ADVERTISEMENT

ಪೊಗರು ಚಿತ್ರ ವಿಮರ್ಶೆ: ನಂದ ಕಿಶೋರ್ ಮೇಡ್ ಎಕ್ಲೇರ್ಸ್!

ವಿಶಾಖ ಎನ್.
Published 19 ಫೆಬ್ರುವರಿ 2021, 10:19 IST
Last Updated 19 ಫೆಬ್ರುವರಿ 2021, 10:19 IST
ಪೊಗರು ಚಿತ್ರದ ಸನ್ನಿವೇಶವೊಂದರಲ್ಲಿ ಧ್ರುವ ಸರ್ಜಾ
ಪೊಗರು ಚಿತ್ರದ ಸನ್ನಿವೇಶವೊಂದರಲ್ಲಿ ಧ್ರುವ ಸರ್ಜಾ   

ಚಿತ್ರ: ಪೊಗರು (ಕನ್ನಡ)

ನಿರ್ಮಾಣ: ಬಿ.ಕೆ. ಗಂಗಾಧರ್

ನಿರ್ದೇಶನ: ನಂದ ಕಿಶೋರ್

ADVERTISEMENT

ತಾರಾಗಣ: ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ, ಪವಿತ್ರಾ ಲೋಕೇಶ್, ರವಿಶಂಕರ್, ಚಿಕ್ಕಣ್ಣ, ಧನಂಜಯ, ರಾಘವೇಂದ್ರ ರಾಜ್‌ಕುಮಾರ್, ಸಂಪತ್ ರಾಜ್, ಮಯೂರಿ.

‘ನನ್ನ ತೋಳಷ್ಟಿದೀಯ...ಎಷ್ಟು ಮಾತಾಡ್ತೀಯ...ಇಂಗ್ಲಿಷ್‌ಗೆ ಹುಟ್ಟಿದೋಳೆ...’ ನಾಯಕ ಹೀಗೊಂದು ಡೈಲಾಗು ಹಾಗೂ ಪಟಾಕಿ ಎರಡನ್ನೂ ಒಟ್ಟೊಟ್ಟಿಗೆ ಬಿಸಾಕಿದಾಗ ಶಿಳ್ಳೆ. ಕ್ಯಾಮೆರಾ ಕಣ್ಣು ಮೊದಲು ನಾಯಕನ ತೋಳನ್ನೇ ನೋಡುವುದು. ಆಮೇಲೆ ಕಿವಿಯೊಳಕ್ಕೆ ಇಳಿಯುವುದು ಉದ್ದುದ್ದ ಡೈಲಾಗು. ಮಾತು ಹೊಮ್ಮಬೇಕು, ಆಗೀಗ ಹೊಡೆದಾಟ ಚಿಮ್ಮಬೇಕು. ಸೆಂಟಿಮೆಂಟಿನ ಕವಚದೊಳಗೆ ಮನರಂಜನೆಯ ಚಾಕೊಲೇಟು–ಇದೊಂಥರಾ ‘ನಂದ ಕಿಶೋರ್ ಮೇಡ್ ಎಕ್ಲೇರ್ಸ್’. ಹ್ಯಾಪಿ ಹಾರ್ಮೋನ್ ಬಿಡುಗಡೆಗೆ ಹೇಳಿಮಾಡಿಸಿದ ತಂತ್ರ.

ತೆಲುಗಿನಲ್ಲಿ ಇಂತಹ ಸೆಂಟಿಮೆಂಟು–ಆ್ಯಕ್ಷನ್‌ನ ಸ್ಯಾಂಡ್‌ವಿಚ್‌ ಸವಿಯುತ್ತಿರುತ್ತೇವೆ. ಅದನ್ನು ಕನ್ನಡದಲ್ಲಿ ಅದ್ದೂರಿಯಾಗಿಯೇ ತೆರೆಮೇಲೆ ತಂದಿರುವುದರಲ್ಲಿ ಸಿನಿಮೀಯ ಜಾಣ್ಮೆಯಿದೆ.

ತಾಯಿಪ್ರೀತಿಗಾಗಿ ಹಂಬಲಿಸುವ ನಾಯಕನದು ಕದಡಿದ ಬಾಲ್ಯ. ತಂದೆ ಅಗಲಿದ ವಿಷಯವೂ ಗೊತ್ತಿಲ್ಲದ ನತದೃಷ್ಟ. ಅವ್ವನಿದ್ದೂ ದೂರವಾಗಿ ಬೆಳೆಯುವ ಅವನು ಒಂಥರಾ ನಾಡಿನಲ್ಲಿನ ಕಾಡಿನ ಮನುಷ್ಯನಾಗಿಬಿಡುತ್ತಾನೆ. ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ ಎಂದು ನಾವೆಲ್ಲ ಅಂದುಕೊಂಡೇ ಗಡ್ಡ–ಮೀಸೆಯೊಳಗಿನ ಧ್ರುವ ಸರ್ಜಾ ಅವರನ್ನು ನೋಡಬೇಕು. ಅವರ ಹೊಡೆದಾಟ ನೋಡಿ ಕಣ್ಣರಳಿಸಬೇಕು. ನಗೆಚಟಾಕಿ ಹಾರಿಸಿದಾಗ ಕುರ್ಚಿಯ ಮೇಲೆ ಒಂದಿಷ್ಟು ಅಲುಗಾಡಬೇಕು. ಕೊನೆಯಲ್ಲಿ ಉಗ್ರಸ್ವರೂಪಿಗಳಾದ ವಿದೇಶಿ ಬಾಡಿಬಿಲ್ಡರ್‌ಗಳ ಅಲೆಯಂಥ ಸ್ನಾಯುಗಳ ನಾಯಕ ಹೊಸಕಿಹಾಕುವ ಕದನ ಕುತೂಹಲಕ್ಕೆ ಬಾಯಿ ತೆರೆಯಬೇಕು.

