ADVERTISEMENT

ಕೃಷಿ, ನಟನೆಯಲ್ಲಿ ಬದುಕು ಸವೆಸಿದ ಹುಲಿವಾನ ಗಂಗಾಧರಯ್ಯ

ಕಲ್ಪತರು ನಾಡಿನಲ್ಲಿ ಮೊದಲ ನೀರಾ ಕಂಪನಿ ಆರಂಭಿಸುವ ಪ್ರಯತ್ನದಲ್ಲಿದ್ದ ಹೋರಾಟಗಾರ

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 6:48 IST
Last Updated 18 ಜುಲೈ 2020, 6:48 IST
ಡಾ.ರಾಜಕುಮಾರ್ ಮತ್ತು ಅಶ್ವತ್ಥ್ ಅವರೊಂದಿಗೆ ಹುಲಿವಾನ ಗಂಗಾಧರಯ್ಯ
ಡಾ.ರಾಜಕುಮಾರ್ ಮತ್ತು ಅಶ್ವತ್ಥ್ ಅವರೊಂದಿಗೆ ಹುಲಿವಾನ ಗಂಗಾಧರಯ್ಯ   
""

ತುಮಕೂರು: ಕುಣಿಗಲ್ ತಾಲ್ಲೂಕಿನ ಹುಲಿವಾನ ಗ್ರಾಮದ ಗಂಗಾಧರಯ್ಯ ನಟರಾಗಿ ರಾಜ್ಯ ಮಟ್ಟದಲ್ಲಿ ಗುರುತಾದವರು. ನಟನೆಯ ಜತೆ ಜತೆಯಲ್ಲಿ ಜಿಲ್ಲೆಯ ನೀರಾ ಹೋರಾಟದಲ್ಲಿಯೂ ಮುಂಚೂಣಿಯಲ್ಲಿದ್ದ ನಾಯಕ.

ನಟನೆ ಮತ್ತು ಕೃಷಿ ಈ ಎರಡು ಕ್ಷೇತ್ರಗಳಲ್ಲಿಯೇ ತಮ್ಮ ಬದುಕನ್ನು ಸಾಗಿಸಿದವರು. 15-10-1949 ರಂದು ಗಂಗಪ್ಪ ಮತ್ತು ಕರಿಯಮ್ಮ ಅವರ ಪುತ್ರನಾಗಿ ಜನಿಸಿದ ಗಂಗಾಧರಯ್ಯ, ನಾಗಸಂದ್ರ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಂಗಳೂರಿನ ಮಲ್ಲೇಶ್ವರಂ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ, ನಂತರ ರೇಣುಕಾಚಾರ್ಯ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದರು.

ಗ್ರಾಮೀಣ ಸೊಗಡಿನಲ್ಲಿ ಬೆಳೆದ ಗಂಗಾಧರಯ್ಯ ಬಾಲ್ಯದಲ್ಲಿಯೇ ಶಾಲೆಯಲ್ಲಿ ಇಜ್ಜಿಲು, ಸೀಮೆಸುಣ್ಣಗಳನ್ನು ಪುಡಿ ಮಾಡಿ ಅಲಂಕರಿಸಿಕೊಂಡು ನಾಟಕಗಳಲ್ಲಿ ಪಾತ್ರ ಮಾಡಿ ಗಮನ ಸೆಳೆದವರು. ಕಾಲೇಜಿನಲ್ಲಿ ನಾಟಕಾಭಿನಯ ಮಾಡುತ್ತಲೇ ರಂಗಭೂಮಿಯ ಸೆಳೆತಕ್ಕೆ ಒಳಗಾದರು. ರಂಗಕರ್ಮಿ ಆರ್.ನಾಗೇಶ್ ಮಾರ್ಗದರ್ಶನದಲ್ಲಿ ಸಕ್ರಿಯವಾಗಿ ರಂಗಭೂಮಿಯಲ್ಲಿ ತೊಡಗಿದರು.

