ADVERTISEMENT

ಆಡಂಬರ ಇಲ್ಲ, ‘ಅಬ್ಬಾ’ ಎನ್ನುವಂಥದ್ದೂ ಇಲ್ಲ

ವಿಜಯ್ ಜೋಷಿ
Published 12 ಅಕ್ಟೋಬರ್ 2019, 19:30 IST
Last Updated 12 ಅಕ್ಟೋಬರ್ 2019, 19:30 IST
‘ಲುಂಗಿ’ ಚಿತ್ರದಲ್ಲಿ ಪ್ರಣವ್‌ ಹೆಗ್ಡೆ
‘ಲುಂಗಿ’ ಚಿತ್ರದಲ್ಲಿ ಪ್ರಣವ್‌ ಹೆಗ್ಡೆ   

ಚಿತ್ರ: ಲುಂಗಿ

ನಿರ್ದೇಶನ: ಅರ್ಜುನ್ ಲೂಯಿಸ್, ಅಕ್ಷಿತ್ ಶೆಟ್ಟಿ

ತಾರಾಗಣ: ಪ್ರಣವ್ ಹೆಗ್ಡೆ, ಅಹಲ್ಯಾ ಸುರೇಶ್, ಪ್ರಕಾಶ್ ತುಮಿನಾಡ್, ರಾಧಿಕಾ ರಾವ್

ADVERTISEMENT

ನಿರ್ಮಾಣ: ಮುಕೇಶ್ ಹೆಗ್ಡೆ

‘ಅಜ್ಜಿ ಮುದ್ದಿನಿಂದ ಬೆಳೆಸಿದ ಮೊಮ್ಮಗ, ಬೊಜ್ಜಕ್ಕೂ ಆಗಿಬರುವವ ಅಲ್ಲ’ ಎಂಬುದು ಕರಾವಳಿಯಲ್ಲಿ ಆಗಾಗ ಬಳಕೆಯಾಗುವ ಗಾದೆ. ಈ ಗಾದೆ ಮಾತನ್ನು ಮೀರಿ, ಸಾಧನೆ ತೋರುವ ಯುವಕನ ಕಥೆ ‘ಲುಂಗಿ’.

ಅರ್ಜುನ್ ಲೂಯಿಸ್ ಮತ್ತು ಅಕ್ಷಿತ್ ಶೆಟ್ಟಿ ನಿರ್ದೇಶನದ ಸಿನಿಮಾ ಇದು. ಎಂಜಿನಿಯರಿಂಗ್ ಓದಿರುವ ರಕ್ಷಿತ್ ಶೆಟ್ಟಿಗೆ (ಪ್ರಣವ್ ಹೆಗ್ಡೆ) ನೌಕರಿ ಹಿಡಿಯುವುದರಲ್ಲಿ ಆಸಕ್ತಿ ಇಲ್ಲ. ಆದರೆ, ಅವನ ಅಪ್ಪನಿಗೆ ಮಗ ನೌಕರಿಗೆ ಸೇರಿದರೆ ಸಾಕು ಎಂಬ ಬಯಕೆ.

ಸ್ವಂತದ್ದು ಅಂತ ಏನಾದರೂ ಮಾಡಬೇಕು ಎಂಬುದು ರಕ್ಷಿತ್‌ನ ಬಯಕೆ. ಅದಕ್ಕೆ ಪ್ರೀತಿಯಿಂದ ಒಂದಿಷ್ಟು ನೀರೆರೆಯುವವರು ಅಜ್ಜಿ ಮತ್ತು ಸ್ನೇಹಿತರು. ಅಪ್ಪನಿಂದ ‘ವೇಸ್ಟ್‌ ಬಾಡಿ’ ಎಂದು ಕರೆಸಿಕೊಂಡ ಮಗ, ತನ್ನದೇ ಒಂದು ಅಂಗಡಿ ಆರಂಭಿಸಿ, ಜೀವದಲ್ಲಿ ಹೇಗೆ ಮೇಲೆ ಬರುತ್ತಾನೆ ಎಂಬುದು ಚಿತ್ರದ ಒಂದು ಕಥೆ.

