ADVERTISEMENT

ಜಖಾವುಲ್ಲಾನೂ... ಮಹಿಷಾಸುರನೂ...

ಗುಡಿಹಳ್ಳಿ ನಾಗರಾಜ
Published 30 ಸೆಪ್ಟೆಂಬರ್ 2020, 19:30 IST
Last Updated 30 ಸೆಪ್ಟೆಂಬರ್ 2020, 19:30 IST
ಜಖಾವುಲ್ಲಾ
ಜಖಾವುಲ್ಲಾ   

ಸ್ಪುರದ್ರೂಪಿ, ಬಲಿಷ್ಠ ದೇಹದ ಜಖಾವುಲ್ಲಾ ಅವರು ಮಹಿಷಾಸುರ ಪಾತ್ರದಲ್ಲಿ ರಂಗದ ಮೇಲೆ ಬಂದು ನಿಂತು ಕಣ್ಣರಳಿಸಿ, ಕ್ರೌರ್ಯದ ಭಾವಾಭಿನಯ ವ್ಯಕ್ತಪಡಿಸಿದ ಕೂಡಲೆ ಇಡೀ ರಂಗಮಂದಿರದಲ್ಲಿ ಕಿವಿಗಡಚಿಕ್ಕುವ ಚಪ್ಪಾಳೆ. ಅಷ್ಟಿಲ್ಲದೆ ಅವರು ‘ಎಂಟ್ರಿ’ ತೆಗೆದುಕೊಂಡವರೇ ಅಲ್ಲ. ಅವರ ಸಂಭಾಷಣೆಯ ವೈಖರಿ, ಅಭಿನಯಕ್ಕೆ ಮತ್ತೆ ಮತ್ತೆ ಚಪ್ಪಾಳೆ. ಖಳನಾಯಕನ ಪಾತ್ರ ಎಂದರೆ ಬರೀ ಕಿರಿಚಾಡುವುದಲ್ಲ. ಏರು, ಇಳಿವು, ಮಧ್ಯಮ ಎಲ್ಲವೂ ಬೇಕು ಎಂಬುದನ್ನು ಚೆನ್ನಾಗಿ ಅರಿತಿದ್ದ ಅಪ್ಪಟ ನಟ. ವೃತ್ತಿರಂಗಭೂಮಿಯ ಹೆಸರಾಂತ ನಟಿ ಸುಮತಿಶ್ರೀ ಅವರು ‘ದೇವಿ ಮಹಾತ್ಮೆ’ ನಾಟಕದ ದೇವಿ ಪಾತ್ರದಲ್ಲಿ ಒಂದೊಮ್ಮೆ ರೋಷ ಅತಿಯಾಯಿತೆಂದರೆ, ಜಖಾವುಲ್ಲಾ ಅವರು ತಮ್ಮ ಮಾತನ್ನು ಸೌಮ್ಯ ಮಾಡಿಕೊಂಡು ತಣ್ಣನೆಯ ಕ್ರೌರ್ಯ ವ್ಯಕ್ತಪಡಿಸುವ ಮೂಲಕ ‘ನನಗೆ ನೀನು ಸಾಟಿಯೇ’ ಎಂದು ಎದಿರೇಟು ನೀಡಿ ನಾಟಕವನ್ನು ಕಳೆಗಟ್ಟಿಸಿಬಿಡುತ್ತಿದ್ದರು.

‘ಮದಕರಿ ನಾಯಕ’, ‘ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ’, ‘ಮಲೆ ಮಹದೇಶ್ವರ’ ಪಾತ್ರ ಇರಲಿ; ‘ಮುದುಕನ ಮದುವೆ’ಯಂತಹ ಸಾಮಾಜಿಕ ನಾಟಕದ ಶೇಷಣ್ಣ ಪಾತ್ರ ಇರಲಿ ಎಲ್ಲ ರೀತಿಯ ಪಾತ್ರಗಳಿಗೆ ತಕ್ಕುದಾದ ಅಭಿನಯ ಹಾಗೂ ಅಸ್ಖಲಿತ ಮಾತುಗಾರಿಕೆ ಅವರದು. ವೃತ್ತಿ ರಂಗಭೂಮಿ ದಿಗ್ಗಜ ನಟರುಗಳ ಸಾಲಿನಲ್ಲಿ ನಿಸ್ಸಂಶಯನಾಗಿ ನಿಲ್ಲುವ ನಟ ಅವರು.

