ADVERTISEMENT

ಛಪಾಕ್ ವಿಮರ್ಶೆ: ಮನಕಲಕುವ ‘ಸಿನಿಶಬ್ದ'

ವಿಶಾಖ ಎನ್.
Published 10 ಜನವರಿ 2020, 18:16 IST
Last Updated 10 ಜನವರಿ 2020, 18:16 IST
‘ಚಪಾಕ್’ ಚಿತ್ರದಲ್ಲಿ ದೀಪಿಕಾ ಪಡುಕೋಣೆ
‘ಚಪಾಕ್’ ಚಿತ್ರದಲ್ಲಿ ದೀಪಿಕಾ ಪಡುಕೋಣೆ   

ಚಿತ್ರ: ಛಪಾಕ್ (ಹಿಂದಿ)
ನಿರ್ಮಾಣ: ಫಾಕ್ಸ್‌ಸ್ಟಾರ್ ಸ್ಟುಡಿಯೋಸ್, ದೀಪಿಕಾ ಪಡುಕೋಣೆ, ಮೇಘನಾ ಗುಲ್ಜಾರ್, ಗೋವಿಂದ್ ಸಿಂಗ್ ಸಂಧು
ನಿರ್ದೇಶನ: ಮೇಘನಾ ಗುಲ್ಜಾರ್
ತಾರಾಗಣ: ದೀಪಿಕಾ ಪಡುಕೋಣೆ, ವಿಕ್ರಾಂತ್ ಮೈಸಿ, ಮಧುರ್ಜಿತ್ ಸರ್ಘಿ, ಆನಂದ್ ತಿವಾರಿ, ಪಾಯಲ್ ನಾಯರ್, ವಿಶಾಲ್ ದಹಿಯಾ

‘ಛಪಾಕ್’ ಎಂಬ ಹಿಂದಿ ಪದದ ಅರ್ಥ–ನೀರಿನೊಳಗೆ ಹೆಚ್ಚೇನೂ ಭಾರವಲ್ಲದ ವಸ್ತುವನ್ನು ಎಸೆದಾಗ ಮೂಡುವ ‘ಪಳಪ್’ ಎಂಬ ಶಬ್ದ. ಆ ಶಬ್ದ ಕಿವಿಗೇನೋ ಇಂಪು. ಆದರೆ, ತಿಳಿಗೊಳದಲ್ಲಿ ಏಳುವ ಸಣ್ಣ ಅಲೆಗಳಲ್ಲಿನ ಪ್ರತಿಬಿಂಬ ಚೂರುಚೂರು. ‘ಛಪಾಕ್’ ಚಿತ್ರದ ನಾಯಕಿಯ ಬದುಕೂ ಹೀಗೆಯೇ. ಚಿಂದಿಯಾಗುವ ಅವಳ ಬದುಕಿನ ಮನಕಲಕುವ ಕಥನವೇ ಸಿನಿಮಾದ ವಸ್ತು.

ಆಸಿಡ್‌ ದಾಳಿಗೆ ಒಳಗಾಗಿ, ಕಾನೂನು ಹೋರಾಟ ಮಾಡಿ, ದಿಟ್ಟತನದಿಂದ ಬದುಕು ಕಟ್ಟಿಕೊಂಡ ಲಕ್ಷ್ಮೀ ಅಗರ್ವಾಲ್ ಬದುಕಿನ ನಿಜಕಥೆಯನ್ನು ನಿರ್ದೇಶಕಿ ಮೇಘನಾ ಗುಲ್ಜಾರ್ ಸಿನಿಮಾ ಆಗಿಸಿದ್ದಾರೆ. ಸಿನಿಮೀಯ ಶಿಲ್ಪಕ್ಕಾಗಿ ಅವರು ಕಲ್ಪನೆಯ ಪುಕ್ಕಗಳನ್ನು ಜೋಡಿಸಿದ್ದಾರಷ್ಟೆ. ಎಲ್ಲೂ ಸಾವಧಾನ ಮುಕ್ಕಾಗಿಲ್ಲ.

ADVERTISEMENT

ಆಸಿಡ್ ದಾಳಿಗೆ ಒಳಗಾಗುವ ಹತ್ತೊಂಬತ್ತರ ಸುಂದರ ತರುಣಿ ಸುದೀರ್ಘ ಕಾನೂನು ಹೋರಾಟ ನಡೆಸುವ, ಏಳು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿ ನವೆಯುವ, ಪದೇಪದೇ ಪುಟಿದೇಳುವ ಕೌಟುಂಬಿಕ ಹೋರಾಟದ ಭಾವಸೂಕ್ಷ್ಮಗಳನ್ನು ಮೇಘನಾ ಮನಮಿಡಿಯುವಂತೆ ಹಿಡಿದಿಟ್ಟಿದ್ದಾರೆ. ಆಸಿಡ್‌ ಎರಚಿದವನು ಮುಸ್ಲಿಂ ಯುವಕ. ಆತನ ಹೆಸರನ್ನು ಹಿಂದೂ ಧರ್ಮೀಯ ಎಂಬಂತೆ ಬದಲಿಸಲಾಗದೆ ಎಂದು ಕೆಲವರು ತಕರಾರು ತೆಗೆದಿದ್ದರು. ಆದರೆ, ನಿರ್ದೇಶಕಿ ಈ ವಿಷಯದಲ್ಲಿ ವಸ್ತುನಿಷ್ಠರಾಗಿದ್ದಾರೆ. ಚಿತ್ರದಲ್ಲಿ ಅಪರಾಧಿಯು ಮುಸ್ಲಿಂ ಧರ್ಮೀಯನೇ ಹೌದು.

