ADVERTISEMENT

ನಾದರಸಿಕರ ಮನರಂಜಿಸಿದ ಚಿಟ್‌ ಮೇಳ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 16:05 IST
Last Updated 10 ಜುಲೈ 2020, 16:05 IST
ಅರಸೀಕೆರೆಯ ಕುಮಾರಯ್ಯ ಮತ್ತು ತಂಡದ ‘ಚಿಟ್‌ ಮೇಳ‘.
ಅರಸೀಕೆರೆಯ ಕುಮಾರಯ್ಯ ಮತ್ತು ತಂಡದ ‘ಚಿಟ್‌ ಮೇಳ‘.   

ವಿಶಾಲವಾದ ಬೆಟ್ಟದ ತುಂಬಾ ಬಂಡೆಗಳ ರಾಶಿ. ಬಂಡೆಗಳ ಸುತ್ತ ಹಸಿರ ಹೊದಿಕೆ ಜತೆಗೆ ತಂಪಾದ ಗಾಳಿ. ಇಂಥ ಹಿತಕರವಾದ ವಾತಾವರಣದಲ್ಲಿ ಹಾಸನ ಜಿಲ್ಲೆ ಅರಸೀಕೆರೆಯ ಕುಮಾರಯ್ಯ ಮತ್ತು ತಂಡ ‘ಪ್ರಜಾವಾಣಿ ಫೇಸ್‌ಬುಕ್‌ ಲೈವ್’ನಲ್ಲಿ ವಾದ್ಯಗಳೊಂದಿಗೆ ‘ಚಿಟ್‌ ಮೇಳ’ ಪ್ರಸ್ತುತಪಡಿಸಿದರು.

ಅಮೆರಿಕ ‘ನಾವಿಕ’ ಉತ್ಸವದಲ್ಲಿ ನಾಲ್ಕು ಸಾವಿರ ಜನರ ಎದುರು ಸೂಪರ್‌ ಹಿಟ್ ಪ್ರದರ್ಶನ ನೀಡಿದ್ದ ‘ಚಿಟ್‌ ಮೇಳದ’ ಈ ತಂಡ ಫೇಸ್‌ಬುಕ್‌ ಲೈವ್‌ನಲ್ಲಿ ಸತತ ಒಂದು ತಾಸು 25ಕ್ಕೂ ಹೆಚ್ಚು ಹಾಡುಗಳನ್ನು ನುಡಿಸುವ ಮೂಲಕ ಸಂಗೀತ ಪ್ರೇಮಿಗಳ ಮನರಂಜಿಸಿತು. ಮುಖವೀಣೆ, ಕರಡೇವು, ದೋಣು, ತಮಟೆ, ತಾಳ ವಾದ್ಯಗಳ ನಾದ-ತಾಳದ ಜತೆಗೆ ವಾದ್ಯಗಾರರು ಹೆಜ್ಜೆ ಹಾಕುತ್ತಾ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಗ್ರಾಮೀಣ ಕಲೆಗಳು, ಜಾನಪದ ಸಂಸ್ಕೃತಿ ಕಣ್ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ಇಂಥ ಕಾರ್ಯಕ್ರಮಗಳನ್ನು ಪ್ರದರ್ಶಿಸುತ್ತಿರುವ ಸ್ವಾಗತಾರ್ಹ ಕ್ರಮ ಎಂದು ಕಾರ್ಯಕ್ರಮ ವೀಕ್ಷಿಸುತ್ತಿದ್ದ ಅನೇಕರು ಕಮೆಂಟ್‌ ಬಾಕ್ಸ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು.

ADVERTISEMENT

ಜನಪ್ರಿಯ ಜಾನಪದ ಗೀತೆಗಳಾದ ‘ಚನ್ನಪ್ಪ ಚನ್ನೇಗೌಡ ಕುಂಬಾರ ಮಾಡಿದ ಕೊಡನವ್ವಾ..’, ‘ಘಲ್ಲು ಘಲ್ಲೆನತಾ ಗೆಜ್ಜೆ ಘಲ್ಲು ತಾಜೆನುತಾ.. ಗೆಜ್ಜೆ ಘಲ್ಲು ತಾಜೆನುತಾ.. ನಮ್ ಬಲ್ಲಿದರಂಗನ ವಲ್ಲಿಯ ಮೇಲೆ ಚೆಲ್ಲಿದರೋಕಳಿಯೋ...', ಹಾಡುಗಳಿಗೆ ಸಹಕಲಾವಿದರು ವಾದ್ಯ ನುಡಿಸುತ್ತಲೇ ಸಣ್ಣದಾಗಿ ಹೆಜ್ಜೆ ಹಾಕಿದರು.

‘ಚೆಲ್ಲಿದರು ಮಲ್ಲಿಗೆಯಾ ಬಾಣಾಸುರರೇರಿ ಮ್ಯಾಗೆ..’, ‘ಚೆಲುವಯ್ಯ ಚೆಲುವೋ ತಾನಿತಂದಾನ ಚಿನ್ಮಾಯಾರೂಪೇ ಕೋಲಣ್ಣ ಕೋಲೇ..’ ಹಾಡು ನುಡಿಸಿದರು. ಶಿಕ್ಷಕಿ ಮಮತಾ ಅರಸೀಕರೆ ಕಾರ್ಯಕ್ರಮ ನಿರೂಪಿಸಿದರು. ಕುಮಾರಯ್ಯ ಮುಖವೀಣೆ ನುಡಿಸಿದರು. ಪಕ್ಕವಾದ್ಯದಲ್ಲಿ ಮುಖವೀಣೆ (ಹಿಮ್ಮೇಳ)– ಜಯಣ್ಣ, ಶೃತಿ – ರಘು, ಕರಡೇವು – ಸುರೇಶ್ ಮತ್ತು ತಿಮ್ಮಯ್ಯ, ದೋಣು – ಓಂಕಾರಮೂರ್ತಿ, ಗುರುಸಿದ್ದಪ್ಪ, ತಾಳ– ಮೂರ್ತಿ, ತಮಟೆ– ಪುಟ್ಟಸ್ವಾಮಿ ಜತೆಯಾಗಿದ್ದರು. ಕುಮಾರಯ್ಯ ಮತ್ತು ತಂಡದ ಚಿಟ್‌ ಮೇಳದ ಪೂರ್ಣ ಕಾರ್ಯಕ್ರಮಕ್ಕಾಗಿFb.com/Prajavani.net ಲಿಂಕ್‌ ಕ್ಲಿಕ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.