ADVERTISEMENT

'ಮಿಸ್ ಇಂಡಿಯಾ' ಚಿತ್ರ ವಿಮರ್ಶೆ: ಚಹಾ ಉದ್ಯಮಿಯ ಶಿಥಿಲ ಶಿಲ್ಪದ ಯಶೋಗಾಥೆ

ವಿಶಾಖ ಎನ್.
Published 5 ನವೆಂಬರ್ 2020, 17:03 IST
Last Updated 5 ನವೆಂಬರ್ 2020, 17:03 IST
ಕೀರ್ತಿ ಸುರೇಶ್‌
ಕೀರ್ತಿ ಸುರೇಶ್‌   

ಚಿತ್ರ: ಮಿಸ್ ಇಂಡಿಯಾ (ತೆಲುಗು–ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಂಡಿದೆ)
ನಿರ್ಮಾಣ: ಮಹೇಶ್ ಎಸ್. ಕೊನೆರು
ನಿರ್ದೇಶನ: ನರೇಂದ್ರ ನಾಥ್
ತಾರಾಗಣ: ಕೀರ್ತಿ ಸುರೇಶ್, ಜಗಪತಿ ಬಾಬು, ರಾಜೇಂದ್ರ ಪ್ರಸಾದ್, ಕಮಲ್ ಕಾಮರಾಜು, ಸುಮಂತ್ ಶೈಲೇಂದ್ರ, ನರೇಶ್

---

ಎಂಬಿಎ ಕಥೆಗಳು ಸ್ವಾರಸ್ಯಕರ. ಬಿಸಿನೆಸ್ ಮ್ಯಾನೇಜ್‌ಮೆಂಟ್‌ನ ಗೇಮ್‌ಗಳು ರೋಚಕವೂ ಹೌದು. ಆದರೆ, ಬೆಳ್ಳಿತೆರೆಯ ಮೇಲೆ ಯಶಸ್ವಿ ವ್ಯಾಪಾರಿಯ ಕಥೆ ಹೇಳುವುದು ಬಹುಕಾಲದಿಂದಲೂ ಸವಾಲು. ಬುದ್ಧಿವಂತಿಕೆಯೊಂದನ್ನೇ ಬಂಡವಾಳ ಮಾಡಿಕೊಂಡು ದೊಡ್ಡ ವ್ಯಾಪಾರಿ ಸಾಮ್ರಾಜ್ಯ ಕಟ್ಟುವ ಫ್ಯಾಂಟಸಿಯಂತಹ ಚಿತ್ರಕಥೆಗೆ ಚೆಂದದ ಚೌಕಟ್ಟು ಹಾಕಿರುವ ಉದಾಹರಣೆಗಳು ಭಾರತೀಯ ಚಿತ್ರರಂಗದ ಮಟ್ಟಿಗೆ ವಿರಳ. ಅದರಲ್ಲೂ ತರುಣಿಯೊಬ್ಬಳು ಉದ್ಯಮಿಯಾಗಬೇಕೆಂಬ ಕನವರಿಕೆಯನ್ನು ನೇವರಿಸುತ್ತಾ ಅದನ್ನು ಈಡೇರಿಸಿಕೊಳ್ಳುವ ಯಶೋಗಾಥೆಯನ್ನು ನೋಡಿದ್ದೇವೆಯೇ ಎಂದು ತಲೆಕೆರೆದುಕೊಳ್ಳಬೇಕು. ಅಂತಹ ವಸ್ತುವಿನ ಸಿನಿಮಾ ಆಗಿ ‘ಮಿಸ್‌ ಇಂಡಿಯಾ’ ಮುಖ್ಯವಾಗಿದೆ.

ADVERTISEMENT

ಸಿನಿಮಾದ ಒಂದು ಸಾಲಿನ ಕಥೆ ಆಸಕ್ತಿಕರ. ಅಜ್ಜನ ಪ್ರೋತ್ಸಾಹದಾಯಕ ಮಾತುಗಳನ್ನು ಕೇಳುತ್ತಾ, ಆಯುರ್ವೇದದ ವೈದ್ಯನಾದ ಅವನು ಮಾಡಿಕೊಟ್ಟ ಚಹಾ ಹೀರುತ್ತಲೇ ತನ್ನ ಸಕಲ ವ್ಯಾಧಿಗಳನ್ನೂ ನೀಗಿಕೊಳ್ಳುತ್ತಾ ಬೆಳೆಯುವ ಮೊಮ್ಮಗಳು. ಬಾಲ್ಯದಿಂದಲೇ ಉದ್ಯಮಿ ಆಗುವ ಕನಸು ಕಾಣುತ್ತಾಳೆ. ಅಣ್ಣ, ಅಕ್ಕ, ಅಪ್ಪ, ಅಮ್ಮ, ಅಜ್ಜ ಇವರೆಲ್ಲರ ತುಂಬುಕುಟುಂಬದಲ್ಲಿ ಇಡುಕಿರಿದ ಸಮಸ್ಯೆಗಳ ನಡುವೆಯೇ ಅವಳು ಆ ಕನಸನ್ನು ಹೇಗೆ ನನಸಾಗಿಸಿಕೊಳ್ಳುತ್ತಾಳೆ ಎನ್ನುವುದು ಕಥಾಹಂದರ. ಅಮೆರಿಕದಲ್ಲಿ ಚಹಾ ವ್ಯಾಪಾರದ ಸಾಮ್ರಾಜ್ಯ ಕಟ್ಟಿ, ಎದುರಾಳಿಗಳ ಕುತಂತ್ರ ಮೀರಿಯೂ ಜಯಿಸುವ ಯಶೋಗಾಥೆ ಇದರಲ್ಲಿದೆ.

