ADVERTISEMENT

ಸಿನಿಮಾ ವಿಮರ್ಶೆ: ನಮ್‌ ಗಣಿ ಬಿ.ಕಾಂ ಪಾಸ್‌, ಹಾಸ್ಯವೂ ಫಸ್ಟ್‌ ಕ್ಲಾಸ್‌

ಕೆ.ಎಂ.ಸಂತೋಷ್‌ ಕುಮಾರ್‌
Published 15 ನವೆಂಬರ್ 2019, 10:08 IST
Last Updated 15 ನವೆಂಬರ್ 2019, 10:08 IST
‘ನಮ್‌ ಗಣಿ ಬಿ.ಕಾಂ ಪಾಸ್‌’ ಚಿತ್ರದಲ್ಲಿ ಐಶಾನಿ ಶೆಟ್ಟಿ ಮತ್ತು ಅಭಿಷೇಕ್‌ ಶೆಟ್ಟಿ
‘ನಮ್‌ ಗಣಿ ಬಿ.ಕಾಂ ಪಾಸ್‌’ ಚಿತ್ರದಲ್ಲಿ ಐಶಾನಿ ಶೆಟ್ಟಿ ಮತ್ತು ಅಭಿಷೇಕ್‌ ಶೆಟ್ಟಿ   

ಚಿತ್ರ: ನಮ್‌ ಗಣಿ ಬಿ.ಕಾಂ ಪಾಸ್‌

ನಿರ್ಮಾಣ: ಯು.ಎಸ್. ನಾಗೇಶ್‍ಕುಮಾರ್‌

ನಿರ್ದೇಶನ:ಅಭಿಷೇಕ್‌ ಶೆಟ್ಟಿ

ADVERTISEMENT

ತಾರಾಗಣ:ಅಭಿಷೇಕ್‌ ಶೆಟ್ಟಿ,ಐಶಾನಿ ಶೆಟ್ಟಿ,ನಾಟ್ಯರಂಗ, ಪಲ್ಲವಿಗೌಡ,ರಚನಾ ದಶರಥ, ಸುಚೇಂದ್ರ ಪ್ರಸಾದ್‌,ಮಂಜುನಾಥ ಹೆಗಡೆ, ಸುಧಾ ಬೆಳವಾಡಿ.

ಮೊದಲ ಪ್ರೀತಿ, ಮೊದಲ‌‌ ಉದ್ಯೋಗ, ಮೊದಲ‌ ಸಂಬಳ ಇದೆಲ್ಲದರ ಸವಿನೆನಪುಗಳನ್ನು ಪ್ರೇಕ್ಷಕನೂ ಮೆಲುಕು ಹಾಕುವಂತೆ ಮಾಡುತ್ತದೆ ‘ನಮ್‌ ಗಣಿ ಬಿ.ಕಾಂ ಪಾಸ್‌’ ಚಿತ್ರ.

ಗಣಿ ಅಲಿಯಾಸ್‌ ಗಣೇಶಬಿ.ಕಾಂ ಪದವೀಧರ. ಸೂಕ್ತ ಉದ್ಯೋಗ ಸಿಗದೆ ನಿರುದ್ಯೋಗಿಯೆಂಬ ಹಣೆಪಟ್ಟಿಕೊಂಡು ಹೆತ್ತವರು ಮತ್ತು ಸ್ನೇಹಿತರಿಂದಲೂ ತಿರಸ್ಕಾರಕ್ಕೆ ಒಳಗಾಗಿರುತ್ತಾನೆ. ಆಪ್ತ ಸ್ನೇಹಿತನ ಜತೆ ಸೇರಿ ಪೆಟ್‌ ಬ್ಯುಸಿನೆಸ್‌ ಆರಂಭಿಸುವ ಆಲೋಚನೆ ಮಾಡುತ್ತಾನೆ. ಅದಕ್ಕೆ ಬೇಕಿದ್ದ ₹10 ಲಕ್ಷ ಬಂಡವಾಳವನ್ನು ಅಪ್ಪ ಕೊಡದಿದ್ದಾಗ, ಹಣ ಹೊಂದಿಸಲು ವಿಧವೆಯೊಬ್ಬಳನ್ನು ಮದುವೆಯಾಗಲು ಹೋಗಿ ಯಾಮಾರಿ ಪೊಲೀಸರಿಂದ ಪೆಟ್ಟು ತಿನ್ನುತ್ತಾನೆ. ಉದ್ಯೋಗವಿದ್ದವರಿಗೇ ಹೆಣ್ಣು ಕೊಡುವುದು ಕಷ್ಟವಿರುವಾಗನಿರುದ್ಯೋಗಿಗೆ ಇನ್ನೆಲ್ಲಿ ಸುಲಭವಾಗಿ ಹೆಣ್ಣು ಸಿಗಬೇಕು?ಇಂತಹ ಕಥೆಯನ್ನು ನಿರ್ದೇಶಕ ಅಭಿಷೇಕ್‌ ಶೆಟ್ಟಿ ತೆರೆಯ ಮೇಲೆ ರಸವತ್ತಾಗಿ ನಿರೂಪಿಸಿದ್ದಾರೆ.

ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆಯ ಜವಾಬ್ದಾರಿ ಹೊತ್ತಿರುವ ಜತೆಗೆ ನಾಯಕ ನಟನಾಗಿಯೂ ಅದೃಷ್ಟ ಪರೀಕ್ಷೆಯಲ್ಲಿ ಅಭಿಷೇಕ್‌ ಶೆಟ್ಟಿ, ಮೊದಲ ಪ್ರಯತ್ನದಲ್ಲೇ ಫಸ್ಟ್‌ ಕ್ಲಾಸಿನಲ್ಲಿ ಪಾಸಾಗಿದ್ದಾರೆ ಎನ್ನಲು ಅಡ್ಡಿ ಇಲ್ಲ.ರಂಗಭೂಮಿ, ಕಿರುಚಿತ್ರ, ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಪಡೆದ ಅನುಭವ ಈ ಸಿನಿಮಾದ ಸ್ವತಂತ್ರ ನಿರ್ದೇಶನದಲ್ಲಿಪ್ರತಿಫಲಿಸಿದೆ.

ಚಿತ್ರದ ನಾಯಕಿಐಶಾನಿ ಶೆಟ್ಟಿ ಹೈಸ್ಕೂಲ್‌ ಹುಡುಗಿ ಮತ್ತು ಪತ್ನಿಯಾಗಿ ಎರಡು ಛಾಯೆಯಲ್ಲಿ ಕಾಣಿಸಿಕೊಂಡಿದ್ದು, ಅವರ ನಟನೆ ಮುದ್ದುಮುದ್ದಾಗಿದೆ. ಇನ್ನೂ ನಾಯಕನನ್ನು ಸಂಕಷ್ಟಕ್ಕೆ ಸಿಲುಕಿಸಿ ಪೇರಿ ಕೀಳುವ ಖಳನಾಯಕಿ ಪಾತ್ರದಲ್ಲಿ ಪಲ್ಲವಿಗೌಡ ನಟನೆಯೂ ಗಮನ ಸೆಳೆಯುತ್ತದೆ. ನಾಯಕನ ಗೆಳೆಯ ಮಂಜನ ಪಾತ್ರದಲ್ಲಿ ನಾಟ್ಯರಂಗಸಹಜ ನಟನೆಯಿಂದ ಹಾಸ್ಯದ ಹೊನಲು ಹರಿಸಿದ್ದಾರೆ. ರಚನಾ ದಶರಥ, ಸುಚೇಂದ್ರ ಪ್ರಸಾದ್‌, ಮಂಜುನಾಥ ಹೆಗ್ಡೆ ಪೋಷಕ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

ನಾಗರಾಜ್‌ ‌ಅವರ ಛಾಯಾಗ್ರಹಣ ಸೊರಗಿದಂತೆ ಕಾಣಿಸುತ್ತದೆ. ವಿಕಾಸ್‌ ವಸಿಷ್ಠ ಸಂಗೀತ ಸಂಯೋಜನೆ ಮತ್ತು ಋತ್ವಿಕ್‍ ಮುರಳೀಧರ್ ಹಿನ್ನೆಲೆ ಸಂಗೀತವೂ ಪ್ರೇಕ್ಷಕನನ್ನು ತಟ್ಟುವುದಿಲ್ಲ. ಧ್ವನಿ ಮಿಶ್ರಣವೂ ಅಷ್ಟೇನು ಪರಿಣಾಮಕಾರಿ ಎನಿಸುವುದಿಲ್ಲ.

ಚಿತ್ರಕಥೆಯಲ್ಲಿ ಹದವಾಗಿ ಬೆರೆತ ನವಿರು ಹಾಸ್ಯ, ಒಂದಿಷ್ಟು ಭಾವುಕತೆಯ ಜೆತೆಗೆ ಸಸ್ಪೆನ್ಸ್‌ ಅಂಶಗಳಿಂದಲೂ ಚಿತ್ರ ಕುತೂಹಲದಿಂದ ನೋಡಿಸಿಕೊಳ್ಳುತ್ತದೆ. ಹಾಡು, ಆ್ಯಕ್ಷನ್‌ ದೃಶ್ಯಗಳ ಅಬ್ಬರವಿಲ್ಲ. ಮನಕ್ಕೆ ನಾಟುವ ಸಂಭಾಷಣೆ, ಕಚಗುಳಿ ಇಡುವ ಹಾಸ್ಯವೇಚಿತ್ರದ ಜೀವಾಳ. ಮೊದಲಾರ್ಧವು ಉದ್ಯೋಗ ಅರಸುವಿಕೆಯಲ್ಲಿ ಮುಗಿದರೆ, ದ್ವಿತಿಯಾರ್ಧದ ಕಥೆಯು ಕುತೂಹಲ ಹುಟ್ಟಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.