ADVERTISEMENT

ಮರಿ ಟೈಗರ್‌ ಫಿಟ್‌ನೆಸ್‌ ಗುಟ್ಟು

ಕೆ.ಎಂ.ಸಂತೋಷ್‌ ಕುಮಾರ್‌
Published 28 ಜುಲೈ 2019, 19:30 IST
Last Updated 28 ಜುಲೈ 2019, 19:30 IST
ವಿನೋದ್‌ ಪ್ರಭಾಕರ್‌
ವಿನೋದ್‌ ಪ್ರಭಾಕರ್‌   

ಕ್ರೀಡೆ, ಸಿನಿಮಾ, ಜಾಹೀರಾತು, ಮಾಡೆಲಿಂಗ್.... ಹೀಗೆ ಪ್ರಮುಖ ಕ್ಷೇತ್ರಗಳಲ್ಲಿ ಇರುವವರು ದೇಹದ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಹೆಚ್ಚು ಆದ್ಯತೆ ಕೊಡುತ್ತಾರೆ. ಸಿಕ್ಸ್‌ ಪ್ಯಾಕ್‌, 8 ಪ್ಯಾಕ್‌, ಟೆನ್‌ ಪ್ಯಾಕ್‌ಗೆ ದೇಹ ಹುರಿಗೊಳಿಸುವ ಟ್ರೆಂಡ್‌ ಯುವಜನರಲ್ಲಿ ಬೆಳೆಯುತ್ತಿದೆ. 10 ಪ್ಯಾಕ್‌ ಮೈಕಟ್ಟು ಹೊಂದಿರುವ ವಿರಳರಲ್ಲಿ ಬಾಡಿ ಬಿಲ್ಡರ್‌ ‘ಉಲಿಸಿಸ್‌’ ಜೂನಿಯರ್‌ ಸ್ಫೂರ್ತಿಯಾಗಿ ಕಾಣಿಸುತ್ತಾರೆ. ಅವರ ಹಾದಿಯಲ್ಲೇ ನಡೆಯುತ್ತಿದ್ದಾರೆ ವಿನೋದ್‌ ಪ್ರಭಾಕರ್‌.

‘ಸೌಂಡ್‌ ಬಾಡಿ ಇನ್‌ ಸೌಂಡ್‌ ಮೈಂಡ್‌’ ಎನ್ನುವ ಮಾತೊಂದಿದೆ. ದೇಹ ಸೌಖ್ಯವಾಗಿದ್ದರೆ, ಮಾನಸಿನ ಆರೋಗ್ಯವೂ ಉತ್ತಮವಾಗಿರುತ್ತದೆ. ದೇಹ ಮತ್ತು ಮನಸ್ಸನ್ನು ಸುಸ್ಥಿತಿಯಲ್ಲಿಟ್ಟುಕೊಂಡರೆ ಬದುಕೂ ಚೆನ್ನಾಗಿರುತ್ತದೆ. ಸದೃಢ ದೇಹ ಹೊಂದುವ ಬಯಕೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಸದೃಢ ದೇಹವನ್ನು ಹೊಂದುವ ಗುಟ್ಟು ನಮ್ಮ ಕೈಯಲ್ಲೇ ಇರುತ್ತದೆ. ಅದಕ್ಕಾಗಿಮನಸ್ಸನ್ನು ಸಜ್ಜುಗೊಳಿಸಿಕೊಳ್ಳಬೇಕು.ಮನಸಿದ್ದರೆ ಮಾತ್ರ ಮಾರ್ಗ. ಇದನ್ನು ಅರಿತವರು ದೇಹದ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಯಶಸ್ವಿಯೂ ಆಗಿದ್ದಾರೆ.

