ADVERTISEMENT

ಕಿಸ್ಮತ್: ‘ಸಾಮಾನ್ಯೀಕರಣ’ದೊಟ್ಟಿಗೇ ಮರುಸೃಷ್ಟಿ

‘ಕಿಸ್ಮತ್‌’ ಚಿತ್ರದ ವಿಮರ್ಶೆ

ಪದ್ಮನಾಭ ಭಟ್ಟ‌
Published 23 ನವೆಂಬರ್ 2018, 10:14 IST
Last Updated 23 ನವೆಂಬರ್ 2018, 10:14 IST
‘ಕಿಸ್ಮತ್‌’ ಚಿತ್ರದಲ್ಲಿ ವಿಜಯ ರಾಘವೇಂದ್ರ ಮತ್ತು ಸಂಗೀತಾ ಭಟ್‌
‘ಕಿಸ್ಮತ್‌’ ಚಿತ್ರದಲ್ಲಿ ವಿಜಯ ರಾಘವೇಂದ್ರ ಮತ್ತು ಸಂಗೀತಾ ಭಟ್‌   

ಸಿನಿಮಾ: ಕಿಸ್ಮತ್

ನಿರ್ಮಾಣ: ಸ್ಪಂದನಾ ವಿಜಯ್‌

ನಿರ್ದೇಶನ: ವಿಜಯ ರಾಘವೇಂದ್ರ

ADVERTISEMENT

ತಾರಾಗಣ: ವಿಜಯ ರಾಘವೇಂದ್ರ, ಸಂಗೀತಾ ಭಟ್‌, ನಂದಗೋಪಾಲ್‌, ದಿಲೀಪ್‌ರಾಜ್‌, ನವೀನ್‌ಕೃಷ್ಣ, ಸಾಯಿಕುಮಾರ್‌, ಸುಂದರ್‌ರಾಜ್‌

ಅಮೆರಿಕದಲ್ಲಿ ಒಂದು ಕಂಪೆನಿಯ ಮಾಲೀಕ ಪಾರ್ಟಿಯೊಂದರಲ್ಲಿ ಹೂಸು ಬಿಡುತ್ತಾನೆ. ಅದರಿಂದ ಅವನ ಹೆಂಡತಿಗೆ ಅವಮಾನವಾಗಿ ಅವಳು ಡೈವೊರ್ಸ್‌ ತೆಗೆದುಕೊಳ್ಳುತ್ತಾಳೆ. ಹೆಂಡತಿಯ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ಆ ಮಾಲೀಕನ ಮನಸ್ಸಿಗೆ ಬೇಸರವಾಗಿ ತನ್ನ ಎಲ್ಲ ಆಸ್ತಿಯನ್ನೂ ಆಶ್ರಮದ ಹೆಸರಿಗೆ ಬರೆದುಕೊಟ್ಟುಬಿಡುತ್ತಾನೆ. ಇದರಿಂದ ಷೇರುಮಾರುಕಟ್ಟೆಯಲ್ಲಿ ಆ ಕಂಪೆನಿಯ ಷೇರುಗಳ ದರ ಬಿದ್ದುಹೋಗುತ್ತದೆ. ಪರಿಣಾಮವಾಗಿ ಕಂಪೆನಿಯ ಹಲವು ಕೆಲಸಗಾರರನ್ನು ಪಿಂಕ್‌ ಸ್ಲಿಪ್‌ ಕೊಟ್ಟು ಮನೆಗೆ ಕಳಿಸಲಾಗುತ್ತದೆ. ಅದೇ ಕಂಪೆನಿಯಲ್ಲಿ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಈ ಸಿನಿಮಾದ ನಾಯಕ ವಿಜಯ್‌ ಕೂಡ ಕೆಲಸ ಕಳೆದುಕೊಳ್ಳುತ್ತಾನೆ.

ಅಲ್ಲೆಲ್ಲೋ ಅಮೆರಿಕದ ಪಾರ್ಟಿಯಲ್ಲಿ ಯಾರೋ ಹೂಸು ಬಿಟ್ಟಿದ್ದಕ್ಕೂ ಬೆಂಗಳೂರಿನಲ್ಲಿ ನಾಯಕ ಕೆಲಸ ಕಳೆದುಕೊಳ್ಳುವುದಕ್ಕೂ ಎತ್ತಣಿಂದೆತ್ತಣ ಸಂಬಂಧ? ಹೀಗೆ ಸಂಬಂಧವೇ ಇಲ್ಲ ಎಂದುಕೊಳ್ಳುವ ಸಂಗತಿಗಳೆಲ್ಲ ಪರಸ್ಪರ ವಿಚಿತ್ರವಾಗಿ ಹೆಣೆದುಕೊಂಡು ಕಗ್ಗಂಟಾಗುವುದು ಮತ್ತಷ್ಟೇ ವಿಚಿತ್ರವಾಗಿ ಗಂಟು ಬಿಚ್ಚಿಕೊಳ್ಳುವುದೇ ‘ಕಿಸ್ಮತ್‌’ ಚಿತ್ರದ ಹೂರಣ. ಎಲ್ಲೆಲ್ಲಿಯೋ ಹರಡಿಕೊಂಡಿರುವ ಈ ಎಳೆಗಳು ಒಮ್ಮಿಂದೊಮ್ಮೆಲೇ ಕನೆಕ್ಟ್‌ ಆಗುತ್ತವೆ.

