ADVERTISEMENT

ಕಾಣದಂತೆ ಮಾಯವಾದನು ಸಿನಿಮಾ ವಿಮರ್ಶೆ: ‘ಸದ್ದೆವ್ವ’ದ ರಂಜನೆಯ ಕಥನ

ವಿಶಾಖ ಎನ್.
Published 31 ಜನವರಿ 2020, 12:15 IST
Last Updated 31 ಜನವರಿ 2020, 12:15 IST
‘ಕಾಣದಂತೆ ಮಾಯವಾದನು’ ಚಿತ್ರದಲ್ಲಿ ವಿಕಾಸ್‌ ಮತ್ತು ಸಿಂಧು ಲೋಕನಾಥ್‌
‘ಕಾಣದಂತೆ ಮಾಯವಾದನು’ ಚಿತ್ರದಲ್ಲಿ ವಿಕಾಸ್‌ ಮತ್ತು ಸಿಂಧು ಲೋಕನಾಥ್‌   

ಚಿತ್ರ: ಕಾಣದಂತೆ ಮಾಯವಾದನು (ಕನ್ನಡ)

ನಿರ್ಮಾಣ: ಚಂದ್ರಶೇಖರ್ ನಾಯ್ಡು, ಸೋಮ್ ಸಿಂಗ್, ಪುಷ್ಪಾ ಸೋಮ್‌ಸಿಂಗ್

ನಿರ್ದೇಶನ: ರಾಜ್‌ ಪತ್ತಿಪಾಟಿ

ADVERTISEMENT

ತಾರಾಗಣ: ವಿಕಾಸ್, ಸಿಂಧೂ ಲೋಕನಾಥ್, ಭಜರಂಗಿ ಲೋಕಿ, ರಾಘವ ಉದಯ್, ಅಚ್ಯುತ್‌ ಕುಮಾರ್, ಧರ್ಮ

ಒಳ್ಳೆಯ ದೆವ್ವಗಳು ಜೀವಂತ ಪಾತ್ರಗಳ ನಡುವೆ ತಮಾಷೆಯಾಗಿ ಏನೇನನ್ನೆಲ್ಲ ಮಾಡಿಸಿ, ಹಲವು ಭಾವಗಳನ್ನು ಸ್ಫುರಿಸುವ ಸಿನಿಮಾಗಳದ್ದೂ ಒಂದು ಪರಂಪರೆ ಇದೆ. ‘ಕಾಣದಂತೆ ಮಾಯವಾದನು’ ಆ ಪರಂಪರೆಗೆ ಇನ್ನೊಂದು ಅಡಿಗೆರೆಯನ್ನು ಎಳೆದಿದೆ.

ಮನರಂಜನೆಯ ಚೌಕಟ್ಟಿನೊಳಗೆ ಇದ್ದುಕೊಂಡೇ ಹೊಸತೇನನ್ನಾದರೂ ಹೊಸೆಯಬೇಕು ಎನ್ನುವುದು ಹೊಸ ನಿರ್ದೇಶಕ ರಾಜ್‌ ಪತ್ತಿಪಾಟಿ (ಇವರು ಯೋಗರಾಜ್ ಭಟ್ ಗರಡಿಯಲ್ಲಿ ಪಳಗಿದವರು) ಅವರ ಹೆಬ್ಬಯಕೆ. ಚಿತ್ರಕಥಾ ಹೆಣಿಗೆಯಲ್ಲಿ ಅವರಿಗೆ ನಾಯಕನೂ ಆಗಿರುವ ವಿಕಾಸ್‌ ಕೂಡ ಸಾಥ್‌ ನೀಡಿದ್ದಾರೆ. ಹೀಗಾಗಿ ಇಬ್ಬರಿಗೂ ಈ ಸಿನಿಮಾವನ್ನು ಹಸನಾಗಿ ಮಾಡಲೇಬೇಕು ಎಂಬ ಮಹದಾಸೆ ಇದೆ. ಅವರ ಹೆಬ್ಬಯಕೆಗೆ ಇಂಧನವಾಗಿ ಒದಗಿರುವವರು ಸಿನಿಮಾಟೊಗ್ರಫರ್‌ ಸುಜ್ಞಾನ್. ಸಿನಿಮಾದ ಓಘದಲ್ಲಿ ಅಲ್ಲಲ್ಲಿ ಕಾಣಿಸಬಹುದಾದ ಐಬುಗಳನ್ನು ಅವರ ಕಸುಬುದಾರಿಕೆ ಮರೆಮಾಚಿರುವುದಕ್ಕೆ ಉದಾಹರಣೆಗಳು ನಿಚ್ಚಳ.