ಈಚೆಗೆ ಬಿಡುಗಡೆಯಾಗಿದ್ದ‘ರಗಡ್‌’ ಎನ್ನುವ ಸಿನಿಮಾದಲ್ಲಿ ನಟ ವಿನೋದ್‌ ಪ್ರಭಾಕರ್‌ ಎಂಟು (8) ಪ್ಯಾಕ್‌ ಮೈಕಟ್ಟಿನಿಂದ ಯುವಜನರು, ಸಿನಿರಸಿಕರ ಗಮನ ಸೆಳೆದಿದ್ದರು.‘ಬಹಳಷ್ಟುಜನರು ಸಿಕ್ಸ್‌ ಪ್ಯಾಕ್‌ ಮಾಡಲು ‘ಸೈಕಲ್‌’ ಹೊಡೆಯುತ್ತಿರುವಾಗ, 8 ಪ್ಯಾಕ್‌ ಮಾಡುವುದು ಸಾಮಾನ್ಯ ಸಾಧನೆಯಲ್ಲ’ ಎನ್ನುವ ಮೆಚ್ಚುಗೆ ಮಾತುಗಳನ್ನೂ ಈ ‘ಮರಿ ಟೈಗರ್‌’ ಬಗ್ಗೆ ವ್ಯಕ್ತಪಡಿಸಿದ್ದರು. ಇವರ 8 ಪ್ಯಾಕ್‌ನ ಬೇರ್‌ ಬಾಡಿ ನೋಡಿ ಮಾಧ್ಯಮಗಳು ‘ಕರ್ನಾಟಕದ ಅರ್ನಾಲ್ಡ್‌’ ಎನ್ನುವ ಬಿರುದನ್ನು ನೀಡಿವೆ. ತಮ್ಮ ಫಿಟ್‌ನೆಸ್‌ ಮತ್ತು ಸಿಕ್ಸ್‌ ಪ್ಯಾಕ್‌ ಮೈಕಟ್ಟಿನ ಬಗ್ಗೆ ವಿನೋದ್‌ ಪ್ರಭಾಕರ್‌ ಇಲ್ಲಿ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ADVERTISEMENT

ಏಯ್ಟ್‌ ಪ್ಯಾಕ್‌ ಯೋಚನೆ ಬಂದಿದ್ದು ಹೇಗೆ?
ಚಿಕ್ಕವನಾಗಿದ್ದಾಗಲೇ ಫಿಟ್‌ನೆಸ್‌ ಬಗ್ಗೆ ಕನಸುಗಳು ಮೂಡಿದ್ದವು. ನನ್ನ ತಂದೆ ಟೈಗರ್‌ ಪ್ರಭಾಕರ್‌ ಅವರೇ ನನಗೆ ಸ್ಫೂರ್ತಿ. ಏಕೆಂದರೆ ಅವರೇ ಒಬ್ಬ ಗರಡಿಮನೆಯಿಂದ ಬಂದ ಪೈಲ್ವಾನ ಮತ್ತು ಕನ್ನಡ ಚಿತ್ರರಂಗ ನೋಡಿದ ಮೊದಲ ಬಾಡಿ ಬಿಲ್ಡರ್‌. ನನಗೆ ಹೀರೊ ಆಗುವ ಕನಸುಗಳಿರಲಿಲ್ಲ. ತಂದೆ ಬಳಿಯೂ ನಾನೊಬ್ಬ ಫೈಟರ್‌ ಆಗಬೇಕೆಂದು ಕನಸು ಬಿಚ್ಚಿಟ್ಟಿದ್ದೆ. ತಂದೆ ಬಳಿ ಫಿಟ್‌ನೆಸ್‌ ಬಗ್ಗೆ ಟಿಪ್ಸ್‌ ಹೇಳಿಸಿಕೊಳ್ಳುತ್ತಿದ್ದೆ. ಆದರೆ, ಚಿಕ್ಕ ವಯಸ್ಸಿನಲ್ಲಿ ಬಾಡಿಬಿಲ್ಡ್‌ ಮಾಡಬೇಡ. ಎತ್ತರ ಬೆಳೆಯುವುದಿಲ್ಲ ಎನ್ನುವ ಸಲಹೆ ಕೊಟ್ಟಿದ್ದರು. ಅದರಂತೆ ನಾನು 18ನೇ ವಯಸ್ಸಿಗೆ ಕಾಲಿಟ್ಟಾಗ ಬಾಡಿ ಬಿಲ್ಡ್‌ ಮಾಡಲು ದೈಹಿಕ ಕಸರತ್ತು ಮಾಡಿಕೊಂಡು ಬಂದಿದ್ದೆ. ತಂದೆ ನಟನೆಯ ಟೈಗರ್‌ ಮತ್ತು ಕಾಡಿನ ರಾಜ ಸಿನಿಮಾಗಳ ದೃಶ್ಯಗಳು ನಾನೊಬ್ಬ ಬಾಡಿ ಬಿಲ್ಡರ್‌ ಆಗಲೇಬೇಕೆಂಬ ಕನಸು ಗಟ್ಟಿಗೊಳಿಸಿದವು. ಜತೆಗೆ ಮಿಸ್ಟರ್‌ ಯೂನಿವರ್ಸ್‌ ಆಗಿದ್ದ ಅರ್ನಾಲ್ಡ್‌ ನನ್ನನ್ನು ತುಂಬಾ ಪ್ರಭಾವಿಸಿದರು. ಅವರು ಬರೆದಿರುವ ‘ಬೈಬಲ್‌ ಆಫ್‌ ಬಾಡಿ ಬಿಲ್ಡಿಂಗ್‌’ ಪುಸ್ತಕವನ್ನು ಹಲವಾರು ಬಾರಿ ಓದಿದ್ದೇನೆ. ಆ ಪುಸ್ತಕದಲ್ಲಿನ ಟಿಪ್ಸ್‌ಗಳನ್ನು ಪಾಲಿಸುತ್ತಿದ್ದೇನೆ.

