ADVERTISEMENT

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ: ಕ್ಷಮೆ ಕೋರಿದ 'ತಾಂಡವ್‌' ತಂಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜನವರಿ 2021, 15:21 IST
Last Updated 18 ಜನವರಿ 2021, 15:21 IST
ತಾಂಡವ್‌ ವೆಬ್‌ ಸರಣಿಯ ಪೋಸ್ಟರ್‌
ತಾಂಡವ್‌ ವೆಬ್‌ ಸರಣಿಯ ಪೋಸ್ಟರ್‌    

ನವದೆಹಲಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ವಿವಾದಕ್ಕೆ ಗುರಿಯಾಗಿದ್ದ 'ತಾಂಡವ್‌' ವೆಬ್‌ ಸರಣಿಯ ನಿರ್ದೇಶಕ ಅಲಿ ಅಬ್ಬಾಸ್‌ ಜಾಫರ್‌ ಕ್ಷಮೆ ಕೋರಿದ್ದಾರೆ.

ರಾಜಕೀಯ ಕಥಾಹಿನ್ನೆಲೆ ಇರುವ ಈ ಸರಣಿಯಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಆರೋಪಿಸಲಾಗಿತ್ತು. ಅಲ್ಲದೆ, ಈ ಸಂಬಂಧ ದೂರುಗಳು ದಾಖಲಾಗಿದ್ದವು.

ಈ ಕುರಿತು ಟ್ವೀಟ್‌ ಮಾಡಿರುವ ಅಲಿ ಅಬ್ಬಾಸ್‌ ಜಾಫರ್‌, ವೆಬ್‌ ಸರಣಿಯ ಪಾತ್ರವರ್ಗ ಮತ್ತು ಸಿಬ್ಬಂದಿ ಪರವಾಗಿ ಕ್ಷಮೆಯಾಚಿಸುವುದಾಗಿ ಹೇಳಿದ್ದಾರೆ.

ADVERTISEMENT

'ಜನರು ವ್ಯಕ್ತಪಡಿಸಿದ ಕಳವಳಗಳನ್ನು ನಾವು ಅರ್ಥ ಮಾಡಿಕೊಳ್ಳುತ್ತೇವೆ. ಅದು ಯಾರೊಬ್ಬರ ಭಾವನೆಗಳನ್ನು ನೋಯಿಸಿದ್ದರೆ ಬೇಷರತ್ತಾಗಿ ಕ್ಷಮೆಯಾಚಿಸುತ್ತೇವೆ' ಎಂದು ಅವರು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ವೆಬ್‌ ಸರಣಿ ವಿರುದ್ಧ ಪತ್ರ ಬರೆದಿದ್ದ ಸಂಸದ

ತಾಂಡವ್‌ ವೆಬ್‌ ಸರಣಿ ವಿಚಾರವಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಬಿಜೆಪಿ ಸಂಸದ ಮನೋಜ್‌ ಕೊಟಕ್‌ ಪತ್ರ ಬರೆದಿದ್ದಾರೆ.

'ತಾಂಡವ್ ವೆಬ್‌ ಸರಣಿಯ ನಿರ್ಮಾಪಕರು ಹಿಂದೂ ದೇವರುಗಳನ್ನು ಉದ್ದೇಶಪೂರ್ವಕವಾಗಿ ಗೇಲಿ ಮಾಡಿದ್ದಾರೆ ಮತ್ತು ಹಿಂದೂ ಧಾರ್ಮಿಕ ಭಾವನೆಗಳಿಗೆ ಅಗೌರವ ತೋರಿದ್ದಾರೆ. ಆ ಹಿನ್ನೆಲೆಯಲ್ಲಿ ತಾಂಡವ್‌ ಸರಣಿಯನ್ನು ನಿಷೇಧಿಸಬೇಕೆಂದು' ಸಂಸದರು ಪತ್ರದಲ್ಲಿ ತಿಳಿಸಿದ್ದಾರೆ.

