ADVERTISEMENT

ಗುಡ್ ನ್ಯೂಸ್ ಸಿನಿಮಾ ವಿಮರ್ಶೆ: ಕಚಗುಳಿಯೂ... ಕರ್ಚೀಫಿಗೆ ಕಣ್ಣೀರೂ...

ವಿಶಾಖ ಎನ್.
Published 27 ಡಿಸೆಂಬರ್ 2019, 12:51 IST
Last Updated 27 ಡಿಸೆಂಬರ್ 2019, 12:51 IST
’ಗುಡ್ ನ್ಯೂಸ್' ಚಿತ್ರದಲ್ಲಿ ಅಕ್ಷಯ್‌ ಕುಮಾರ್, ಕರೀನಾ, ಕಿಯಾರಾ, ದಲ್ಜೀತ್
’ಗುಡ್ ನ್ಯೂಸ್' ಚಿತ್ರದಲ್ಲಿ ಅಕ್ಷಯ್‌ ಕುಮಾರ್, ಕರೀನಾ, ಕಿಯಾರಾ, ದಲ್ಜೀತ್   

ಚಿತ್ರ: ಗುಡ್ ನ್ಯೂಸ್ (ಹಿಂದಿ)
ನಿರ್ಮಾಣ: ಹೀರೂ ಯಶ್ ಜೋಹರ್, ಕರಣ್ ಜೋಹರ್, ಅರುಣಾ ಭಾಟಿಯಾ, ಅಪೂರ್ವ ಮೆಹ್ತಾ, ಶಶಾಂಕ್ ಖೇತಾನ್
ನಿರ್ದೇಶನ: ರಾಜ್ ಮೆಹ್ತಾ
ತಾರಾಗಣ: ಅಕ್ಷಯ್ ಕುಮಾರ್, ದಲ್ಜಿತ್ ದೊಸಾಂಝ್, ಕರೀನಾ ಕಪೂರ್, ಕಿಯಾರಾ ಅಡ್ವಾಣಿ, ಟಿಸ್ಕಾ ಚೋಪ್ರಾ, ಆದಿಲ್ ಹುಸೇನ್.

ಅಕ್ಷಯ್‌ ಕುಮಾರ್ ದೇಶಭಕ್ತಿಯ ಧ್ವಜವನ್ನು ಕೆಳಗಿಟ್ಟು ನಿಂತಿದ್ದಾರೆ. ಬಣ್ಣ ಹಾಕದ ‘ಸಾಲ್ಟ್‌ ಅಂಡ್‌ ಪೆಪ್ಪರ್’ ಕೂದಲು. ಅಚ್ಚುಕಟ್ಟಾದ ಶಾರ್ಟ್‌ಕಟ್‌. ಅಷ್ಟೂ ಹಲ್ಲುಗಳನ್ನು ತೋರಿಸುತ್ತಾ ಬಿಂದಾಸ್‌ ಆಗಿ ನಗುವ ಪರಿ. ಇಂಥ ಸಣ್ಣ ಕಾರಣಗಳಿಂದಾಗಿ ಗಮನಿಸಬೇಕಾದ ಸಿನಿಮಾ ‘ಗುಡ್‌ ನ್ಯೂಸ್’.

ನಿರ್ದೇಶಕರಾಗಿ ರಾಜ್‌ ಮೆಹ್ತಾ ಅವರಿಗೆ ಇದು ಮೊದಲ ಸಿನಿಮಾ. ಅವರು ಸರಳ ದಾರಿ ಆರಿಸಿಕೊಂಡಿದ್ದಾರೆ. ಬಲವಂತವಾಗಿ ಸೃಜಿಸದ ಹಾಸ್ಯವನ್ನು ಮೊದಲರ್ಧದಲ್ಲಿ ತುಳುಕಿಸುವ ಸಿನಿಮಾ, ಎರಡನೇ ಅರ್ಧದಲ್ಲಿ ಮೆಲೋಡ್ರಾಮಾಗಳಿಂದ ತುಂಬಿಕೊಳ್ಳುತ್ತದೆ. ಕಚಗುಳಿ ಇಡಿಸಿಕೊಂಡ ಮನಸ್ಸುಗಳು ಕರ್ಚೀಫು ತೆಗೆಯುವಂತೆ ಮಾಡಲೇಬೇಕೆಂಬ ಉಮೇದು.

