ADVERTISEMENT

ಕುಸಿದ ಮಗಳ ಮನೆಯಲ್ಲೇ ರಂಗಭೂಮಿ ಕಲಾವಿದನ ದುಸ್ತರ ಬದುಕು

ಭದ್ರತಾ ಸಿಬ್ಬಂದಿ ಕೆಲಸವಾದರೂ ಕೊಡಿ: ರಂಗಭೂಮಿ ನಿರ್ದೇಶಕ ಪ್ರಕಾಶ ಕಡಪಟ್ಟಿ ಕಣ್ಣೀರು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 7:58 IST
Last Updated 26 ಸೆಪ್ಟೆಂಬರ್ 2020, 7:58 IST
ಕುಂದಗೋಳ ತಾಲ್ಲೂಕಿನ ಇನಾಂಕೊಪ್ಪ ಗ್ರಾಮದಲ್ಲಿ ಮಳೆಗೆ ಮುರಿದು ಬಿದ್ದ ಕಲಾವಿದ ಪ್ರಕಾಶ ಕಡಪಟ್ಟಿ ವಾಸವಿರುವ ಮನೆ
ಕುಂದಗೋಳ ತಾಲ್ಲೂಕಿನ ಇನಾಂಕೊಪ್ಪ ಗ್ರಾಮದಲ್ಲಿ ಮಳೆಗೆ ಮುರಿದು ಬಿದ್ದ ಕಲಾವಿದ ಪ್ರಕಾಶ ಕಡಪಟ್ಟಿ ವಾಸವಿರುವ ಮನೆ   

ಹುಬ್ಬಳ್ಳಿ: ‘ರಂಗಭೂಮಿಯಲ್ಲಿ ನಟ, ನಿರ್ದೇಶಕ ಮತ್ತು ಹಾಡುಗಾರನಾಗಿ 55 ವರ್ಷ ದುಡಿದಿದ್ದೇನೆ. ಈಗ ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಿದೆ. 15 ದಿನಗಳ ಹಿಂದೆ ಮಳೆಗೆ ಬಿದ್ದ ಮಗಳ ಮನೆಯ ಇನ್ನೊಂದು ಮೂಲೆಯಲ್ಲಿ ವಾಸವಾಗಿದ್ದೇನೆ. ಕನಿಷ್ಠ ನನಗೊಂದು ಭದ್ರತಾ ಸಿಬ್ಬಂದಿಯ ಕೆಲಸವಾದರೂ ಕೊಡಿ. ಬದುಕಿದ್ದಷ್ಟು ದಿನ ಜೀವನ ಸವೆಸುತ್ತೇನೆ...’

–ಕಣ್ಣೀರು ಹಾಕಿ ಮಾಧ್ಯಮಗಳ ಮುಂದೆ ಹೀಗೆ ಮನವಿ ಮಾಡಿದ್ದು ರಂಗಭೂಮಿ ಕಲಾವಿದ ಪ್ರಕಾಶ ಕಡಪಟ್ಟಿ. ಮೂಲತಃ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಕಡಪಟ್ಟಿಯವರಾದ ಪ್ರಕಾಶ ಅವರಿಗೆ ಈಗ 73 ವರ್ಷ ವಯಸ್ಸು. ಒಂದು ಕಣ್ಣಿನ ದೃಷ್ಟಿ ಮಾತ್ರ ಇದೆ. ಆ ಕಣ್ಣು ಕೂಡ ಸರಿಯಾಗಿ ಕಾಣುತ್ತಿಲ್ಲ. ಸದ್ಯಕ್ಕೆ ಅವರು ಕುಂದಗೋಳ ತಾಲ್ಲೂಕಿನ ಇನಾಂಕೊಪ್ಪ ಗ್ರಾಮದಲ್ಲಿ ಮಗಳು ವೀಣಾ ಹಿರೇಮಠ ಅವರ ಬಿದ್ದುಹೋದ ಮನೆಯಲ್ಲಿ ವಾಸವಾಗಿದ್ದಾರೆ.

ಪ್ರಕಾಶ ತಂದೆ ಶಂಕ್ರಯ್ಯ ಅವರಿಗೆ ನಾಟಕದ ಬಗ್ಗೆ ವಿಪರೀತ ಪ್ರೀತಿ. ತಂದೆಯ ಹಾದಿಯಲ್ಲಿಯೇ ಸಾಗಿದ ಮಗ ಊರೂರು ಅಲೆದು ನಾಟಕ ರಂಗದಲ್ಲಿ ಬದುಕು ಕಟ್ಟಿಕೊಂಡರು. 1967ರಲ್ಲಿ ಗುರುಪ್ರಸಾದ ನಾಟ್ಯ ಸಂಘ ಕಂಪನಿ ಆರಂಭಿಸಿ ಮದನ ಮೋಹನ, ಬಹುದ್ದೂರ ಮಗ, ಬೆಂಗಳೂರು ಬಾಬಾ, ಭಲೇ ಬಗಳೆ, ಚಿನ್ನದ ಗೊಂಬೆ, ಸತಿ ಸಂಸಾರದ ಜ್ಯೋತಿ, ಭೂಮಿ ತೂಕದ ಹೆಣ್ಣು, ತವರು ಬಿಟ್ಟ ತಂಗಿ, ಮುತೈದೆಗೆ ಕುತ್ತು ಐದು ಮತ್ತು ಬಂಗಾರದ ಮನುಷ್ಯ ಹೀಗೆ ಹಲವಾರು ನಾಟಕಗಳನ್ನು ರಚಿಸಿ, ಅಭಿನಯಿಸಿದ್ದಾರೆ.