ಬಿಜೆಪಿ ಶಾಸಕರಿಂದ ದೂರು

ವೆಬ್‌ ಸರಣಿಗೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಕಪಿಲ್‌ ಮಿಶ್ರಾ ಅವರು ಲಖನೌನಲ್ಲಿ ದೂರು ದಾಖಲಿಸಿದ್ದರು. ಮುಂಬೈನ ಘಾಟ್ಕೋಪರ್ ಪೊಲೀಸ್ ಠಾಣೆಯಲ್ಲಿ ವೆಬ್ ಸರಣಿಯ ನಿರ್ಮಾಪಕರ ವಿರುದ್ಧ ಬಿಜೆಪಿ ಶಾಸಕ ರಾಮ್ ಕದಮ್ ದೂರು ದಾಖಲಿಸಿದ್ದರು.

ಜ. 15ರಂದು ಬಿಡುಗಡೆಯಾಗಿದ್ದ ಸರಣಿ

ಸೈಫ್ ಅಲಿಖಾನ್ ಪ್ರಧಾನ ಪಾತ್ರದಲ್ಲಿ ನಟಿಸಿರುವ ತಾಂಡವ್‌ ವೆಬ್‌ಸರಣಿ ಜ.15ರಂದು ಅಮೆಜಾನ್ ಪ್ರೈಮ್‌ ವಿಡಿಯೊದಲ್ಲಿ ಬಿಡುಗಡೆಯಾಗಿದೆ.

ರಾಜಕೀಯ ಕಥಾಹಿನ್ನೆಲೆ ಇರುವ ಈ ಸರಣಿಗೆ ಅಲಿ ಅಬ್ಬಾಸ್‌ ಜಾಫರ್‌ ನಿರ್ದೇಶನ ಮಾಡಿದ್ದಾರೆ. ಹಿಮಾಂಶು ಕಿಶನ್ ಮೆಹ್ರಾ ಹಾಗೂ ಅಲಿ ಅಬ್ಬಾಸ್ ಜಾಫರ್ ಈ ಸರಣಿ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಇದರಲ್ಲಿ ಒಟ್ಟು 9 ಎಪಿಸೋಡ್‌ಗಳಿವೆ.

ಟ್ರೇಲರ್‌ ಮೂಲಕ ಹೆಚ್ಚು ನಿರೀಕ್ಷೆ ಹುಟ್ಟು ಹಾಕಿದ್ದ ತಾಂಡವ್‌ನಲ್ಲಿ ಸೈಫ್‌ ಅವರು ಸಮರ ಪ್ರತಾಪ್‌ ಸಿಂಗ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ತಮ್ಮ ತಂದೆಯ ನಿಗೂಢ ಸಾವಿನ ಬಳಿಕ ಪ್ರಧಾನಿ ಹುದ್ದೆಯ ಆಕಾಂಕ್ಷಿಯಾಗಿ ರಾಜಕೀಯ ರಂಗಕ್ಕೆ ಬರುತ್ತಾನೆ ಸಮರ್. ಅನುರಾಧಾ ಎಂಬ ಪ್ರಧಾನಿ ಆಕಾಂಕ್ಷಿಯ ಪಾತ್ರದಲ್ಲಿ ಡಿಂಪಲ್ ಕಪಾಡಿಯಾ ನಟಿಸಿದ್ದಾರೆ.

ಈ ವೆಬ್‌ಸರಣಿಯಲ್ಲಿ ಸುನಿಲ್ ಗ್ರೋವರ್‌, ಟಿಗ್ಮಂಶು ಧುಲಿಯಾ, ಕುಮುದ್ ಮಿಶ್ರಾ, ಮೊಹಮದ್‌ ಜಿಸಾನ್‌ ಅಯೂಬ್‌, ಕೃತಿಕಾ ಕಮ್ರಾ, ಸಾರಾ ಜೇನ್ ಡಯಾಸ್, ಗೌಹರ್ ಖಾನ್‌, ಕೃತಿಕಾ ಅವಸ್ಥಿ, ಡಿನೊ ಮೋರಿಯಾ, ಅನೂಪ್ ಸೋನಿ, ಪರೇಶ್‌ ಪಹುಜಾ, ಸಂಧ್ಯಾ ಮೃದುಲ್‌, ಸೋನಾಲಿ ನಗ್ರಾನಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.