ನಾಯಕಿ ಕೀರ್ತಿ ಸುರೇಶ್ ಚಿತ್ರದ ಜೀವಾನಿಲ. ಮುದ್ದು ಮುಖದ ಮೇಲೆ ಘನತೆಯನ್ನು ಕೂರಿಸಿಕೊಂಡಂತೆ ಕಾಣುವ ಅವರು ತಮ್ಮ ಪಳಗಿದ ಅಭಿನಯದಿಂದ ಆವರಿಸಿಕೊಳ್ಳುತ್ತಾರೆ. ಚಿತ್ರದ ಬಹುತೇಕ ಫ್ರೇಮ್‌ಗಳಲ್ಲಿ ಅವರೇ ಇರುವುದರಿಂದ ಸಿನಿಮಾ ಸಹಜವಾಗಿಯೇ ಕಣ್ಣು ಕೀಲಿಸಿಕೊಳ್ಳುತ್ತದೆ. ಅವರಿಗೆ ಪ್ರತಿನಾಯಕನಾಗಿ ಜಗಪತಿ ಬಾಬು ಇದ್ದಾರೆ. ಈ ಇಬ್ಬರ ಸವಾಲು–ಜವಾಬುಗಳಿಗೆ ಎಸ್. ತಮನ್ ಹಿನ್ನೆಲೆ ಸಂಗೀತಕ್ಕೆ ಬಳಸಿರುವ ಸಿಂಥಸೈಸರ್ ಸಿನಿಮೀಯ ಸ್ಪರ್ಶ ನೀಡಿದೆ.

ನಾಯಕಿಯನ್ನು ಪ್ರಗತಿಶೀಲಳೂ ಹಠವಾದಿಯೂ ಆಗಿಸಿರುವ ಪರಿಕಲ್ಪನೆ ಚೆನ್ನಾಗಿದೆ. ಅದನ್ನೇ ಎದ್ದುಕಾಣುವಂತೆ ಮಾಡಲು ಉಳಿದೆಲ್ಲ ಪಾತ್ರಗಳನ್ನು, ಅದರಲ್ಲೂ ಪುರುಷ ಪಾತ್ರಗಳನ್ನು ಸೊರಗುವಂತೆ ಮಾಡಿರುವುದು ನಿರ್ದೇಶಕರ ಅನುಕೂಲಸಿಂಧುತ್ವಕ್ಕೆ ಹಿಡಿದ ಕನ್ನಡಿ. ಸಮಸ್ಯೆಗಳು ಎದುರಾಗುವುದರಲ್ಲೂ ಲಯ ಇರಬೇಕು ಎಂದು ನಿರ್ದೇಶಕರು ಭಾವಿಸಿರುವುದೇ ಕೊರತೆಯಾಗಿಬಿಟ್ಟಿದೆ. ಇದೇ ಒಂದು ಸಾಲಿನ ಕಥೆಯನ್ನು ಇನ್ನಷ್ಟು ಸಾವಧಾನದಿಂದ, ಇಷ್ಟೊಂದು ಸಿನಿಮೆಟಿಕ್ ಆಗದಂತೆ ಹೇಳುವ ಸಾಧ್ಯತೆ ಇತ್ತು. ಅದನ್ನು ಆಗುಮಾಡಿದ್ದರೆ ಕಥಾ ಪರಿಣಾಮದಲ್ಲಿ ಜಿಗಿತ ಸಾಧ್ಯವಿತ್ತು. ಡ್ಯಾನಿ–ಸ್ಯಾಂಚೆಜ್ ಲೋಪೆಸ್, ಸುಜಿತ್ ವಾಸುದೇವ್ ಸಿನಿಮಟೋಗ್ರಫಿ ಎಲ್ಲವನ್ನೂ, ವಿಶೇಷವಾಗಿ ನಾಯಕಿಯ ಭಾವಗಳನ್ನು ಚೆಂದ ಮಾಡಿ ತೋರಿಸಿದೆ. ಕನ್ನಡದ ನಟ ಸುಮಂತ್ ಶೈಲೇಂದ್ರ ಅವರಿಗೆ ತೂಕದ ಪಾತ್ರವೊಂದು ಚಿತ್ರದಲ್ಲಿದೆ. ಜಗಪತಿ ಬಾಬು ಎಂದಿನ ಖದರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಅಲ್ಲಲ್ಲಿ ಹಿಂಜಿದಂತೆ, ಬೋರ್ ಹೊಡೆಸುವಂತೆ ಭಾಸವಾಗುವ ಈ ಸಿನಿಮಾ, ಕಲಾವಿದೆಯಾಗಿ ಕೀರ್ತಿ ಸುರೇಶ್ ಪ್ರತಿಭೆಗೆ ಮತ್ತೊಮ್ಮೆ ಕನ್ನಡಿ ಹಿಡಿದಿರುವುದಂತೂ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.