ADVERTISEMENT

‘ನಾಟ್ಯರಾಣಿ ಶಾಂತಲಾ’, ‘ಹಳ್ಳಿ ಚಿತ್ರ’, ‘ಜಲಗಾರ’, ‘ಶೂದ್ರತಪಸ್ವಿ’, ‘ಜೋಕುಮಾರಸ್ವಾಮಿ’, ‘ಸಂಕ್ರಾಂತಿ’ ನಾಟಕಗಳಲ್ಲಿ ನಟಿಸಿದರು. ನಂತರ ‘ಸಂಕ್ರಾಂತಿ’, ‘ಅರ್ಧಸತ್ಯ’, ‘ಮಹಾಯಜ್ಞ’ ಮತ್ತು ‘ಮುಕ್ತಾ ಮುಕ್ತಾ’, ‘ಕೃಷ್ಣ ತುಳಸಿ’ ಹೀಗೆ ಸರಣಿಯಾಗಿ ಧಾರಾವಾಹಿಗಳಲ್ಲಿ ಅಭಿನಯಿಸಿದರು. ನಿರ್ದೇಶಕ ಟಿ.ಎನ್.ಸೀತಾರಾಮ್ ಅವರ ಬಹುತೇಕ ಧಾರವಾಹಿಗಳಲ್ಲಿ ಗಂಗಾಧರಯ್ಯ ಅವರಿಗೆ ಪ್ರಮುಖ ಪಾತ್ರವಿದೆ.

ಕನ್ನಡದ ಬಹುತೇಕ ನಾಯಕನಟರೊಂದಿಗೆ ಗಂಗಾಧಯ್ಯ ನಟಿಸಿದ್ದಾರೆ. 1500ಕ್ಕೂ ಹೆಚ್ಚು ನಾಟಕಗಳು, 118 ಚಲನಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಗೆ ಅವರದ್ದು. ‘ಉಲ್ಟಾಪಲ್ಟಾ’, ‘ಧರ್ಮದೇವತೆ’, ‘ಶಬ್ದವೇದಿ’, ‘ಭೂಮಿತಾಯಿ ಚೊಚ್ಚಲ ಮಗ’, ‘ಅಪ್ಪು’, ‘ಕುರಿಗಳು ಸಾರ್ ಕುರಿಗಳು’ ಹೀಗೆ ಮುಂದುವರಿಯುತ್ತದೆ ಅವರು ನಟಿಸಿದ ಚಿತ್ರಗಳ ಪಟ್ಟಿ.

ಆಲನಹಳ್ಳಿ ಕೃಷ್ಣ ಅವರ ‘ಭುಜಂಗಯ್ಯನ ದಶಾವಾತರ’ ಕಾದಂಬರಿಯನ್ನು ರಂಗಕ್ಕೆ ಒಗ್ಗಿಸಿದ್ದರು. ಇದು ತಮ್ಮ ವೃತ್ತಿ ಜೀವನದ ವಿಶಿಷ್ಟ ಅನುಭವ ಎಂದು ಅವರೇ ಹೇಳಿಕೊಂಡಿದ್ದಾರೆ. ಕುವೆಂಪು ಅವರ ಮನೆ ‘ಉದಯರವಿ’ ಅಂಗಳದಲ್ಲಿ ‘ಜಲಗಾರ’ ನಾಟಕದ ಜಲಗಾರನ ಪಾತ್ರ ಮಾಡಿ ಮಹಾಕವಿ ಅವರಿಂದಲೇ ಪ್ರಶಂಸನೀ ಪಡೆದಿದ್ದರು.

ಕಲ್ಪತರು ನೆಲದಲ್ಲಿ ನೀರಾ ಹೋರಾಟ: ತೆಂಗಿನಿಂದ ನೀರಾ ಇಳಿಸಲು ಅನುಮತಿ ನೀಡಬೇಕು ಎನ್ನುವ ಹೋರಾಟದಲ್ಲಿ ಗಂಗಾಧರಯ್ಯ ರಾಜ್ಯ ಮಟ್ಟದ ಹೋರಾಟಗಳಲ್ಲಿ ಭಾಗವಹಿಸಿದ್ದರು.

