ADVERTISEMENT

ನಟ ಸೋನು ಸೂದ್‌ರಿಂದ ₹ 20 ಕೋಟಿಗೂ ಅಧಿಕ ತೆರಿಗೆ ವಂಚನೆ: ಆದಾಯ ತೆರಿಗೆ ಇಲಾಖೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಸೆಪ್ಟೆಂಬರ್ 2021, 19:41 IST
Last Updated 18 ಸೆಪ್ಟೆಂಬರ್ 2021, 19:41 IST
ಸೋನು ಸೂದ್‌
ಸೋನು ಸೂದ್‌   

ನವದೆಹಲಿ: ನಟ ಸೋನು ಸೂದ್‌ ಹಾಗೂ ಅವರ ಪಾಲುದಾರರು ₹ 20ಕೋಟಿಗೂ ಹೆಚ್ಚು ತೆರಿಗೆ ವಂಚಿಸಿದ್ದಾಗಿ ನೇರತೆರಿಗೆಗಳ ಕೇಂದ್ರಮಂಡಳಿ (ಸಿಬಿಡಿಟಿ) ಶನಿವಾರ ಆರೋಪಿಸಿದೆ.

ಅವರ ಮನೆ, ಕಚೇರಿ ಹಾಗೂ ಲಖನೌ ಮೂಲದ ಕಂಪನಿಯ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿ ನಡೆದ ಸಂದರ್ಭದಲ್ಲಿ, ಅವರು ತಮ್ಮ ಅನಧಿಕೃತ ಆದಾಯವನ್ನು ಬೋಗಸ್‌ ಸಂಸ್ಥೆಗಳ ಮೂಲಕ ಪಡೆದ ನಕಲಿ ಸಾಲವಾಗಿ ತೋರಿಸಿರುವುದು ಪತ್ತೆಯಾಗಿದೆ. ಇಂಥ ನಕಲಿ ಸಾಲವನ್ನು ಹೂಡಿಕೆಗೆ ಹಾಗೂ ಆಸ್ತಿ ಖರೀದಿಗೆ ಬಳಸಲಾಗಿದೆ. ಶೋಧ ಸಂದರ್ಭದಲ್ಲಿ, ತೆರಿಗೆ ವಂಚನೆ ಮಾಡಿದ ಬಗ್ಗೆ ಸಾಕ್ಷ್ಯಗಳೂ ಸಿಕ್ಕಿವೆ ಎಂದು ಹೇಳಿದೆ.

ನಟ ಸೂದ್‌, ವಿದೇಶಗಳಿಂದ ದೇಣಿಗೆ ಪಡೆದ ಸಂದರ್ಭದಲ್ಲಿ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯನ್ನೂ (ಎಫ್‌ಸಿಆರ್‌ಎ) ಉಲ್ಲಂಘಿಸಿದ್ದಾಗಿ ತೆರಿಗೆ ಮಂಡಳಿ ಆರೋ‍ಪಿಸಿದೆ.

ADVERTISEMENT

ಬೋಗಸ್ ಗುತ್ತಿಗೆ ಹಾಗೂ ಲಖನೌ ಮತ್ತು ಜೈಪುರದ ಕಂಪನಿಗಳೊಂದಿಗೆ ಅನುಮಾನಾಸ್ಪದವಾಗಿ ವೃತ್ತೀಯ ವಹಿವಾಟು ನಡೆಸಿರುವುದು ಸೇರಿದಂತೆ ₹ 250 ಕೋಟಿ ಯಷ್ಟು ಅಕ್ರಮ ವ್ಯವಹಾರ ನಡೆದಿರುವುದಾಗಿ ಹೇಳಿದೆ.

