ADVERTISEMENT

‘ಜಗಮೇ ತಂದಿರಂ’ ಸಿನಿಮಾ ವಿಮರ್ಶೆ: ದಿಕ್ಕೆಟ್ಟ ಗೆರೆಗಳಿಗೆ ಮಬ್ಬು ಬಣ್ಣ

ವಿಶಾಖ ಎನ್.
Published 20 ಜೂನ್ 2021, 10:28 IST
Last Updated 20 ಜೂನ್ 2021, 10:28 IST
‘ಜಗಮೇ ತಂದಿರಂ’ ಚಿತ್ರದಲ್ಲಿ ಧನುಷ್
‘ಜಗಮೇ ತಂದಿರಂ’ ಚಿತ್ರದಲ್ಲಿ ಧನುಷ್   

ಚಿತ್ರ: ಜಗಮೇ ತಂದಿರಂ (ತಮಿಳು)

ನಿರ್ಮಾಣ: ಎಸ್.ಶಶಿಕಾಂತ್, ಚಕ್ರವರ್ತಿ, ರಾಮಚಂದ್ರ

ನಿರ್ದೆಶಕ: ಕಾರ್ತಿಕ್ ಸುಬ್ಬರಾಜ್

ADVERTISEMENT

ತಾರಾಗಣ: ಧನುಷ್, ಐಶ್ವರ್ಯ ಲಕ್ಷ್ಮೀ, ಜೋಜು ಜಾರ್ಜ್, ಜೇಮ್ಸ್ ಕಾಸ್ಮೊ, ಕಲೈಅರಸನ್, ಗಜರಾಜ್

ಮಧುರೈನಲ್ಲಿ ಚಲಿಸುವ ರೈಲನ್ನು ನಿಲ್ಲಿಸಿ, ಒಳಹೊಕ್ಕು, ಗುಂಡು ಹಾರಿಸಿ ಸೇಟು ಯುವಕನನ್ನು ಕೊಂದು ಸಲೀಸಾಗಿ ಹೊರಬರುವ ನಾಯಕ ಸ್ವಲ್ಪವೇ ಹೊತ್ತಿನ ನಂತರ ತನ್ನ ಹೋಟೆಲ್‌ನಲ್ಲಿ ಪರೋಠಾ ಮಾಡಬಲ್ಲ. ಇಲ್ಲಿನ ಪೊಲೀಸರಿಂದ ತಪ್ಪಿಸಿಕೊಳ್ಳಲು ಇಂಗ್ಲೆಂಡ್‌ಗೆ ಹೋಗಿ, ಅಲ್ಲಿಯೂ ಬಂದೂಕಿನಾಟ ಆಡಬಲ್ಲ. ‘ಆನೆ ನಡೆದದ್ದೇ ದಾರಿ’ ಎನ್ನುವಂತೆ ಈ ನಾಯಕನ ಅಟಾಟೋಪಕ್ಕೆ ಯಾರದೇ ತಡೆಯಿಲ್ಲ. ಹಣಕ್ಕಾಗಿ ಏನು ಮಾಡಲೂ ಹೇಸದವನು. ಇಂಗ್ಲೆಂಡಿನಂಥ ನೆಲದಲ್ಲೂ ಅವನಿರುವ ಪಾಪಿಗಳ ಲೋಕಕ್ಕೆ ಒಬ್ಬೇ ಒಬ್ಬ ಪೊಲೀಸ್ ಕೂಡ ಕಾಲಿಡುವುದಿಲ್ಲ.

ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಸಿನಿಮೀಯ ತರ್ಕಗಳನ್ನೆಲ್ಲ ಚಿಂದಿ ಮಾಡಿದ್ದಾರೆ. ವಲಸಿಗರ, ತಮಿಳು ನಿರಾಶ್ರಿತರ ಸಮಸ್ಯೆಗಳ ತೆಳು ಬಣ್ಣವನ್ನು ದುರ್ಬಲ ಚಿತ್ರಕಥಾ ರೇಖೆಗಳಿಗೆ ಬಳಿಯುವ ಅವರ ಉಮೇದು ಅತಿ ಬರವಣಿಗೆಯಲ್ಲಿ ಸೊರಗಿದೆ. ಚರ್ವಿತ ಚರ್ವಣ ಗ್ಯಾಂಗ್‌ಸ್ಟರ್ ಕಥೆಯೊಂದನ್ನು ಮತ್ತೊಮ್ಮೆ ನೋಡಿದ ಭಾವ ಮಿದುಳಿನಲ್ಲಿ ಉಳಿಯಲು ಇದುವೇ ಕಾರಣ.