ಈ ನಡುವೆ ಆ್ಯಕ್ಷನ್‌ ದೃಶ್ಯಗಳಿರುವ ‘ರಗಡ್‌’ ಸಿನಿಮಾ ಮಾಡಲು ಮಹೇಶ್‌ಗೌಡ ಮತ್ತು ಅರುಣ್‌ ಕುಮಾರ್‌ ಅವರುದೇಹವನ್ನು ಸಿಕ್ಸ್‌ ಪ್ಯಾಕ್‌ ಅಲ್ಲ, 8 ಪ್ಯಾಕ್‌ ಹೀರೊ ಬೇಕೆಂದರು. ಇದು ನನಗೆ ಸಾಧ್ಯವಾ ಎನ್ನುವ ಅನುಮಾನ ಆರಂಭದಲ್ಲಿ ಕಾಡಿತ್ತು. ಪಾತ್ರಕ್ಕೆ ಬಯಸುತ್ತಿದ್ದ ಮೈಕಟ್ಟನ್ನು ಹೊಂದಬೇಕೆಂದಾಗ ವರ್ಕೌಟ್‌ ಶುರು ಮಾಡಿದೆ. ಇದು ಮನೆಯಲ್ಲಿ ಮಾಡಲು ಸಾಧ್ಯವಿಲ್ಲವೆಂದಾಗ, ಚೆನ್ನೈಗೆ ಹೋಗಿ ನನ್ನ ಸ್ನೇಹಿತರಾದ 1994ರಲ್ಲಿ ಮಿಸ್ಟರ್‌ ಇಂಡಿಯಾ ಕಿರೀಟ ಧರಿಸಿದ್ದ ಅರಸು ಅವರನ್ನು ಭೇಟಿ ಮಾಡಿದೆ. ಅವರಿಂದ ಸ್ವಲ್ಪ ಕಾಲ ತರಬೇತಿ ಪಡೆದೆ. ನಂತರ ಆ್ಯಪಲ್‌ ಫಿಟ್‌ನೆಸ್‌ ಸೆಂಟರ್‌ಗೆ ಹೋಗಿ, ಅಲ್ಲಿ ಪರ್ಸನಲ್‌ ಟ್ರೇನರ್‌ ಪ್ರದೀಪ್‌ ಅವರಿಂದ ಅಗತ್ಯ ತರಬೇತಿ ಪಡೆದುಕೊಂಡುದೈಹಿಕ ಕಸರತ್ತಿಗೆ ಕುದುರಿಕೊಂಡೆ.

ನಿಮ್ಮ ಪತ್ನಿ ಯಾವ ರೀತಿ ಪ್ರೋತ್ಸಾಹ ನೀಡುತ್ತಾರೆ?

