ADVERTISEMENT

‘ಸವರ್ಣದೀರ್ಘ ಸಂಧಿ‘ ವಿಮರ್ಶೆ: ಎತ್ತಣ ವ್ಯಾಕರಣ; ಎತ್ತಣ ರೌಡಿಸಂ

ನಾವು ನೋಡಿದ ಸಿನಿಮಾ

ಕೆ.ಎಂ.ಸಂತೋಷ್‌ ಕುಮಾರ್‌
Published 18 ಅಕ್ಟೋಬರ್ 2019, 11:07 IST
Last Updated 18 ಅಕ್ಟೋಬರ್ 2019, 11:07 IST
‘ಸವರ್ಣದೀರ್ಘ ಸಂಧಿ’ ಚಿತ್ರದಲ್ಲಿ ವೀರೇಂದ್ರ ಶೆಟ್ಟಿ ಮತ್ತು ಕೃಷ್ಣಾ ಬಿ.
‘ಸವರ್ಣದೀರ್ಘ ಸಂಧಿ’ ಚಿತ್ರದಲ್ಲಿ ವೀರೇಂದ್ರ ಶೆಟ್ಟಿ ಮತ್ತು ಕೃಷ್ಣಾ ಬಿ.   

ಚಿತ್ರ: ಸವರ್ಣದೀರ್ಘ ಸಂಧಿ

ನಿರ್ಮಾಣ:ಲುಷಿಂಗ್ಟನ್ ಥಾಮಸ್, ಹೇಮಂತ್ ಕುಮಾರ್, ಮನೋಮೂರ್ತಿ, ವೀರೇಂದ್ರ ಶೆಟ್ಟಿ

ನಿರ್ದೇಶನ: ವೀರೇಂದ್ರ ಶೆಟ್ಟಿ

ADVERTISEMENT

ತಾರಾಗಣ: ವೀರೇಂದ್ರ ಶೆಟ್ಟಿ, ಕೃಷ್ಣಾ ಬಿ., ರವಿಭಟ್‌,ರವಿ ಮಂಡ್ಯ, ಅಜಿತ್ ಹನುಮಕ್ಕನವರ್

ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯ? ಹಾಗೆಯೇ ಕನ್ನಡ ವ್ಯಾಕರಣಕ್ಕೂ ರೌಡಿಸಂಗೂ ಯಾವ ಸಂಬಂಧ? ಹೌದು ‘ಸವರ್ಣದೀರ್ಘ ಸಂಧಿ’ ಚಿತ್ರದಲ್ಲಿ ಇದಕ್ಕೆ ನಿರ್ದೇಶಕ ವೀರೇಂದ್ರ ಶೆಟ್ಟಿ ಸಂಬಂಧ ಕಲ್ಪಿಸಿಬಿಟ್ಟಿದ್ದಾರೆ. ಜೀತಪದ್ಧತಿಗೆ ಸಿಲುಕಿದ್ದಅಮಾಯಕ ಬಾಲಕನೊಬ್ಬ ರೌಡಿಯಾಗಿ ಬೆಳೆದ, ವ್ಯಾಕರಣದಲ್ಲೂ ಪಾಂಡಿತ್ಯ ಗಳಿಸಿದ ಕಥೆಗೆ ಒಂದಿಷ್ಟು ಮಸಾಲೆ ಸೇರಿಸುವಂತೆ ಪ್ರೇಮದ ಎಳೆಯನ್ನೂ ಸೇರಿಸಿ ‘ಮುದ್ದಣ್ಣ ಮನೋರಮೆಯ ಸಲ್ಲಾಪ’ವನ್ನು ನವಿರು ಹಾಸ್ಯದ ಜಾಡಿನಲ್ಲಿ ಪ್ರೇಕ್ಷಕರಿಗೆ ಉಣಬಡಿಸಲು ಪ್ರಯತ್ನಿಸಿದ್ದಾರೆ.

‘ವ್ಯಾಕರಣವೆಂದರೆ ಕೆಲವರಿಗೆ ಕಬ್ಬಿಣದ ಕಡಲೆ, ಅರಿತವರಿಗೆ ಹುರಿಗಡಲೆ’ ಎನ್ನುವ ಮಾತಿದೆ. ಅಂತಹದರಲ್ಲಿ ಸಂಧಿ– ಸಮಾಸ, ಪ್ರತ್ಯಯ, ಉಚ್ಚಾರಣೆಯ ಪಾಠವನ್ನು ತೆರೆಯ ಮೇಲೆ ರಸವತ್ತಾಗಿ ಹೇಳುವುದು ಒಂದು ಸವಾಲೇ ಸರಿ. ಕನ್ನಡ ಕಾವ್ಯದಲ್ಲಿನ‘ಮುದ್ದಣ್ಣ ಮನೋರಮೆಯ ಸರಸ ಸಲ್ಲಾಪ’ವನ್ನು ಕಾವ್ಯಪ್ರಿಯರು ಈ ಚಿತ್ರದಲ್ಲಿ ಹುಡುಕಲು ಹೋದರೆ ನಿರಾಸೆಯಾದಿತು.

ಚಿತ್ರದಲ್ಲಿನ ನಾಯಕ ಮುದ್ದಣ್ಣ (ವೀರೇಂದ್ರ ಶೆಟ್ಟಿ) ರೌಡಿ. ಸಜ್ಜನರಿಗೆ ತೊಂದರೆ ಕೊಡುವವರನ್ನು ಮಾತ್ರ ಶಿಕ್ಷಿಸುವುದು ಇವನ ಕಾಯಕ.ಆದರೆ, ಇವನ ಇಡೀ ಗ್ಯಾಂಗ್‌ ಅನ್ನು ಹೆಡೆಮುರಿ ಕಟ್ಟಲು ಹರಸಾಹಸಪಡುವುದು, ಅದರಲ್ಲಿ ಪದೇ ಪದೇ ವೈಫಲ್ಯ ಕಾಣುವುದು ಪೊಲೀಸ್‌ ಇಲಾಖೆಯ ಕಾಯಕ.