‘ಜಿಗರ್‌ಥಂಡಾ’ ಹಾಗೂ ‘ಪೆಟ್ಟಾ’ ತಮಿಳು ಚಿತ್ರಗಳಲ್ಲಿ ಕಾರ್ತಿಕ್‌ಗೆ ತಮ್ಮತನದ ರುಜು ಹಾಕಲು ಸಾಧ್ಯವಾಗಿತ್ತು. ಅಲ್ಲಿನ ಊಹಾತೀತವಾದ ಪಾತ್ರ ಪೋಷಣೆಗಳು, ರೌಡಿ ಜಗತ್ತಿನಲ್ಲಿಯೂ ಕಟ್ಟಿಕೊಡಬಹುದಾದ ಹಾಸ್ಯ, ವ್ಯಂಗ್ಯ, ಸ್ಟೈಲೈಸ್ಡ್‌ ನಿರೂಪಣೆ ಅವರ ಕೈಹಿಡಿದಿದ್ದವು. ‘ಜಗಮೇ ತಂದಿರಂ’ನಲ್ಲಿ ಅವರು ಫಾರ್ಮ್ ಕಳೆದುಕೊಂಡಿದ್ದಾರೆ. ಈಲಂ ತಮಿಳರ ಸಮಸ್ಯೆಗಳು ಈ ನಿರ್ದೇಶಕರನ್ನು ಕಾಡುತ್ತಿರುವುದಕ್ಕೆ ಅವರ ಹಿಂದಿನ ಚಿತ್ರಗಳಲ್ಲೂ ಎಳೆಗಳು ಕಂಡಿದ್ದವು. ಈ ಚಿತ್ರದಲ್ಲಿಯೂ ಅವು ಕೆಲಸ ಮಾಡಿವೆ. ಪ್ರಭಾವಳಿಯಲ್ಲಿಕ್ಕಿದ ನಾಯಕನ ಕೈಗೆ ಸಮಸ್ಯೆಗಳ ಪರಿಹರಿಸುವ ಹತಾರ ಕೊಟ್ಟು, ಸೇಡಿನಾಟಕ್ಕೆ ಹಚ್ಚುವ ಹಳೆ ಜಾಡಿಗೇ ಸಿನಿಮಾವನ್ನು ನಿರ್ದೇಶಕರು ಜಾರಿಸಿಬಿಟ್ಟಿದ್ದಾರೆ.

ಚಿತ್ರದ ಮೊದಲರ್ಧ ವಿಡಿಯೊ ಗೇಮ್ ನೋಡಿದಂತೆ ಭಾಸವಾಗುತ್ತದೆ. ಎರಡನೇ ಅರ್ಧದಲ್ಲಿ ನಾಯಕಿಯ ಫ್ಲ್ಯಾಷ್‌ಬ್ಯಾಕ್‌ನ ಕರುಣಾಜನಕ ಕಥನದಲ್ಲಿರುವುದು ಜೀರ್ಣಿಸಿಕೊಳ್ಳಲಾರದಷ್ಟು ಮೆಲೊಡ್ರಾಮಾ. ಗಂಭೀರ ಸಮಸ್ಯೆಗಳನ್ನೆಲ್ಲ ಸರಳೀಕರಿಸಿ, ಅವುಗಳ ಅರಿವೇ ಇಲ್ಲದಂತಿರುವ ನಾಯಕನ ಕೈಗೊಪ್ಪಿಸುವುದು ಚಿತ್ರಕಥೆಯ ಎರಕಕ್ಕೆ ಪೂರಕವಾಗಿಲ್ಲ.

