ADVERTISEMENT

‘ಪುತ್ತಂ ಪುದು ಕಾಲೈ’ ಸಿನಿಮಾ ವಿಮರ್ಶೆ: ಮನುಷ್ಯ ಸಂಬಂಧಗಳ ಭಾವುಕ ಕಥಾಗುಚ್ಛ

ವಿಶಾಖ ಎನ್.
Published 16 ಅಕ್ಟೋಬರ್ 2020, 19:30 IST
Last Updated 16 ಅಕ್ಟೋಬರ್ 2020, 19:30 IST
‘ಪುತ್ತಂ ಪುದು ಕಾಲೈ’ ಚಿತ್ರಪಟ
‘ಪುತ್ತಂ ಪುದು ಕಾಲೈ’ ಚಿತ್ರಪಟ   

ಚಿತ್ರ: ‘ಪುತ್ತಂ ಪುದು ಕಾಲೈ’ (ತಮಿಳು ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ).

ನಿರ್ಮಾಣ: ಮೀನಾಕ್ಷಿ ಸಿನಿಮಾಸ್, ಲಯನ್ ಟೂತ್ ಸ್ಟುಡಿಯೋಸ್, ಮದ್ರಾಸ್ ಟಾಕೀಸ್, ರಾಜೀವ್ ಮೆನನ್ ಪ್ರೊಡಕ್ಷನ್ಸ್, ಸ್ಟೋನ್ ಬೆಂಚ್

ನಿರ್ದೇಶನ: ಸುಧಾ ಕೊಂಗಾರಾ, ಗೌತಮ್ ಮೆನನ್, ರಾಜೀವ್ ಮೆನನ್, ಸುಹಾಸಿನಿ ಮಣಿರತ್ನಂ, ಕಾರ್ತಿಕ್ ಸುಬ್ಬರಾಜ್

ತಾರಾಗಣ: ಜಯರಾಂ, ಕಾಳಿದಾಸ್ ಜಯರಾಂ, ಊರ್ವಶಿ, ಕಲ್ಯಾಣಿ ಪ್ರಿಯದರ್ಶನ್, ರಿತು ವರ್ಮಾ, ಶ್ರುತಿ ಹಾಸನ್, ಆಂಡ್ರಿಯೊ ಜೆರೆಮಿಯಾ, ಲೀಲಾ ಸ್ಯಾಮ್ಸನ್, ಎಂ.ಎಸ್. ಭಾಸ್ಕರ್, ಬಾಬ್ಬಿ ಸಿಂಹ, ಇತರರು

ADVERTISEMENT

ಕೊರೊನಾ ಸೋಂಕು ವ್ಯಾಪಿಸತೊಡಗಿದ ಮೇಲೆ ಮನರಂಜನಾ ಉದ್ಯಮ ಹೊಸ ಮಾರ್ಗಗಳ ಶೋಧದಲ್ಲಿದೆ. ‘ಪುತ್ತಂ ಪುದು ಕಾಲೈ’ ತಮಿಳು ಸಿನಿಮಾ ಈ ನಿಟ್ಟಿನಲ್ಲಿ ಗುರುತಿಸಬೇಕಾದ ಪ್ರಯೋಗ. ಐದು ಕಥೆಗಳ ಗುಚ್ಛವಿರುವ ಚಿತ್ರವಿದು. ಒಂದರ ಕಥನಕ್ಕೂ ಇನ್ನೊಂದರದಕ್ಕೂ ಸುತರಾಂ ಸಂಬಂಧವಿಲ್ಲ. ಆದರೆ, ಲಾಕ್‌ಡೌನ್‌ ಸಂದರ್ಭದಲ್ಲಿ ಮನುಷ್ಯ ಸಂಬಂಧಗಳ ನಡುವಿನ ಕೆಲವು ಸಹಜ, ಸರಳ ಪ್ರಸಂಗಗಳನ್ನು ಬದುಕಿಗೆ ಹತ್ತಿರವಾಗುವ ರೀತಿಯಲ್ಲಿ ತಮಿಳು ಸಂಸ್ಕೃತಿಯ ಸಮೇತ ಈ ಗುಚ್ಛ ಪ್ರಸ್ತುತಪಡಿಸಿದೆ. ಮಣಿರತ್ನಂ ತರಹದ ಮಾಗಿದ ನಿರ್ದೇಶಕ ಕೂಡ ಬರಹಗಾರರ ತಂಡದಲ್ಲಿ ಇರುವುದು ಈ ಕಥಾಗೊಂಚಲಿನ ವಿಶೇಷ.

