ADVERTISEMENT

ಬೇಸಿಗೆಗೆ ಬೆವರದೆ ಸ್ಟೈಲಿಶ್‌ ಆಗಿರೋಣ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2019, 19:56 IST
Last Updated 13 ಮಾರ್ಚ್ 2019, 19:56 IST
   

ಬೇಸಿಗೆ ಧಾಂಗುಡಿ ಇಟ್ಟು ಬಂದಿದೆ. ಒಂದೂರಿನಲ್ಲಿ ಕುಳಿತು ತಮ್ಮೂರಿನದ್ದಷ್ಟೇ ಅಲ್ಲ, ಯಾವ ಜಿಲ್ಲೆಯಲ್ಲಿ ಎಷ್ಟು ತಾಪಮಾನ ದಾಖಲಾಗುತ್ತಿದೆ ಎಂದು ಬೆಳಿಗ್ಗೆಯೇ ಮೊಬೈಲ್‌ನಲ್ಲಿ ತಿಳಿದುಕೊಳ್ಳುವುದು ಬೇಸಿಗೆಯಲ್ಲಿ ಸಾಮಾನ್ಯ.

ಬೆವರಿನೊಂದಿಗೆ ಚರ್ಮದ ಜಿಡ್ಡೆಲ್ಲ ತೊಳೆದುಹೋಗಿ ಶುಭ್ರವಾಗುವ ಬೇಸಿಗೆ ಎಂದರೆ ಕೆಲವರಿಗೆ ಖುಷಿ! ಆಹಾರ ಸೇವನೆಯಲ್ಲೇ ಬೇಸಿಗೆಯ ಬೇಗೆಯನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು ಎಂದು ತಿಳಿಹೇಳುವವರೂ ಇದ್ದಾರೆ.ಇನ್ನು ಕೆಲವರಿಗೆ ಬೇಸಿಗೆ ಎಂದರೆ ಬಿಂದಾಸ್‌ ದಿನಗಳು. ಸ್ಟೈಲಿಶ್‌ ಆಗಿರಲು ಹೇಳಿಮಾಡಿಸಿದ ದಿನಗಳು!

ಮಳೆಗಾಲ ಮತ್ತು ಚಳಿಗಾಲದಲ್ಲಿ ಒಲ್ಲದ ಮನಸ್ಸಿನಲ್ಲಿ ಧರಿಸಿದ ಬಟ್ಟೆಗಳನ್ನೆಲ್ಲ ಬೀರುವಿನ ಮೂಲೆಗೆ ಸರಿಸಿ ಈಗ ಬೇಕಾದಂತೆ ಸ್ಟೈಲಿಶ್‌ ಆಗಿರಬಹುದು. ಇಡೀ ದೇಹಕ್ಕೆ ಸಾಧ್ಯವಾದಷ್ಟೂ ಗಾಳಿಯಾಡಲು ಅವಕಾಶವಿರುವಂತೆ ಮಾಡಬೇಕು, ಟಾಪ್‌ ಸ್ಲೀವ್‌ಲೆಸ್‌ ಆಗಿದ್ದರೂ ಶಾರ್ಟ್ಸ್‌ ಅಥವಾ ತ್ರೀ ಫೋರ್ತ್‌ ಪ್ಯಾಂಟ್‌ ಧರಿಸಿದರೂ ಓಕೆ. ಒಂದರ್ಥದಲ್ಲಿ ಬೇಸಿಗೆಯಲ್ಲಿ ನಮ್ಮನ್ನು ನಾವು ‘ಏರ್‌ ಕಂಡಿಶನ್ಡ್‌’ ಆಗಿಟ್ಟುಕೊಂಡಷ್ಟೂ ಬೇಗೆಗೆ ಬೆವರುವ ಪ್ರಶ್ನೆಯಿಲ್ಲ.

