ADVERTISEMENT

ಫ್ರೆಂಚ್‌ ಬಿರಿಯಾನಿ ಸಿನಿಮಾ ವಿಮರ್ಶೆ: ಹಾಸ್ಯವಲ್ಲ...ರೀ!

ಒಟಿಟಿಯಲ್ಲಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 8:58 IST
Last Updated 24 ಜುಲೈ 2020, 8:58 IST
‘ಫ್ರೆಂಚ್‌ ಬಿರಿಯಾನಿ’ ಚಿತ್ರದ ಪೋಸ್ಟರ್‌
‘ಫ್ರೆಂಚ್‌ ಬಿರಿಯಾನಿ’ ಚಿತ್ರದ ಪೋಸ್ಟರ್‌   

ಚಿತ್ರ: ಫ್ರೆಂಚ್‌ ಬಿರಿಯಾನಿ (ಕನ್ನಡ)

ನಿರ್ಮಾಣ: ಅಶ್ವಿನಿ ಪುನೀತ್ ರಾಜ್‌ಕುಮಾರ್‌, ಗುರುದತ್ ಎ. ತಲ್ವಾರ್

ನಿರ್ದೇಶನ: ಪನ್ನಗ ಭರಣ

ADVERTISEMENT

ತಾರಾಗಣ: ಡ್ಯಾನಿಶ್ ಸೇಟ್‌, ಸ್ಯಾಲ್‌ ಯೂಸಫ್, ಮಹಾಂತೇಶ್‌ ಹಿರೇಮಠ್, ಸಂಪತ್ ಕುಮಾರ್, ದಿಶಾ ಮದನ್, ರಂಗಾಯಣ ರಘು, ಪಿತೋಬಾಶ್‌ ತ್ರಿಪಾಠಿ, ಸಿಂಧು, ನಾಗಭೂಷಣ

ಪಕ್ಕೆಗಳ ಮೇಲೆ ಬೆರಳುಗಳನ್ನು ದಿಢೀರನೆ ಆಡಿಸಿ, ಕುಚಗುಳಿ ಇಟ್ಟಾಗ ನಗೆಬುಗ್ಗೆ ಉಕ್ಕುವುದಲ್ಲ; ‘ಬ್ರೇನ್‌ಲೆಸ್‌’ ಕಾಮಿಡಿ ಮಾಡಬೇಕಾದ ಕೆಲಸವೂ ಅದೇ. ಟಾಮ್ ಅಂಡ್‌ ಜೆರ್ರಿಯ ‘ಕಾಮಿಡಿ ಆಫ್‌ ಎರರ್‌’ನ ಬಹುಕಾಲದ ಮಾದರಿ ಇದು. ‘ಫ್ರೆಂಚ್‌ ಬಿರಿಯಾನಿ’ ಇಂತಹುದೇ ಪ್ರಾಸಂಗಿಕ ಹಾಸ್ಯದ ಮೂಲಕ ಕಚಗುಳಿ ಇಡಬೇಕೆಂದು ಹೊರಟಿದೆ. ಆದರೆ, ಇದನ್ನು ‘ಹಾಸ್ಯವಲ್ಲ...ರೀ’ ಎಂದು ಹೇಳಲು ದಂಡಿಯಾಗಿ ಸಾಕ್ಷ್ಯಗಳು ಸಿಗುತ್ತವೆ.

ಫ್ರಾನ್ಸ್‌ನಿಂದ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಳ್ಳಲೆಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ವಿದೇಶಿ. ಅವನ ಸೂಟ್‌ಕೇಸಿನಲ್ಲಿ ಇರುವ ಸರಕು ಶಿವಾಜಿನಗರದ ಡಾನ್‌ಗೆ ಬೇಕು. ಅಂತಹ ಸರಕನ್ನು ಹೊತ್ತುತರುವ ವಿದೇಶಿಯು ಪೊಲೀಸರಿಗೂ ಬೇಕಾದವ. ಇವರೆಲ್ಲರ ಮಧ್ಯೆ ಅಸ್ಗರ್‌ ಎಂಬ ಆಟೊ ಡ್ರೈವರ್‌ ತಗಲಿಹಾಕಿಕೊಳ್ಳುತ್ತಾನೆ. ಇವರೆಲ್ಲರ ನಡುವೆ ‘ಕಾಮಿಡಿ ಆಫ್‌ ಎರರ್’ ಸೃಷ್ಟಿಸಿ ಅವಿನಾಶ್‌ ಸಂಭಾಷಣೆ ಬರೆದಿದ್ದಾರೆ.

