀಗಾಗಿ ಬಂದಂತಹ ಧಾರಾವಾಹಿ ಅವಕಾಶಗಳನ್ನು ನಾನು ಒಪ್ಪಲಿಲ್ಲ. ಸಿನಿಮಾ ಆದರೆ ರಂಗಭೂಮಿಯಲ್ಲೂ ತೊಡಗಿಸಿಕೊಳ್ಳುವ ಅವಕಾಶ ಸಿಗುತ್ತದೆ.

ರಂಗಭೂಮಿಯನ್ನು ಯಾವುದೇ ಕಾರಣಕ್ಕೂ ಬಿಡುವ ಮಾತಿಲ್ಲ. ಸಿನಿಮಾ ಒಂದು ಕಲಿಕೆ. ಅದು ಉತ್ತಮವಾದ ಅನುಭವನ್ನು ಕೊಡುತ್ತದೆ. ಒಳ್ಳೆಯ ಕಥೆ, ಪಾತ್ರಗಳು ಬಂದರೆ ಖಂಡಿತವಾಗಿಯೂ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತೇನೆ. ಆದರೆ ರಂಗಭೂಮಿ ನಿರಂತರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.