ADVERTISEMENT

ಬಾಲಿವುಡ್‌ನಲ್ಲಿ ನನ್ನ ವಿರುದ್ಧ ತಂಡವೊಂದು ಕೆಲಸ ಮಾಡುತ್ತಿದೆ: ಎ.ಆರ್‌. ರೆಹಮಾನ್‌

​ಪ್ರಜಾವಾಣಿ ವಾರ್ತೆ
Published 26 ಜುಲೈ 2020, 6:19 IST
Last Updated 26 ಜುಲೈ 2020, 6:19 IST
ಎ.ಆರ್‌. ರೆಹಮಾನ್‌
ಎ.ಆರ್‌. ರೆಹಮಾನ್‌   

‘ಬಾಲಿವುಡ್‌ನಲ್ಲಿ ನನ್ನ ವಿರುದ್ಧ ತಂಡವೊಂದು ಕೆಲಸ ಮಾಡುತ್ತಿದೆ. ಆ ಕಾರಣಕ್ಕೆ ಇತ್ತೀಚೆಗೆ ನನಗೆ ಬಾಲಿವುಡ್‌ನಲ್ಲಿ ಹೆಚ್ಚು ಅವಕಾಶಗಳು ಸಿಗುತ್ತಿಲ್ಲ. ಆ ತಂಡ ನನ್ನ ಬಗ್ಗೆ ಇಲ್ಲ ಸಲ್ಲದ ಅಪವಾದಗಳನ್ನು ಹಬ್ಬಿಸುತ್ತಿದೆ. ಜೊತೆಗೆ ನನಗೆ ಅವಕಾಶಗಳು ಸಿಗದಂತೆ ನೋಡಿಕೊಳ್ಳುತ್ತಿದೆ’ ಎನ್ನುವ ಮೂಲಕ ಬಾಲಿವುಡ್‌ನ ಸ್ವಜನಪಕ್ಷಪಾತದ ಬಗ್ಗೆ ಮಾತನಾಡಿದ್ದಾರೆ ಗಾಯಕ ಹಾಗೂ ಆಸ್ಕರ್‌ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಆರ್‌. ರೆಹಮಾನ್‌.

ರೆಡಿಯೊ ಮಿರ್ಚಿ ಎಫ್ಎಂ ಬಾನುಲಿ ಕೇಂದ್ರದೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ‘ನೀವು ಇತ್ತೀಚೆಗೆ ಹಿಂದಿ ಸಿನಿಮಾಗಳಿಗಿಂತ ತಮಿಳು ಸಿನಿಮಾಗಳಿಗೆ ಹೆಚ್ಚು ಕೆಲಸ ಮಾಡುತ್ತೀರಿ. ಇದಕ್ಕೆ ಕಾರಣವೇನು?’ ಎಂಬ ಪ್ರಶ್ನೆಗೆ ರೆಹಮಾನ್‌ ಉತ್ತರಿಸಿದ್ದು ಹೀಗೆ.

‘ನಾನು ಯಾವತ್ತೂ ಒಳ್ಳೆಯ ಸಿನಿಮಾಗಳಿಗೆ ಕೆಲಸ ಮಾಡಲು ಆಗುವುದಿಲ್ಲ ಎಂದಿಲ್ಲ. ಆದರೆ ಅಲ್ಲಿ ನನ್ನ ವಿರುದ್ಧ ಕೆಲಸ ಮಾಡುವ ಒಂದು ತಂಡವಿದೆ. ಆ ತಂಡ ನನ್ನ ಬಗ್ಗೆ ತಪ್ಪುಗ್ರಹಿಕೆಯನ್ನು ಹುಟ್ಟುಹಾಕುವಂತೆ ಮಾಡುತ್ತಿದೆ. ಆ ಕಾರಣಕ್ಕೆ ನನಗೆ ಅವಕಾಶಗಳು ಸಿಗುತ್ತಿಲ್ಲ’ ಎಂದಿದ್ದಾರೆ ಸಂಗೀತ ಮಾಂತ್ರಿಕ.

ADVERTISEMENT

ಶುಕ್ರವಾರ ಬಿಡುಗಡೆಯಾದ ನಟ ಸುಶಾಂತ್‌ ಸಿಂಗ್ ರಜಪೂತ್ ಅಭಿಯನದ ಕೊನೆಯ ಚಿತ್ರ ‘ದಿಲ್ ಬೆಚಾರ’ ಗೆ ರೆಹಮಾನ್ ಸಂಗೀತ ನಿರ್ದೇಶನ ಮಾಡಿದ್ದರು. ನಿರ್ದೇಶಕ ಮುಕೇಶ್ ಛಾಭ್ರಾ ಅವರ ಚೊಚ್ಚಲ ಸಿನಿಮಾ ಇದು. ಸಿನಿಮಾದ ಸಂಗೀತಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