ಸೂದ್ ಮನೆ, ಕಚೇರಿ ಹಾಗೂ ಲಖನೌ ಮೂಲದ ಮೂಲಸೌಕರ್ಯ ಕ್ಷೇತ್ರದಲ್ಲಿನ ಉದ್ಯಮಗಳ ಸಮೂಹದ ಮೇಲೆ ಆದಾಯ ತೆರಿಗೆ ಇಲಾಖೆ ಸೆ.15ರಿಂದ ಶೋಧ ಆರಂಭಿಸಿದೆ. ಇದುವರೆಗೆ ₹20 ಕೋಟಿಗೂ ಹೆಚ್ಚು ತೆರಿಗೆ ವಂಚನೆ ಆಗಿರುವ ಬಗ್ಗೆ ‍‍ತಿಳಿದುಬಂದಿದೆ. ₹1.8 ಕೋಟಿ ನಗದು ವಶಪಡಿಸಿಕೊಳ್ಳಲಾಗಿದ್ದು, 11 ಲಾಕರ್‌ಗಳನ್ನು ನಿರ್ಬಂಧಿಸ
ಲಾಗಿದೆ. ಶೋಧ ಕಾರ್ಯ ಮುಂದುವರಿದಿರುವುದಾಗಿ ಸಿಬಿಡಿಟಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮುಂಬೈ, ಲಖನೌ, ಖಾನಪುರ, ಜೈಪುರ, ದೆಹಲಿ ಮತ್ತು ಗುರುಗ್ರಾಮಗಳಲ್ಲಿನ 28 ಕಡೆಗಳಲ್ಲಿ ಶೋಧ ನಡೆಸಲಾಗಿತ್ತು. ಕಳೆದ ವರ್ಷ ಕೋವಿಡ್‌–19 ಲಾಕ್‌ಡೌನ್‌ ಸಂದರ್ಭದಲ್ಲಿ ಚಟುವಟಿಕೆ ಆರಂಭಿಸಿದ್ದ ಸೂದ್‌ ದತ್ತಿ ಪ್ರತಿಷ್ಠಾನ (ಚಾರಿಟಿ ಫೌಂಡೇಶನ್‌) ಬಗ್ಗೆಯೂ ಇಲಾಖೆ ಪ್ರಸ್ತಾಪಿಸಿದೆ.

ಈ ಪ್ರತಿಷ್ಠಾನವು ಕಳೆದ ವರ್ಷ ಜುಲೈ 21ರಂದು ಆರಂಭವಾಗಿದ್ದು, ಈ ವರ್ಷದ ಏಪ್ರಿಲ್‌ 1ರವರೆಗೆ ₹ 18.94 ಕೋಟಿ ದೇಣಿಗೆ ಸಂಗ್ರಹಿಸಿದೆ. ಅದರಲ್ಲಿ ವಿವಿಧ ಪರಿಹಾರ ಕಾರ್ಯಗಳಿಗಾಗಿ ₹ 1.9 ಕೋಟಿ ಖರ್ಚು ಮಾಡಲಾಗಿದೆ. ಉಳಿದ ₹ 17 ಕೋಟಿ ಬ್ಯಾಂಕ್‌ ಖಾತೆಯಲ್ಲಿ ಉಳಿದಿದೆ ಎಂದು ಹೇಳಿದೆ.

ಕ್ರೌಡ್ ಫಂಡಿಂಗ್‌ ಮೂಲಕ ವಿದೇಶಗಳಿಂದಲೂ ₹ 2.1 ಕೋಟಿ ಹಣ ಸಂಗ್ರಹಿಸಿದ್ದು, ಈ ಸಂದರ್ಭದಲ್ಲಿ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ತಮ್ಮ ಊರಿಗೆ ತೆರಳಲಾಗದೇ ಸಂಕಷ್ಟದಲ್ಲಿದ್ದ ವಲಸೆ ಕಾರ್ಮಿಕರಿಗೆ ಉಚಿತವಾಗಿ ರೈಲು, ವಿಮಾನ ಹಾಗೂ ವಾಹನ ಸೌಲಭ್ಯ ಕಲ್ಪಿಸಿದ್ದ ನಟ ಸೂದ್‌ ಕಾರ್ಯಕ್ಕೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು.

ಸೋನು ಸೂದ್‌ ಅವರು ತಮ್ಮ ಸರ್ಕಾರದ ‘ದೇಶ್‌ ಕಾ ಮೆಂಟರ್ಸ್‌’ ಕಾರ್ಯಕ್ರಮದ ರಾಯಭಾರಿಯಾಗಲಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಇತ್ತೀಚೆಗಷ್ಟೇ ಪ್ರಕಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.