ADVERTISEMENT

ವಿನೂತನ ಆನ್‌ಲೈನ್ ರಂಗಕಾರ್ಯಕ್ರಮ ‘ಚಾಯ್‌–ವಾಯ್‌ ಅಂಡ್‌ ರಂಗಮಂಚ್‌'

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 15:41 IST
Last Updated 7 ಜುಲೈ 2020, 15:41 IST
ನೀನಾ ಕುಲಕರ್ಣಿ
ನೀನಾ ಕುಲಕರ್ಣಿ   
""

ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ವಿಶ್ವ ರಂಗಭೂಮಿಯನ್ನು ಒಂದೇ ವೇದಿಕೆಗೆ ಕರೆತರುವ ಉದ್ದೇಶದಿಂದಮುಂಬೈನ ರಂಗಭೂಮಿ ತಂಡ ಕಾಕನೇಟ್‌‌ ಥಿಯೇಟರ್ ‘ಚಾಯ್‌–ವಾಯ್‌ ಆಂಡ್‌‌ ರಂಗ್‌ಮಂಚ್‌–2020’ ಎಂಬ ವಿನೂತನ ಆನ್‌ಲೈನ್‌ ರಂಗಕಾರ್ಯಕ್ರಮವನ್ನು ಆರಂಭಿಸಿದೆ.

ಕಾಕನೇಟ್‌ ಥಿಯೇಟರ್‌ನ‌ ಫೇಸ್‌ಬುಕ್‌ ಪುಟದಲ್ಲಿ ಪ್ರತಿದಿನ ಸಂಜೆ 6 ಗಂಟೆಗೆ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ರಂಗಭೂಮಿ ತಜ್ಞರು, ಪ್ರಶಸ್ತಿ ಪುರಸ್ಕೃತ ನಾಟಕಕಾರರು, ನಿರ್ದೇಶಕರು, ಮೇಕಪ್‌ ಪರಿಣಿತರು, ಸಂಗೀತ ಸಂಯೋಜಕರು, ವಿನ್ಯಾಸಕಾರರು, ನೃತ್ಯ ಸಂಯೋಜಕರು ಹಾಗೂ ತಂತ್ರಜ್ಞರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಇದು ರಂಗಭೂಮಿ ವಿದ್ಯಾರ್ಥಿಗಳು, ಹವ್ಯಾಸಿ ಕಲಾವಿದರು, ನಿರ್ದೇಶನ, ಬರಹದ ಬಗ್ಗೆ ಆಸಕ್ತಿ ಇರುವವರಿಗೆ ಅನುಕೂಲ. ಯಾವುದೇ ನೋಂದಣಿ ಇಲ್ಲದೇ, ಈ ಕಾರ್ಯಕ್ರಮವನ್ನುಉಚಿತವಾಗಿ ವೀಕ್ಷಿಸಬಹುದು.

ಏಪ್ರಿಲ್‌ನಿಂದಲೇ ಆರಂಭ

ADVERTISEMENT

‘ಚಾಯ್‌–ವಾಯ್‌ ಆಂಡ್‌ ರಂಗ್‌ಮಂಚ್‌–2020’ ಕಾರ್ಯಕ್ರಮ ಏಪ್ರಿಲ್‌ನಿಂದ ಆರಂಭವಾಗಿದೆ. ಇಲ್ಲಿಯವರೆಗೂ 79 ಕಾರ್ಯಕ್ರಮಗಳು ನಡೆದಿವೆ.ಖ್ಯಾತ ರಂಗಕರ್ಮಿಗಳಾದ ರೀತಾ ಗಂಗೂಲಿ, ಬನ್ಸಿ ಕೌಲ್‌, ಮನೋಜ್‌ ಜೋಷಿ, ಡೋಲಿ ಅಹ್ಲುವಾಲಿಯಾ, ದೇಶದ ಪ್ರಸಿದ್ಧ ಬೊಂಬೆಯಾಟಗಾರ ದಾದಿ ದಿ ಪಡುಂಜಿ, ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮದ ನಿರ್ದೇಶಕ ಸುರೇಶ್‌ ಶರ್ಮಾ ಸೇರಿದಂತೆ 50ಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಜೂನ್‌ 22ರಿಂದ 30ರವರೆಗೆ ನಡೆದ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ರಂಗಕರ್ಮಿಗಳು ಪಾಲ್ಗೊಂಡಿದ್ದರು.

