ADVERTISEMENT

‘ದಿಲ್ ಬೇಚಾರಾ’ ಸಿನಿಮಾ ವಿಮರ್ಶೆ: ಸುಶಾಂತ್ ನೆನಪಿಗೆ ಚೌಕಟ್ಟು

ವಿಶಾಖ ಎನ್.
Published 26 ಜುಲೈ 2020, 9:16 IST
Last Updated 26 ಜುಲೈ 2020, 9:16 IST
ಸುಶಾಂತ್, ಸಂಜನಾ
ಸುಶಾಂತ್, ಸಂಜನಾ   

ಚಿತ್ರ: ದಿಲ್ ಬೇಚಾರಾ (ಹಿಂದಿ)
ನಿರ್ಮಾಣ: ಫಾಕ್ಸ್‌ ಸ್ಟಾರ್‌ ಸ್ಟುಡಿಯೋಸ್
ನಿರ್ದೇಶನ: ಮುಖೇಶ್ ಛಾಬ್ರಾ
ತಾರಾಗಣ: ಸುಶಾಂತ್ ಸಿಂಗ್ ರಜಪೂತ್, ಸಂಜನಾ ಸಂಘಿ, ಸಾಹಿಲ್, ಸ್ವಸ್ತಿಕಾ ಮುಖರ್ಜಿ, ಸುಬ್ಬಲಕ್ಷ್ಮಿ.

ಸಾವಿನ ನೆರಳಲ್ಲಿ ಬದುಕಿನ ಗಂಧ ಆಘ್ರಾಣಿಸುವ ಘನಮನಗಳ ಸಿನಿಮಾ ಭಾವುಕತೆಯದ್ದು. ‘ದಿಲ್‌ ಬೇಚಾರಾ’ ಈ ಕಾರಣಕ್ಕಷ್ಟೇ ಅಲ್ಲದೆ, ಇತ್ತೀಚೆಗಷ್ಟೇ ಅಗಲಿದ ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ ಕೊನೆಯ ಹಿಂದಿ ಸಿನಿನೆನಪಾಗಿಯೂ ಭಾವುಕವಾದುದೇ.
ಎರಡೂ ತುಟಿಗಳನ್ನು ಹೊಲೆದಂತೆ ಮಾಡಿಕೊಂಡು, ಕಂಗಳಲ್ಲಿ ಆಡದೇ ಇರುವ ಮಾತುಗಳನ್ನು ಮಡಚಿಟ್ಟುಕೊಂಡಂತೆ ನಿಲ್ಲುವ ಸುಶಾಂತ್. ಎ.ಆರ್. ರೆಹಮಾನ್ ಲಯಸಂಗೀತಕ್ಕೆ ಲೀಲಾಜಾಲವಾಗಿ ಹೆಜ್ಜೆ ಹಾಕುವ ಸುಶಾಂತ್. ಆತ್ಮಹತ್ಯೆಯ ಕುರಿತ ಸಂಭಾಷಣೆಯೊಂದು ಹೊಮ್ಮುವಾಗ ಬಿಟ್ಟೂಬಿಡದೇ ಕಾಡುವ ಸುಶಾಂತ್... ಹೀಗೆ ಇಡೀ ಸಿನಿಮಾ ಒಂದು ಬಗೆಯಲ್ಲಿ ಈ ನಟನ ಸ್ಮರಣಾ ಕೃತಿಯ ಚೌಕಟ್ಟನ್ನು ಪಡೆದುಕೊಂಡುಬಿಡುತ್ತದೆ.

ಜಾನ್ ಗ್ರೀನ್ ಬರೆದ ‘ದಿ ಫಾಲ್ಟ್‌ ಇನ್ ಅವರ್‌ ಸ್ಟಾರ್ಸ್’ ಕಾದಂಬರಿಯು ಅದೇ ಹೆಸರಿನಲ್ಲಿ ಇಂಗ್ಲಿಷ್ ಸಿನಿಮಾ ಆಗಿ ಜನಮನ ಗೆದ್ದಿತ್ತು. ಎರಡು ತಾಸಿನ ಆ ಸಿನಿಮಾದ ಕಥೆಯನ್ನೇ ನಿರ್ದೇಶಕನಾಗಿ ತಮ್ಮ ರಂಗಪ್ರವೇಶಕ್ಕೆ ಮುಖೇಶ್ ಛಾಬ್ರಾ ಎತ್ತಿಕೊಂಡಿದ್ದಾರೆ. ಭಾರತೀಯ ಜಾಯಮಾನಕ್ಕೆ ಒಗ್ಗಿಸಿ ರೀಮೇಕ್ ಮಾಡಿದ್ದಾರೆ. ಚಿತ್ರದ ಅವಧಿಯನ್ನು ಮೂಲಸಿನಿಮಾಗಿಂತ ಕಾಲು ತಾಸಿನಷ್ಟು ತಗ್ಗಿಸಿಯೂ ಇದ್ದಾರೆ.

