ADVERTISEMENT

ಸಿದ್ದಾಪುರ: ಹಳ್ಳಿಯ ದೇವಿಯಲ್ಲಿ ಗಾಂಧಿ ತತ್ವದ ಪ್ರತಿಫಲನ

ಜನ ಮೆಚ್ಚುಗೆ ಗಳಿಸಿದ ‘ದೇವಿಯ ದೀವಿಗೆ’ ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದ ಅರಿವು

ರವೀಂದ್ರ ಭಟ್ಟ, ಬಳಗುಳಿ
Published 1 ಅಕ್ಟೋಬರ್ 2020, 19:30 IST
Last Updated 1 ಅಕ್ಟೋಬರ್ 2020, 19:30 IST
ಸಿದ್ದಾಪುರದ ರಂಗಸೌಗಂಧ ತಂಡದವರು ಪ್ರದರ್ಶಿಸಿದ ‘ದೇವಿಯ ದೀವಿಗೆ’ ನಾಟಕದಲ್ಲಿ ದೇವಿ
ಸಿದ್ದಾಪುರದ ರಂಗಸೌಗಂಧ ತಂಡದವರು ಪ್ರದರ್ಶಿಸಿದ ‘ದೇವಿಯ ದೀವಿಗೆ’ ನಾಟಕದಲ್ಲಿ ದೇವಿ   

ಸಿದ್ದಾಪುರ: ಮಹಾತ್ಮ ಗಾಂಧೀಜಿ ತಮ್ಮ ಬದುಕನ್ನೇ ಸತ್ಯ ಹಾಗೂ ಅಹಿಂಸೆಯ ಪ್ರಯೋಗಶಾಲೆ ಎಂದು ಪರಿಗಣಿಸಿದ್ದರು. ಅವರ ಸತ್ಯ ನಿಷ್ಠೆಯ ಆಚರಣೆ, ಈ ತಾಲ್ಲೂಕಿನ ದೇವಿ ಎಂಬ ಅನಕ್ಷರಸ್ಥ ಮಹಿಳೆಯಲ್ಲಿಯೂ ಪ್ರತಿಫಲನಗೊಂಡಿದ್ದು ಸ್ವಾತಂತ್ರ್ಯ ಹೋರಾಟದ ರೋಚಕ ಇತಿಹಾಸದಲ್ಲಿ ದಾಖಲಾಗಿದೆ.

1934ರಲ್ಲಿ ಕಾರವಾರ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದ ಮಹಾತ್ಮ ಗಾಂಧೀಜಿ ಸಿದ್ದಾಪುರಕ್ಕೂ ಬಂದಿದ್ದರು. ಪಟ್ಟಣದ ಹುಡದಿಬೈಲಿನಲ್ಲಿ ನಡೆದ ಸಭೆಯಲ್ಲಿ, ಮಹಾತ್ಮ ಗಾಂಧೀಜಿ ಅವರಿಗೆ ದೇವಿಯನ್ನು ಪರಿಚಯಿಸಿ, ಅವಳ ಪ್ರಾಮಾಣಿಕತೆಯನ್ನು ವಿವರಿಸಲಾಯಿತು. ಆಗ ಮಹಾತ್ಮರ ಕಣ್ಣುಗಳು ತುಂಬಿಬಂದವು. ಆಕೆಯ ಸತ್ಯನಿಷ್ಠೆಯನ್ನು ಅವರು ಶ್ಲಾಘಿಸಿದರು ಎಂಬುದು ಕೂಡ ಅತ್ಯಂತ ಮಹತ್ವದ ಸಂಗತಿ.

ತಾಲ್ಲೂಕಿನ ಕೆಳಗಿನಮನೆಯ ನಾಗೇಶ ಹೆಗಡೆಯವರದ್ದು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಕುಟುಂಬ. ದೇವಿ ಈ ಕುಟುಂಬದ ಕೆಲಸದ ಆಳು. ಚಳವಳಿಯಲ್ಲಿ ಭಾಗಿಯಾಗಿದ್ದಕ್ಕೆ ನಾಗೇಶ ಹೆಗಡೆ ಅವರು ಕುಟುಂಬದ ಸೊತ್ತುಗಳನ್ನು ಜಪ್ತಿ ಮಾಡಲಾಗುತ್ತದೆ. ನಾಗೇಶ ಹೆಗಡೆ ಮತ್ತು ಅವರ ಸಹೋದರ ಸುಬ್ರಾಯ ಹೆಗಡೆ ಜೈಲು ಪಾಲಾಗುತ್ತಾರೆ. ಜೈಲಿಗೆ ತೆರಳುವ ಮೊದಲು ನಾಗೇಶ ಹೆಗಡೆ ಆಪತ್ಕಾಲದ ಸಮಯಕ್ಕಾಗಿ ಕಾಯ್ದುಕೊಂಡು ಬಂದಿದ್ದ ತಮ್ಮ ಕುಟುಂಬದ ಎಲ್ಲ ಬಂಗಾರದ ದಾಗೀನುಗಳನ್ನು ಒಂದು ಚರಿಗೆಯಲ್ಲಿಟ್ಟು, ತನ್ನ ಸಹೋದರ ಸುಬ್ರಾಯ ಹೆಗಡೆಗೆ ಕೊಡುತ್ತಾರೆ.