ಜುಲೈ ತಿಂಗಳ ಕಾರ್ಯಕ್ರಮ

ಜುಲೈ ತಿಂಗಳ ಕಾರ್ಯಕ್ರಮದಲ್ಲಿ ದೇಶದ ಪ್ರಸಿದ್ಧ ರಂಗಭೂಮಿ ಕಲಾವಿದರಾದ ಎಂ.ಎಸ್‌. ಸತ್ಯು, ಹೆಗ್ಗೋಡು ಪ್ರಸನ್ನ, ಬಲವಂತ್‌ ಠಾಕೂರ್‌, ಬಾಲಿವುಡ್‌ ನಟಿ ಸೋನಾಲಿ ಕುಲಕರ್ಣಿ, ರಾಜ್‌ಪಾಲ್‌ ಯಾದವ್‌, ಗಾಯಕಿ ಎಂ.ಡಿ ಪಲ್ಲವಿ, ಸಂಗೀತ ನಿರ್ದೇಶಕ ಕುಲದೀಪ್‌ ಸಿಂಗ್‌, ಪ್ರಸಿದ್ಧ ಬರಹಗಾರ ರಂಜಿತ್‌ ಕಪೂರ್‌, ಸೌಮ್ಯ ಜೋಷಿ ಮೊದಲಾದವರು ಭಾಗವಹಿಸಿ, ತಮ್ಮ ರಂಗಭೂಮಿ ಆಸಕ್ತಿ ಹಾಗೂ ಜೀವನದ ಕೆಲ ಮಹತ್ವದ, ಸ್ಫೂರ್ತಿದಾಯಕ ಸಂಗತಿಗಳನ್ನು ಹಂಚಿಕೊಳ್ಳಲಿರುವುದು ವಿಶೇಷ.

‘ಸ್ಥಳೀಯ ಹಾಗೂ ಜಾಗತಿಕವಾಗಿ ಇಡೀ ರಂಗಭೂಮಿ ಸಮುದಾಯವನ್ನು ಒಂದೇ ವೇದಿಕೆಯಲ್ಲಿ ಸೇರಿಸುವುದು, ಕಲಿಕೆ ಜೊತೆಗೆ ವೃತ್ತಿಜೀವನವನ್ನು ರೂಪಿಸಲು ನೆರವಾಗುವುದು ಈ ಕಾರ್ಯಕ್ರಮದ ಉದ್ದೇಶ. ಜುಲೈ 31ರೊಳಗೆ 100ಕ್ಕೂ ಅಧಿಕ ಆನ್‌ಲೈನ್‌ ಕಾರ್ಯಕ್ರಮ ಮಾಡಬೇಕೆಂಬ ಗುರಿಯಿದೆ. ಸದ್ಯದಲ್ಲೇ ಈ ಎಲ್ಲಾ ಸರಣಿ ಕಾರ್ಯಕ್ರಮಗಳು ಕಾಕನೇಟ್‌ ಥಿಯೇಟರ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಸಿಗಲಿದೆ. ಉಚಿತವಾಗಿ ನೋಡಬಹುದು’ ಎಂದು ಕಾಕನೇಟ್‌ ಮೀಡಿಯಾ ಬಾಕ್ಸ್‌ ಎಲ್‌ಎಲ್‌ಪಿ ವ್ಯವಸ್ಥಾಪಕ ನಿರ್ದೇಶಕ ರಶ್ಮಿನ್‌ ಮಜಿಥಿಯಾ ತಿಳಿಸಿದ್ದಾರೆ.

‘ಚಾಯ್‌–ವಾಯ್‌ ಆಂಡ್‌‌ ರಂಗ್‌ಮಂಚ್‌–2020’ ವೀಕ್ಷಣೆಗೆ:https://www.facebook.com/CoconutTheatre/

‌ವಿದೇಶಗಳಲ್ಲಿರುವವರು ಈ ಲೈವ್‌ ಕಾರ್ಯಕ್ರಮವನ್ನು ಅಲ್ಲಿನ ಸಮಯಕ್ಕೆ ಹೊಂದಿಸಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ, ಇಲ್ಲಿ ಸಂಜೆ 6 ಗಂಟೆಗೆ ಪ್ರಸಾರವಾಗುವ ಕಾರ್ಯಕ್ರಮವನ್ನು, ಅಮೆರಿಕದಲ್ಲಿರುವವರು ಬೆಳಿಗ್ಗೆ 5 ಗಂಟೆಗೆ ಲೈವ್‌ ನೋಡಬಹುದು.

ಪ್ರಸನ್ನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.