ಇಳಮೈ ಇದೋ ಇದೋ, ಅವರುಂ ನಾನು–ಅವಳುಂ ನಾನುಂ, ಕಾಫಿ...ಎನಿಒನ್?, ರಿಯೂನಿಯನ್, ಮಿರ‍್ಯಾಕಲ್ ಇವು ಸಿನಿಮಾದಲ್ಲಿನ ಉಪಕಥೆಗಳ ಶೀರ್ಷಿಕೆಗಳು.

ಹಳೆಯ ಪ್ರೇಮಿಗಳು ಹಾಗೂ ಯುವಪ್ರೇಮಿಗಳ ಒಂದೇ ಬಗೆಯ ಪ್ರೇಮರಾಗವನ್ನು ಮೊದಲ ಕಥೆ ತುಳುಕಿಸುತ್ತದೆ. ಎರಡು ಬೇರೆಯದೇ ತಲೆಮಾರಿನವರ ನಡುವಿನ ಭಾವಶಿಲ್ಪ ಒಂದೇ ರೀತಿ ಇರುವುದನ್ನು ನಿರ್ದೇಶಕಿ ಸುಧಾ ಲವಲವಿಕೆಯ ನಿರೂಪಣೆಯಿಂದ ಕಟ್ಟಿದ್ದಾರೆ. ಎರಡನೇ ಕಥೆಯಲ್ಲಿ ತಾತ– ಮೊಮ್ಮಗಳ ಅತಿಭಾವುಕ ಕಥೆ ಇದೆ. ಇದನ್ನು ಗೌತಮ್ ಮೆನನ್ ನಿರ್ದೇಶಿಸಿದ್ದಾರೆ. ಎಂ.ಎಸ್. ಭಾಸ್ಕರ್ ತಾತನ ಪಾತ್ರದಲ್ಲಿ ಜೀವವೀಣೆ ಮೀಟಿದ್ದಾರೆ. ಮೆಲೋಡ್ರಾಮಾದ ತಮ್ಮದೇ ಶೈಲಿಯ ಕಥಾರೂಹನ್ನು ಇಲ್ಲಿಯೂ ಗೌತಮ್ ನೆಚ್ಚಿಕೊಂಡಿದ್ದಾರೆ. ಮಗಳ ಮದುವೆಗೆ ಒಪ್ಪದ ತಾತನ ಮನೆಗೆ ಲಾಕ್‌ಡೌನ್ ಕಾಲದಲ್ಲಿ ಬರುವ ಮೊಮ್ಮಗಳು ಹೇಗೆ ಸಂಬಂಧದ ಪುನರುತ್ಥಾನ ಮಾಡುತ್ತಾಳೆ ಎನ್ನುವ ಮನಮಿಡಿಯುವ ಕಥೆ ಇದು. ‘ಕಾಫಿ...ಎನಿಒನ್?’ ಕಥೆಯಲ್ಲಿ ಸುಹಾಸಿನಿ ಅವರ ಕುಟುಂಬದ ಸದಸ್ಯರೇ ಪಾತ್ರಧಾರಿಗಳಾಗಿದ್ದಾರೆ. ಅವರ ಎರಡನೇ ತಂಗಿಯ ಪಾತ್ರದಲ್ಲಿ ಶ್ರುತಿ ಹಾಸನ್ ನಟಿಸಿದ್ದಾರೆ.