‘ಮುಕೇಶ್ ನನ್ನ ಬಳಿ ಬಂದಾಗ 2 ದಿನಗಳಲ್ಲಿ ನಾಲ್ಕು ಹಾಡುಗಳನ್ನು ಅವರಿಗೆ ನೀಡಿದ್ದೆ. ಆಗ ಅವರು ನನಗೆ ಹೇಳಿದ್ದರು ‘‘ಅನೇಕ ಜನರು ನನ್ನನ್ನು ನಿಮ್ಮ ಬಳಿಗೆ ಹೋಗಬೇಡ ಎಂದು ತಡೆದಿದ್ದರು. ಅಲ್ಲದೇ ಒಂದರ ಹಿಂದೆ ಒಂದರಂತೆ ನಿಮ್ಮ ಬಗ್ಗೆ ಕತೆಗಳನ್ನು ಹೇಳಿದ್ದರು’’ ಎಂದಿದ್ದರು. ಅದನ್ನು ಕೇಳಿದ ಮೇಲೆ ನನಗೆ ಅರ್ಥವಾಗಿತ್ತು. ಇತ್ತೀಚೆಗೆ ನನಗೆ ಬಾಲಿವುಡ್‌ನಲ್ಲಿ ಯಾವ ಕಾರಣಕ್ಕೆ ಅವಕಾಶಗಳು ಕಡಿಮೆಯಾಗುತ್ತಿವೆ ಹಾಗೂ ಒಳ್ಳೆಯ ಸಿನಿಮಾಗಳು ಯಾಕೆ ನನಗೆ ಸಿಗುತ್ತಿಲ್ಲ ಎಂಬುದು ಕುರಿತು ಸ್ಪಷ್ಟ ಚಿತ್ರಣ ಸಿಕ್ಕಿತ್ತು. ಯಾಕೆಂದರೆ ನನ್ನ ವಿರುದ್ಧ ಒಂದು ದೊಡ್ಡ ತಂಡವೇ ಕೆಲಸ ಮಾಡುತ್ತಿದೆ. ಕೆಲವರು ನನ್ನಿಂದ ಒಳ್ಳೆಯ ಸಂಗೀತವನ್ನು ಹಾಗೂ ಕೆಲಸವನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಆದರೆ ಇನ್ನೊಂದು ತಂಡ ಅದು ನಡೆಯದಂತೆ ತಡೆ ಹಾಕುತ್ತಿದೆ. ಅವರು ನನಗೆ ತಿಳಿಯದಂತೆ ನನ್ನ ವೃತ್ತಿ ಬದುಕನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ’ ಎಂದಿದ್ದಾರೆ ರೆಹಮಾನ್‌.

‘ಈ ಬಗ್ಗೆ ನನಗೆ ಬೇಸರವಿಲ್ಲ. ಯಾಕೆಂದರೆ ನನಗೆ ವಿಧಿಯ ಮೇಲೆ ನಂಬಿಕೆ ಇದೆ. ಎಲ್ಲವೂ ದೇವರೇ ನೀಡುವುದು ಎಂಬುದನ್ನು ನಾನು ನಂಬುತ್ತೇನೆ. ನಾನು ನನಗೆ ಸಿಕ್ಕಿರುವ ಸಿನಿಮಾಗಳಿಗೆ ಒಳ್ಳೆಯ ರೀತಿಯಲ್ಲಿ, ಮನಃಪೂರ್ವಕವಾಗಿ ಕೆಲಸ ಮಾಡುತ್ತೇನೆ’ ಎಂದಿದ್ದಾರೆ‌.

ಜೊತೆಗೆ ‘ನಾನು ನಿಮ್ಮೆಲ್ಲರಿಗೂ ನನ್ನ ಬಳಿ ಬರಲು ಸ್ವಾಗತ ಕೋರುತ್ತಿದ್ದೇನೆ. ಒಳ್ಳೆಯ ಸಿನಿಮಾಗಳನ್ನು ಮಾಡೋಣ’ ಎಂದು ಶತ್ರುಗಳನ್ನು ಸ್ವಾಗತಿಸಿದ್ದಾರೆ.

2009ರ ‘ಸ್ಲಮ್‌ ಡಾಗ್ ಮಿಲೇನಿಯರ್‌’ ಸಿನಿಮಾಕ್ಕೆ ರೆಹಮಾನ್ ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ‘99 ಸಾಂಗ್ಸ್‌’‌ ಸಿನಿಮಾಕ್ಕೆ ಹಣ ಹೂಡುವ ಮೂಲಕ ನಿರ್ಮಾಪಕರೂ ಆಗಿದ್ದಾರೆ ರೆಹಮಾನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.