ADVERTISEMENT

ಫಿಗರ್‌ ಫಿಟ್‌ ಉಡುಪು ಬೇಡ

ಚಳಿಗಾಲದಲ್ಲಿ ಲಾಂಗ್‌ ಗೌನ್‌, ತೋಳಿಲ್ಲದ ಟಾಪ್‌ ಅಥವಾ ಫ್ರಾಕ್‌ ಧರಿಸಿದರೆ ಥರ ಥರ ನಡುಗುವಂತಾಗುತ್ತದೆ. ಹಾಗಾಗಿ ಅಚ್ಚುಮೆಚ್ಚಿನ ಉಡು‍ಪುಗಳನ್ನೂ ಧರಿಸಲಾಗದೆ ಬೇಸರಿಸಿಕೊಂಡಿರಬಹುದು. ಬೇಸಿಗೆ ಬೇಡುವುದು ಅಂತಹ ಉಡುಪುಗಳನ್ನೇ. ಗಾಳಿಯಾಡುವಂತಹ ಯಾವುದೇ ಉಡುಪು ಬೇಸಿಗೆಯಲ್ಲಿ ಚರ್ಮ ಉಸಿರುಗಟ್ಟುವುದನ್ನು ತಡೆಯುತ್ತವೆ.

ಸಡಿಲವಾದ ಬಟ್ಟೆ ಧರಿಸುವುದು ಬೇಸಿಗೆಗೆ ಸೂಕ್ತ. ಬಟ್ಟೆ ಬಿಗಿಯಾಗಿದ್ದಷ್ಟೂ ಚರ್ಮಕ್ಕೆ ಗಾಳಿಯಾಡದೇ ಇರುವ ಕಾರಣ ನವೆ, ಕಿರಿಕಿರಿ, ಉರಿ ಕಾಣಿಸಿಕೊಳ್ಳುವುದು ಸಾಮಾನ್ಯ. ಎಲ್ಲಾ ಫ್ಯಾಬ್ರಿಕ್‌ಗಳೂ ಈ ಹವಾಮಾನದ ತಾಪಮಾನಕ್ಕೆ ಹೊಂದುವುದಿಲ್ಲ. ಹಾಗಾಗಿ, ಫಿಗರ್‌ ಫಿಟ್‌, ಸ್ಕಿನ್‌ ಟೈಟ್‌ನಂತಹ ಸ್ಟೈಲ್‌ಗಳನ್ನು ಕೈಬಿಟ್ಟು ಸಡಿಲವಾದ ಉಡುಪುಗಳನ್ನೇ ಆಯ್ದುಕೊಳ್ಳುವುದು ಸೂಕ್ತ.

ತುಂಬು ತೋಳು ಇದ್ದರೆ ಬಿಸಿಲಿಗೆ ಚರ್ಮ ಮಂಕಾಗುವುದು ಮತ್ತು ಬೇಗೆಗೆ ಸುಟ್ಟುಹೋಗುವುದನ್ನು ತಪ್ಪಿಸಬಹುದು. ಆದರೆ ಚಳಿಗಾಲದಲ್ಲಿ ಆಯ್ದುಕೊಂಡಂತೆ ಪದರದ ಬಟ್ಟೆಗಳು ಬೇಸಿಗೆಗೆ ಖಂಡಿತಾ ಬೇಡ. ಸಿಂಥೆಟಿಕ್‌ ಟಾಪ್‌, ಫ್ರಾಕ್‌, ಪ್ಯಾಂಟ್‌ ಧರಿಸುವುದಾದರೂ ತೀರಾ ಸಡಿಲವಾಗಿರಲಿ.ಕಫ್ತಾನ್‌, ಟ್ಯೂನಿಕ್ಸ್‌ ಬೇಸಿಗೆಗೆ ಸೂಕ್ತ. ಹತ್ತಿ, ಮಲ್‌ ಬಟ್ಟೆ, ಖಾದಿಯ ಯಾವುದೇ ಬಗೆ, ಲಿನನ್‌, ರಬ್ಬರ್‌ ಸಿಲ್ಕ್‌, ರೇಷ್ಮೆ ಹೀಗೆ ಆಯ್ದ ಫ್ಯಾಬ್ರಿಕ್‌ಗಳು ಈ ಹವಾಮಾನದಲ್ಲಿ ದೇಹವನ್ನು ತಂಪಾಗಿರಿಸುತ್ತವೆ.

