ADVERTISEMENT

ಚಿತ್ರರಂಗ, ಕಿರುತೆರೆ ಕಾರ್ಮಿಕರಿಗೆ ನಟ ಉಪೇಂದ್ರ ನೆರವಿನ ಮಹಾಪೂರ

​ಪ್ರಜಾವಾಣಿ ವಾರ್ತೆ
Published 11 ಮೇ 2021, 9:25 IST
Last Updated 11 ಮೇ 2021, 9:25 IST
ಉಪೇಂದ್ರ
ಉಪೇಂದ್ರ   

ಬೆಂಗಳೂರು: ಕೋವಿಡ್-19 ಎರಡನೇ ಅಲೆ ತೀವ್ರವಾಗಿದ್ದು, ಲಾಕ್‌ಡೌನ್‌ ಕಾರಣದಿಂದಾಗಿ ಚಿತ್ರರಂಗ ಸಂಪೂರ್ಣ ಸ್ತಬ್ಧವಾಗಿದೆ. ಇದರಿಂದಾಗಿ ಸಂಕಷ್ಟದಲ್ಲಿರುವ ಚಿತ್ರರಂಗದ ಸಾವಿರಾರು ಕಾರ್ಮಿಕರು ಹಾಗೂ ಕಲಾವಿದರಿಗೆ ನೆರವು ನೀಡುವ ಕುರಿತು ನಟ ಉಪೇಂದ್ರ ಸೋಮವಾರವಷ್ಟೇ ತಮ್ಮ ನಿರ್ಧಾರ ಪ್ರಕಟಿಸಿದ್ದರು. ಇದರ ಬೆನ್ನಲ್ಲೇ ಚಿತ್ರರಂಗದ ಮತ್ತಷ್ಟು ಕಲಾವಿದರು ಉಪೇಂದ್ರ ಅವರ ಕೈಜೋಡಿಸಿದ್ದಾರೆ.

ಈ ಕುರಿತ ಮಾಹಿತಿಯನ್ನು ಪಾರದರ್ಶಕವಾಗಿ ನಟ ಉಪೇಂದ್ರ ಅವರು ತಮ್ಮ ಟ್ವಿಟರ್‌ ಖಾತೆಯ ಮುಖಾಂತರ ನೀಡುತ್ತಿದ್ದಾರೆ. ‘ಕನ್ನಡ ಚಲನಚಿತ್ರ ರಂಗದ ಸಾವಿರಾರು ಕಾರ್ಮಿಕರು, ಕಲಾವಿದರು ಕೆಲಸವಿಲ್ಲದೇ ಕೋವಿಡ್ ಹೊಡೆತಕ್ಕೆ ತತ್ತರಿಸಿ ಹೋಗಿದ್ದಾರೆ. ಈ ಕಾರಣ, ಒಕ್ಕೂಟದ ಎಲ್ಲಾ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ಅಭಿಮಾನಿಗಳ ಆಶೀರ್ವಾದದಿಂದ ದಿನಸಿ ಕಿಟ್ ನೀಡಲು ನಿರ್ಧರಿಸಿದ್ದೇನೆ’ ಎಂದು ಉಪೇಂದ್ರ ಟ್ವೀಟ್‌ ಮೂಲಕ ಸೋಮವಾರ ತಿಳಿಸಿದ್ದರು.

ಖ್ಯಾತ ನಟಿ ಬಿ. ಸರೋಜಾ ದೇವಿ ಅವರು ₹4 ಲಕ್ಷ ದೇಣಿಗೆ ನೀಡುತ್ತಿದ್ದಾರೆ ಎಂದು ಉಪೇಂದ್ರ ಮಂಗಳವಾರ ಟ್ವೀಟ್‌ ಮೂಲಕ ತಿಳಿಸಿದ್ದಾರೆ. ‘ಸಹಕಲಾವಿದರಿಗೆ ಕಿಟ್ ಕೊಡುವ ಜವಾಬ್ದಾರಿ ನಾನು ತೆಗೆದುಕೊಂಡಿರುವುದರಿಂದ ಅಮ್ಮ ಕೊಡುತ್ತಿರುವ ಹಣವನ್ನು ಸಾದು ಕೋಕಿಲರವರ ನೇತೃತ್ವದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಂಕಷ್ಟದಲ್ಲಿರುವವರಿಗೆ ನೀಡಲು ತಿಳಿಸಿದ್ದಾರೆ’ ಎಂದು ಉಲ್ಲೇಖಿಸಿದ್ದಾರೆ.

ADVERTISEMENT

ಜೊತೆಗೆ ‘ನಟ ಸಾದುಕೋಕಿಲ ಅವರೂ ಎರಡೂವರೆ ಲಕ್ಷ ರೂಪಾಯಿ ಮೊತ್ತದಲ್ಲಿ ದಿನಸಿ ಕಿಟ್‌ಗಳನ್ನು ಆರ್ಕೆಸ್ಟ್ರಾ ಕಲಾವಿದರುಗಳಿಗೆ ಹಂಚಲು ಮುಂದೆ ಬಂದಿದ್ದಾರೆ. ವಿತರಣೆಯ ವಿವರಗಳನ್ನು ಸದ್ಯದಲ್ಲೇ ತಿಳಿಸುತ್ತಾರೆ’ ಎಂದೂ ಉಪೇಂದ್ರ ತಿಳಿಸಿದ್ದಾರೆ.

‘ನಿರ್ದೇಶಕ ಪವನ್ ಒಡೆಯರ್ ₹20 ಸಾವಿರ, ನಟ ಶೋಭರಾಜ್ ಅವರು ಸಹ ಕಲಾವಿದರಿಗೆ ಕಿಟ್ ನೀಡಲು ₹10 ಸಾವಿರ ನೀಡಿದ್ದಾರೆ. ಎಸ್. ಕೆ. ಸ್ಟೀಲ್ಸ್ ಕಂಪನಿ₹5 ಲಕ್ಷ ದೇಣಿಗೆ ನೀಡುತ್ತೇವೆಂದು ಮುಂದೆ ಬಂದಿದ್ದಾರೆ. ಈ ಹಣವನ್ನು ಪ್ರತ್ಯೇಕವಾಗಿ ಕೊರೊನಾದಿಂದಾಗಿ ಸಂಕಷ್ಟದಲ್ಲಿರುವ ಕಿರುತೆರೆ ಕಲಾವಿದರು, ಕಾರ್ಮಿಕರಿಗೆ ನೀಡಲು ಇಚ್ಛಿಸುತ್ತೇನೆ. ಶೀಘ್ರದಲ್ಲೇ ಸಂಘದ ಪದಾಧಿಕಾರಿಗಳನ್ನು ಸಂಪರ್ಕಿಸುತ್ತೇನೆ’ ಎಂದು ಟ್ವೀಟ್‌ನಲ್ಲಿ ಉಪೇಂದ್ರ ಪೋಸ್ಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.