ಬೆಂಗಳೂರು ಮಹಾನಗರದಲ್ಲಿ ಬಗೆಬಗೆಯ ಶೈಲಿಯಲ್ಲಿ ಮಾತನಾಡುವ ಪಾತ್ರಗಳ ಸೃಷ್ಟಿ ಆಸಕ್ತಿಕರವಾಗಿದೆ. ಅಸ್ಗರ್, ಫ್ರೆಂಚ್‌ ನಾಗರಿಕ, ಡಾನ್‌ ಮಣಿ, ಟಿ.ವಿ ನಿರೂಪಕಿ ಎಲ್ಲರ ಕನ್ನಡಗಳೂ ಬೇರೆ ಬೇರೆಯವು. ಪೊಲೀಸ್‌ ರಂಗಾಯಣ ರಘು ಬಳಸುವ ಭಾಷೆ ಇನ್ನೊಂದು. ಈ ಪಾತ್ರಧಾರಿಗಳು ಕೂಡ ಆಯಾ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಡ್ಯಾನಿಶ್‌‌ ತಮ್ಮ ಅತಿ ಅಭಿನಯವನ್ನು ಇಲ್ಲಿ ಹತ್ತಿಕ್ಕಿದ್ದಾರೆ. ಅವರ ಉರ್ದು ಸಹಜವಾಗಿದೆ. ಮಣಿ ಪಾತ್ರದಲ್ಲಿ ಮಹಾಂತೇಶ್‌ ಹಿರೇಮಠ ತಂತಾವೇ ‘ಕಾರ್ಟೂನಿ’ನಂತೆ ರಂಜಿಸಿದ್ದಾರೆ. ಸಂಪತ್ ಕುಮಾರ್‌ ಅವರದ್ದೂ ಸಹಜಾಭಿನಯ.

ಇಂತಹ ಸಿನಿಮಾಗೆ ಗೀತ ಸಂಗೀತ, ಹಿನ್ನೆಲೆ ಸಂಗೀತ ಇಂಧನವೇ ಹೌದು. ಆ ಕೆಲಸದಲ್ಲಿ ವಾಸುಕಿ ವೈಭವ್ ಪ್ರಯೋಗ ಗಮನಾರ್ಹ. ‘ದಿ ಬೆಂಗಳೂರು ಸಾಂಗ್’ (ಅದಿತಿ ಸಾಗರ್‌ ಎಂಬ ಗಾನಪ್ರತಿಭೆಗೂ ಈ ಯಶಸ್ಸಿನ ಪಾಲು ಸಲ್ಲಬೇಕು), ‘ಹೋಗ್ಬಿಟ್ಟ ಚಾರ್ಲ್ಸ್‌’ ಎರಡು ಉತ್ತಮ ಉದಾಹರಣೆಗಳು.

ಇವೆಲ್ಲ ಹಾಗೂ ಇವರೆಲ್ಲರ ಶ್ರಮವಿದ್ದೂ ‘ಫ್ರೆಂಚ್‌ ಬಿರಿಯಾನಿ’ ನಗಿಸಲು ಇನ್ನಿಲ್ಲದಂತೆ ಹೆಣಗಾಡುತ್ತದೆ. ಮಹಾಂತೇಶ್‌ ಮ್ಯಾನರಿಸಂ ಹಾಗೂ ತಮಿಳ್ಗನ್ನಡ ಕೊಡುವ ಮಜವನ್ನು ಉಳಿದ ಬಹುತೇಕ ಪ್ರಾಸಂಗಿಕ ಹಾಸ್ಯ ನೀಡುವುದಿಲ್ಲ. ಸಣ್ಣ ಪಾತ್ರದಲ್ಲಿ ಬಂದುಹೋಗುವ ಚಿಕ್ಕಣ್ಣ ಕೂಡ ನಗಿಸುವುದರಲ್ಲಿ ಸೋಲುತ್ತಾರೆ. ರಂಗಾಯಣ ರಘು ಅವರದ್ದು ಚರ್ವಿತ ಚರ್ವಣ ನಟನಾ ಶೈಲಿ.

ಸಿನಿಮಾದ ಮೊದಲ ಹತ್ತು ನಿಮಿಷ ಹಾಗೂ ಕೊನೆಯ ಹತ್ತು ನಿಮಿಷಕ್ಕೆ ಇರುವ ಓಘವನ್ನು ನಿರ್ದೇಶಕ ಪನ್ನಗ ಭರಣ ನಡುವೆಯೂ ಸೃಷ್ಟಿಸಿದ್ದಿದ್ದರೆ ಎಂಬ ಉದ್ಗಾರ ಮನಸ್ಸಿನಲ್ಲಿ ಉಳಿದುಬಿಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.