ತುಮಕೂರು ಜಿಲ್ಲೆಯಲ್ಲಿ ಹಲವು ನೀರಾ ಹೋರಾಟಗಳನ್ನು ಸಂಘಟಿಸಿದ್ದರು. ತುಮಕೂರು ಜಿಲ್ಲೆಯಲ್ಲಿ ನೀರಾ ಉತ್ಪಾದನೆಗೆ ಸರ್ಕಾರದಿಂದ ಅನುಮತಿ ಪಡೆದ ಮೊದಲಿಗರು ಅವರು. ಅವರ ನೇತೃತ್ವದ ಕುಣಿಗಲ್‌ನ ‘ಗುರುಶ್ರೀ ಫಾರ್ಮರ್ ಪ್ರೊಡ್ಯೂಸರ್ ಕಂಪನಿ’ ನೀರಾ ಉತ್ಪಾದಿಸುವ ಹಾದಿಯಲ್ಲಿ ಈಗಾಗಲೇ ಹೆಜ್ಜೆ ಇಟ್ಟಿತ್ತು.

ಗುರುಶ್ರೀ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಒಂದು ಸಾವಿರ ಮಂದಿ ಷೇರುದಾರರನ್ನು ಹೊಂದಿದೆ. ಕುಣಿಗಲ್‌ನಲ್ಲಿ ಕಂಪನಿಯ ಘಟಕ ತಲೆ ಎತ್ತುತ್ತಿದೆ.

‘ಕನಿಷ್ಠ 10ರಿಂದ 15 ತೆಂಗಿನ ಮರಗಳಲ್ಲಿ ಒಬ್ಬ ರೈತ ನೀರಾ ಉತ್ಪಾದಿಸಿದರೆ ಆರ್ಥಿಕವಾಗಿ ಅನುಕೂಲ ಪಡೆಯಬಹುದು. ಮರಗಳ ಸಾಮರ್ಥ್ಯದ ಅನುಸಾರ ಒಂದು ದಿನಕ್ಕೆ ಒಂದು ಮರ ಎರಡರಿಂದ ನಾಲ್ಕೈದು ಲೀಟರ್‌ವರೆಗೆ ನೀರಾ ನೀಡಬಹುದು. ಒಂದು ಲೀಟರ್ ಅನ್ನು ರೈತರಿಂದ ₹ 60ಕ್ಕೆ ಖರೀದಿಸಬೇಕು ಎಂದುಕೊಂಡಿದ್ದೇವೆ ಎಂದು ಗಂಗಾಧರಯ್ಯ ‍ಪ್ರತಿಪಾದಿಸುತ್ತಿದ್ದರು.

ರೈತರ ಆರ್ಥಿಕಾಭಿವೃದ್ಧಿ ಜತೆಗೆ ಆರೋಗ್ಯವನ್ನೂ ನೀರಾ ವೃದ್ಧಿಸುತ್ತದೆ. ‌ಆದರೆ ಜನರಲ್ಲಿ ನೀರಾ ಅಂದರೆ ಹೆಂಡ ಎನ್ನುವ ಭಾವನೆ ಇದೆ. ‌ಮೊದಲು ಈ ಭಾವನೆಯನ್ನು ತೆಗೆಯಬೇಕು. ಇದು ನಮಗೆ ಸವಾಲು ಎನ್ನುತ್ತಿದ್ದರು.

55 ವರ್ಷಗಳ ಕಾಲ ನಿರಂತರ ರಂಗಭೂಮಿ ಸೇವೆಗೆ ಅವರಿಗೆ ಹಲವು ಪ್ರಶಸ್ತಿಗಳು ಸಹ ಸಂದಿವೆ. ಹುಲಿವಾನ ಗಂಗಾಧರಯ್ಯ ಅವರಿಗೆ ನಾಟಕ ಅಕಾಡೆಮಿಯ 2018-19ಸಾಲಿನ ವಾರ್ಷಿಕ ರಂಗ ಪ್ರಶಸ್ತಿಗೆ ಭಾಜನರಾಗಿದ್ದರು.

ನಾಟಕದ ಪಾತ್ರವೊಂದರಲ್ಲಿ ಗಂಗಾಧರಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.