ADVERTISEMENT

ಚನ್ನಪ್ಪ ಚನ್ನಗೌಡ ನಾಟಕವು ಪ್ರಕಾಶ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಇದು ಹುಬ್ಬಳ್ಳಿಯಲ್ಲಿ 2,000 ಪ್ರದರ್ಶನಗಳನ್ನು ಕಂಡಿತ್ತು. ಗುಬ್ಬಿ ವೀರಣ್ಣ, ನಾಟಕ ಅಕಾಡೆಮಿ, ರಂಗಶ್ರೀ, ಕಲಾ ದ್ರೋಣ, ರಂಗಗುರು, ಬಿಂಬ, ಕಲಾಕಿರಣ ಹೀಗೆ ಹಲವಾರು ಪ್ರಶಸ್ತಿಗಳು ಕೂಡ ಬಂದಿವೆ ಎಂದು ತಮಗೆ ಸಂದ ಪ್ರಶಸ್ತಿಗಳತ್ತ ಕೈ ತೋರಿಸಿ ಹೇಳುತ್ತಾರೆ ಪ್ರಕಾಶ.

‘1999ರಲ್ಲಿ ಪತ್ನಿ ಸುನಂದಾ ತೀರಿಕೊಂಡಳು. 2011ರಲ್ಲಿ ತಂದೆ–ತಾಯಿ ನಿಧನರಾದರು. ಸದ್ಯಕ್ಕೆ ಮಗಳ ಮನೆಯಲ್ಲಿ ವಾಸವಾಗಿದ್ದೇನೆ. ಸರ್ಕಾರದಿಂದ ಮೂರ್ನಾಲ್ಕು ತಿಂಗಳಿಗೊಮ್ಮೆ ಬರುವ ಒಂದು ಅಥವಾ ಎರಡು ತಿಂಗಳಿನ ₹1,000 ಮಾಸಾಶನವೇ ಬದುಕಿಗೆ ಆಧಾರ. ಭಿಕ್ಷೆ ಬೇಡುವುದು ಬಿಟ್ಟರೆ ಬೇರೆ ಏನು ಕೆಲಸ ಮಾಡಬೇಕು ಎನ್ನುವುದೇ ತೋಚುತ್ತಿಲ್ಲ’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಾದರು.

‘ತಮ್ಮ ಜೀವನದುದ್ದಕ್ಕೂ ಕಲಾವಿದರನ್ನು ರಂಜಿಸಿದರೂ ಪ್ರಕಾಶ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಅವರಿಗೆ ದಾನಿಗಳು ನೆರವಾದರೆ ಮುಪ್ಪಿನ ದಿನಗಳಲ್ಲಾದರೂ ಸಂತೋಷ ಕಾಣುತ್ತಾರೆ ಎನ್ನುವ ಭರವಸೆಯಿಂದ ನಾವೂ ಅವರಿಗೆ ಕೈ ಜೋಡಿಸಿದ್ದೇವೆ. ಕಲಾಪ್ರೇಮಿಗಳಿಂದ ನೆರವು ಕೊಡಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಉತ್ತರ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷ ಕಳ್ಳೀಮನಿ ಮತ್ತು ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ಧರಾಜ ಕುಂದಗೋಳ ಎಂದು ಹೇಳಿದರು.

ಕಲಾಪ್ರೇಮಿಗಳು ಖಾತೆ ಸಂಖ್ಯೆ: 34416445674, ಐಎಫ್‌ಎಸ್‌ಸಿ ಕೋಡ್‌: SBIN0020824, ಎಸ್‌ಬಿಐ ಬ್ಯಾಂಕ್‌, ಕೊಪ್ಪಿಕರ ರಸ್ತೆ, ಹುಬ್ಬಳ್ಳಿ ಇಲ್ಲಿಗೆ ನೆರವು ನೀಡಬೇಕು ಎಂದು ಅವರು ಪ್ರಕಾಶ ಮನವಿ ಮಾಡಿದರು.

ಪ್ರಕಾಶ ಜಮಖಂಡಿ ತಾಲ್ಲೂಕಿನ ಕಡಪಟ್ಟಿಯವರು ಸದ್ಯಕ್ಕೆ ಕುಂದಗೋಳ ತಾಲ್ಲೂಕಿನ ಇನಾಂಕೊಪ್ಪ ಗ್ರಾಮದಲ್ಲಿ ವಾಸ

1967ರಲ್ಲಿ ಗುರುಪ್ರಸಾದ ನಾಟ್ಯ ಸಂಘ ಸ್ಥಾಪನೆ‌

ಕಲಾವಿದರಾದರೂ ನನ್ನಪ್ಪ ಬದುಕಿನುದ್ದಕ್ಕೂ ಕಷ್ಟ ಅನುಭವಿಸಿದ್ದಾರೆ. ಇಳಿವಯಸ್ಸಿನಲ್ಲಾದರೂ ಅವರು ಸುಖವಾಗಿರಬೇಕು. ದಯವಿಟ್ಟು ಯಾರಾದರೂ ಸಹಾಯ ಮಾಡಿ.

- ವೀಣಾ ಹಿರೇಮಠ ಪ್ರಕಾಶ ಕಡಪಟ್ಟಿ ಅವರ ಮಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.