ADVERTISEMENT

'ಕೇದಾರ್‌ನಾಥ್' ನೆರೆಯಲಿ ಮುಳುಗಿದ ಪ್ರೇಮ

ವಿಶಾಖ ಎನ್.
Published 8 ಡಿಸೆಂಬರ್ 2018, 10:29 IST
Last Updated 8 ಡಿಸೆಂಬರ್ 2018, 10:29 IST
'ಕೇದಾರ್‌ನಾಥ್' ಚಿತ್ರದಲ್ಲಿ ಸುಶಾಂತ್ ಸಿಂಗ್ ರಜ್ ಪೂತ್, ಸಾರಾ ಅಲಿ ಖಾನ್ (ಸಂಗ್ರಹ ಚಿತ್ರ)
'ಕೇದಾರ್‌ನಾಥ್' ಚಿತ್ರದಲ್ಲಿ ಸುಶಾಂತ್ ಸಿಂಗ್ ರಜ್ ಪೂತ್, ಸಾರಾ ಅಲಿ ಖಾನ್ (ಸಂಗ್ರಹ ಚಿತ್ರ)   

ಚಿತ್ರ: ಕೇದಾರ್‌ನಾಥ್ (ಹಿಂದಿ)
ನಿರ್ಮಾಣ: ರಾನಿ ಸ್ಕ್ರೂವಾಲ, ಪ್ರಗ್ಯಾ ಕಪೂರ್
ನಿರ್ದೇಶನ: ಅಭಿಷೇಕ್ ಕಪೂರ್
ತಾರಾಗಣ: ಸುಶಾಂತ್ ಸಿಂಗ್ ರಜ್ ಪೂತ್, ಸಾರಾ ಅಲಿ ಖಾನ್, ನಿತೀಶ್ ಭಾರದ್ವಾಜ್, ಅಲ್ಕಾ ಅಮೀನ್, ಪೂಜಾ ಗೋರ್.

ಸಿನಿಮಾ ಶುರುವಾಗಿ 50ನೇ ನಿಮಿಷದಲ್ಲಿ ನಾಯಕಿಯು ನಾಯಕನಿಗೆ ಅಧರ ಚುಂಬನ ನೀಡುತ್ತಾಳೆ. ಆ ಸನ್ನಿವೇಶ ರೊಮ್ಯಾಂಟಿಕ್ ಆಗಿಯಷ್ಟೇ ಅಲ್ಲದೆ ನಾಯಕಿಯ ದೊಡ್ಡ ಆಲೋಚನೆಯೊಂದನ್ನೂ ಅರುಹುತ್ತದೆ. ಚುಂಬನಕ್ಕೆ ಕೆಲವೇ ಕ್ಷಣಗಳ ಮೊದಲು ಅವಳು ಮಳೆ ನೀರನ್ನು ಕುಡಿಯುತ್ತಾಳೆ. ಅದಕ್ಕೂ ಮೊದಲು, ‘ನಾನು ಆಗಸವನ್ನೇ ಕುಡಿಯುತ್ತೇನೆ’ ಎನ್ನುವ ಅವಳ ಮಾತನ್ನು ಪ್ರೇಕ್ಷಕರು ತಮ್ಮ ಆಲೋಚನೆಗೆ ತಕ್ಕಂತೆ ಅರ್ಥೈಸಿಕೊಳ್ಳಬಹುದು.

ಅದಕ್ಕೂ ಮುಂಚಿನ 47-48 ನಿಮಿಷ ನಮ್ಮ ತಾಳ್ಮೆ ಪದೇ ಪದೇ ಪರೀಕ್ಷೆಗೆ ಒಳಗಾಗುತ್ತದೆ. ಸಿನಿಮಾದಲ್ಲಿನ ನಟ-ನಟಿಯರ ಅಭಿನಯ, ಉತ್ತರಖಂಡದ ಲೊಕೇಷನ್ ಗಳು, ನಾಯಕ-ನಾಯಕಿಯ ಪಾತ್ರಗಳ ವರ್ತನೆ ಎಲ್ಲವೂ ಸಹಜ. ಆದರೆ, ತೆಳುವಾದ ದಾರವನ್ನು ನಿರ್ದೇಶಕರು ಕುಂತಲ್ಲೇ ಉಜ್ಜಿದ್ದಾರೆ. ಅದರಿಂದ ದೊಡ್ಡ ಹಗ್ಗ ರೂಪಿಸಲು ಅವರಿಗೆ ಸಾಧ್ಯವಾಗಿಲ್ಲ.