ಇಡೀ ಚಿತ್ರಕ್ಕೆ ಲಯ, ನಾಯಕನ ಪಾತ್ರದ ಅತಿರೇಕಕ್ಕೆ ಸಿನಿಮೀಯ ತರ್ಕವಿದೆ. ಗೂಳಿಯಂತೆ ಅವನು ನುಗ್ಗುವಾಗಲೇ ದಿಢೀರನೆ ಅಮ್ಮನೆಂಬ ಮೂಗುದಾರ. ಹುಚ್ಚುಹುಚ್ಚಾಗಿ ಆಡುವಾಗ ಎದುರಲ್ಲಿ ನಾಯಕಿಯ ಚೂಡಿದಾರ. ಚಿಕ್ಕಣ್ಣ ಕಾಮಿಡಿ ಟೈಮಿಂಗಿನಲ್ಲೂ ನಾಯಕನದ್ದೇ ವಗ್ಗರಣೆ. ನಾಯಕಿಯ ಪ್ರತಿಸಂಭಾಷಣೆಗೂ ಅವನದ್ದೇ ಮಸಾಲೆ. ಧನಂಜಯ, ಸಂಪತ್ ರಾಜ್ ರೂಪದಲ್ಲಿ ಕಡುಖಳರ ಘಾಟು. ಇವೆಲ್ಲಕ್ಕೂ ಕವಚದಂತೆ ತಂಗಿ ಸೆಂಟಿಮೆಂಟು.

ತೆರೆಮೇಲೆ ಕಣ್ಣು ಕೀಲಿಸಿಕೊಳ್ಳುವ ಅಷ್ಟೂ ಲಕ್ಷಣಗಳು ‘ಪೊಗರು’ ಚಿತ್ರಕ್ಕೆ ಇವೆ. ಧ್ರುವ ಸರ್ಜಾ ತಮ್ಮ ದೇಹಾಕಾರವನ್ನು ಬದಲಿಸಿಕೊಂಡಿರುವ ಶ್ರದ್ಧೆಗೆ ಹೆಚ್ಚೇ ಅಂಕ ಸಲ್ಲಬೇಕು. ‘ಕಾಮನಬಿಲ್ಲು’ ಸಿನಿಮಾದಲ್ಲಿ ಅಣ್ಣಾವ್ರು ಹೊಟ್ಟೆಯ ಸ್ನಾಯುಗಳನ್ನು ತಿರುಗಿಸಿದ್ದರಲ್ಲ; ಅದನ್ನು ಈ ಚಿತ್ರದಲ್ಲೂ ಧ್ರುವ ಮಾಡಿದ್ದಾರೆ. ತಮ್ಮ ಮಿತಿಯನ್ನೇ ಅರಿತು, ಮೇಕಪ್ ಇಲ್ಲದೆ, ಬಂಡೆಯಂಥ ದೇಹವನ್ನೂ ಬಳುಕಿಸುತ್ತಾ ನೃತ್ಯ ಮಾಡುವ ಅವರ ಆತ್ಮವಿಶ್ವಾಸ ಮೆಚ್ಚಬೇಕು. ರಶ್ಮಿಕಾ ಮಂದಣ್ಣ ಸುಂದರ ವದನ ಚಿತ್ರಕ್ಕೆ ರಿಲೀಫ್. ಅಮ್ಮನಾಗಿ ಪವಿತ್ರಾ ಲೋಕೇಶ್, ಅಪ್ಪನಾಗಿ ರವಿಶಂಕರ್ ಅಭಿನಯದ ಹದವರಿತದ್ದು. ರಾಘವೇಂದ್ರ ರಾಜ್‌ಕುಮಾರ್‌ ಅವರಿಗೂ ತೂಕದ ಪಾತ್ರವಿದೆ. ತಮಿಳಿನ ಸಿನಿಮಾಟೊಗ್ರಫರ್ ವಿಜಯ್ ಮಿಲ್ಟನ್ ಫೋಕಸ್ ಪಾಯಿಂಟ್‌ಗಳು ದೃಶ್ಯತೀವ್ರತೆಯನ್ನು ಹೆಚ್ಚುಗೊಳಿಸಿವೆ. ಚಂದನ್ ಶೆಟ್ಟಿಯ ‘ಪೆಪ್ಪಿ ನಂಬರ್‌’ಗಳಿಗೆ ಕಾಲುಗಳನ್ನು ಆಡಿಸಲಡ್ಡಿಯಿಲ್ಲ. ಹಿನ್ನೆಲೆ ಸಂಗೀತದಲ್ಲೂ ಅವರ ಪ್ರತಿಭೆಗೆ ಸಾಕ್ಷಿಗಳಿವೆ.

ಸುದೀರ್ಘಾವಧಿ ನಂತರ ಬದಲಾದ ಧ್ರುವ ಸರ್ಜಾ ಅವರನ್ನು ತೆರೆಮೇಲೆ ನೋಡುವ ಅಭಿಮಾನಿಗಳ ಕಣ್ಣಿಗೆ ಈ ಚಿತ್ರ ಹಬ್ಬ. ಕೆಲವು ನಿಜತರ್ಕಗಳನ್ನು ಬದಿಗಿಡಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.