ಪತ್ನಿ ಅನಿಶಾ ಅವರಿಂದ ತುಂಬಾ ಸಹಕಾರ ಮತ್ತು ಪ್ರೋತ್ಸಾಹ ಸಿಗುತ್ತಿದೆ. ವರ್ಕೌಟ್‌ಗೆ ಮಾಡುತ್ತಿರುವ ಪರಿಶ್ರಮದಿಂದಲೂ ಆಕೆ ಸ್ಫೂರ್ತಿಗೊಂಡಿದ್ದಾಳೆ. ನಾನು ಕೂಡ ಏನನ್ನಾದರೂ ಸಾಧಿಸಬೇಕು ಎನ್ನುತ್ತಾಳೆ. ಈ ರೀತಿ ಬಾಡಿ ಬಿಲ್ಡ್‌ ಮಾಡಬೇಕೆಂದಾಗ ಮಾನಸಿಕ ಮತ್ತು ನೈತಿಕ ಬೆಂಬಲ ಬೇಕಾಗುತ್ತದೆ. ನನ್ನ ಸಾಧನೆಗೆ ಆಕೆ ಬೆನ್ನೆಲುಬಿನಂತೆ ನಿಂತು, ಕಾಳಜಿ ಮಾಡುತ್ತಾಳೆ.

ಜಿಮ್‌ನಲ್ಲಿ ಎಷ್ಟೊತ್ತು ವರ್ಕೌಟ್‌ ಮಾಡ್ತೀರಿ?
ಜಿಮ್‌ಗೆ ಹೋಗುವುದಕ್ಕೂ ಮೊದಲು ಬೆಳಿಗ್ಗೆ 6 ಗಂಟೆಗೆ ಎದ್ದು ಸ್ವಿಮ್ಮಿಂಗ್‌ ಹೋಗುತ್ತಿದ್ದೆ.ಮನೆಯಲ್ಲಿ ಜಿಮ್‌ ಉಪಕರಣಗಳಿದ್ದರೂ ಪ್ರತಿ ದಿನ ಬೆಳಿಗ್ಗೆ 9 ಗಂಟೆಗೆ ಜಿಮ್‌ಗೆ ಹೋಗಿ ವರ್ಕೌಟ್‌ ಮಾಡುತ್ತಿದ್ದೆ. ಒಂದು ತಿಂಗಳ ಕಾಲ ಜಿಮ್‌ನಲ್ಲಿ ಟ್ರೇನರ್‌ನಿಂದ ತರಬೇತಿ ಪಡೆದುಕೊಂಡ ನಂತರ ಮನೆಯಲ್ಲಿಯೇ ಜಿಮ್‌ ಉಪಕರಣಗಳಿಂದ 3ರಿಂದ 4 ಗಂಟೆ ಕಸರತ್ತು ನಡೆಸುತ್ತೇನೆ.

ಏಯ್ಟ್‌ ಪ್ಯಾಕ್‌ ನಂತರ ಸಿನಿರಂಗದಲ್ಲಿ ಅವಕಾಶ ಹೆಚ್ಚಾಗಿದೆಯೇ?
ರಗಡ್‌ ಸಿನಿಮಾಕ್ಕಾಗಿ 8 ಪ್ಯಾಕ್‌ಗೆ ದೇಹ ಹುರಿಗೊಳಿಸಿರುವ ಫೋಟೊಗಳನ್ನು ಬಿಡುಗಡೆ ಮಾಡಿದಾಗಲೇ ಗಾಂಧಿನಗರದಿಂದ ನಿರ್ದೇಶಕರು ಆ್ಯಕ್ಷನ್‌ ಸಿನಿಮಾಗಳಲ್ಲಿ ನಟಿಸಲುಆಫರ್‌ ನೀಡಿದರು. ನನ್ನ ‘ಬೇರ್‌ ಬಾಡಿ’ಗೆ ಈಗ ಸಿನಿರಂಗದಲ್ಲಿಸಿಕ್ಕಾಪಟ್ಟೆ ಬೇಡಿಕೆ ಬಂದಿದೆ. ‘ರಗಡ್‌’ಗಿಂತಲೂ ಸಖತ್ತಾದ ಮೈಕಟ್ಟನ್ನು ಈಗ ಮಾಡುತ್ತಿರುವ ಹೊಸ ಸಿನಿಮಾದಲ್ಲಿ ನೋಡಬಹುದು. ಆ ಸಿನಿಮಾದ ಫೈಟ್‌ ದೃಶ್ಯವೊಂದಕ್ಕೆ ದೇಹದ ತೂಕವನ್ನು95 ಕೆ.ಜಿ.ಗೆ ಹೆಚ್ಚಿಸಿಕೊಂಡು, ಫೈಟ್‌ ದೃಶ್ಯದ ಚಿತ್ರೀಕರಣಮುಗಿಸಿದ ಮೇಲೆ ಮತ್ತೆ ತೂಕ ಇಳಿಸಿದ್ದೇನೆ. ಈಗ ಬೇರ್‌ ಬಾಡಿಗೆ ಸ್ಥಿರಗೊಳಿಸಿದ್ದೇನೆ.