ಬೇರೆ ಬೇರೆ ಧರ್ಮಗಳ ನಾಯಕ-ನಾಯಕಿಯ ನಡುವಿನ ಪ್ರೇಮ ಪ್ರಸಂಗ ಭಾರತೀಯ ಸಿನಿಮಾ ಪಾಲಿಗೆ ಸವಕಲು. ಅಭಿಷೇಕ್ ಕಪೂರ್ ಅಂತಹದ್ದೇ ವಸ್ತು ಇಟ್ಟುಕೊಂಡು ಸಿನಿಮಾ ಕಟ್ಟಿರುವುದು ಮೊದಲ ಸಮಸ್ಯೆ. ಅದರಲ್ಲಿ ಧರ್ಮ ಸಂಘರ್ಷ ತರಲು ಪರದಾಡಿರುವುದು ಇನ್ನೊಂದು ಸಮಸ್ಯೆ. ಕೊನೆಯಲ್ಲಿ ನೆರೆ ಹಾವಳಿಯನ್ನು ಸೃಷ್ಟಿಸಿ ಸಿನಿಮಾಗೆ ಮೆಲೋಡ್ರಾಮಾ ದಕ್ಕಿಸಿಕೊಡಲು ಹೆಣಗಾಡಿರುವುದು ಮಗದೊಂದು ಸಮಸ್ಯೆ. ಹೀಗೆ ತೆಳುವಾದ ದಾರವನ್ನು ಉಜ್ಜುತ್ತಲೇ ನಿರ್ದೇಶಕರು ಯಾವ ಹಂತದಲ್ಲೂ ಅದನ್ನು ಬಿಡಿಸಲಾರದಷ್ಟು ಸುಕ್ಕಾಗಿಸಿದ್ದಾರೆ.

ADVERTISEMENT

ಎರಡು ತಾಸಿನ ಅಲ್ಪಾವಧಿಯ ಚಿತ್ರವೂ ಉಸ್ಸಪ್ಪಾ ಎನಿಸುವಂತೆ ಮಾಡುತ್ತದೆ. ಕೊನೆಯ ಕೆಲವು ನಿಮಿಷಗಳನ್ನು ಹೊರತುಪಡಿಸಿ ಎಲ್ಲಿಯೂ ಅದು ಚಲನಶೀಲವಾಗುವುದೇ ಇಲ್ಲ.

ಸಿನಿಮಾ ಸಾವಧಾನದಿಂದ ಇರಬೇಕು ನಿಜ. ಆದರೆ ಅದು ಸಾಗದಂತೆ ನಿಂತುಬಿಡುವ ಜಾಯಮಾನದ್ದಾದರೆ ಕಷ್ಟ. ನಾಯಕ-ನಾಯಕಿಯ ನಡುವೆ ಪ್ರೇಮಾಂಕುರವಾಗುವ ಸನ್ನಿವೇಶಗಳು ಕೂಡ ಅಲ್ಲೊಮ್ಮೆ ಇಲ್ಲೊಮ್ಮೆ ಹಿಡಿದು ಕೂರಿಸುತ್ತವೆ. ಉಳಿದಂತೆ ಪೇಲವ. ಅರ್ಥವತ್ತಾದ ಸಂಭಾಷಣೆ ಇದ್ದೂ ಕಣ್ಣುಗಳನ್ನು ಅಗಲಿಸುವಂಥ ಪ್ರಸಂಗಗಳನ್ನು ಸೃಷ್ಟಿಸಲು ನಿರ್ದೇಶಕರಿಗೆ ಆಗಿಲ್ಲ. ನೆರೆ ಹಾವಳಿಯ ಸಹಜ ವಸ್ತುವನ್ನೇ ಕೇಂದ್ರೀಕರಿಸಿ ಈ ಸಿನಿಮಾ ಮಾಡಿದ್ದಿದ್ದರೆ ಪರಿಣಾಮ ಬೇರೆಯದೇ ಆಗುತ್ತಿದ್ದುದರಲ್ಲಿ ಸಂಶಯವಿಲ್ಲ.