ಎರಡು ತಾಸಿಗಿಂತ ಕೆಲವು ನಿಮಿಷವಷ್ಟೇ ಹೆಚ್ಚಾಗಿರುವ ಸಿನಿಮಾದಲ್ಲಿ ಆರೋಗ್ಯಕರ ಮನರಂಜನೆಯ ಅಂಶಗಳೂ ಇವೆ. ಅವು ಪಾತ್ರಪೋಷಣೆಯ ಪ್ರಜ್ಞೆಯ ಚೌಕಟ್ಟನ್ನು ದಾಟದಿರುವುದು ಗಮನಾರ್ಹ. ಮಾಮೂಲಿ ಜನಪ್ರಿಯ ಶೈಲಿಯ ಸಿನಿಮಾ ಆಗಿಸುವ ಸಾಧ್ಯತೆ ಇಲ್ಲೂ ಇತ್ತು. ದೀಪಿಕಾ ಪಡುಕೋಣೆ ಸುಂದರ ವದನ ಇಟ್ಟುಕೊಂಡೇ ಇನ್ನೂ ಅರ್ಧ ಗಂಟೆಯಷ್ಟು ದೃಶ್ಯಗಳನ್ನು ಅವರು ಪೋಣಿಸಬಹುದಿತ್ತು. ಹಾಗೆ ಮಾಡದೇ ಇರುವುದು ಔಚಿತ್ಯಕ್ಕೆ ಹಿಡಿದ ಕನ್ನಡಿ.

‘ತಲ್ವಾರ್‌’ ಹಿಂದಿ ಚಿತ್ರದಂತೆ ಇದರಲ್ಲೂ ಅನನುಕ್ರಮಣಿಕೆಯ ನಿರೂಪಣಾ ತಂತ್ರವಿದೆ. ಆದರೆ, ಅದು ಆ ಸಿನಿಮಾದಷ್ಟು ಗಟ್ಟಿಯಾಗಿಲ್ಲ.

ದೀಪಿಕಾ ಪಡುಕೋಣೆ ಚಿತ್ರದಲ್ಲಿ ಎಲ್ಲೂ ಗ್ಲಾಮರಸ್ ಆಗಿಲ್ಲ. ಪಾತ್ರವೇ ಅವರಾಗಿ ಜೀವಿಸಿದ್ದಾರೆ. ಸುಟ್ಟ ಮುಖದ ಪದರಗಳಲ್ಲಿ ಅಡಗಿದ ನೋವನ್ನು ಕಣ್ಣಲ್ಲಿ ದಾಟಿಸುತ್ತಲೇ, ತುಟಿಯ ಮೇಲೊಂದು ಆತ್ಮವಿಶ್ವಾಸದ ನಗುವಿನ ರುಜು ಹಾಕುತ್ತಾರೆ. ಆ ನಗು ನಾಯಕಿಯ ಹೋರಾಟಭಾವದ ಗಟ್ಟಿ ರೂಪಕದಂತೆ ಚಿತ್ರದುದ್ದಕ್ಕೂ ವ್ಯಕ್ತವಾಗುತ್ತಾ ಕಣ್ಣಾಲಿಗಳಲ್ಲಿ ನೀರು ತರಿಸುತ್ತದೆ. ಎನ್‌ಜಿಒ ಮುಖ್ಯಸ್ಥನಾಗಿವಿಕ್ರಾಂತ್ ಮೈಸಿ ಅವರದ್ದು ತಣ್ಣಗಿನ, ಮನತಟ್ಟುವ ಅಭಿನಯ.

ಒಬ್ಬ ಕೆಟ್ಟಮನಸ್ಸಿನವನಿಂದ ಯಾತನೆ ಅನುಭವಿಸುವ ನಾಯಕಿಯ ಸುತ್ತಲಿನ ಉಳಿದೆಲ್ಲ ಪಾತ್ರಗಳನ್ನೂ ಒಳ್ಳೆಯತನದಲ್ಲಿ ಅದ್ದಿ ತೆಗೆಯುವ ನಿರ್ದೇಶಕಿಯ ಆಶಾಭಾವ ಶ್ಲಾಘನೀಯ.

ಜನಪ್ರಿಯ ನಟಿ ಹೀಗೆ ಪ್ರಭಾವಳಿಯಿಂದ ಆಚೆ ಬಂದು, ಆಗೀಗ ಇಂತಹ ಸಿನಿಮಾಗಳಲ್ಲಿ ಭಾಗಿಯಾಗುವುದನ್ನು ಸಹೃದಯರು ಮೆಚ್ಚಲೇಬೇಕು. ಸಿನಿಮಾ ಮುಗಿದ ಮೇಲೆ ‘ಪಳಪ್’ ಎಂಬ ಎದೆಕಲಕುವ ದನಿಯೊಂದು ಉಳಿದೇ ಇರುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.