ನಿರ್ದೇಶನದ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿಯೇ ವಿಜಯ ರಾಘವೇಂದ್ರ, ರಿಮೇಕ್‌ಗೆ ಮೊರೆ ಹೋದಂತಿದೆ. ತಮಿಳಿನ ‘ನೇರಂ’ ಅನ್ನು ಅವರು ನೇರವಾಗಿಯೇ ಕನ್ನಡಕ್ಕೆ ಇಳಿಸಿದ್ದಾರೆ. ಎಲ್ಲಿ ಬೇಕಾದರೂ ನಡೆಯಬಹುದಾದ ಕ್ಯಾನ್ವಾಸಿರುವ ಕಥೆಯನ್ನು ಆ ‘ಸಾಮಾನ್ಯೀಕರಣ’ದೊಟ್ಟಿಗೇ ಮರುಸೃಷ್ಟಿಸಿದ್ದಾರೆಯೇ ಹೊರತು, ಕನ್ನಡದಲ್ಲಿ ಬೇರೂರಿಸುವ ಶ್ರಮವನ್ನು ತೆಗೆದುಕೊಂಡಿಲ್ಲ. ಹಾಗಾಗಿಯೇ ನಿರ್ದೇಶಕ ವಿಜಯ ರಾಘವೇಂದ್ರ ಅವರಿಗಿಂತ ನಟ ವಿಜಯ ರಾಘವೇಂದ್ರ ಅವರೇ ಹೆಚ್ಚು ಇಷ್ಟವಾಗುತ್ತಾರೆ.

ಇದು ಒಂದೇ ದಿನದೊಳಗೆ ನಡೆಯುವ ಕಥೆ. ಐದು ಗಂಟೆಯ ಡೆಡ್‌ಲೈನ್‌ ಒಳಗೆ ನಾಯಕ ಬಡ್ಡಿ ಭದ್ರನಿಗೆ ಐವತ್ತು ಸಾವಿರ ರೂಪಾಯಿ ಕೊಡಬೇಕು. ಆದರೆ ಹೊಂದಿಸಿಕೊಂಡಿದ್ದ ಹಣ ಕಳುವಾಗುತ್ತದೆ. ಹಾಗೆಯೇ ಅವನ ಬಾವನಿಗೂ ಐದು ಗಂಟೆಯ ಒಳಗೆ ಐವತ್ತು ಸಾವಿರ ರೂಪಾಯಿ ಕೊಡಬೇಕು. ಆದರೆ ಇವನ ಬಳಿ ಊಟದ ಬಿಲ್ಲು ಕೊಡಲೂ ಕಾಸಿಲ್ಲ. ಇವೆಲ್ಲಕ್ಕೂ ಬರೆ ಇಟ್ಟಂತೆ ನಾಯಕಿಯ ತಂದೆ ಇವನ ವಿರುದ್ಧ ಪೊಲೀಸ್‌ ಕಂಪ್ಲೇಂಟ್ ಕೊಟ್ಟಿದ್ದಾನೆ. ನಾಯಕಿಯನ್ನು ಕರೆದುಕೊಂಡು ಪೊಲೀಸ್‌ ಸ್ಟೇಷನ್‌ಗೆ ಹಾಜರಾಗಲೂ ಅವನಿಗೆ ಜತೆಗೆ ಐದು ಗಂಟೆ ಡೆಡ್‌ಲೈನ್‌.

ಹೀಗೆ ಹಲವು ಸಮಸ್ಯೆಗಳು ಒಟ್ಟೊಟ್ಟಿಗೆ ಬಂದು ಸುತ್ತಿಕೊಳ್ಳಲು ಅಗತ್ಯವಾದ ಸನ್ನಿವೇಶಗಳು, ಪಾತ್ರಗಳನ್ನು ಸೃಷ್ಟಿಸಿಕೊಂಡ ನಿರ್ದೇಶಕರು ಆ ಪಾತ್ರಗಳ ಮೂಲಕವೇ ಸಂಕಷ್ಟವನ್ನು ಬಗೆಹರಿಸಿಯೂ ಬಿಡುತ್ತಾರೆ. ಅಲ್ಲಿಗೆ ಶುಭಾಂತ್ಯ.

ಸಂಗೀತಾ ಭಟ್‌ ತಮಗೆ ಸಿಕ್ಕ ಅಲ್ಪಾವಧಿ ಅವಕಾಶವನ್ನು ಸಮರ್ಥವಾಗಿಯೇ ಬಳಸಿಕೊಂಡಿದ್ದಾರೆ. ಮಗಳನ್ನು ಕಳೆದುಕೊಂಡ ತಂದೆ ಪೊಲೀಸ್ ಸ್ಟೇಷನ್‌ನಲ್ಲಿ ಕಾಮಿಡಿ ಮಾಡುತ್ತ ನಿಲ್ಲುವುದು ತೀರಾ ಕೃತಕವಾಗಿದೆ. ಪುನೀತ್‌ ರಾಜ್‌ಕುಮಾರ್‌ ಹಾಡಿರುವ ಒಂದು ಹಾಡನ್ನು ಎಷ್ಟು ಲಕ್ಷ್ಯಗೊಟ್ಟು ಆಲಿಸಿದರೂ ಕನ್ನಡದ್ದು ಎಂದು ಅನಿಸುವುದಿಲ್ಲ. ಮೂಲ ಸಿನಿಮಾದ ಚುರುಕನ್ನೂ, ಹೊಳಪನ್ನೂ ಗಳಿಸಿಕೊಳ್ಳಲು ಸಾಧ್ಯವಾಗಿಲ್ಲ.

‘ನೇರಂ’ ಅನ್ನು ನೋಡದವರು, ಕಿಸ್ಮತ್‌ ಅನ್ನು ಒಮ್ಮೆ ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.