ADVERTISEMENT

ಕಾಳಿದಾಸ ಕನ್ನಡ ಮೇಷ್ಟ್ರು: ಜಗ್ಗೇಶ್‌ ಹೋರಾಟ, ಪ್ರೇಕ್ಷಕರಿಗೂ ಪಾಠ

ಸಿನಿಮಾ ವಿಮರ್ಶೆ

ಕೆ.ಎಂ.ಸಂತೋಷ್‌ ಕುಮಾರ್‌
Published 22 ನವೆಂಬರ್ 2019, 11:59 IST
Last Updated 22 ನವೆಂಬರ್ 2019, 11:59 IST
ಜಗ್ಗೇಶ್ ಮತ್ತು ಮೇಘನಾ ಗಾಂವ್ಕರ್
ಜಗ್ಗೇಶ್ ಮತ್ತು ಮೇಘನಾ ಗಾಂವ್ಕರ್   

ಚಿತ್ರ:ಕಾಳಿದಾಸಕನ್ನಡಮೇಷ್ಟ್ರು

ನಿರ್ಮಾಣ:ಯು.ಆರ್. ಉದಯಕುಮಾರ್‌

ನಿರ್ದೇಶನ: ಕವಿರಾಜ್

ADVERTISEMENT

ತಾರಾಗಣ:ಜಗ್ಗೇಶ್‌, ಮೇಘನಾ ಗಾಂವ್ಕರ್,ಅಂಬಿಕಾ, ತಬಲಾ ನಾಣಿ, ಟಿ.ಎಸ್. ನಾಗಾಭರಣ, ಸುಂದರ್, ಯತಿರಾಜ್, ಉಷಾ ಭಂಡಾರಿ.

ಇಂಗ್ಲಿಷ್‌ ಕಾನ್ವೆಂಟ್‌ ಶಾಲೆಗಳ ಅಬ್ಬರದಲ್ಲಿ ಸರ್ಕಾರಿ ಶಾಲೆಗಳು ಮುಚ್ಚಿ ಹೋಗುತ್ತಿರುವುದು, ಶಿಕ್ಷಕರು ಮತ್ತು ಪೋಷಕರ ಒತ್ತಡದಿಂದ ಮಕ್ಕಳ ಮೇಲೆ ಬೀಳುತ್ತಿರುವ ಹೊರೆ ಹಾಗೂ ಶಿಕ್ಷಣ ದಂಧೆಯಂತಹ ಗಂಭೀರ ಸಮಸ್ಯೆಗಳನ್ನು ನಿರ್ದೇಶಕ ಕವಿರಾಜ್‌‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದಲ್ಲಿ ಪರಿಣಾಮಕಾರಿಯಾಗಿ ತೆರೆದಿಟ್ಟಿದ್ದಾರೆ. ‘ಮಮತೆಯ ಕರೆಯೋಲೆ’ ಸಿನಿಮಾದಲ್ಲಿ ಮೊದಲ ಬಾರಿಗೆ ನಿರ್ದೇಶನದ ಪರೀಕ್ಷೆಗೆ ಇಳಿದಿದ್ದ ಗೀತ ಸಾಹಿತಿ ಕವಿರಾಜ್‌, ತಮ್ಮ ಎರಡನೇ ಸಿನಿಮಾದಲ್ಲಿ ಒಳ್ಳೆಯ ಅಂಕಗಳನ್ನೇಸಂಪಾದಿಸಿದ್ದಾರೆ.

ಕಾಳಿದಾಸ (ಜಗ್ಗೇಶ್) ಸರ್ಕಾರಿ ಶಾಲೆಯ ಕನ್ನಡ ಶಿಕ್ಷಕ. ಕನ್ನಡದ ಮೇಲೆ ಅಪ್ಪಟ ಪ್ರೇಮ, ಇಂಗ್ಲಿಷ್‌ ಬಾರದು. ಮಧ್ಯಮ ವರ್ಗದ ಈತನಿಗೆ ತನ್ನ ಮಗನನ್ನು ಕನ್ನಡ ಶಾಲೆಯಲ್ಲೇ ಓದಿಸುವ ಆಸೆ. ಆದರೆ, ಮೇಲ್ವರ್ಗದಿಂದ ಬಂದ ಈತನ ಪತ್ನಿ ಸುಮಾಗೆ (ಮೇಘನಾ ಗಾಂವ್ಕರ್‌) ಮಗ ಕಾನ್ವೆಂಟ್‌ನಲ್ಲೇ ಓದಬೇಕೆಂಬ ಹಪಾಹಪಿ.ಕಾನ್ವೆಂಟ್‌ಗೆ ಸೇರಿಸಲು ಬೇಕಾದ ₹7 ಲಕ್ಷ ಹೊಂದಿಸಲು ಕಾಳಿದಾಸ ಪರದಾಡುತ್ತಾನೆ. ಪತ್ನಿಯ ಹಪಾಹಪಿಯೇ ಮೇಲುಗೈ ಸಾಧಿಸುವುದರಿಂದ ವಿಧಿ ಇಲ್ಲದೆ ತನ್ನದೊಂದು ಕಿಡ್ನಿಯನ್ನೇ ಮಾರಿ ಹಣ ಹೊಂದಿಸುತ್ತಾನೆ.ಈ ನಡುವೆ ಒಂದೊಂದೆ ಮಗು ಶಾಲೆಯಿಂದ ವರ್ಗಾವಣೆ ಪತ್ರ ಪಡೆದು ಕಾನ್ವೆಂಟ್‌ ಸೇರುವಾಗ ತನ್ನ ಕನ್ನಡ ಶಾಲೆಯನ್ನು ಉಳಿಸಿಕೊಳ್ಳಬೇಕಾದ ಸವಾಲು ಕಾಳಿದಾಸನ ಮುಂದಿರುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿಯುವಶಿಕ್ಷಣ ಅಧಿಕಾರಿ, ಕನ್ನಡ ಶಾಲೆಗೆ ಬೀಗ ಜಡಿಯಲುದಿನಗಣನೆ ಮಾಡುವುದು ವ್ಯವಸ್ಥೆಯಲ್ಲಿನ ಕರಾಳ ಮುಖವನ್ನು ನೆನಪು ಮಾಡಿಸುತ್ತದೆ.