‘ಬೇರ್‌ ಬಾಡಿ’ಯಿಂದಾಗಿ ನನ್ನ ಸಿನಿಮಾಗಳು ಹಿಂದಿ ರಿಮೇಕ್‌ಗೆ ₹25 ಲಕ್ಷದಿಂದ ₹50 ಲಕ್ಷದವರೆಗೂ ಹೆಚ್ಚುಮೊತ್ತಕ್ಕೆ ಮಾರಾಟವಾಗುತ್ತಿವೆ. ಅಲ್ಲದೆ, ನನ್ನ ಸಂಭಾವನೆಯೂ ಹೆಚ್ಚಾಗಿದೆ.

ನಿಮ್ಮ ಫಿಟ್‌ನೆಸ್‌ ಗುಟ್ಟೇನು
ಯಾರೆಲ್ಲ ಹೇಗೆ ವರ್ಕೌಟ್‌ ಮಾಡುತ್ತಾರೆ ಎನ್ನುವುದನ್ನು ಯೂಟ್ಯೂಬ್‌ನಲ್ಲಿ ನೋಡಿ, ಅವರನ್ನು ಅನುಕರಿಸುತ್ತಿದ್ದೆ. ಆದರೆ, ಈಗ ನಾನೇ ಸ್ವಯಂ ಪ್ರಯೋಗಕ್ಕೆ ಒಡ್ಡಿಕೊಂಡು, ದೇಹವನ್ನು ಯಾವ ರೀತಿ ಹುರಿಗೊಳಿಸಬೇಕೆಂಬ ವಿದ್ಯೆಯನ್ನೂ ಕರಗತ ಮಾಡಿಕೊಂಡಿದ್ದೇನೆ. ದೇಹ ಹುರಿಗೊಳಿಸಲು ಯಾವುದೇ ಅಡ್ಡ ದಾರಿಗಳು ಇಲ್ಲ. ಸತತ ವರ್ಕೌಟ್‌ ಮಾಡಲೇಬೇಕು. ಒಂದು ಶಿಸ್ತಿನ ಜೀವನ ರೂಢಿಸಿಕೊಂಡಿರಬೇಕು. ಜ್ವರ ಇದ್ದಾಗಲೂ ಲೆಕ್ಕಿಸದೇ ವರ್ಕೌಟ್‌ ಮಾಡುತ್ತಿದ್ದೆ. ಇದೇ ನನ್ನ ಫಿಟ್‌ನೆಸ್‌ ಗುಟ್ಟು. ಡಾ.ರಾಜ್‌ಕುಮಾರ್‌ ಅವರನ್ನು ಒಮ್ಮೆ ಫಿಲಂ ಛೇಂಬರ್‌ನಲ್ಲಿ ನಮ್ಮ ತಂದೆ ಜತೆಗೆಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಆಗ ನನ್ನನ್ನು ನೋಡಿ, ನಮ್ಮ ತಂದೆಯನ್ನು ‘ನಿಮ್ಮ ಮಗನಾ, ಏನು ಈಗಿನಿಂದಲೇ ವರ್ಕೌಟ್‌ ಮಾಡ್ತಾ ಇದ್ದಾನಾ’ ಅಂಥ ಕೇಳಿದ್ದರು. ನಮ್ಮ ತಂದೆ ಹೌದು, ನಾನೇ ಅವನಿಗೆ ಟ್ರೇನರ್‌ ಎಂದಿದ್ದರು. ಆಗ ಅಣ್ಣಾವ್ರು ‘ನಾವು ಕನ್ನಡಿ ಮುಂದೆ ನಿಂತುಕೊಂಡು ನೋಡಿಕೊಂಡರೆ ನಮ್ಮ ದೇಹ ನಮಗೆ ಸುಂದರವಾಗಿ ಕಾಣಿಸುವಂತಿರಬೇಕು. ಆಗ ಮಾತ್ರ ಬೇರೆಯವರಿಗೂ ಸುಂದರವಾಗಿ ಕಾಣಿಸುತ್ತದೆ’ಎಂದಿದ್ದರು. ಆ ಮಾತನ್ನು ಈಗಲೂ ನೆನಪಿನಲ್ಲಿಟ್ಟುಕೊಂಡು, ದೇಹವನ್ನು ವಕ್ರವಕ್ರವಾಗಿ ಬೆಳೆಯಲು ಬಿಡದೆ, ಅದನ್ನು ಶಿಸ್ತಿಗೆ ಒಳಪಡಿಸಿ ಹುರಿಗೊಳಿಸುತ್ತಲೇ ಇರುತ್ತೇನೆ.

