ADVERTISEMENT

'ಮಾಯಾಬಜಾರ್' ಸಿನಿಮಾ ವಿಮರ್ಶೆ: ಕಚಗುಳಿಯ ಹದ...ಬೋಧನೆಯೂ ಮಜಾ!

ವಿಶಾಖ ಎನ್.
Published 28 ಫೆಬ್ರುವರಿ 2020, 11:02 IST
Last Updated 28 ಫೆಬ್ರುವರಿ 2020, 11:02 IST
ಮಾಯಾಬಜಾರ್‌ ಚಿತ್ರದ ಪೋಸ್ಟರ್‌
ಮಾಯಾಬಜಾರ್‌ ಚಿತ್ರದ ಪೋಸ್ಟರ್‌   

ಚಿತ್ರ: ಮಾಯಾಬಜಾರ್ (ಕನ್ನಡ)
ನಿರ್ಮಾಣ: ಅಶ್ವಿನಿ ಪುನೀತ್ ರಾಕ್‌ಕುಮಾರ್
ನಿರ್ದೇಶನ: ರಾಧಾಕೃಷ್ಣ ರೆಡ್ಡಿ
ತಾರಾಗಣ: ಅಚ್ಯುತ್ ಕುಮಾರ್, ರಾಜ್ ಬಿ. ಶೆಟ್ಟಿ, ವಸಿಷ್ಠ ಸಿಂಹ, ಚೈತ್ರಾ ರಾವ್, ಸುಧಾರಾಣಿ, ಸಾಧುಕೋಕಿಲ.

ಪುನೀತ್ ರಾಜ್‍ಕುಮಾರ್ ಕೊನೆಯಲ್ಲಿ ಸ್ಟೆಪ್ ಹಾಕುವುದು ಒಂಥರಾ ಈಡಿಯಂ. ನಗು, ಬೋಧನೆ, ರಂಜನೆ ಬೆರೆತ ಸಿನಿಮಾಗೆ ಅವರೇ ಬಂಡವಾಳ ಹೂಡಿರುವುದರಿಂದ ಆ ಕುಣಿತಕ್ಕೆ ಅರ್ಥವಿದೆ.

ಸಾವಿರ, ಐನೂರು ರೂಪಾಯಿಗಳ ಹಳೆ ನೋಟುಗಳು ಅಮಾನ್ಯೀಕರಣಗೊಂಡ ಸಂದರ್ಭ ಇಟ್ಟುಕೊಂಡು ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಒಂದು ಬೊಂಬಾಟ್ ಮನರಂಜನೆಯ ಕಥಾನಕ ರೂಪಿಸಿದ್ದಾರೆ.

ADVERTISEMENT

ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಹೆಂಡತಿಗೆ ಕ್ಯಾನ್ಸರ್. ಚಿಕಿತ್ಸೆಗೆ ಬೇಕಾದ ದೊಡ್ಡ ಮೊತ್ತ ಹೊಂದಿಸಲು ಅವನು ದಾರಿ ಬಿಡಬೇಕು. ಇಲ್ಲಿ ಸ್ವಲ್ಪ ತರ್ಕ ಕೈಕೊಡುತ್ತದೆ. ಸರ್ಕಾರಿ ಅಧಿಕಾರಿಗೆ ಸಹಜವಾಗಿಯೇ ಆರೋಗ್ಯ ವಿಮೆ ಇರುತ್ತದೆ ಅಲ್ಲವೇ? ಈ ಸಂಗತಿಯನ್ನು ಪಕ್ಕಕ್ಕೆ ಇಟ್ಟರೆ 'ಮಾಯಾಬಜಾರ್'ನಲ್ಲಿ ಅಸಲಿ ಕಳ್ಳ-ಪೊಲೀಸ್ ಆಟವಿದೆ. ಪೊಲೀಸರಿಗೆ ಒಬ್ಬ ಕಳ್ಳ, ಇನ್ನೊಬ್ಬ ಪ್ರೇಮಿ ಜತೆಯಾಗುತ್ತಾರೆ. ಕಪ್ಪುಹಣ ಇಟ್ಟವರು ಯಾರೆಂಬುದು ಪೊಲೀಸ್ ಅಧಿಕಾರಿಗೆ ಗೊತ್ತು. ಅಂತಹವರ ಮನೆ ಮೇಲೆ ಕಳ್ಳ ಹಾಗೂ ಅವನ ಸಂಪರ್ಕದ ನಾಟಕದವರನ್ನು ಬಳಸಿಕೊಂಡು ನಕಲಿ ಐಟಿ ದಾಳಿ ಮಾಡಿಸುತ್ತಾನೆ. ಹಾಗೆ ನಡೆಯುವ ಒಂದು ದಾಳಿಯ ವೇಳೆಯೇ ಪ್ರೇಮಿಯೂ ಇವರ ಗುಂಪಿಗೆ ಸೇರ್ಪಡೆಯಾಗುವುದು. ಆಮೇಲೆ ಈ ಮೂವರ 'ಆಟ' ಏನೆಲ್ಲ ತಿರುವು ಪಡೆದುಕೊಳ್ಳುತ್ತದೆ ಎನ್ನುವ ವಸ್ತುವಿಷಯದ ಚಿತ್ರಕಥಾ ಬರವಣಿಗೆ ಕುತೂಹಲಕಾರಿ.

