ADVERTISEMENT

ಕೃಷ್ಣಸುಂದರಿ ‘ಮುದ್ದು’ ಮಾತು

ವಿದ್ಯಾಶ್ರೀ ಎಸ್.
Published 25 ಜುಲೈ 2019, 19:48 IST
Last Updated 25 ಜುಲೈ 2019, 19:48 IST
ಅಶ್ವಿನಿ
ಅಶ್ವಿನಿ   

ಸೌಂದರ್ಯವೆಂಬುದು ಬಣ್ಣದಲ್ಲಿಲ್ಲ, ಗುಣವೇ ಸೌಂದರ್ಯ ಎಂದು ಸಾರುವ ಧಾರಾವಾಹಿ ಮುದ್ದುಲಕ್ಷ್ಮಿ. ನಿನ್ನ ಬಣ್ಣ ಕಪ್ಪು ಎಂದು ಮೂದಲಿಸುತ್ತಿದ್ದವರಿಗೆ ತನ್ನ ಒಳ್ಳೆಯ ಗುಣದಿಂದಲೇ ಮನಸ್ಸು ಬದಲಾಯಿಸುವ ನಾಯಕಿ ಮುದ್ದುಲಕ್ಷ್ಮಿ. ಇಂತಹ ಅಪರೂಪದ ಕಥೆ ಮತ್ತು ಪಾತ್ರಕ್ಕೆ ಜೀವ ತುಂಬಿದವರು ನಟಿ ಅಶ್ವಿನಿ.

‘ಹತ್ತು ಮಂದಿ ನಟಿಯರಿದ್ದರೂ ನಾನು ಎದ್ದು ಕಾಣಬೇಕು. ನನ್ನ ಸೌಂದರ್ಯಕ್ಕಿಂತ ಪಾತ್ರದ ಮೂಲಕವೇ ಜನರು ಗುರುತಿಸಬೇಕು. ಮುದ್ದುಲಕ್ಷ್ಮಿ ಧಾರಾವಾಹಿಯಲ್ಲಿ ಅಂಥದ್ದೇ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಇದಕ್ಕಿಂತ ಖುಷಿ ಇನ್ನೇನಿದೆ?’ ಎಂದು ಉತ್ಸಾಹದಿಂದಲೇ ಮಾತಿಗೆ ತೊಡಗಿದರು ಅಶ್ವಿನಿ.

ಇದು ಗುಣಕ್ಕಿಂತ ಸೌಂದರ್ಯಕ್ಕೆ ಬೆಲೆ ಕೊಡುವ ಕಾಲ. ಹಾಗಾಗಿಯೇ, ಯುವಪೀಳಿಗೆ ಬೆಳ್ಳಗಾಗಲು ಬೇರೆ ಬೇರೆ ಕಸರತ್ತು ಮಾಡುತ್ತಾರೆ. ಆದರೆ, ಹೆಮ್ಮೆಯಿಂದಲೇ ತನ್ನ ಬಣ್ಣವನ್ನು ಸ್ವೀಕರಿಸಿ ಸ್ಫಟಿಕದಂತಹ ಗುಣಕ್ಕೆ ಆದ್ಯತೆ ನೀಡುವ ಕೃಷ್ಣಸುಂದರಿಯೇ ಈ ಮುದ್ದುಲಕ್ಷ್ಮಿ.

ADVERTISEMENT

ಹೆಣ್ಣನ್ನು ಸೌಂದರ್ಯದಿಂದ ಅಳೆಯಲಾಗುತ್ತದೆ. ರೂಪವಿರದ ಹೆಣ್ಣಿಗೆ ಕೀಳರಿಮೆ ಕಾಡುತ್ತದೆ. ಆ ಕೀಳರಿಮೆ ಮೆಟ್ಟಿನಿಂತು ಬಾಹ್ಯ ಸೌಂದರ್ಯಕ್ಕಿಂತ ಆತ್ಮ ಸೌಂದರ್ಯವೇ ಮೇಲೆಂದು ನಂಬಿ ತನ್ನವರಿಗೆಲ್ಲಾ ವಾತ್ಸಲ್ಯದ ಕಸ್ತೂರಿ ಸೂಸುವುದು ಈ ಲಕ್ಷ್ಮಿಯ ಸ್ವಭಾವ.

ಈ ಧಾರಾವಾಹಿಯಲ್ಲಿ ಮುದ್ದುಲಕ್ಷ್ಮಿ ಪಾತ್ರದಲ್ಲಿ ಸಹಜ ನಟನೆಯ ಮೂಲಕ ಅಶ್ವಿನಿ ಜನಪ್ರೀತಿ ಗಳಿಸಿದ್ದಾರೆ.

ಪಾತ್ರಕ್ಕೂ ತಮ್ಮ ನಿಜ ಜೀವನಕ್ಕೂ ಕಿಂಚಿತ್ತೂ ಸಾಮ್ಯತೆ ಇರದಿದ್ದರೂ, ಪಾತ್ರವನ್ನು ಸವಾಲಾಗಿ ಸ್ವೀಕರಿಸಿರುವ ಅವರು, ನಟಿಗೆ ಸೌಂದರ್ಯಕ್ಕಿಂತ ಪ್ರತಿಭೆಯೇ ಮುಖ್ಯ ಎಂಬ ಸಿದ್ಧಾಂತ ನೆಚ್ಚಿಕೊಂಡಿದ್ದಾರೆ.

