ADVERTISEMENT

ಹಿರಿಯ ಕಲಾವಿದ ಆರ್‌.ಎಸ್‌.ರಾಜಾರಾಂ ನಿಧನ

​ಪ್ರಜಾವಾಣಿ ವಾರ್ತೆ
Published 10 ಮೇ 2021, 13:01 IST
Last Updated 10 ಮೇ 2021, 13:01 IST
ನಟ ರಾಜಾರಾಮ್‌
ನಟ ರಾಜಾರಾಮ್‌   

ಬೆಂಗಳೂರು: ಹಿರಿಯ ನಟ, ರಾಜ್ಯ ಸರ್ಕಾರದ ನಿವೃತ್ತ ಅಧೀನ ಕಾರ್ಯದರ್ಶಿ ಆರ್‌.ಎಸ್‌.ರಾಜಾರಾಂ (83) ಸೋಮವಾರ ಕೋವಿಡ್‌ನಿಂದಾಗಿ ನಿಧನರಾದರು.

ಚಲನಚಿತ್ರ, ರಂಗಭೂಮಿ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಅವರು ಹಲವು ರಂಗ ಸಂಘಟನೆಗಳನ್ನೂ ಸ್ಥಾಪಿಸಿದ್ದರು. ಮಲ್ಲೇಶ್ವರದಲ್ಲಿ ‘ರಸಿಕ ರಂಜನಿ ಕಲಾವಿದರು’ ಸಂಸ್ಥೆ ಕಟ್ಟಿ, ಪರ್ವತವಾಣಿ, ಕೈಲಾಸಂ, ದಾಶರಥಿದೀಕ್ಷಿತ್‌, ಕೆ.ಗುಂಡಣ್ಣ ಮುಂತಾದವರ ನಾಟಕಗಳಲ್ಲಿ ಅಭಿನಯಿಸಿದರು. ‘ಹಣ ಹದ್ದು’, ‘ಮಗು ಮದ್ವೆ’, ‘ಪಂಚಭೂತ’, ‘ಹೋಂರೂಲು’, ‘ಅವರೇ ಇವರು- ಇವರೇ ಅವರು’ ಮೊದಲಾದವು ಅವರ ಅಭಿನಯದ ಕೆಲವು ಪ್ರಸಿದ್ಧ ನಾಟಕಗಳು.

ಸರಸ್ವತಿ ಕಲಾ ನಿಕೇತನ, ಪ್ರಧಾನ ಮಿತ್ರ ಮಂಡಳಿ, ಸುಪ್ರಭಾತ ಕಲಾವಿದರು, ಕಮಲ ಕಲಾ ಮಂದಿರ ಮುಂತಾದ ಸಂಸ್ಥೆಗಳೊಡನೆಯೂ ಅವರು ನಿರಂತರ ಒಡನಾಟ ಹೊಂದಿದ್ದರು.
1964ರಲ್ಲಿ ಸಚಿವಾಲಯ ಉದ್ಯೋಗಿಗಳೊಡನೆ ‘ಸಚಿವಾಲಯ ಸಾಂಸ್ಕೃತಿಕ ಸಂಘ’ ಸ್ಥಾಪಿಸಿದರು. ಆ ಮೂಲಕ ಕೋಲ್ಕತ್ತದಲ್ಲಿ ನಡೆದ ಸಚಿವಾಲಯ ಕ್ಲಬ್‌ ನೌಕರರ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಂಗೀತ ಮತ್ತು ನಾಟಕ ವಿಭಾಗದ ಅನೇಕ ನಾಟಕಗಳಲ್ಲಿಯೂ ನಟಿಸಿದರು.

ADVERTISEMENT

1972ರಿಂದ ‘ನಟರಂಗ’ ಮತ್ತು 1983ರಿಂದ ‘ವೇದಿಕೆ’ಯ ರಂಗ ಚಟುವಟಿಕೆಗಳಲ್ಲಿ ತೊಡಗಿ ಸಿ.ಆರ್. ಸಿಂಹ ಅವರ ನಿರ್ದೇಶನದಲ್ಲಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದರು. ಬಿ.ವಿ. ಕಾರಂತ, ಎಂ.ಎಸ್‌. ಸತ್ಯು, ಶ್ರೀನಿವಾಸ್‌ ಜಿ. ಕಪ್ಪಣ್ಣ, ಜಯತೀರ್ಥ ಜೋಶಿ, ಸಿ.ಎಚ್‌. ಲೋಕನಾಥ್‌, ಆರ್. ನಾಗೇಶ್‌, ಪ್ರಕಾಶ್‌ ಬೆಳವಾಡಿ ಮುಂತಾದವರ ನಿರ್ದೇಶನದಲ್ಲಿ ‘ಮಂಡೋದರಿ’, ‘ವಿಗಡವಿಕ್ರಮರಾಯ’, ‘ಎಚ್ಚಮನಾಯಕ’, ‘ಟಿಪ್ಪುಸುಲ್ತಾನ್‌’, ‘ಕಿತ್ತೂರು ಚೆನ್ನಮ್ಮ’, ‘ರಕ್ತಾಕ್ಷಿ’, ‘ಸದಾರಮೆ’, ‘ಕಾಕನ ಕೋಟೆ’, ‘ತುಘಲಕ್’, ‘ಮೃಚ್ಛಕಟಿಕ’, ‘ಸಂಕ್ರಾಂತಿ’, ‘ಅಗ್ನಿ ಮತ್ತು ಮಳೆ’ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ ಖ್ಯಾತಿ ರಾಜಾರಾಂ ಅವರದ್ದು.

ಕೋಲಾರ ಜಿಲ್ಲೆಯ ಕೆ.ಜಿ.ಎಫ್‌ ನಲ್ಲಿ 1938ರ ಜುಲೈ 10ರಂದು ಜನಿಸಿದ ರಾಜಾರಾಂ ಅವರ ತಂದೆ ಜಿ.ಎಸ್‌. ರಘುನಾಥರಾವ್‌. ತಾಯಿ ಶಾರದಾಬಾಯಿ.

ಕೋವಿಡ್‌ಗೆ ತುತ್ತಾಗಿದ್ದ ಅವರು ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ‘ಮಗುವಿನ ಮುಗ್ದತೆಯ ವ್ಯಕ್ತಿತ್ವ, ಜೀವನ ಪ್ರೀತಿ ಅವರಲ್ಲಿ ಕಂಡಿದ್ದೇವೆ. ನಟರಾದ ಲೋಕೇಶ್‌, ವೆಂಕಟಾಚಲ ಮತ್ತು ರಾಜಾರಾಂ ಅವರನ್ನು ಕಲಾವಿದರ ವಲಯದಲ್ಲಿ ತ್ರಿಮೂರ್ತಿಗಳು ಎಂದೇ ಕರೆಯಲಾಗುತ್ತಿತ್ತು’ ಎಂದು ಹಿರಿಯ ನಟಿ ಗಿರಿಜಾ ಲೋಕೇಶ್‌ ಅವರು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.