ADVERTISEMENT

ಹೊಸ ಮುಖ್ಯಮಂತ್ರಿ ಹಳೆ ಮುಖ್ಯಮಂತ್ರಿಯಂತಲ್ಲ!

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 15:22 IST
Last Updated 30 ಮಾರ್ಚ್ 2021, 15:22 IST
ಮುಖ್ಯಮಂತ್ರಿ ಚಂದ್ರು
ಮುಖ್ಯಮಂತ್ರಿ ಚಂದ್ರು   

ಬೆಂಗಳೂರು: 30ನೇ ವಯಸ್ಸಿನಲ್ಲೇ ರಾಜ್ಯದ ಶಾಶ್ವತ ‘ಮುಖ್ಯಮಂತ್ರಿ’ ಆದ ಚಂದ್ರು ಅವರು ಇದೀಗ 68ನೇ ವಯಸ್ಸಿನಲ್ಲಿ ‘ಮತ್ತೆ ಮುಖ್ಯಮಂತ್ರಿ’ಯಾಗಲು ಸಜ್ಜಾಗಿದ್ದಾರೆ.

ಕಲಾ ಗಂಗೋತ್ರಿ ರಂಗತಂಡವು 50 ವರ್ಷ ಪೂರೈಸಿರುವ ಸಂದರ್ಭದಲ್ಲೇ ಏ.4ರಂದು ಹೊಸ ನಾಟಕ ‘ಮತ್ತೆ ಮುಖ್ಯಮಂತ್ರಿ’ ಪ್ರದರ್ಶನಗೊಳ್ಳಲಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಚಂದ್ರು, ‘ಕಲಾ ಗಂಗೋತ್ರಿ ರಂಗತಂಡಕ್ಕೆ 50ನೇ ವರ್ಷದ ಸಂಭ್ರಮದಲ್ಲಿ ಏ.2ರಿಂದ ಏ.4ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸುವರ್ಣ ರಂಗ ಹಬ್ಬ ನಡೆಯಲಿದೆ. ಏ.2ರಂದು ಮುಖ್ಯಮಂತ್ರಿ, ಏ.3ರಂದು ಜನಪ್ರಿಯ ಸಂಸಾರಿಕ ನಾಟಕ ಮೈಸೂರು ಮಲ್ಲಿಗೆ ಹಾಗೂ ಏ.4ರಂದು ಮತ್ತೆ ಮುಖ್ಯಮಂತ್ರಿ ಪ್ರದರ್ಶನಗೊಳ್ಳಲಿದೆ’ ಎಂದರು.

ಸಿ.ಡಿ ಹಾವಳಿ ಇಲ್ಲ!

ADVERTISEMENT

‘ಭಾರತಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷ ಕಳೆದ ಹಿನ್ನೆಲೆಯಲ್ಲಿ ಹೊಸ ಮುಖ್ಯಮಂತ್ರಿ ಮಾಡಬೇಕು ಎಂದೆನಿಸಿತು. ಈ ಹಿಂದಿನ ಮುಖ್ಯಮಂತ್ರಿ ಹಿಂದಿ ಮೂಲದ್ದು. ಇದರಲ್ಲಿನ ಮುಖ್ಯಮಂತ್ರಿ ಸಕಲಕಲಾವಲ್ಲಭ. ಇದರಲ್ಲಿ ಮನರಂಜನೆ, ಪಿತೂರಿ, ಕುತಂತ್ರ ಎಲ್ಲವೂ ಇತ್ತು. ಈ ಬಾರಿ ಹೇಗೂ ವಯಸ್ಸಾಗಿದೆ. ವಿವಾದ ಆದರೂ ಪರವಾಗಿಲ್ಲ, ವ್ಯಕ್ತಿಗಳ ಹೆಸರನ್ನು ಹೇಳದೆ ಇಂದಿನ ವಸ್ತುಸ್ಥಿತಿಯನ್ನು ಜನರಿಗೆ ಪ್ರದರ್ಶಿಸುತ್ತಿದ್ದೇವೆ. ಒಂದು ವಿಚಾರ ಸಿ.ಡಿ ಹಾವಳಿ ಇದರಲ್ಲಿ ಇಲ್ಲ. ಸಿ.ಡಿ ಹಾವಳಿಯನ್ನು ಪ್ರೇಕ್ಷಕರಿಗೆ ಅಷ್ಟು ಅಹ್ಯವಾಗಿ ತೋರಿಸಲು ಸಾಧ್ಯವಿಲ್ಲ’ ಎಂದು ಮುಗುಳ್ನಕ್ಕರು.