ADVERTISEMENT

ಇದು ಎರಡು ಬಾತ್ರಾ ಕುಟುಂಬಗಳ ಕಥೆಯ ಸಿನಿಮಾ. ಕೃತಕ ಗರ್ಭಧಾರಣೆಯಲ್ಲಿ ಆಗುವ ಯಡವಟ್ಟೇ ವಸ್ತು. ಗಂಭೀರ ಬಾತ್ರಾನಾ ವೀರ್ಯವನ್ನು ಜೋರುದನಿಯಲ್ಲಿ ಮಾತನಾಡುವ ಪಂಜಾಬಿ ಬಾತ್ರಾನ ಹೆಂಡತಿಯ ಅಂಡಾಣುಗಳಿಗೆ ಆಸ್ಪತ್ರೆಯವರು ಅಕಸ್ಮಾತ್ತಾಗಿ ಸೇರಿಸಿಬಿಡುತ್ತಾರೆ. ಆ ಪಂಜಾಬಿ ಬಾತ್ರಾನ ವೀರ್ಯ ಗಂಭೀರನ ಪತ್ನಿಯ ಅಂಡಾಣುಗಳಿಗೆ. ಇಬ್ಬರ ಹೊಟ್ಟೆಯಲ್ಲೂ ಬೆಳೆಯುವ ಕಂದಮ್ಮಗಳು ಒಂದು ಕಡೆ. ಈ ಎಡವಟ್ಟಿನ ಕಾರಣಕ್ಕೇ ಆಗುವ ಮಾನಸಿಕ ತೊಳಲಾಟಗಳು ಇನ್ನೊಂದು ಕಡೆ.

ರಾಜ್‌ ಮೆಹ್ತಾ ಚಿತ್ರಕಥೆಯನ್ನು ಸರಳವಾಗಿ ಹೆಣೆದಿದ್ದಾರೆ. ಸನ್ನಿವೇಶಗಳ ಆಧರಿಸಿದ ಹಾಸ್ಯವನ್ನು ಹೊಮ್ಮಿಸುತ್ತಲೇ ಸಿನಿಮಾ ಗಾಂಭೀರ್ಯದ ಪರಿಧಿಯೊಳಗೂ ಇರುವಂತೆ ಮಾಡಬೇಕು ಎಂಬ ಔಚಿತ್ಯಪ್ರಜ್ಞೆ ಅವರದ್ದು. ಆದರೆ, ಅದೇ ತಾವು ಹೇರಿಕೊಂಡ ಮಿತಿಯೂ ಆಗಿಬಿಡುತ್ತದೆ. ತೆಳುವಾದ ಕಥಾಎಳೆಯ ಅಸ್ಥಿಪಂಜರಕ್ಕೆ ಗಟ್ಟಿ ರಕ್ತ–ಮಾಂಸ ತುಂಬಲು ಅವರಿಗೆ ಆಗಿಲ್ಲ. ಚಿತ್ರದ ಅಂತ್ಯ ಕೂಡ ನೀರಸವಾಗಿದೆ.

ಅಕ್ಷಯ್‌ ಕುಮಾರ್ ಯಾಕೆ ನಿರ್ದೇಶಕರ ನಟ ಎನ್ನುವುದಕ್ಕೆ ಈ ಸಿನಿಮಾ ಉತ್ತಮ ಉದಾಹರಣೆ. ಆದರೆ, ಅಭಿನಯದಲ್ಲಿ ಅವರನ್ನು ದಲ್ಜೀತ್ ಹಿಂದಿಕ್ಕಿದ್ದಾರೆ. ಮುಗ್ಧತೆಯ ಪಗಡಿ ತೊಟ್ಟ ವಾಚಾಳಿ ಪಂಜಾಬಿ ಪಾತ್ರವನ್ನು ಅವರು ಅನುಭವಿಸಿದ್ದಾರೆ. ಮಲಗಿದಾಗಲೂ ಹಸನಾಗಿ ಮೇಕಪ್ ಹಚ್ಚಿಕೊಂಡ, ಒಂದು ಕೂದಲೂ ಅತ್ತಿತ್ತಲಾಗದಂತೆ ಕಾಪಾಡಿಕೊಂಡ ಕರೀನಾ ಕಪೂರ್ ಅಭಿನಯವನ್ನು ಮರೆತಂತೆ ಕಾಣುತ್ತಾರೆ. ಕಿಯಾರಾ ಅಡ್ವಾಣಿ ಪಾತ್ರ ಅಪೌಷ್ಟಿಕತೆಯಿಂದ ಸೊರಗಿದೆ. ಟಿಸ್ಕಾ ಚೋಪ್ರಾ ಅಭಿನಯ ಹದವರಿತಂತೆ ಇದೆ.

ಕಡಿಮೆ ಬಜೆಟ್‌ನ ಇಂತಹ ಸಿನಿಮಾಗಳನ್ನು ತಾರಾನಟರು ಒಪ್ಪಿಕೊಂಡು, ಆಗೀಗ ಪ್ರಭಾವಳಿಯಿಂದ ಆಚೆ ಬರುವುದು ಸ್ವಾಗತಾರ್ಹ ವಿಚಾರ. ಇದೊಂದು ಕಾರಣಕ್ಕೆ ಈ ಸಿನಿಮಾ ಮುಖ್ಯವೆನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.