ADVERTISEMENT

ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 6:23 IST
Last Updated 15 ಜೂನ್ 2021, 6:23 IST
ಸಂಚಾರಿ ವಿಜಯ್
ಸಂಚಾರಿ ವಿಜಯ್   

ಬೆಂಗಳೂರು: ಬೈಕ್‌ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ನಟ ಸಂಚಾರಿ ವಿಜಯ್‌(42), ಮಂಗಳವಾರ ಮುಂಜಾನೆ 3.34ಕ್ಕೆ ನಿಧನರಾಗಿದ್ದಾರೆ.

ಈ ಕುರಿತು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆ ವೈದ್ಯ ಅರುಣ್‌ ಎಲ್‌. ನಾಯಕ್‌ ವೈದ್ಯಕೀಯ ಬುಲೆಟಿನ್‌ನಲ್ಲಿ ಅಧಿಕೃತ ಮಾಹಿತಿ ನೀಡಿದ್ದಾರೆ.

ಜೂನ್‌ 12ರ ರಾತ್ರಿ 11.45ಕ್ಕೆ ವಿಜಯ್‌ ಅವರಿಗೆ ಅಪಘಾತವಾಗಿತ್ತು. ಅಪೋಲೊ ಆಸ್ಪತ್ರೆಯ ತುರ್ತುಚಿಕಿತ್ಸಾ ಘಟಕಕ್ಕೆ ಅವರನ್ನು ಕರೆತರುವ ವೇಳೆಯೇ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಅವರ ಮಿದುಳಿನ ಸಿಟಿ ಸ್ಕ್ಯಾನ್‌ ನಡೆಸಿದ ಸಂದರ್ಭದಲ್ಲಿ, ಮಿದುಳಿಗೆ ಬಲವಾದ ಪೆಟ್ಟುಬಿದ್ದಿರುವುದು ಕಂಡುಬಂದಿತ್ತು. ಜೊತೆಗೆ ಮಿದುಳಿನೊಳಗೆ ರಕ್ತಸ್ರಾವವೂ ಆಗಿತ್ತು. ರಕ್ತಸ್ರಾವವನ್ನು ತಡೆಯಲು ತಕ್ಷಣದಲ್ಲೇ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ನ್ಯೂರೊ ಐಸಿಯುವಿನಲ್ಲಿ, ಕೃತಕ ಆಮ್ಲಜನಕದಲ್ಲಿ ಉಸಿರಾಡುತ್ತಿದ್ದ ವಿಜಯ್‌ ಅವರು ಕೋಮಾದಲ್ಲಿದ್ದರು. ‘ವಿಜಯ್‌ ಅವರ ಮಿದುಳು ನಿಷ್ಕ್ರಿಯವಾಗಿದೆ’ ಎಂದು ವೈದ್ಯ ಅರುಣ್‌ ಅವರುಸೋಮವಾರ ತಿಳಿಸಿದ್ದರು.

2011ರಲ್ಲಿ ‘ರಂಗಪ್ಪ ಹೋಗ್ಬಿಟ್ನಾ’ ಚಿತ್ರದ ಮುಖಾಂತರ ಚಂದನವನ ಪ್ರವೇಶಿಸಿದ್ದ ‘ಸಂಚಾರಿ’ ತಂಡದ ವಿಜಯ್‌ ಅವರು, ‘ನಾನು ಅವನಲ್ಲ, ಅವಳು’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ‘ಒಗ್ಗರಣೆ’, ‘ಕಿಲ್ಲಿಂಗ್‌ ವೀರಪ್ಪನ್‌’, ‘ಸಿನಿಮಾ ಮೈ ಡಾರ್ಲಿಂಗ್‌’, ‘ರಿಕ್ತ’, ‘ನಾತಿಚರಾಮಿ’, ‘ಅವ್ಯಕ್ತಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಂಚಾರಿ ವಿಜಯ್ ನಟಿಸಿದ್ದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ

ಮಂಗಳವಾರ ಬೆಳಗ್ಗೆ 8ರಿಂದ 10 ಗಂಟೆಯವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ವಿಜಯ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಅವರ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಅಂಗಾಂಗ ದಾನ: ಸಾವಿನಲ್ಲೂ ಸಂಚಾರಿ ವಿಜಯ್‌ ಅವರು ಸಾರ್ಥಕತೆ ಮೆರೆದಿದ್ದು, ಅವರ ಕುಟುಂಬದ ಅನುಮತಿಯೊಂದಿಗೆ ಏಳು ಅಂಗಾಂಗಳನ್ನು ದಾನ ಮಾಡಲಾಗಿದೆ. ‘ಕಣ್ಣು, ಪಿತ್ತಕೋಶ, ಮೂತ್ರಪಿಂಡ, ಹೃದಯದ ಕವಾಟಗಳನ್ನು ದಾನ ಮಾಡಲಾಗಿದ್ದು, ಏಳು ಜನರಿಗೆ ಇದರಿಂದ ಸಹಕಾರಿಯಾಗಲಿದೆ. ಸಂಬಂಧಪಟ್ಟ ಆಸ್ಪತ್ರೆಗಳು ಈಗಾಗಲೇ ಅಂಗಾಂಗಗಳನ್ನು ತೆಗೆದುಕೊಂಡು ಹೋಗಿದ್ದು, ಅಲ್ಲಿ ಕಸಿ ನಡೆಯುತ್ತಿದೆ’ ಎಂದು ಜೀವ ಸಾರ್ಥಕತೆ ತಂಡದ ನೌಷಾದ್‌ ಪಾಷಾ ಮಾಹಿತಿ ನೀಡಿದರು.

ಅಪೊಲೊ ಆಸ್ಪತ್ರೆ ಪ್ರಕಟಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.