ಎರಡು ತಿಂಗಳಿಂದ ಕೋಮಾದಲ್ಲಿ ಇರುವ ಮೂವರು ಹೆಣ್ಣುಮಕ್ಕಳ ತಾಯಿಯನ್ನು ಆಸ್ಪತ್ರೆಯಿಂದ ಆಕೆಯ ಪತಿ ಮನೆಗೆ ಕರೆತರುತ್ತಾರೆ. ಮಕ್ಕಳ ವಿರೋಧದ ನಡುವೆಯೂ ಮನೆಯಲ್ಲೇ ಸಣ್ಣ ಸಣ್ಣ ಮಾತು–ಕೃತಿಗಳ ಮೂಲಕ ಅವರು ರೋಗಿ ವೃದ್ಧೆ ಚಿಗಿತುಕೊಳ್ಳುವಂತೆ ಮಾಡುತ್ತಾರೆ. ತನ್ನ 75ನೇ ಜನ್ಮದಿನವೇ ಆಕೆ ಪ್ರಜ್ಞಾವಸ್ಥೆಗೆ ಮರಳುವ ಕಥೆಯಲ್ಲಿ ಅನುಕೂಲಸಿಂಧುತ್ವವಿದೆ. ಆದರೂ ನೋಡಿಸಿಕೊಳ್ಳುತ್ತದೆ. ಮಾದಕದ್ರವ್ಯ ವ್ಯಸನಿ ಹುಡುಗಿಯು ಕಾಲೇಜು ಗೆಳೆಯನ ಮನೆಗೆ ಆಕಸ್ಮಿಕವಾಗಿ ಹೋಗಿ, ಅಲ್ಲಿ ತನ್ನನ್ನು ತಾನೇ ಮರುಶೋಧಕ್ಕೆ ಒಳಪಡಿಸಿಕೊಳ್ಳುವ ಹೊಸಕಾಲದ ಕಥೆಯನ್ನು ‘ರೀಯೂನಿಯನ್’ ಒಳಗೊಂಡಿದ್ದು, ರಾಜೀವ್ ಮೆನನ್ ಇದನ್ನು ನಿರ್ದೇಶಿಸಿದ್ದಾರೆ. ಇಬ್ಬರು ಕಳ್ಳರ ‘ಮಿರ‍್ಯಾಕಲ್’ ಕಥನ ತೋರಿಸುವುದಕ್ಕಿಂತ ಹೇಳದೇ ಉಳಿಸಿ, ತಲೆಯಲ್ಲಿ ಹುಳ ಬಿಡುತ್ತದೆ. ಅದು ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಶೈಲಿ.

ಸ್ಟಾರ್‌ಗಿರಿಯ ಹಂಗೇ ಇಲ್ಲದೆ ಎಲ್ಲ ನಟ–ನಟಿಯರು ಕಥನಾವಕಾಶವನ್ನು ಅನುಭವಿಸಿದ್ದಾರೆ.

ಕೋವಿಡ್ ಕಾಲದ ಈ ಹೊತ್ತಿನಲ್ಲಿ ಕಣ್ಣಲ್ಲಿ ಆನಂದಬಾಷ್ಪ ತರಿಸುತ್ತಾ, ಸಣ್ಣಗೆ ಕಚಗುಳಿ ಇಟ್ಟು, ಮುದಗೊಳಿಸುವ ಇಂತಹ ಸಣ್ಣ ಕಥೆಗಳ ಅವಶ್ಯಕತೆಯಂತೂ ಇದೆ. ದಕ್ಷಿಣ ಭಾರತದ ಸಿನಿಮಾ ದುರಿತ ಕಾಲದ ಸವಾಲಿಗೆ ಸಜ್ಜಾಗುತ್ತಿರುವ ಆಶಾದಾಯಕ ಬೆಳವಣಿಗೆಗೂ ಈ ಸಿನಿಮಾ ಸಾಕ್ಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.