ಶ್ರೇಯಸ್‌ ಕೃಷ್ಣ ಸಿನಿಮಾಟೊಗ್ರಫಿಯಲ್ಲಿ ಕೆಲವು ಗಮನಾರ್ಹ ‘ಆಟ’ಗಳಿವೆ. ಇಂಗ್ಲೆಂಡ್‌ನ ಬಿಳಿ ಖಳ ಹಾಗೂ ತಮಿಳು ಖಳ ಮುಖಾಮುಖಿಯಾಗುವ ಮಹತ್ವದ ದೃಶ್ಯವಿದೆ. ಬಿಳಿ ಖಳನ ಹಿಂದೆ ಧನುಷ್‌ ನಿಲ್ಲುವ ದೃಶ್ಯವನ್ನು 360 ಡಿಗ್ರಿ ಕ್ಯಾಮೆರಾ ಕಣ್ಣನ್ನು ತಿರುಗಿಸುತ್ತಾ ತೋರಿಸಿರುವುದು ಅದಕ್ಕೆ ಒಂದು ಉದಾಹರಣೆ. ಧನುಷ್ ಎದುರು ರೈಲು ನಿಂತು, ಅದರೊಳಗೆ ನಿರ್ಭಿಡೆಯಿಂದ ನುಗ್ಗಿ ಹತ್ಯೆಗೈಯುವ ದೃಶ್ಯದ ಸಂಯೋಜನೆ ಇನ್ನೊಂದು. ಸಂತೋಷ್ ನಾರಾಯಣನ್ ಹಿನ್ನೆಲೆ ಸಂಗೀತ ಹಾಗೂ ‘ರಕಿಟ ರಕಿಟ’ ಹಾಡಿನ ಲಯ ತಮಿಳುತನಕ್ಕೆ ಪೂರಕವಾಗಿವೆ.

ಧನುಷ್ ಈ ಪಾತ್ರಕ್ಕೂ ಜೀವ ತುಂಬಿದ್ದಾರೆ. ತಮಿಳು ಡಾನ್ ಪಾತ್ರದಲ್ಲಿ ಜೋಜು ಜಾರ್ಜ್ ಅಭಿನಯ ತೂಕದ್ದು. ಜೇಮ್ಸ್ ಕಾಸ್ಮೊ ಆಗೀಗ ಕಾರ್ಟೂನ್ ಪಾತ್ರದಂತೆ ವರ್ತಿಸಿದ್ದಾರೆ. ನಾಯಕಿ ಐಶ್ವರ್ಯ ಲಕ್ಷ್ಮೀ ಮಂಕೆನಿಸುತ್ತಾರೆ.

ನಿರ್ದೇಶಕ ಕಾರ್ತಿಕ್ ತಂದೆ ಗಜರಾಜ್ ಚಿತ್ರದಲ್ಲಿ ಬಹಳ ಮುಖ್ಯವಾದ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಎರಡು ದಶಕ ಅಲೆದಾಡಿದರೂ ತನ್ನದೆನ್ನುವ ದೇಶ–ನೆಲೆಯನ್ನೇ ಕಾಣದ ಪ್ರೀತಿಭರಿತ ಜೀವ ಅದು. ‘ಹಲವು ದೇಶಗಳ ತಟ್ಟೆಗಳನ್ನು ನಾನು ತೊಳೆದಿದ್ದೇನೆ. ಒಂದೊಂದು ತಟ್ಟೆಯೂ ಒಂದೊಂದು ಕಥೆ ಹೇಳುತ್ತದೆ’ ಎನ್ನುವ ಅವರ ಪಾತ್ರದ ಬರವಣಿಗೆಯ ಒರತೆ ಇಡೀ ಚಿತ್ರದಲ್ಲಿ ಪ್ರವಹಿಸಿದ್ದಿದ್ದರೆ ಚೆನ್ನಾಗಿತ್ತು.

ಕ್ಯಾನ್ವಾಸ್‌ ಮೇಲೆ ಅತಿಗೆರೆಗಳನ್ನು ಮೂಡಿಸಿ, ವಿಪರೀತ ಬಣ್ಣ ಹಚ್ಚಿದರೆ ಅದು ಒಳ್ಳೆಯ ‘ಅಬ್‌ಸ್ಟ್ರಾಕ್ಟ್‌’ ಆಗಲಾರದು. ಇದು ಈ ಚಿತ್ರಕ್ಕೂ ಅನ್ವಯಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.