ADVERTISEMENT

ಹುಬ್ಬಳ್ಳಿಯಾಂವ ಈ ಹ್ಯಾಪ್ಪಿಕುಮಾರ

ಮನೆಮಂದಿಗೆಲ್ಲ ನಗಿಸಲು ಬಂದ

​ಪ್ರಜಾವಾಣಿ ವಾರ್ತೆ
Published 14 ಮೇ 2020, 19:30 IST
Last Updated 14 ಮೇ 2020, 19:30 IST
ಯಶವಂತ ಸರದೇಶಪಾಂಡೆ
ಯಶವಂತ ಸರದೇಶಪಾಂಡೆ   

ಲಾಕ್‌ಡೌನ್‌ ಅವಧಿಯಲ್ಲಿ ಎಲ್ಲ ಸುರಕ್ಷಿತ ಕ್ರಮಗಳನ್ನು ಕೈಗೊಂಡು ’ಮನೆಗೆ ಮನಕೆ ನಾಟಕ’ ಯೋಜನೆಯನ್ನು ಆರಂಭಿಸಲಾಗಿದೆ ಎಂದು ರಂಗಕರ್ಮಿ ಯಶವಂತ ಸರದೇಶಪಾಂಡೆ ಹೇಳಿದರು.

ಈ ಯೋಜನೆಯಲ್ಲಿ ಏಕವ್ಯಕ್ತಿ ಪ್ರದರ್ಶನ ‘ಹ್ಯಾಪ್ಪಿಕುಮಾರ್‌ ಹುಬ್ಬಳ್ಳಿಯಾಂವ’ ನಾಟಕವನ್ನು ಪ್ರದರ್ಶಿಸಲಿದ್ದಾರೆ. ವಿಜಯ ತೆಂಡುಲ್ಕರ್‌ ರಚಿತ ಈ ನಾಟಕವನ್ನು ಅವರೇ ಅನುವಾದಿಸಿ, ಇದೀಗ ಕನ್ನಡಿಗರ ಮುಂದೆ ಪ್ರಸ್ತುತ ಪಡಿಸಲಿದ್ದಾರೆ.

45, 60, 75 ಹಾಗೂ 90 ನಿಮಿಷಗಳ ಪ್ರಸ್ತುತಿ ಇದು. ರಾಕೇಶ್‌ ಬೇಡಿ ಅವರು ರಂಗರೂಪಕ್ಕೆ ತಂದ ಈ ಪ್ರಸ್ತುತಿಯಲ್ಲಿ 15–20 ಪಾತ್ರಗಳು ಬಂದು ಹೋಗುತ್ತವೆ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಚಿತ್ರನಟನಾಗುವ ಆಸೆಯಿಂದ ಬಂದ ಆನಂದ ಕುಮಾರ್‌, ಹ್ಯಾಪ್ಪಿ ಕುಮಾರ್‌ ಆಗಿ ಬದಲಾಗುವ ಪ್ರಕ್ರಿಯೆ ನಾಟಕದ ವಸ್ತುವಾಗಿದೆ. ಎರಡು ನಗರಗಳ ಜೀವನ, ಬಣ್ಣದ ಬದುಕು, ಮಾನವ ಸಹಜ ಗುಣಗಳಾದ ಪ್ರತಿಷ್ಠೆ, ಗೌರವ, ಅಹಂಕಾರ ಮುಂತಾದ ಹತ್ತುಹಲವು ಭಾವಾತಿರೇಕಗಳು ತೆಳುಹಾಸ್ಯದ ಪರದೆ ಹೊದ್ದು ಬಂದು ಹೋಗುತ್ತವೆ ಎಂದು ನಾಟಕದ ವಿಷಯವಸ್ತುವನ್ನು ವಿವರಿಸಿದರು.

ADVERTISEMENT

ಹುಬ್ಬಳ್ಳಿಯ ಜವಾರಿ ಭಾಷೆಯಲ್ಲಿರುವ ಈ ಪ್ರದರ್ಶನವನ್ನು ‘ಮನೆಗೆ ಮನಕೆ ನಾಟಕ’ ಎಂಬ ಯೋಜನೆ ಅಡಿ ಮನೆಮನೆಗೆ ಹೋಗಿ ಪ್ರದರ್ಶಿಸುವ ಆಕಾಂಕ್ಷೆ ಸರದೇಶಪಾಂಡೆ ಅವರದ್ದು. ಪ್ರತಿ ಪ್ರದರ್ಶನಕ್ಕೂ ಗೌರವ ಸಂಭಾವನೆ ಪಡೆಯಲಿರುವ ಇವರು, ನಾಟಕ ಪ್ರದರ್ಶನದ ಮೊದಲು ಮತ್ತು ನಂತರ ಕೋವಿಡ್‌ 19 ಸುರಕ್ಷೆಯ ಬಗೆಗೂ ಜಾಗೃತಿ ಮೂಡಿಸಲಿದ್ದಾರೆ. ಸೀಮಿತ ಪರಿಕರದೊಂದಿಗೆ ಮನೆಯ ಸದಸ್ಯರೆಲ್ಲ ಕುಳಿತು ನೋಡಬಹುದಾದ ಈ ಪ್ರದರ್ಶನ 8–10 ಜನ ಸದಸ್ಯರಿರುವ ಕುಟುಂಬಗಳಿಗೆ ಹೇಳಿ ಮಾಡಿಸಿದಂತಿದೆ.ಹೆಚ್ಚಿನ ಮಾಹಿತಿಗೆ:98452 17869

ಮೇ 15ರಂದು ವಿಶ್ವ ಕುಟುಂಬ ದಿನಾಚರಣೆ ಇದ್ದು, ಹ್ಯಾಪ್ಪಿಕುಮಾರ್‌ ಹುಬ್ಬಳ್ಳಿಯಾಂವ ಏಕವ್ಯಕ್ತಿ ಪ್ರದರ್ಶನವನ್ನು ಪ್ರಜಾವಾಣಿಯ ಫೇಸ್‌ಬುಕ್‌ಲೈವ್‌ನಲ್ಲಿ ಸಂಜೆ 4ರಿಂದ 5ವರೆಗೆ ಪ್ರಸ್ತುತ ಪಡಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.