ADVERTISEMENT

ಕೆಲವೊಮ್ಮೆ ನಾನೂ ‘ಬ್ಯಾಡ್ ಗರ್ಲ್’ ಎಂದ ಪ್ರಿಯಾಂಕಾ ಚೋಪ್ರಾ: ಕಾರಣವೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಸೆಪ್ಟೆಂಬರ್ 2021, 6:48 IST
Last Updated 13 ಸೆಪ್ಟೆಂಬರ್ 2021, 6:48 IST
ಪ್ರಿಯಾಂಕಾ ಚೋಪ್ರಾ (ರಾಯಿಟರ್ಸ್ ಚಿತ್ರ)
ಪ್ರಿಯಾಂಕಾ ಚೋಪ್ರಾ (ರಾಯಿಟರ್ಸ್ ಚಿತ್ರ)   

‘ನಾನು ಕೆಟ್ಟ ಹುಡುಗಿಯೇ? ಕೆಲವೊಮ್ಮೆ ಹೌದು’. ಹೀಗೆಂದು ಆತ್ಮಾವಲೋಕನ ಮಾಡಿಕೊಂಡಿದ್ದು ಹಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ.

ತಾವು ನಕಾರಾತ್ಮಕ ಪಾತ್ರಗಳಲ್ಲಿ ಕಾಣಿಸಿಕೊಂಡಾಗ ಜನ ಅದನ್ನು ಹೇಗೆ ಸ್ವೀಕರಿಸಿದ್ದಾರೆ ಎಂಬುದನ್ನು ವಿವರಿಸಿದ ಪಿಗ್ಗಿ, ಜನ ನನ್ನನ್ನು ಕೆಟ್ಟ ಹುಡುಗಿಯಾಗಿ ಇಷ್ಟಪಡುತ್ತಾರೆ ಎಂದೆನಿಸುತ್ತಿದೆ. ನಾನೂ ಕೆಲವೊಮ್ಮೆ ನನ್ನನ್ನು ಕೆಟ್ಟ ಹುಡುಗಿಯೆಂದೇ ಭಾವಿಸುತ್ತೇನೆ. ಎಲ್ಲರೂ ಒಂದೊಂದು ಸಂದರ್ಭದಲ್ಲಿ ಕೆಟ್ಟವರು ಹಾಗೂ ಒಳ್ಳೆಯವರಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಹಾಲಿವುಡ್‌ನಲ್ಲಿ ಬ್ಯುಸಿಯಾಗಿಯಾರುವ ಅವರು ತಮ್ಮ ಸಿನಿ ಪಯಣ, ಪತಿ ನಿಕ್‌ ಜೋನಾಸ್‌ ಜತೆಗಿನ ಒಡನಾಟ, ತಂದೆ ಅಶೋಕ್ ಚೋಪ್ರಾ ಸಲಹೆ ಮತ್ತು ಶಾಲಾ ದಿನಗಳ ಬಗ್ಗೆ ‘ಟೈಮ್ಸ್ ಆಫ್ ಇಂಡಿಯಾ ಸಾಹಿತ್ಯ ಉತ್ಸವ’ದಲ್ಲಿ ಇತ್ತೀಚೆಗೆ ನೆನಪಿಸಿಕೊಂಡಿದ್ದಾರೆ.

‘ನಿಕ್ ಹಾಗೂ ನನಗೆ ಪರಸ್ಪರರ ವೃತ್ತಿಜೀವನದ ಬಗ್ಗೆ ಮದುವೆಗೂ ಮುನ್ನ ಹೆಚ್ಚು ತಿಳಿದಿರಲಿಲ್ಲ. ವಿವಾಹವಾದ ಬಳಿಕ ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡೆವು. ಅವರು ತಮ್ಮ ಹಿಂದಿನ ಸಂಗೀತ ಪಯಣದ ಬಗ್ಗೆ ತಿಳಿಸಿದರು. ನಾನೂ ಕೆಲವು ಸಿನಿಮಾಗಳನ್ನು ಅವರಿಗೆ ತೋರಿಸಿದೆ. ಆದರೆ ಅವರು ‘ದಿಲ್ ಧಡಕ್‌ನೇ ದೋ’ವನ್ನು ಬಹಳ ಇಷ್ಟಪಟ್ಟಿದ್ದಾರೆ. ಹಲವು ಬಾರಿ ವೀಕ್ಷಿಸಿದ್ದಾರೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

‘ನಿಕ್ ಮದುವೆಯಾಗಿದ್ದಕ್ಕೆ ಬಹಳ ಖುಷಿಯಿದೆ’

ನನ್ನ ವೃತ್ತಿಗೆ ಸಂಬಂಧಿಸಿದವರು, ನನ್ನ ಕ್ರಿಯಾಶೀಲತೆಯನ್ನು ಅರ್ಥ ಮಾಡಿಕೊಂಡು ಅದನ್ನು ಪ್ರೋತ್ಸಾಹಿಸುವವರನ್ನು ಮದುವೆಯಾಗಿರುವುದಕ್ಕೆ ಬಹಳ ಸಂತಸ ಇದೆ. ನಿಕ್‌ ಅವರಿಂದ ಸಾಕಷ್ಟು ಕಲಿತಿದ್ದೇನೆ. ಅವರೊಬ್ಬ ಅದ್ಭುತ ಪ್ರತಿಭಾನ್ವಿತ, ಸೃಜನಶೀಲ ವ್ಯಕ್ತಿ ಎಂದು ಪತಿಯನ್ನು ಪ್ರಿಯಾಂಕಾ ಹಾಡಿಹೊಗಳಿದ್ದಾರೆ.

ನೀನು ಏನಾಗಿದ್ದೀಯೋ ಹಾಗೆಯೇ ಇರು ಎಂದು ತಂದೆ ಅಶೋಕ್ ಚೋಪ್ರಾ ಹೇಳಿದ್ದರು. ತಂದೆ, ತಾಯಿ ಇಬ್ಬರೂ ಮಿಲಿಟರಿಯಲ್ಲಿದ್ದು, ಎರಡು ವರ್ಷಕ್ಕೊಮ್ಮೆ ನಮ್ಮ ವಾಸಸ್ಥಾನ ಬದಲಾಗುತ್ತಿತ್ತು. ಐದನೇ ವರ್ಷದವಳಾಗಿದ್ದಾಗ ಶಾಲೆ ಬದಲಾಯಿಸಬೇಕಾಗಿ ಬಂದಿತ್ತು. ಬೆಸ್ಟ್ ಫ್ರೆಂಡ್‌ ಅನ್ನು ಬಿಟ್ಟು ತೆರಳಲಾಗದೆ ಅತ್ತುಬಿಟ್ಟಿದ್ದೆ ಎಂದು ಬಾಲ್ಯದ ದಿನಗಳ ಬಗ್ಗೆ ಪ್ರಿಯಾಂಕಾ ನೆನಪಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.