ADVERTISEMENT

ಮಲಯಾಳಂ ಚಿತ್ರ ‘ಅಕ್ವೇರಿಯಂ’ ಬಿಡುಗಡೆಗೆ ತಡೆ ಕೋರಿ ಹೈಕೋರ್ಟ್‌ಗೆ ಅರ್ಜಿ

ಪಿಟಿಐ
Published 12 ಮೇ 2021, 9:17 IST
Last Updated 12 ಮೇ 2021, 9:17 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಒಟಿಟಿ ವೇದಿಕೆಯಲ್ಲಿ ಇದೇ 14ರಂದು ಪ್ರಸಾರವಾಗಲಿರುವ ಮಲಯಾಳಂ ಚಿತ್ರ 'ಅಕ್ವೇರಿಯಂ' ಬಿಡುಗಡೆಗೆ ತಡೆ ನೀಡಬೇಕು ಎಂದುಕೋರಿ ಕ್ಯಾಥೊಲಿಕ್ ಸನ್ಯಾಸಿನಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಚಿತ್ರವು ಧರ್ಮನಿಂದನೆಯ ಸ್ವರೂಪದ್ದಾಗಿದ್ದು, ಕ್ರಿಶ್ಚಿಯನ್ನರ ಧಾರ್ಮಿಕ ಭಾವನೆಗಳನ್ನು ದೊಡ್ಡ ಪ್ರಮಾಣದಲ್ಲಿ ನೋಯಿಸುತ್ತದೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

ಮನಃಶಾಸ್ತ್ರಜ್ಞರೂ ಆಗಿರುವ ಸನ್ಯಾನಿಸಿ ಜೆಸ್ಸಿ ಮಣಿ ಅವರು ಈ ಕುರಿತು ಅರ್ಜಿ ಸಲ್ಲಿಸಿದ್ದಾರೆ. ಇಬ್ಬರು ಧರ್ಮಬೋಧಕರ (ಪ್ರೀಸ್ಟ್ಸ್‌) ಜತೆಗಿನ ಸನ್ಯಾಸಿನಿಯರ ಲೈಂಗಿಕ ಸಂಬಂಧವನ್ನು ಇದರಲ್ಲಿ ಚಿತ್ರಿಸಲಾಗಿದೆ ಎಂದು ಆರೋಪಿಸಿರುವ ಅವರು ಚಿತ್ರ ಬಿಡುಗಡೆಯನ್ನು ವಿರೋಧಿಸಿದ್ದಾರೆ.

ADVERTISEMENT

ಈ ಚಿತ್ರದಲ್ಲಿ ಸನ್ನಿ ವೇಯ್ನ್, ಹನಿ ರೋಸ್ ಮತ್ತು ರಾಜಶ್ರೀ ಪೊನ್ನಪ್ಪ ಮುಖ್ಯ ಪಾತ್ರಗಳಲ್ಲಿದ್ದಾರೆ.

ಅರ್ಜಿದಾರರ ಪ್ರಕಾರ, ಈ ಚಲನಚಿತ್ರವು 2012-13ರಲ್ಲಿ ಪೂರ್ಣಗೊಂಡಿತು. ಇದನ್ನು ಮೂಲತಃ ‘ಪಿಥಾವಿನಮ್ ಪುತ್ರಾನಮ್ ಪರಿಶುಧಾತ್ಮವಿನಮ್‌’ ಎಂದು ಹೆಸರಿಸಲಾಗಿತ್ತು. ಇದರರ್ಥ ‘ತಂದೆ, ಮಗ ಮತ್ತು ಪವಿತ್ರಾತ್ಮ’.

ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದಾಗ ನಿರ್ಮಾಪಕರು ‘ಪರಿಶುಧಾತ್ಮವಿನಮ್‌’ ಪದವನ್ನು ಅಳಿಸಿದ್ದರು. ಚಿತ್ರದ ವಿಷಯವು ಕ್ರಿಶ್ಚಿಯನ್ ಸಮುದಾಯದ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಸಾಧ್ಯತೆ ಇರುವುದರಿಂದ ಒಪ್ಪಿಗೆ ನೀಡಲು ಮಂಡಳಿ ನಿರಾಕರಿಸಿತ್ತು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಈಗ ನಿರ್ಮಾಪಕರು ಚಲನಚಿತ್ರವನ್ನು ಒಟಿಟಿ ವೇದಿಕೆ, ಆಡಿಯೊ ಮತ್ತು ವಿಡಿಯೊ ಹೋಸ್ಟಿಂಗ್ ಮತ್ತು ಸ್ಟ್ರೀಮಿಂಗ್ ಸೇವೆಯಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಹಾಗಾಗಿ ಸಮಸ್ಯೆ ಬಗೆಹರಿಸುವವರೆಗೆ ಚಿತ್ರದ ಬಿಡುಗಡೆಯನ್ನು ನಿಲ್ಲಿಸಬೇಕು ಅಥವಾ ಮುಂದೂಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.