ADVERTISEMENT

ಪಾಕಿಸ್ತಾನದಲ್ಲಿ ನನ್ನ ಮಕ್ಕಳನ್ನು ಅಕ್ರಮವಾಗಿ ಬಂಧಿಸಿಡಲಾಗಿದೆ: ನಾಡಿಯಾವಾಲ

ಪಿಟಿಐ
Published 18 ಆಗಸ್ಟ್ 2022, 15:38 IST
Last Updated 18 ಆಗಸ್ಟ್ 2022, 15:38 IST
   

ಮುಂಬೈ: ತನ್ನ ಪತ್ನಿ ಪಾಕಿಸ್ತಾನದಲ್ಲಿ ತನ್ನ ಇಬ್ಬರು ಮಕ್ಕಳನ್ನು ಅಕ್ರಮವಾಗಿ ಬಂಧಿಸಿಟ್ಟಿದ್ದಾರೆ ಎಂದು ಬಾಲಿವುಡ್ ಚಿತ್ರ ನಿರ್ಮಾಪಕ ಮುಷ್ತಾಕ್ ನಾಡಿಯಾವಾಲ ಆರೋಪಿಸಿದ್ದು, ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಸಂಬಂಧ ನ್ಯಾಯಾಲಯವು ಕೇಂದ್ರ ಸರ್ಕಾರದ ಪ್ರತಿಕ್ರಿಯ ಕೇಳಿದೆ.

ನ್ಯಾಯಮೂರ್ತಿ ನಿತಿನ್ ಜಾಮದಾರ್ ನೇತೃತ್ವದ ವಿಭಾಗೀಯ ಪೀಠವು, ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆಗೆ ನೋಟಿಸ್ ಜಾರಿ ಮಾಡಿದ್ದು, ಆಗಸ್ಟ್ 29ಕ್ಕೆ ವಿಚಾರಣೆ ಮುಂದೂಡಿದೆ.

ತನ್ನ 9 ವರ್ಷದ ಮಗ ಮತ್ತು 6 ವರ್ಷದ ಮಗಳನ್ನು ಪಾಕಿಸ್ತಾನದಿಂದ ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರಕ್ಕೆ ನಿರ್ದೆಶನ ನೀಡುವಂತೆ 49 ವರ್ಷದ ನಾಡಿಯಾವಾಲ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ADVERTISEMENT

ತನ್ನ ಪತ್ನಿಯೂ ಪಾಕಿಸ್ತಾನದಲ್ಲಿ ಅವಳ ಪ್ರಭಾವಿ ಕುಟುಂಬದ ಕಪಿಮುಷ್ಠಿಯಲ್ಲಿದ್ದಾಳೆ. ಅವಳನ್ನೂ ಸುರಕ್ಷಿತವಾಗಿ ಕರೆತರಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ನಾಡಿಯಾವಾಲ ಕೋರಿದ್ದಾರೆ.

ಹಿರಿಯ ವಕೀಲ ಬೆನಿ ಚಟರ್ಜಿ ಮೂಲಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿರುವ ನಾಡಿಯಾವಾಲ, ಹಲವು ಬಾರಿ ಈ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದ್ದೇನೆ. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಭಾರತೀಯ ಪ್ರಜೆಗಳಾದ ನನ್ನ ಇಬ್ಬರು ಮಕ್ಕಳನ್ನು ಕರೆತರುವ ಕರ್ತವ್ಯ ಪಾಲನೆಯಲ್ಲಿ ಭಾರತ ಸರ್ಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ನನ್ನ ಮಕ್ಕಳಿಗೆ ಪಾಕಿಸ್ತಾನ ಸರ್ಕಾರ ನೀಡಿದ್ದ ವಿಸಿಟಿಂಗ್ ವೀಸಾ ಅವಧಿ ಅಕ್ಟೋಬರ್‌ನಲ್ಲೇ ಮುಗಿದಿದೆ. ಈಗ ನನ್ನ ಮಕ್ಕಳನ್ನು ನನ್ನ ಪತ್ನಿ ಮರಿಯಮ್ ಚೌಧರಿ ಮತ್ತು ಅವರ ಕುಟುಂಬ ಅಕ್ರಮವಾಗಿ ಬಂಧಿಸಿಟ್ಟಿದೆ ಎಂದು ಅವರು ಆರೋಪಿಸಿದ್ದಾರೆ.

ಏಪ್ರಿಲ್ 2012ರಲ್ಲಿ ಪಾಕಿಸ್ತಾನದಲ್ಲಿ ನಾಡಿಯಾವಾಲ ಮರಿಯಮ್ ಅವರನ್ನು ವಿವಾಹವಾಗಿದ್ದರು. ಬಳಿಕ, ಮರಿಯಮ್ ಭಾರತಕ್ಕೆ ಬಂದು ಪೌರತ್ವಕ್ಕಾಗಿ ಅರ್ಜಿ ಹಾಕಿದ್ದರು. ಈ ಮಧ್ಯೆ, ದಂಪತಿಗೆ ಇಬ್ಬರು ಮಕ್ಕಳು ಜನಿಸಿದ್ದು, 2020ರಲ್ಲಿ ಮಾರ್ಯಮ್ ಮಕ್ಕಳ ಜೊತೆ ಮತ್ತೆ ಪಾಕಿಸ್ತಾನಕ್ಕೆ ತೆರಳಿದ್ದಾರೆ.

ಬಳಿಕ, 2021ರಲ್ಲಿ ಲಾಹೋರ್ ನ್ಯಾಯಾಲಯದಲ್ಲಿ ಮಕ್ಕಳ ಪೋಷಕತ್ವಕ್ಕಾಗಿ(ಗಾರ್ಡಿಯನ್‌ಷಿಪ್) ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಅವರ ಅರ್ಜಿಯನ್ನು ಮಾನ್ಯ ಮಾಡಿದೆ

ಇದು ಎರಡು ದೇಶಗಳ ನಡುವಿನ ವಲಸೆ ನಿಯಮಗಳ ಉಲ್ಲಂಘನೆಯಾಗಿದ್ದು, ಮಕ್ಕಳ ಸುರಕ್ಷತೆ ಬಗ್ಗೆ ಆತಂಕವಿದೆ ಎಂದು ನಾಡಿಯಾವಾಲ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.