ADVERTISEMENT

ಸುಬ್ರಾಯ ಹೆಗಡೆ ಚರಿಗೆಯನ್ನು ತೋಟದಲ್ಲಿ ಮುಚ್ಚಿಡುತ್ತಾರೆ. ಅವರಿಬ್ಬರೂ ಜೈಲು ಸೇರಿದ ನಂತರ ಅವರ ತೋಟದಲ್ಲಿ ದೇವಿಗೆ ಬಂಗಾರವಿದ್ದ ಚರಿಗೆ ಕಣ್ಣಿಗೆ ಬೀಳುತ್ತದೆ. ಅದು ನಾಗೇಶ ಹೆಗಡೆಯರದ್ದು ಎಂದೂ ತಿಳಿಯುತ್ತದೆ. ಅದನ್ನು ತನ್ನ ಗುಡಿಸಲಿಗೆ ತಂದು, ಅಡುಗೆ ಒಲೆಯ ಸಮೀಪ ನೆಲದೊಳಗೆ ಬಚ್ಚಿಡುತ್ತಾಳೆ. ಕುಡುಕ ಗಂಡನಿಂದ ಮತ್ತು ಪೊಲೀಸರಿಂದ ಅದನ್ನು ರಕ್ಷಿಸುತ್ತಾಳೆ. ಜೈಲಿನಿಂದ ವಾಪಸು ಬಂದ ನಾಗೇಶ ಹೆಗಡೆಯವರಿಗೆ ದಾಗೀನು ಚರಿಗೆಯನ್ನು ವಾಪಸ್ ನೀಡುತ್ತಾಳೆ. ಆಕೆಯ ಪ್ರಾಮಾಣಿಕತೆಗೆ ಮೆಚ್ಚಿದ ನಾಗೇಶ ಹೆಗಡೆ, ಉಡುಗೊರೆಯಾಗಿ ಕೊಡಲು ಬಂದ ಬಂಗಾರವನ್ನು ತಿರಸ್ಕರಿಸುತ್ತಾಳೆ.

ಈ ಕಥಾ ವಸ್ತುವನ್ನಾಧರಿಸಿ ಗೌರೀಶ ಕಾಯ್ಕಿಣಿ ಹಲವು ದಶಕಗಳ ವರ್ಷ ಹಿಂದೆಯೇ ನಾಟಕ ಬರೆದಿದ್ದರು. ತಾಲ್ಲೂಕಿನ ಲೇಖಕ ಶ್ರೀಪಾದ ಹೆಗಡೆ ಮಗೇಗಾರ ಇದೇ ಪ್ರಸಂಗವನ್ನಾಧರಿಸಿ ‘ದೇವಿಯ ದೀವಿಗೆ’ ಎಂಬ ನಾಟಕವನ್ನು 1998ಲ್ಲಿ ಪ್ರಕಟಿಸಿದರು. ಅದನ್ನು ಈ ಹಿಂದೆ ಮಗೇಗಾರಿನ ಮಹಾಗಣಪತಿ ನಾಟ್ಯ ಕಲಾಸಂಘದವರು ಮತ್ತು ಇದೇ ಫೆಬ್ರವರಿಯಲ್ಲಿ ಗಣಪತಿ ಹೆಗಡೆ ಹುಲೀಮನೆ ನೇತೃತ್ವದ ರಂಗ ಸೌಗಂಧ ತಂಡದವರು ಪ್ರದರ್ಶಿಸಿದ್ದಾರೆ.

‘ದೇವಿಯ ದೀವಿಗೆ ನಾಟಕದ ಐದಾರು ಪ್ರದರ್ಶನ ನೀಡಿದ್ದೇವೆ. ಕೋವಿಡ್ –19 ಕಾರಣದಿಂದ ನಂತರ ಪ್ರದರ್ಶನ ಮುಂದುವರಿಸಲಿಲ್ಲ. ಈ ನಾಟಕವನ್ನು ಜನ ಮೆಚ್ಚಿಕೊಂಡಿದ್ದಾರೆ’ ಎಂದು ನಾಟಕದ ನಿರ್ದೇಶಕ ಗಣಪತಿ ಹೆಗಡೆ ಹುಲಿಮನೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.