ಮುದ್ದಣ್ಣನೋ ಶಾಲೆಯ ಮೆಟ್ಟಿಲು ಹತ್ತದಿದ್ದರೂ ವ್ಯಾಕರಣ ಪಂಡಿತ.ತನ್ನ ರೌಡಿ ಜಗತ್ತಿನಲ್ಲಿ ಎದುರಾಗುವವರಿಗೆ ಕನ್ನಡ ವ್ಯಾಕರಣದ ಸಂಧಿ, ಸಮಾಸಗಳು ಗೊತ್ತಿಲ್ಲದಿದ್ದರೆ ಇನ್ನಷ್ಟು ಶಿಕ್ಷೆ ನೀಡಿ ಹಿಂಸಿಸಿ, ವ್ಯಾಕರಣದ ಪಾಠವನ್ನೂ ಹೇಳುತ್ತಾನೆ. ಓದು ಬರಹ ಕಲಿಯದವನಿಗೆ ವ್ಯಾಕರಣದ ಹುಚ್ಚು ಹೇಗೆ ಬಂತೆಂಬುವ ಕುತೂಹಲ ಚಿತ್ರದಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ. ನಾಯಕಿ ಮನೋರಮೆ (ಕೃಷ್ಣಾ) ಹೆಸರಾಂತ ಸಂಗೀತ ನಿರ್ದೇಶಕನ ಸಾಕು ಮಗಳು; ಸ್ವತಃ ಸಂಗೀತ ಸಂಯೋಜಿಸುವ ವೃತ್ತಿಪರ ಗಾಯಕಿ.ನಾಯಕ– ನಾಯಕಿ ಹೇಗೆ ಪರಸ್ಪರ ಒಲಿಯುತ್ತಾರೆ, ಸಮಾಗಮವಾಗುತ್ತಾರೆ ಎನ್ನುವುದೇಚಿತ್ರದ ಹೂರಣ.

ಚಿತ್ರದಲ್ಲಿ ನಾಯಕಿಗೆ ಮೂಲವುಂಟು; ಆದರೆ, ನಾಯಕನಿಗೆ ಮೂಲವಿಲ್ಲ. ನದಿ ಮೂಲ, ರುಷಿ ಮೂಲ, ದೇವಮೂಲ ಹುಡುಕಬಾರದೆನ್ನುವ ಸೂತ್ರ ಮುಂದುಮಾಡಿ ಕಥೆ ನಿರೂಪಿಸಿದಂತಿದೆ. ದೃಶ್ಯದಿಂದ ದೃಶ್ಯಗಳಿಗೆ ಇನ್ನಷ್ಟು ವೇಗದ ಚಲನೆ, ಸಂಭಾಷಣೆಯ ಓಘ ಬೇಕಾಗಿತ್ತೆನ್ನಿಸುವುದು ಸಹಜ. ಆದರೆ, ಸಂಭಾಷಣೆಯ ಅಲ್ಲಲ್ಲಿ ತಿಳಿ ಹಾಸ್ಯಕ್ಕೆ ಕೊರತೆ ಇಲ್ಲ.

ತುಳು ಚಿತ್ರರಂಗದಲ್ಲಿ ಹೆಸರಿರುವ ವೀರೇಂದ್ರ ಶೆಟ್ಟಿ ಅವರಿಂದ ಇನ್ನಷ್ಟು ಭಾವಾಭಿನಯ ನಿರೀಕ್ಷಿಸಿದರೆ ಅದು ಪ್ರೇಕ್ಷಕರ ತಪ್ಪಲ್ಲ. ನಿರ್ದೇಶನ ಮತ್ತು ನಟನೆಯ ಎರಡು ನೊಗದ ಭಾರಕ್ಕೆ ಅವರು ನಲುಗಿದಂತೆ ಕಾಣಿಸುತ್ತಾರೆ.

ಮೊದಲ ಅವಕಾಶದಲ್ಲೇ ನಟಿ ಕೃಷ್ಣಾ ಭರವಸೆ ಮೂಡಿಸುತ್ತಾರೆ. ರವಿ ಮಂಡ್ಯ, ಅಜಿತ್ ಹನುಮಕ್ಕನವರ್ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.ವ್ಯಾಕರಣದ ಮೇಸ್ಟ್ರಾಗಿ ಕೃಷ್ಣ ನಾಡಿಗ್‌ ನಟನೆ ನೆನಪಿನಲ್ಲಿ ಉಳಿಯುತ್ತದೆ.

ಮನೋಮೂರ್ತಿಯವರ ಸಂಗೀತವಿರುವ, ಶ್ರೇಯಾ ಘೋಷಾಲ್‌ ಹಾಡಿರುವ ‘ಕೊಳಲಾದೆ ನಾ ಕೃಷ್ಣ ನಿನ್ನ ಕೈಯಲ್ಲಿ’ ಹಾಡು ಗುನುಗುವಂತಿದೆ. ಸಂಭಾಷಣೆ ಕರ್ಣಪಟಲಕ್ಕೆ ಇಳಿಯುವುದಿಲ್ಲ. ಲೋಗನಾಥ್‌ ಶ್ರೀನಿವಾಸನ್‌ ಛಾಯಾಗ್ರಹಣ ಕೆಲವು ದೃಶ್ಯಗಳಿಗೆ ಸಹ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.