ಇಂತಹ ಮಹಾನ್ ಕಲಾವಿದ ಸೆಪ್ಟಂಬರ್ 29 ರಂದು ಇನ್ನಿಲ್ಲವಾದರು.

ADVERTISEMENT

ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಗಂಡಸಿಯಲ್ಲಿ ಖಲೀಲ್ ಅಹಮದ್- ಖುರ್ಷಿದ್ ಉನ್ನಿಸಾ ದಂಪತಿಗೆ 1955ರಲ್ಲಿ ಜನಿಸಿದ ಜಖಾವುಲ್ಲಾ ಅವರಿಗೆ ಬಾಲ್ಯದಿಂದಲೇ ಅಭಿನಯದ ಸೆಳೆತ. ಅಲ್ಲಲ್ಲಿ ನಾಟಕಗಳಲ್ಲಿ ಪಾತ್ರ ಮಾಡಿ ಭೇಷ್ ಎನಿಸಿಕೊಂಡಿದ್ದ ಜಖಾವುಲ್ಲಾ ಹದಿಹರೆಯದಲ್ಲಿ ಹೆಸರಾಂತ ಹಾಸ್ಯನಟ ಚಿತ್ರದುರ್ಗದ ಕುಮಾರಸ್ವಾಮಿ ಅವರ ನಾಟಕ ಕಂಪನಿ ಸೇರಿ ಅಲ್ಲಿಯೇ ಅಖಂಡ 35 ವರ್ಷ ಅಭಿನಯಿಸಿ ಕಂಪನಿ ಪ್ರಖ್ಯಾತಿಗೆ ತಮ್ಮದೇ ಆದ ಅಮೂಲ್ಯ ಕಾಣಿಕೆ ನೀಡಿದರು. ಇನ್ನೂ ಕೆಲವು ನಾಟಕ ಕಂಪನಿಗಳಲ್ಲಿ ಕೆಲಕಾಲ ಅಭಿನಯಿಸಿದರೂ, ಮತ್ತೆ ಮತ್ತೆ ಕುಮಾರಸ್ವಾಮಿ ಬಳಿ ಬರುತ್ತಿದ್ದರು.

ವೃತ್ತಿರಂಗಭೂಮಿಯ ಹೆಸರಾಂತ ನಟಿ ಜಯಲಕ್ಷ್ಮಿ ಪಾಟೀಲ ಅವರು ಒಮ್ಮೆ ತಮ್ಮ ಅಕ್ಕನ ಮಗಳು ಗರ್ಭಿಣಿ ಇದ್ದಾಗ ‘ನಿನ್ನ ಬಯಕೆ ಏನು?’ ಎಂದು ಕೇಳಿದರಂತೆ. ಅದಕ್ಕೆ ಆಕೆ ‘ಒಮ್ಮೆ ಜಖಾವುಲ್ಲಾ ಅವರ ಅಭಿನಯ ನೋಡಬೇಕು’ ಎಂದಿದ್ದರು ಎಂದು ಜಯಲಕ್ಷ್ಮಿ ಈ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.

ನಾಟಕ ಅಕಾಡೆಮಿ ಒಮ್ಮೆ ರವೀಂದ್ರ ಕಲಾಕ್ಷೇತ್ರದಲ್ಲಿ ಜಖಾವುಲ್ಲಾ ಅವರ ಮಹಿಷಾಸುರ ಏಕಪಾತ್ರಾಭಿನಯ ಪ್ರದರ್ಶನ ಏರ್ಪಡಿಸಿದ್ದಾಗ ಇಡೀ ಕಲಾಕ್ಷೇತ್ರ ಚಪ್ಪಾಳೆಗಳ ಸುರಿಮಳೆಯಿಂದ ತೊಯ್ದುಹೋಗಿತ್ತು. ಜಖಾವುಲ್ಲಾ ವ್ಯಕ್ತಿಯಾಗಿಯೂ ಅತ್ಯಂತ ಸರಳ, ಸಜ್ಜನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.