ADVERTISEMENT

ಸಿನಿಪ್ರಿಯರಿಗೆ ನಿರಾಸೆ: ರಾಜಮೌಳಿಯ ‘ಆರ್‌ಆರ್‌ಆರ್‌‘ ಬಿಡುಗಡೆ ಮುಂದಕ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಸೆಪ್ಟೆಂಬರ್ 2021, 11:07 IST
Last Updated 11 ಸೆಪ್ಟೆಂಬರ್ 2021, 11:07 IST
ಆರ್‌ಆರ್‌ಆರ್‌ ಫೋಸ್ಟರ್
ಆರ್‌ಆರ್‌ಆರ್‌ ಫೋಸ್ಟರ್   

ಹೈದರಾಬಾದ್: ಎಸ್‌ಎಸ್‌ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಆರ್‌ಆರ್‌ಆರ್‌‘ ಯಾವಾಗ ಬಿಡುಗಡೆ ಆಗುತ್ತದೋ ಎಂದು ಸಿನಿಪ್ರಿಯರು ತುದಿಗಾಲ ಮೇಲೆ ನಿಂತಿದ್ದಾರೆ.

ಶೂಟಿಂಗ್ ಹಾಗೂ ನಿರ್ಮಾಣೋತ್ತರ ಕೆಲಸಗಳನ್ನು ಮುಗಿಸಿರುವ ಆರ್‌ಆರ್‌ಆರ್‌, ಇದೇ ಅಕ್ಟೋಬರ್ 13 ಕ್ಕೆ ಬಿಡುಗಡೆಯಾಗಲಿದೆ ಎನ್ನಲಾಗಿತ್ತು. ಆದರೆ, ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿರುವುದಾಗಿ ಚಿತ್ರತಂಡಇಂದು ಟ್ವಿಟರ್‌ನಲ್ಲಿ ಅಧಿಕೃತವಾಗಿ ಪ್ರಕಟಿಸಿದೆ.

‘ಅಕ್ಟೋಬರ್‌ನಲ್ಲಿ‘ಆರ್‌ಆರ್‌ಆರ್‌’ಬಿಡುಗಡೆ ಮಾಡಲು ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ, ಎಲ್ಲರಿಗೂ ಗೊತ್ತಿರುವಂತೆ ಸದ್ಯದ ಪರಿಸ್ಥಿತಿಯಲ್ಲಿ ಸಿನಿಮಾ ಬಿಡುಗಡೆ ಮಾಡಲಿಕ್ಕೆ ಕೊರೊನಾವೈರಸ್‌ ಸಾಂಕ್ರಾಮಿಕದಿಂದ ಸಾಕಷ್ಟು ಅನಾನುಕೂಲ ಆಗಲಿದೆ. ನಾವು ಅನಿವಾರ್ಯವಾಗಿಆರ್‌ಆರ್‌ಆರ್‌ ಬಿಡುಗಡೆಯನ್ನು ಮುಂದಕ್ಕೆ ಹಾಕುತ್ತಿದ್ದೇವೆ. ಮುಂದಿನ ದಿನಾಂಕವನ್ನು ಸದ್ಯ ಪ್ರಕಟಿಸುತ್ತಿಲ್ಲ. ಏಕೆಂದರೆ, ಜಗತ್ತಿನಾದ್ಯಂತ ಬಹುತೇಕ ಚಿತ್ರಮಂದಿರಗಳು ಮುಚ್ಚಿವೆ. ಸಿನಿಮಾ ರಂಗ ಸಹಜ ಸ್ಥಿತಿಗೆ ಬಂದ ನಂತರ ನಾವು ಆದಷ್ಟು ಬೇಗಆರ್‌ಆರ್‌ಆರ್‌ ಬಿಡುಗಡೆ ದಿನಾಂಕವನ್ನು ಪ್ರಕಟಿಸುತ್ತೇವೆ‘ ಎಂದು ಚಿತ್ರತಂಡ ತಿಳಿಸಿದೆ.

ADVERTISEMENT

ಕೋವಿಡ್ 3ನೇ ಅಲೆಯ ಆತಂಕದಲ್ಲಿರುವ ಚಿತ್ರ ವಿತರಕರು ಆರ್‌ಆರ್‌ಆರ್‌ ಬಿಡುಗಡೆಯನ್ನು ವಿಳಂಬ ಮಾಡುವಂತೆ ರಾಜಮೌಳಿಗೆ ಮನವಿ ಮಾಡಿದ್ದರು ಎಂದು ತಿಳಿದುಬಂದಿದೆ.ಒಂದು ವೇಳೆ ಅಕ್ಟೋಬರ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಿದರೆ ನಿರೀಕ್ಷಿತ ಮಟ್ಟದಲ್ಲಿ ಲಾಭ ಗಳಿಸಲು ಸಾಧ್ಯವಿಲ್ಲ ಎಂಬುದು ವಿತರಕರ ವಾದವಾಗಿದೆ.

ಡಿವಿವಿ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆಯು ಸುಮಾರು ₹400 ಕೋಟಿಯಲ್ಲಿ ನಿರ್ಮಿಸುತ್ತಿರುವ ಈ ಚಿತ್ರವು 20ನೇ ಶತಮಾನದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೋಮರಂ ಭೀಮ್‌ ಅವರ ಜೀವನ ಕಥೆಯನ್ನು ಆಧರಿಸಿದೆ. ಈ ಚಿತ್ರದಲ್ಲಿ ರಾಮ್‌ಚರಣ್ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ, ಎನ್‌ಟಿಆರ್ ಜೂನಿಯರ್ ಕೋಮರಂ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟರಾದ ಅಜಯ್ ದೇವ್‌ಗನ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.