ADVERTISEMENT

ಮೂಳೆ ಕ್ಯಾನ್ಸರ್‌ ತನಗೆ ಸೋಕಿಹೋಯಿತೆನ್ನುವ ನಾಯಕ ಮ್ಯಾನಿ. ಥೈರಾಯಿಡ್‌ ಕ್ಯಾನ್ಸರ್‌ಗೆ ಒಳಗಾಗಿ, ಹೆಗಲಚೀಲದಲ್ಲಿ ಆಮ್ಲಜನಕದ ಸಿಲಿಂಡರ್‌ ತಗಲಿಹಾಕಿಕೊಂಡು, ಮೂಗಿಗೆ ಪೈಪುಗಳನ್ನು ಸಿಕ್ಕಿಸಿಕೊಂಡ ಕಿಜಿ. ಈ ಇಬ್ಬರ ಜೀವಂತಿಕೆಯ ಹುಡುಕಾಟದ ಸಿನಿಮಾ ‘ದಿಲ್‌ ಬೇಚಾರಾ’. ಸಿನಿಮಾದ ಒಳಗೊಂದು ಸಿನಿಮಾ ಇದೆ. ಅದರಲ್ಲಿ ಅಪೂರ್ಣವಾದ ಹಾಡಿದೆ. ಅದು ಪೂರ್ಣವಾಗಬೇಕೆಂಬುದನ್ನು ರೂಪಕವಾಗಿ ಸ್ವೀಕರಿಸಿದರೂ ಕಾಡುವುದು ಸುಶಾಂತ್‌ ನೆನಪೇ.

ತುಂಟಮಾತುಗಳ ರಂಜನೆಯ ಪಯಣದಂತೆ ಸಾಗುವ ಸಿನಿಮಾದಲ್ಲಿ ‘ರಜನೀಕಾಂತ್’ ಹೆಸರೂ ಪಾತ್ರವೇ. ಎ.ಆರ್. ರೆಹಮಾನ್ ಸಂಗೀತ ಇನ್ನೊಂದು ಘನಪಾತ್ರ. ‘ತಾರೆ ಗಿನ್’ ಹಾಡಿನಲ್ಲಿ ಅವರ ಲಯಕೌಶಲ ಅರಿವಿಗೆ ಬಂದೀತು.

‘ಸೊಂಚಾರಿಯಾ’ ತರಹದ ಸಿನಿಮಾದ ಅಭಿನಯಕ್ಕೆ ಹೋಲಿಸಿದರೆ ಇದರಲ್ಲಿ ಸುಶಾಂತ್ ತುಸು ಡಲ್ಲೇ. ಆದರೆ, ಅವರಿಲ್ಲದ ಸಂದರ್ಭದಲ್ಲಿ ಅವರನ್ನು ಕಾಣುವ ಭಾವುಕ ಸ್ಥಿತಿ ಆ ಕೊರತೆಯನ್ನು ಮುಚ್ಚಿಹಾಕುತ್ತದೆ. ಸಂಜನಾ ಸಂಘಿ ಮುಗ್ಧ ಮುಖ ನೋಡಿಸಿಕೊಳ್ಳುತ್ತದೆ. ಸಾಹಿಲ್, ಸ್ವಸ್ತಿಕಾ ಮುಖರ್ಜಿ ಅಭಿನಯ ಔಚಿತ್ಯಪೂರ್ಣ.

1989ರಲ್ಲಿ ಮಣಿರತ್ನಂ ತೆಲುಗಿನಲ್ಲಿ ‘ಗೀತಾಂಜಲಿ’ ಸಿನಿಮಾ ನಿರ್ದೇಶಿಸಿದ್ದರು. ಅದರ ವಸ್ತುವೂ ನಾಯಕ–ನಾಯಕಿಯ ಸಾವಿನ ನೆರಳಲ್ಲಿನ ಪಯಣ. ಇಳಯರಾಜಾ ಸಂಗೀತ ಆ ಸಿನಿಮಾಗೆ ವಿಷಾದದ ಪರದೆಯೊಂದನ್ನು ಹಾಕಿತ್ತು. ಈ ಸಿನಿಮಾದಲ್ಲಿ ಅಂತಹ ಪರದೆಯೊಂದು ನಾಪತ್ತೆಯಾಗಿದೆ. ಇನ್ನಷ್ಟು ಭಾವವೀಣೆ ಮೀಟಬಹುದಿತ್ತು ಎನ್ನುವ ಕಡೆ ನಿರ್ದೇಶಕರದ್ದು ಧಾವಂತದ ನಡೆ.

ಅಗಲಿದ ನಾಯಕ ತೆರೆಮೇಲೆಯೂ ಉಸಿರುಗಟ್ಟುವುದನ್ನು ನೋಡುವುದು ಕಷ್ಟವೇ. ಆದರೂ ಕೊನೆಯಲ್ಲಿ ಹೊಮ್ಮುವ ಸಂಭಾಷಣೆ ನೆನಪಿನ್ನೂ ಜೀವಂತ ಎಂಬ ಆಶಾವಾದದ ಸಣ್ಣ ಮಿಂಚನ್ನು ಮೂಡಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.