ಚಿತ್ರದ ಪ್ರಾರಂಭ ಕುತೂಹಲಕಾರಿಯಾಗಿದೆ. ಮೊದಲ ದೃಶ್ಯದಲ್ಲೇ ನಾಯಕನ ಎದೆಬಗೆದ ಕತ್ತಿ. ಅವನ ಕಣ್ಣೊಳಗೆ ಇನ್ನೂ ಸರಿಪಡಿಸಬೇಕಿರುವ ತಪ್ಪುಗಳ ಸಂಕ್ಷಿಪ್ತ ಚಿತ್ರಣ. ದೇಹದಿಂದ ಹೊರಬಂದು ‘ಬದುಕುವ’ ಆತ್ಮ. ಅದರ ಬೆನ್ನಟ್ಟುವ ನಾಯಿ. ನೀರಮೇಲೆ ನಡೆಯುವ ಸಿಪಾಯಿ... ಹೀಗೆ ಬೇರೆಯದೇ ಲೋಕಕ್ಕೆ ಸಿನಿಮಾ ಇನ್ನೇನು ಕರೆದುಕೊಂಡು ಹೋಯಿತಲ್ಲ ಎಂದುಕೊಳ್ಳುವಾಗ ವಾಸ್ತವಕಥನದ ಫ್ಲ್ಯಾಷ್‌ಬ್ಯಾಕ್. ದುರ್ಜನರ ಸಂಗದಲ್ಲಿರುವ ನಾಯಕ ದಿಢೀರನೆ ಸಜ್ಜನನಾಗುವಂತೆ ಮಾಡುವ ಸಂಜೀವಿನಿಯಂಥ ನಾಯಕಿ. ಅವಳ ಒಳ್ಳೆಯತನದ ಮೆರವಣಿಗೆ ಕಂಡು ಶರಣಾಗುವ ನಾಯಕ. ದುಷ್ಟವಲಯದಿಂದ ಅವನು ಆಚೆ ಬಂದರೂ ಅವರು ಬೆನ್ನಟ್ಟಿ ಕೊಂದರು.

ಹೀಗೆ ಚಿತ್ರಕಥೆ ಮಾಮೂಲಿಯೇ ಅಯಿತಲ್ಲವೇ ಎಂದುಕೊಳ್ಳುವಾಗ ನಾಯಕನ ‘ಸದ್ದೆವ್ವ’ (ಸತ್‌+ದೆವ್ವ ಎಂದು ಬಿಡಿಸಬಹುದು) ಸದ್ದು ಮಾಡತೊಡಗುತ್ತದೆ. ಸಿನಿಮಾದ ಎರಡನೇ ಅರ್ಧದ ಕಥನಕುತೂಹಲಕ್ಕಾಗಿ ಮೊದಲರ್ಧ ಅಲ್ಲಲ್ಲಿ ತೇಪೆ ಹಚ್ಚಿಕೊಂಡ ಅಡಿಪಾಯದಂತೆ ಕಾಣುತ್ತದೆ. ಎರಡನೇ ಅರ್ಧದಲ್ಲಿ ಧರ್ಮ ಸಹಜಾಭಿನಯ ಹಾಗೂ ಸುಚೀಂದ್ರ ಪ್ರಸಾದ್ ‘ಕಾಮಿಕ್ ರಿಲೀಫ್’ ಮಜಾ ಕೊಡುತ್ತದೆ. ಅಗಲಿದ ನಟ ರಾಘವ ಉದಯ್ ಮೊದಲರ್ಧದಲ್ಲಿ ಮಾತ್ರ ಅಭಿನಯಿಸಿದ್ದು, ಅವರ ಪಾತ್ರವನ್ನು ಉತ್ತರಾರ್ಧದಲ್ಲಿ ಭಜರಂಗಿ ಲೋಕಿ ತೂಗಿಸಿಕೊಂಡು ಹೋಗಿದ್ದಾರೆ. ಲೋಕಿ ಖಳನ ಖದರನ್ನು ತುಳುಕಿಸಿದರೆ, ನಾಯಕಿ ಸಿಂಧೂ ತೂಕದ ಪಾತ್ರವನ್ನು ಸುಖಿಸಿದ್ದಾರೆ. ನಾಯಕ ವಿಕಾಸ್ ತಮ್ಮ ಮಿತಿ ಅರಿತುಕೊಂಡೇ ಪಾತ್ರ ನಿಭಾಯಿಸಿರುವುದರಲ್ಲೂ ಜಾಣ್ಮೆ ಇದೆ.

ಗುಮ್ಮಿನೇನಿ ವಿಜಯ್‌ ಬಾಬು ಸ್ವರ ಸಂಯೋಜನೆಯಲ್ಲಿ ಪುನೀತ್ ಹಾಡಿರುವ ಹಾಡು ಗುನುಗುನಿಸುವಂತಿದೆ.
ಅನುಕೂಲಸಿಂಧುವೂ ಅತಿಯೂ ಆದ ಸಿನಿಮೀಯ ಮೆಲೋಡ್ರಾಮಾಗಳನ್ನೇ ರಂಜನೆಯ ಸರಕಾಗಿಸುವ ಈ ಪರಿ ಮಜವೇ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.