ADVERTISEMENT

ಜಯಲಲಿತಾ, ಎಂಜಿಆರ್‌ ಬಗ್ಗೆ ತಪ್ಪು ಉಲ್ಲೇಖ: ‘ತಲೈವಿ’ಯ ಕೆಲ ಸನ್ನಿವೇಶಕ್ಕೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2021, 14:25 IST
Last Updated 10 ಸೆಪ್ಟೆಂಬರ್ 2021, 14:25 IST
ಚಿತ್ರ: ‘ತಲೈವಿ’ ಚಿತ್ರದ ಸನ್ನಿವೇಶ
ಚಿತ್ರ: ‘ತಲೈವಿ’ ಚಿತ್ರದ ಸನ್ನಿವೇಶ    

ಚೆನ್ನೈ: ಶುಕ್ರವಾರವಷ್ಟೇ ಬಿಡುಗಡೆಯಾಗಿರುವ ‘ತಲೈವಿ’ ಚಿತ್ರದಲ್ಲಿ ದಿವಂಗತ ಎಂಜಿ ರಾಮಚಂದ್ರನ್‌ ಮತ್ತು ಜಯಲಲಿತಾ ಅವರಿಗೆ ಸಂಬಂಧಿಸಿದಂತೆ ತಪ್ಪಾದ ಉಲ್ಲೇಖಗಳಿವೆ ಎಂದು ಹೇಳಿರುವ ಎಐಎಡಿಎಂಕೆ ಪಕ್ಷದ ನಾಯಕರು, ಚಿತ್ರದ ಕೆಲ ಸನ್ನಿವೇಶಗಳಿಗೆ ಕತ್ತರಿ ಹಾಕಬೇಕು ಎಂದು ಆಗ್ರಹಿಸಿದ್ದಾರೆ.

‘ತಲೈವಿ’ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜೆ. ಜಯಲಲಿತಾ ಅವರ ಜೀವನಾಧಾರಿತ, ಬಹುಭಾಷಾ ಸಿನಿಮಾ. ನಟಿ ಕಂಗನಾ ರನೌತ್‌ ಅವರು ಜಲಲಿತಾ ಅವರ ಪಾತ್ರವನ್ನು ನಿಭಾಯಿಸಿದ್ದು, ನಿರ್ದೇಶಕ ಎ.ಎಲ್‌ ವಿಜಯ್‌ ಅವರು ಸಿನಿಮಾ ನಿರ್ದೇಶಿಸಿದ್ದಾರೆ.

ಎಐಎಡಿಎಂಕೆ ಹಿರಿಯ ನಾಯಕ ಮತ್ತು ಮಾಜಿ ಸಚಿವ ಡಿ ಜಯಕುಮಾರ್, ತಲೈವಿ ಚಲನಚಿತ್ರವನ್ನು ಚೆನ್ನೈನ ಚಿತ್ರಮಂದಿರವೊಂದರಲ್ಲಿ ಶುಕ್ರವಾರ ವೀಕ್ಷಿಸಿದರು. ‘ಚಿತ್ರದಲ್ಲಿರುವ ಕೆಲ ಉಲ್ಲೇಖಗಳು ವಾಸ್ತವವಲ್ಲ. ಅವುಗಳನ್ನು ತೆಗೆದುಹಾಕಿದರೆ, ‘ತಲೈವಿ’ ಉತ್ತಮ ಸಿನಿಮಾ ಎನಿಸಿಕೊಳ್ಳಲಿದೆ. ಪಕ್ಷದ ಬೆಂಬಲಿಗರು ಮತ್ತು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಲಿದೆ’ ಎಂದು ಒತ್ತಾಯಿಸಿದರು.

ADVERTISEMENT

‘ಉದಾಹರಣೆಗೆ, ಚಿತ್ರದ ಒಂದು ಸನ್ನಿವೇಶದಲ್ಲಿ ಎಂಜಿಆರ್ ಡಿಎಂಕೆ ಸರ್ಕಾರದಲ್ಲಿ ಮಂತ್ರಿ ಸ್ಥಾನವನ್ನು ಬಯಸುತ್ತಾರೆ. ಆದರೆ, ಅವರ ಬಯಕೆಯನ್ನು ಎಂ ಕರುಣಾನಿಧಿ ನಿರಾಕರಿಸುತ್ತಾರೆ. ಆದರೆ, ಎಂಜಿಆರ್‌ ಎಂದೂ ಅಂಥ ಹುದ್ದೆಗಳಿಗೆ ಆಸೆಪಟ್ಟವರಲ್ಲ,’ ಎಂದು ಜಯಕುಮಾರ್ ಹೇಳಿದ್ದಾರೆ.
‘ಕರುಣಾನಿಧಿ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಹೆಸರಿಸಿದವರೇ ಎಂಜಿಆರ್‌,’ ಎಂದು ಅವರು ತಿಳಿಸಿದ್ದಾರೆ.

ದಿವಂಗತ ಸಿಎನ್ ಅಣ್ಣಾದೊರೈ ಅವರ ನೇತೃತ್ವದ ಡಿಎಂಕೆಯಲ್ಲಿ ಎಂಜಿಆರ್‌ ಕೂಡ ಪಕ್ಷದ ಭಾಗವಾಗಿದ್ದರು. 1967 ರ ಚುನಾವಣೆಯಲ್ಲಿ ಡಿಎಂಕೆ ಪಕ್ಷವು ಕಾಂಗ್ರೆಸ್ ಅನ್ನು ಅಧಿಕಾರದಿಂದ ಕೆಳಗಿಳಿಸಿತ್ತು. ನಂತರ, ಡಿಎಂಕೆ ಪಕ್ಷವು ಕರುಣಾನಿಧಿ ಅವರ ವಶವಾದಾಗ 1972 ಎಂಜಿಆರ್‌ ಪಕ್ಷದಿಂದ ಹೊರಬಂದು ಎಐಎಡಿಎಂಕೆ ಸ್ಥಾಪಿಸಿದ್ದರು.

ಜಯಲಲಿತಾ ಅವರು ದಿವಂಗತ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರೊಂದಿಗೆ ಎಂಜಿಆರ್ ಅವರ ಅರಿವಿಗೆ ಬಾರದಂತೆ ಸಂಪರ್ಕದಲ್ಲಿದ್ದರು ಎಂದು ಸಿನಿಮಾದಲ್ಲಿ ತೋರಿಸಲಾಗಿದೆ. ಈ ಮೂಲಕ ಎಂಜಿಆರ್‌ ಪಾತ್ರವನ್ನು ಮತ್ತೊಮ್ಮೆ ಕೆಳಮಟ್ಟಕ್ಕಿಳಿಸಲಾಗಿದೆ. ಇದು ನಿಜವಲ್ಲ ಎಂದು ಜಯಕುಮಾರ್‌ ಹೇಳಿದರು. ಅಲ್ಲದೆ, ಈ ದೃಶ್ಯಗಳನ್ನು ತೆಗೆದುಹಾಕಬೇಕು. ಇದು ನಮ್ಮ ವಿನಂತಿ’ ಎಂದು ಅವರು ಹೇಳಿದರು.

ಜಯಲಲಿತಾ ಅವರು 75 ದಿನಗಳ ನಿರಂತರ ಚಿಕಿತ್ಸೆ ನಂತರವೂ 2016ರ ಡಿಸೆಂಬರ್‌ನಲ್ಲಿ ಕೊನೆಯುಸಿರೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.