ಅಶ್ವಿನಿ ಮೈಸೂರಿನವರು. ಓದಿದ್ದು ಬೆಂಗಳೂರಿನಲ್ಲಿಯೇ. ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಿಕ್ಕ ಪ್ರೋತ್ಸಾಹ ಇವರಿಗೆ ನಟನಾ ಕ್ಷೇತ್ರದತ್ತ ಹೊರಳುವಂತೆ ಮಾಡಿತು.

ಶಾಲಾ ದಿನಗಳಲ್ಲಿಯೇ ನಟನೆಯ ಕಡೆಗೆ ಒಲವು ಬೆಳೆಸಿಕೊಂಡಿದ್ದ ಇವರು, ಕಾಲೇಜಿನ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದರು.

‘ನಾನು ಓದಿದ್ದು ನ್ಯಾಷನಲ್ ಕಾಲೇಜಿನಲ್ಲಿ. ಅಲ್ಲಿ ನಾಟಕಗಳಿಗೆ ವಿಪರೀತ ಪ್ರೋತ್ಸಾಹ ನೀಡುತ್ತಿದ್ದರು. ಹಲವು ನಾಟಕಗಳಲ್ಲಿ ಅಭಿನಯಿಸಿದ್ದೆ. ನನ್ನೊಳಗಿನ ನಟಿ ಜಾಗೃತವಾಗಲು ಅದೇ ಕಾರಣ. ಓದು ಮುಗಿದ ತಕ್ಷಣ ವೃತ್ತಿ ಆಯ್ಕೆಯ ಯೋಚನೆ ಎದುರಾದಾಗ ಮೊದಲು ಹೊಳೆದದ್ದು ಮನೋರಂಜನಾ ಕ್ಷೇತ್ರ. ಮಾತಿನ ಕಲೆಯೂ ಕರಗತವಾಗಿದ್ದ ಕಾರಣ ಟಿವಿ ನಿರೂಪಕಿಯ ಅವಕಾಶ ದೊರಕಿತು. ಹಾಗೆಯೇ ಧಾರಾವಾಹಿಗಳ ಅವಕಾಶ ದೊರಕುವುದು ಕಷ್ಟವಾಗಲಿಲ್ಲ' ಎಂದು ವೃತ್ತಿ ಕ್ಷೇತ್ರದ ಮೊದಲ ಹೆಜ್ಜೆಯ ನೆನಪುಗಳನ್ನು ಹಂಚಿಕೊಂಡರು ಅಶ್ವಿನಿ.

ಅನುರಾಗ ಸಂಗಮ, ಕುಲವಧು, ಗಿರಿಜಾ ಕಲ್ಯಾಣ ಧಾರಾವಾಹಿಗಳಲ್ಲಿಯೂ ಇವರು ನಟಿಸಿದ್ದಾರೆ. ಆದರೆ ಮುದ್ದುಲಕ್ಷ್ಮಿ ಧಾರಾವಾಹಿ ಇವರಿಗೆ ಹೆಚ್ಚು ಪ್ರೀತಿ ನೀಡಿದೆ. ‘ಕೃಷ್ಣಸುಂದರಿಯಾಗಿ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರೀಕರಣ ಪ್ರಾರಂಭವಾಗಿ ಒಂದೂವರೆ ವರ್ಷವಾಗಿದೆ. ಪ್ರಾರಂಭದಲ್ಲಿ ಸ್ವಲ್ಪ ಕಸಿವಿಸಿಯಾಗುತ್ತಿತ್ತು. ಬೆಳಿಗ್ಗೆ ಮೇಕಪ್ ಹಾಕಿಕೊಂಡರೆ, ರಾತ್ರಿಯವರೆಗೂ ಹಾಗೇ ಇರಬೇಕಿತ್ತು. ಕನ್ನಡಿ ನೋಡಿಕೊಂಡಾಗ ನನ್ನದಲ್ಲದ ರೂಪ ಕಂಡು ಇರಿಸುಮುರಿಸು ಎನಿಸುತ್ತಿತ್ತು. ಆದರೆ ಜನರ ಪ್ರೀತಿ ಅವೆಲ್ಲವನ್ನೂ ಮರೆಸಿದೆ. ಮೇಕಪ್ ಇಲ್ಲದೇ ಜನ ನನ್ನನ್ನು ಗುರುತಿಸುವುದೇ ಇಲ್ಲ. ಆ ಪಾತ್ರವನ್ನು ಅವರು ಅಷ್ಟೊಂದು ಹಚ್ಚಿಕೊಂಡಿರುವುದನ್ನು ನೋಡಿದಾಗ ಖುಷಿ ಎನಿಸುತ್ತದೆ' ಎಂದು ಅಶ್ವಿನಿ ಸಂತಸ ಹಂಚಿಕೊಳ್ಳುತ್ತಾರೆ.

ನಟನಾ ಲೋಕದಲ್ಲಿ ಉಳಿಯುವ ಉತ್ಸಾಹ ಹೊಂದಿರುವ ಇವರಿಗೆ ಮಾಮೂಲಿ ಜಾಡಿಗಿಂತ ಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಹಂಬಲವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.