ಇಡೀ ಚಿತ್ರದ ದೊಡ್ಡ ರಿಲೀಫ್ ಸಾರಾ ಅಲಿ ಖಾನ್. ಅಪ್ಪ ಸೈಫ್ ಅಲಿ ಖಾನ್ ಹೆಸರನ್ನು ಬೆನ್ನಿಗೆ, ಅಮ್ಮ ಅಮೃತಾ ಸಿಂಗ್ ಮೂಗು, ಕಣ್ಣೋಟವನ್ನು ಚಹರೆಗೆ ಇಟ್ಟುಕೊಂಡ ಈ ಹುಡುಗಿ ನೋಡುಗರ ಕಣ್ಣುಗಳನ್ನೂ ಕೀಲಿಸಿಕೊಳ್ಳುತ್ತಾರೆ. ಇದು ಅವರ ಮೊದಲ ಸಿನಿಮಾ ಎಂದು ಅನ್ನಿಸದಷ್ಟು ಲವಲವಿಕೆ ಅವರಲ್ಲಿದೆ. ಸುಶಾಂತ್ ಸಿಂಗ್ ರಜ್ ಪೂತ್ ಸಹಜನಟ ಹೌದಾದರೂ ಈ ಸಿನಿಮಾದಲ್ಲಿ ಅವರಿಗೆ ಛಾಪು ಮೂಡಿಸಲು ಹೆಚ್ಚೇನನ್ನೂ ನಿರ್ದೇಶಕರು ದಕ್ಕಿಸಿಕೊಟ್ಟಿಲ್ಲ. ಅಮಿತ್ ತ್ರಿವೇದಿ ಸಂಗೀತದ ಹಾಡುಗಳು ಆಗೀಗ ಹಿನ್ನೆಲೆಯಲ್ಲಿ ಬಂದು ಹೋಗುತ್ತವೆ. ನೆನಪಿನಲ್ಲಿ ಉಳಿಯುವುದಿಲ್ಲ. ತುಷಾರ್ ಕಾಂತಿ ರೇ ಸಿನಿಮಾಟೊಗ್ರಫಿ ಕೇದಾರನಾಥದ ಪರಿಸರವನ್ನಷ್ಟೇ ಅಲ್ಲದೆ ಪಾತ್ರಗಳ ಭಾವಗಳನ್ನೂ ಅಚ್ಚುಕಟ್ಟಾಗಿ ಹಿಡಿದಿದೆ.

‘ರಾಕ್ ಆನ್’ ತರಹದ ಚಲನಶೀಲ ಸಿನಿಮಾ ನಿರ್ದೇಶಿಸಿದ್ದ ಅಭಿಷೇಕ್ ಕಪೂರ್ ಅಂತರ್ಧರ್ಮೀಯ ಪ್ರೇಮಿಗಳನ್ನು ನೆರೆ ಹಾವಳಿಯಲ್ಲಿ ಮುಳುಗಿಸಿರುವುದಾದರೂ ಯಾತಕ್ಕೆ ಎಂಬ ಪ್ರಶ್ನೆ ಉಳಿಯುತ್ತದೆ. ಇಷ್ಟಕ್ಕೂ ಉತ್ತರಖಂಡದ ಕೆಲವು ಕಡೆ ಈ ಸಿನಿಮಾ ನಿಷೇಧಕ್ಕೆ ಒಳಗಾಗಿರುವುದು ಯಾಕೆ ಎನ್ನುವುದಕ್ಕೂ ಇಲ್ಲಿ ಉತ್ತರವಿಲ್ಲ. ಸಿನಿಮಾದಲ್ಲಿ ಯಾರಿಗೂ ಸಿಟ್ಟು ತರಿಸುವ ಅಂಥ ಮೆಲೋಡ್ರಾಮಾವೂ ಕೂಡ ಇಲ್ಲವೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.