ಮೊದಲಾರ್ಧ ಕಥೆಗೆ ಓಘ–ವೇಗ ಸಿಗುತ್ತಿಲ್ಲವೆನಿಸಿದರೂ ಜಗ್ಗೇಶ್‌ ಅವರ ಹಳೆಯ ಸಿನಿಮಾಗಳನ್ನು ನೆಪಿಸುವಂತೆ ಹಾಸ್ಯದ ರಸಾಯನ ಸವಿಯಲು ದಕ್ಕುತ್ತದೆ. ದ್ವಿತಿಯಾರ್ಧದಲ್ಲಿ ಚಿತ್ರದ ಕಥೆಗೆ ವೇಗ ದಕ್ಕುತ್ತದೆ. ಮೊದಲಾರ್ಧದಲ್ಲಿ ಉಕ್ಕುವನಗುವಿನ ಅಲೆಯ ಜಾಗವನ್ನು ದ್ವಿತಿಯಾರ್ಧ ಸಂಪೂರ್ಣ ಭಾವುಕತೆ, ಗಂಭೀರತೆ ಆವರಿಸಿಕೊಳ್ಳುತ್ತದೆ.

ಒಂದು ಸರ್ಕಾರಕ್ಕೆ, ಸಮಾಜಕ್ಕೆ, ಪ್ರೇಕ್ಷಕನಿಗೆ ಏನು ಹೇಳಬೇಕಿತ್ತೋ ಅದನ್ನು ಎರಡು ತಾಸುಗಳಲ್ಲಿ ತಾಕಿಸುವ ಪ್ರಯತ್ನದಲ್ಲಿ ಚಿತ್ರಯಶಸ್ಸು ಸಾಧಿಸಿದೆ. ಇಂಗ್ಲಿಷ್ ವ್ಯಾಮೋಹದಲ್ಲಿ ನಾವು ಕಳೆದುಕೊಳ್ಳುತ್ತಿರುವುದನ್ನು ಉಳಿಸಿಕೊಳ್ಳುವ ದಾರಿಯನ್ನೂಸೂಚ್ಯವಾಗಿ ತೋರಿಸುವ ಜತೆಗೆ, ನಿರ್ಧಾರವನ್ನು ಪ್ರೇಕ್ಷಕನಿಗೆ ಬಿಟ್ಟುಬಿಟ್ಟಿದೆ.

ಸರ್ಕಾರಿ ಶಾಲೆಯ ಬಡ ಮೇಷ್ಟ್ರರಾಗಿ, ಮಧ್ಯಮ ವರ್ಗದಲ್ಲಿನ ಅಸಹಾಯಕ ವ್ಯಕ್ತಿಗಳಪ್ರತಿನಿಧಿಯಾಗಿ ಜಗ್ಗೇಶ್‌ ಪಾತ್ರದಲ್ಲಿ ಜೀವಿಸಿದ್ದಾರೆ. ಮಕ್ಕಳ ಮನಸ್ಸು– ಆಸಕ್ತಿಯನ್ನು ಅರಿಯದೇ, ಅವರನ್ನು ಅಂಕ ಗಳಿಸುವ ಯಂತ್ರದಂತೆ ರೂಪಿಸಲು ತುಡಿಯುವ ಇಂಗ್ಲಿಷ್‌ ವ್ಯಾಮೋಹಿ ತಾಯಂದಿರ ಪ್ರತಿನಿಧಿಯ ಪಾತ್ರದಲ್ಲಿ ಮೇಘನಾ ಗಮನ ಸೆಳೆದಿದ್ದಾರೆ. ತಬಲಾ ನಾಣಿಯವರದು ಚಿಕ್ಕ ಪಾತ್ರವಾದರೂ ‘ಪ್ರಜ್ಞಾವಂತ ಕುಡುಕ’ನ ಪಾತ್ರಕ್ಕೆ ಅವರೇ ಸಾಟಿ ಎನ್ನುವಂತಿದೆ. ಟಿ.ಎಸ್‌.ನಾಗಭರಣ,ಅಂಬಿಕಾ ಪಾತ್ರಗಳಿಗೆನ್ಯಾಯ ಸಲ್ಲಿಸಿದ್ದಾರೆ.

ಗುರುಕಿರಣ್ ಸಂಗೀತವಿರುವ ಹಾಡುಗಳು ಕೇಳಲು ಕಿವಿಗೆ ಹಿತವಾಗಿವೆ. ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣ ಕೆಲವು ದೃಶ್ಯಗಳಿಗೆ ಸಹ್ಯವಾಗಿದೆ. ಕೆ.ಎಂ. ಪ್ರಕಾಶ್ ಸಂಕಲನದಲ್ಲಿ ಇನ್ನಷ್ಟು ಜಾಣ್ಮೆ ವಹಿಸಿದ್ದರೆ ಮೊದಲಾರ್ಧದ ದೃಶ್ಯಗಳ ತೆವಳಿಕೆ ತಪ್ಪಿಸಬಹುದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.