ಇದರ ಜೊತೆಯಲ್ಲೇ, ಒಂದು ನವಿರು ಪ್ರೇಮದ ಕಥೆ ಕೂಡ ಚಿತ್ರದ ಭಾಗವಾಗಿ ಬಂದಿದೆ. ರಕ್ಷಿತ್ ಮತ್ತು ಪಕ್ಕದ ಮನೆಯ ಲೋಲಿಟಾ (ಅಹಲ್ಯಾ ಸುರೇಶ್) ನಡುವಿನ ಚಿಗುರು ಪ್ರೇಮವು ಮುಖ್ಯ ಕಥೆಯ ನಡುವೆ ಹದವಾಗಿ ಹರಿಯುತ್ತ ಇರುತ್ತದೆ. ಸಿನಿಮಾದ ಮೊದಲಾರ್ಧವನ್ನು ತುಂಬಿಕೊಂಡಿರುವುದು ರಕ್ಷಿತ್‌ನ ಕಾಲೇಜು ಜೀವನ, ಅಲ್ಲಿನ ತರಲೆಗಳ ಚಿತ್ರಣ ಹಾಗೂ ತಾನಾಗಿಯೇ ಏನಾದರೂ ಮಾಡಬೇಕು ಎಂಬ ಬಯಕೆ ಚಿಗುರೊಡೆಯುವ ಕ್ಷಣಗಳು. ವಾಸ್ತವದಲ್ಲಿ, ಚಿತ್ರದ ಕಥೆ ಶುರುವಾಗುವುದು ದ್ವಿತೀಯಾರ್ಧದಲ್ಲೇ.

ನಾಯಕನ ಕುರಿತು ಬಿಲ್ಡಪ್‌ಗಳು ಇಲ್ಲ, ಅವಾಸ್ತವದ ಪ್ರೇಮಕಥೆ ಇಲ್ಲ, ಆಡಂಬರ ಕೂಡ ಇಲ್ಲದ ಸಿನಿಮಾ ಇದು. ಮಂಗಳೂರು ಭಾಗದ ಕನ್ನಡವನ್ನು ಬಹುತೇಕ ಯಥಾವತ್ತಾಗಿ ಬಳಸಿಕೊಂಡಿದ್ದು, ಆ ಶೈಲಿಯ ಕನ್ನಡದ ಸೊಗಡಿಗೆ ಎಲ್ಲಿಯೂ ಧಕ್ಕೆ ಬಾರದ ಹಾಗೆ ನೋಡಿಕೊಂಡಿದ್ದು ಚಿತ್ರದ ಪ್ಲಸ್‌ ಪಾಯಿಂಟ್‌ಗಳಲ್ಲಿ ಸೇರಿವೆ. ಆದರೆ, ಹೀಗೆ ಮಾಡುವ ಭರದಲ್ಲಿ, ವೀಕ್ಷಕನ ಕುತೂಹಲ ಹೆಚ್ಚಿಸುವ ಕ್ಷಣಗಳನ್ನು ಸೃಷ್ಟಿಸುವ ಗೋಜಿಗೆ ಚಿತ್ರತಂಡ ಹೋಗಿಲ್ಲ.

ನೌಕರಿ ಮಾಡುವುದು ಬೇಡ, ಸ್ವಂತದ್ದೇನಾದರೂ ಮಾಡೋಣ ಎಂಬ ಕಥೆಗಳು ಮಂಗಳೂರು ಪರಿಸರದಲ್ಲಿ ಸಾಕಷ್ಟು ಸಿಗುತ್ತವೆ! ಮಂಗಳೂರು ಭಾಗದಲ್ಲೇ ನಡೆಯುವ ಈ ಚಿತ್ರದ ಕಥೆಯೂ ಅದೇ ಆಗಿರುವ ಕಾರಣ, ಕಥೆಯಲ್ಲಿ ತೀರಾ ಹೊಸದನ್ನು ಹುಡುಕಲಾಗದು. ಹಾಗಾಗಿ, ಪಾತ್ರಗಳ ಸೃಷ್ಟಿಯಲ್ಲಿ ಒಂದಿಷ್ಟು ವೈಶಿಷ್ಟ್ಯ ಇದ್ದಿದ್ದರೆ ಸಿನಿಮಾ ಇನ್ನಷ್ಟು ಹೃದ್ಯವಾಗುತ್ತಿತ್ತು. ಪ್ರಸಾದ್ ಶೆಟ್ಟಿ ಸಂಗೀತ, ರಿಜೊ ಪಿ ಜಾನ್ ಛಾಯಾಗ್ರಹಣ ಚಿತ್ರದ ಹರಿವಿಗೆ ಪೂರಕವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.