‘ರಾಜಕಾರಣಿಗಳಿಗೆ ಈ ಹಿಂದೆ ಇದ್ದ ನೈತಿಕತೆ, ಇವತ್ತಿನ ನೈತಿಕತೆ, ಮುಖ್ಯಮಂತ್ರಿ ಹೇಗಿರಬೇಕು ಮುಂತಾದ ವಿಷಯಗಳು ಇದರಲ್ಲಿದ್ದು, 2 ಗಂಟೆಯ ನಾಟಕ ಇದಾಗಿರಲಿದೆ. ಕನ್ನಡ ಪ್ರಾಧ್ಯಾಪಕರಾಗಿದ್ದ ಡಾ.ಕೆ.ವೈ. ನಾರಾಯಣ ಸ್ವಾಮಿ ಅವರು ಇದನ್ನು ರಚಿಸಿದ್ದಾರೆ. ರಾಜಕೀಯ ವ್ಯವಸ್ಥೆ ಎಷ್ಟರ ಮಟ್ಟಿಗೆ ಕೆಟ್ಟಿದೆ, ಎಷ್ಟರ ಮಟ್ಟಿಗೆ ಬದಲಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಕೆಟ್ಟಿರುವ ವ್ಯವಸ್ಥೆಯಲ್ಲೂ ಕೂಡಾ ಹಠಮಾರಿ ಧೋರಣೆಯಲ್ಲಿ ಅದನ್ನು ಸಮರ್ಥಿಸಿಕೊಳ್ಳುವ ಪರಿಸ್ಥಿತಿ ಇದೆ. ಹೊಸದಾಗಿ ಸರ್ಕಾರ ರಚನೆಯಾಗುವುದರಿಂದಲೇ ನಾಟಕ ಪ್ರಾರಂಭವಾಗುತ್ತದೆ. ‘ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟದೇಶದಿ ಪ್ರಜಾತಂತ್ರದಿ ನಡೆಯಲೆಣಿಸಿದ ಮುಖ್ಯಮಂತ್ರಿಯ ಕಥೆಯಿದು’. ಕೆಲವರಿಗೆ ಈ ಕಥೆ ತಿವಿಯಬಹುದು’ ಎಂದರು.

‘ಗಟ್ಟಿಧ್ವನಿಯಲ್ಲಿ, ಧೈರ್ಯವಾಗಿ ಈ ನಾಟಕವನ್ನು ಕಲಾ ಗಂಗೋತ್ರಿ ತೆಗೆದುಕೊಂಡಿದೆ. ಸತ್ಯಂ ವಧ ಎಂಬ ಅಡಿಬರಹ ಹೊಸ ನಾಟಕಕ್ಕಿದ್ದು, ಜನರೇ ಇದನ್ನು ಅರ್ಥ ಮಾಡಿಕೊಳ್ಳಬೇಕು. ಜನರೇ ವ್ಯಾಖ್ಯಾನಿಸಬೇಕು’ ಎಂದರು.

ಹೊಸ ನಾಟಕದ ಕುರಿತು ಮಾತನಾಡಿದ ನಿರ್ದೇಶಕ ಡಾ.ಬಿ.ವಿ.ರಾಜಾರಂ, ‘ಮೊದಲ ‘ಮುಖ್ಯಮಂತ್ರಿ’ಯಲ್ಲಿ ಮತ್ತೆ ಗದ್ದುಗೆಯನ್ನು ಏರುವ ಚಾಣಾಕ್ಯ ಮುಖ್ಯಮಂತ್ರಿಯನ್ನು ನೋಡಿದ್ದೀರಿ. ಮತ್ತೆ ಮುಖ್ಯಮಂತ್ರಿ ವಿಭಿನ್ನವಾದ ನಾಟಕ. ಗದ್ದುಗೆ ಬಿಡಬೇಕು ಎನ್ನುವ ಮುಖ್ಯಮಂತ್ರಿ ಇಲ್ಲಿರಲಿದ್ದಾರೆ. ಶೀಲವಂತ ಹೊಸ ಮುಖ್ಯಮಂತ್ರಿ ಹೆಸರು. ಸಾಮಾನ್ಯ ಜನರಿಗೂ ಈ ರೀತಿ ಮುಖ್ಯಮಂತ್ರಿ ಇರಬೇಕು ಎನ್ನುವ ಆಸೆ ಮೂಡಬೇಕು. ಈ ರೀತಿ ಪಾತ್ರವನ್ನು ಇಲ್ಲಿ ಸೃಷ್ಟಿಸಿದ್ದೇವೆ. ಸಮಾಜದಲ್ಲಿ ನಡೆಯುತ್ತಿರುವ ಚದುರಂಗದಾಟವನ್ನು ಇಲ್ಲಿ ತೋರಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.