ಜೀನ್ಸ್‌ ಪ್ಯಾಂಟ್‌ ಎಲ್ಲಾ ಋತುಗಳಿಗೂ ಒಪ್ಪುತ್ತದೆ. ತೆಳುವಾದ ಜೀನ್ಸ್‌ ಶರ್ಟು ಮತ್ತು ಕುರ್ತಾ ಕೂಡಾ ಬೆವರನ್ನು ಹೀರಿಕೊಂಡು ಆರಾಮದ ಅನುಭವ ನೀಡಬಲ್ಲವು. ಪ್ಯಾಂಟ್‌ ಧರಿಸಿ ಬೇಜಾರಾಗಿದೆ. ಬೇಸಿಗೆಯಲ್ಲಿ ಸ್ವಲ್ಪ ಗ್ಲಾಮರಸ್ ಆಗಿ ಕಾಣಿಸಿಕೊಳ್ಳೋಣ ಎಂದುಕೊಳ್ಳುವವರಿಗೆ ಶಾರ್ಟ್ಸ್‌, ನೀ ಲೆಂಗ್ತ್‌, ತ್ರೀ ಫೋರ್ತ್‌, ಸಿಗರೇಟು ಪ್ಯಾಂಟುಗಳು ಮೊದಲ ಆಯ್ಕೆಯಾಗಬಹುದು.

ಚಪ್ಪಲಿಯತ್ತ ಚಿತ್ತ

ಆಯಾ ಹವಾಮಾನಕ್ಕೆ ತಕ್ಕುದಾಗಿ ಪಾದರಕ್ಷೆ ಆಯ್ಕೆ ಮಾಡುವುದು ಈಗ ಸಾಮಾನ್ಯ. ಮಳೆಗಾಲದಲ್ಲಿ ಪಾದ ತೋಯದಂತೆ, ತೋಯ್ದರೂ ಚಪ್ಪಲಿ ಸಮೇತ ತೊಳೆಯಬಹುದಾದಂತಹುವುಗಳನ್ನು ಆರಿಸುತ್ತೇವೆ.

ಚಳಿಗಾಲದಲ್ಲಿ ಪಾದ ಒಡೆಯುವುದು, ಚರ್ಮ ಒಣಗುವುದು ಮತ್ತು ಕಪ್ಪಾಗುವುದನ್ನು ತಡೆಯಲು ಸಾಕ್ಸ್‌ ಸಹಿತ ಚಪ್ಪಲಿ ಧರಿಸುತ್ತೇವೆ.

ಬೇಸಿಗೆಯಲ್ಲಿಯೂ ಈ ಮೂರೂ ಸಮಸ್ಯೆಗಳು ಇರುತ್ತಾವಾದರೂ ಪಾದ ಮುಚ್ಚಿಕೊಳ್ಳುವಂತಹ ಚಪ್ಪಲಿಗಿಂತ ತೆರೆದ ವಿನ್ಯಾಸದವುಗಳಿಗೆ ಆದ್ಯತೆ ಹೆಚ್ಚು. ಶೂ, ಬೂಟ್‌ಗಳನ್ನು ಧರಿಸಲೇಬೇಕಾದ ಸಂದರ್ಭ ಇದ್ದರೂ ಫ್ಲಿಫ್‌ ಫ್ಲಾಪ್‌, ಸ್ಯಾಂಡಲ್ಸ್‌, ಸ್ನೀಕರ್ಸ್‌, ಫ್ಲಾಟ್‌ ಅಥವಾ ಮೊಕ್ಯಾಸಿನ್‌, ರೋಪ್‌ ಸ್ಯಾಂಡಲ್ಸ್‌ ಧರಿಸುವುದು ಜಾಣತನ. ಯಾವುದೇ ಬಗೆಯ ಶೂ ಹಾಗೂ ಎತ್ತರದ ಹಿಮ್ಮಡಿಯ ಪಾದರಕ್ಷೆ ಧರಿಸಿದರೂ ಆಗಾಗ್ಗೆ ಕಳಚಿಟ್ಟು ಪಾದಕ್ಕೆ ಗಾಳಿಯಾಡಲು ಮತ್ತು ವಿಶ್ರಾಂತಿ ಪಡೆಯಲು ಅವಕಾಶ ಕೊಡಬೇಕು.