ನಿಮ್ಮ ದೈನಂದಿನ ಆಹಾರ ಕ್ರಮವೇನು?
ದಿನಕ್ಕೆ 12 ಬಾರಿ ಆಹಾರ ಸೇವಿಸುತ್ತೇನೆ. ಅದು ಗ್ರಾಂ ಲೆಕ್ಕದಲ್ಲಿ. ಬೆಳಿಗ್ಗೆ 5.30ರಿಂದ ಇದು ಶುರುವಾಗುತ್ತದೆ. ಜಂಕ್‌ ಫುಡ್‌, ಆಯಿಲ್ ಫುಡ್‌ ಮುಟ್ಟಲ್ಲ. ಅರೆಬೆಂದ ತರಕಾರಿ, ಉಪ್ಪುಖಾರ ಇಲ್ಲದ ಚಿಕನ್‌ ತಿನ್ನುತ್ತೇನೆ. ಮೊಟ್ಟೆಯಲ್ಲಿ ಹಳದಿ ಭಾಗ ಬಿಟ್ಟು, ಬಿಳಿ ಭಾಗ ಮಾತ್ರ ಸೇವಿಸುತ್ತೇನೆ. ಆಲ್ಕೋಹಾಲ್‌ ಮತ್ತು ಸಿಗರೇಟ್‌ ಮುಟ್ಟುವುದಿಲ್ಲ.

ಯುವ ಜನರಿಗೆ ಏನು ಟಿಪ್ಸ್‌ ಕೊಡ್ತೀರಿ
ಎರಡು ತಿಂಗಳಿಗೆ ಹೊಟ್ಟೆಯ ಬೊಜ್ಜು ಕರಗಿಸುತ್ತೇವೆ, ಮೂರೇ ತಿಂಗಳಿಗೆ ಮಾಂಸಖಂಡ ಹುರಿಗೊಳಿಸುತ್ತೇವೆ ಎಂದು ಯಾರಾದರೂ ಟ್ರೇನರ್‌ ಹೇಳಿದರೆ ಅದನ್ನು ನಂಬಬೇಡಿ. ಬಾಡಿ ಬಿಲ್ಡ್‌ ಮಾಡಲು ಯಾವುದೇ ಕಾರಣಕ್ಕೂ ಸ್ಟೆರಾಯ್ಡ್‌ ಮೊರೆ ಹೋಗಬೇಡಿ. ಎಲ್ಲಕ್ಕಿಂತ ಮುಖ್ಯವಾಗಿ ಒಳ್ಳೆಯ ಟ್ರೇನರ್‌ ಮೊರೆಹೋಗಿ. ಎಲ್ಲವೂ ಗೊತ್ತೆಂಬ ಅಹಂ ಬೇಡ. ಕಲಿಕಾ ವಿದ್ಯಾರ್ಥಿಯಾಗಿ ಟ್ರೇನರ್‌ ಬಳಿ ಹೋಗಿ, ಆಗ ಯಾವುದೂ ಅಸಾಧ್ಯವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.