ಬಿಡಿಬಿಡಿಯಾಗಿ ಪಾತ್ರಗಳ ಪರಿಚಯ ಮಾಡಿಕೊಡುವುದರಿಂದ ತೆರೆದುಕೊಳ್ಳುವ ಸಿನಿಮಾ, ನೋಡನೋಡುತ್ತಲೇ ಬೆರಗಿನಾಟಕ್ಕೆ ಹೊರಳುವ ರೀತಿ ಚೆನ್ನಾಗಿದೆ. ಅನೈತಿಕ ಮಾರ್ಗದಲ್ಲಿ ಸಾಗುವ ಪಾತ್ರಗಳೇ ನೀತಿಪಾಠವನ್ನೂ ಮಾಡುತ್ತವೆ. ಆಗೀಗ ಭಾವಕಣ್ಣೀರನ್ನೂ ತರಿಸುತ್ತವೆ. ಮಜಾ ಕೊಡಲೆಂದು ಕಳ್ಳ-ಪೊಲೀಸ್ ಆಟ ಇದೆಯಷ್ಟೆ. ನಿರ್ದೇಶಕರ ಉದ್ದೇಶ ಒಳಿತೇ ಆಗಬೇಕು ಎನ್ನುವುದು.

ಮೂರೂ ಮುಖ್ಯ ಪಾತ್ರಗಳ ಚಲನೆಯಲ್ಲೇ ಸೇರಿಕೊಳ್ಳುವ ಪ್ರಕಾಶ್ ರೈ, ಸಾಧುಕೋಕಿಲಾ ಕೂಡ ಕಚಗುಳಿಯನ್ನೇ ಇಡುವುದು ಕಾಮಿಕ್ ಆಗಿ ಕಥೆ ಹೇಳಿದರೆ ಜನರ ಕಣ್ಣು ಕೀಲಿಸಿಕೊಳ್ಳಬಹುದು ಎನ್ನುವ ನಿರ್ದೇಶಕರ ಜಾಣ್ಮೆ. ಸಾಧು ತಮಿಳು ಶೈಲಿಯ ಮಾತು ಮಸಾಲೆ ಖಾದ್ಯಕ್ಕೆ ಬಿದ್ದ ಒಳ್ಳೆ ಒಗ್ಗರಣೆ.

ರಾಜ್ ಬಿ. ಶೆಟ್ಟಿ ಅಮಾಯಕ ಶೈಲಿಯಲ್ಲಿ ಸಂಭಾಷಣೆ ಹೇಳುವುದರಲ್ಲೇ ಅರ್ಧ ನಗೆ ತರಿಸುತ್ತಾರೆ. ಅಚ್ಯುತ್ ಕುಮಾರ್ ಎಂದಿನಂತೆ ಗಂಭೀರವಾಗಿ ಪಾತ್ರಕ್ಕೆ ಜೀವತುಂಬಿದ್ದಾರೆ. ವಸಿಷ್ಠ ಅವರದ್ದು ಕೂಡ ಹದವರಿತ ನಟನೆ. ಹೊಸ ನಾಯಕಿ ಚೈತ್ರಾ ರಾವ್ ನಿರೀಕ್ಷೆ ಮೂಡಿಸುವಷ್ಟು ಪರಿಣಾಮ ಬೀರಿದ್ದಾರೆ. ನಿರೂಪಣೆಯಲ್ಲಿ ಅಲ್ಲಲ್ಲಿ ಗತಿ ಬದಲಿಸಿಕೊಳ್ಳುವ ಸಿನಿಮಾದ ಸಂಕಲನದಲ್ಲಿ ಸಣ್ಣ ಪುಟ್ಟ ಐಬು ಇದೆ. ಆದರೆ, ಅದು ಪ್ರೇಕ್ಷಕರ ಗಮನ ವಿಮುಖವಾಗಲು ಬಿಡುವುದಿಲ್ಲ.ಮಿಥುನ್ ಮುಕುಂದನ್ ಸಂಗೀತ, ಅಭಿಷೇಕ್ ಜಿ. ಕಾಸರಗೋಡು ಸಿನಿಮಾಟೊಗ್ರಫಿ ಕಾಣ್ಕೆಗೂ ಅಂಕ ಸಲ್ಲಬೇಕು.

'ಭಗವಂತನಿಗೆ ಬುದ್ಧಿ ಇಲ್ಲ ನಾವೇನ್ ಮಾಡಣ' ಎಂಬ ಯೋಗರಾಜ್ ಭಟ್ಟರ ಸಾಲು ಕೊಡುವ ಮಜವನ್ನೇ ಚಿತ್ರವೂ ನೀಡುತ್ತದೆನ್ನುವುದು ಅಗ್ಗಳಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.