ಆ್ಯಂಕಲ್‌, ಮಂಡಿವರೆಗಿನ ಬೂಟ್‌ಗಳು ಬೇಸಿಗೆಯಲ್ಲಿ ಧರಿಸಲೇಬಾರದು. ಬೆಲ್ಟ್‌ ಚಪ್ಪಲಿ ಎಂದು ಆಡುಭಾಷೆಯಲ್ಲಿ ಕರೆಯುವ ರೋಪ್‌ ಸ್ಯಾಂಡಲ್‌ಗಳ ಇನ್‌ಸೋಲ್‌ನ ಗುಣಮಟ್ಟ ಪಾದದ ಆರೋಗ್ಯ ಮತ್ತು ಕೋಮಲತೆಯನ್ನು ಕಾಪಾಡಿಕೊಳ್ಳುವಂತಿರಬೇಕು. ಬೆಳಗ್ಗಿನಿಂದ ಸಂಜೆವರೆಗೂ ಚಪ್ಪಲಿ/ಶೂ ಧರಿಸಿದ್ದರೆ ಸಂಜೆಯ ವೇಳೆಗೆ ದುರ್ವಾಸನೆ ಶುರುವಾಗುತ್ತದೆ.

ಹೀಗೆ, ಬಿಸಿಲಿನ ಕಾಲದಲ್ಲಿ ಫ್ಯಾಷನ್‌ಗೆ ಸಿಗುವ ಹೆಚ್ಚು ಅವಕಾಶಗಳನ್ನು ಬುದ್ಧಿವಂತಿಕೆಯಿಂದ ಅನುಸರಿಸಿದರೆ ಬಿಸಿಲು ಹಾಗೂ ಬೇಸಿಗೆ
ಬೇಗೆ ಎನಿಸದು.

ಹಿತವಾಗಿರಲಿ ಮೇಕಪ್‌

ಮೇಕಪ್‌ ಮಾಡಿಕೊಂಡರೆ ಮುಖ ಲಕ್ಷಣವಾಗಿ ಕಾಣುತ್ತದೆ. ಸಣ್ಣಪುಟ್ಟ ಕೊರತೆಗಳನ್ನು ಮೇಕಪ್‌ ಮುಚ್ಚಿಹಾಕುವುದು ಇದಕ್ಕೆ ಕಾರಣ. ಸುಕ್ಕಿಲ್ಲದ ಚರ್ಮ, ತಿದ್ದಿ ತೀಡಿದ ಮುಖ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ ಎಂಬ ಭಾವ ಸುಳ್ಳಲ್ಲ.

ಬೇಸಿಗೆಯಲ್ಲಿ ಯಾವ ಬಗೆಯಲ್ಲಿ ಮೇಕಪ್‌ ಮಾಡಿಕೊಳ್ಳಬೇಕು, ಯಾವ ಕ್ರೀಂ, ಲೋಶನ್‌ ಹಚ್ಚಿಕೊಳ್ಳಬೇಕು, ಹಚ್ಚಿಕೊಳ್ಳಬಾರದು ಎಂಬುದು ನಮ್ಮ ಗೊಡವೆಯಲ್ಲಿರಬೇಕು. ಪ್ರಸಾಧನಗಳಲ್ಲಿನ ರಾಸಾಯನಿಕಗಳು ಚರ್ಮ, ತುಟಿ ಮತ್ತು ಕಣ್ಣಿನ ಒಳಗಿಳಿದು ಸಮಸ್ಯೆ ಉಂಟು ಮಾಡುವ ಸಂಭವ ಹೆಚ್ಚು. ಹಾಗಾಗಿ ಆಯ್ಕೆ ವೇಳೆ ಹುಷಾರಾಗಿರಬೇಕು.

ಮಾಯಿಶ್ಚರೈಸರ್‌ ಹಚ್ಚಿದ ಬಳಿಕ, ಸನ್‌ಸ್ಕ್ರೀನ್‌ ಲೋಷನ್‌ ಕಡ್ಡಾಯವಾಗಿ ಹಚ್ಚಬೇಕು. ನಂತರ ಬೇಕೆನಿಸಿದರೆ ಮಾತ್ರ ಟಾಲ್ಕಂ ಪೌಡರ್‌ನಿಂದ ಡಸ್ಟಿಂಗ್ ಮಾಡಿಕೊಳ್ಳಿ. ಬ್ಲಶ್‌, ಮಸ್ಕರಾ, ಐ ಲೈನರ್‌, ಕಾಜಲ್‌ ಹಚ್ಚಿಕೊಳ್ಳುವಾಗ ಹುಷಾರಾಗಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.